ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೊಂದಿಗೆ ನೋಟಾಗೂ ಮತ ಕೊಟ್ಟರು!

ಪದವೀಧರ ಕ್ಷೇತ್ರದ ಮತದಾನ ಸ್ವಾರಸ್ಯ ಬಿಚ್ಚಿಟ್ಟ ಪ್ರತಾಪ್‌ರೆಡ್ಡಿ
Last Updated 16 ಜೂನ್ 2018, 5:46 IST
ಅಕ್ಷರ ಗಾತ್ರ

ಬಳ್ಳಾರಿ: ‘ಈಶಾನ್ಯ ಪದವೀಧರ ಕ್ಷೇತ್ರದ ಕಣದಲ್ಲಿದ್ದ ಹತ್ತು ಮಂದಿಗೂ ಮತಕೊಟ್ಟ ಮತದಾರರೊಬ್ಬರು ನೋಟಾಗೂ ಒಂದು ಮತ  ಕೊಟ್ಟಿದ್ದರು. ಕೆಲವರು ಪ್ರಾಶಸ್ತ್ಯ ಸಂಖ್ಯೆಯೊಂದಿಗೆ ರೈಟ್‌ ಮಾರ್ಕ್‌ ಕೂಡ ಮಾಡಿದ್ದರು. ಇಂಥ ಕುಲಗೆಟ್ಟ ಮತಗಳಿಂದಲೇ ನನಗೆ ಸೋಲು ಎದುರಾಯಿತು’ ಎಂದು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎನ್‌.ಪ್ರತಾಪರೆಡ್ಡಿ ತಿಳಿಸಿದರು.

‘ನಿಮಗೇ ಮತ ಹಾಕಿದೆ ಸಾರ್‌ ಎಂದ ಹಿರಿಯರೊಬ್ಬರನ್ನು ಮತ ಪತ್ರದಲ್ಲಿ ಏನೆಂದು ಗುರುತು ಮಾಡಿದಿ ಎಂದು ಕೇಳಿದೆ. ಅದಕ್ಕೆ ಅವರು ಬಹಳ ಖುಷಿಯಿಂದ ತಮ್ಮ ಬಲಗೈನ ತೋರು ಬೆರಳನ್ನು ಆಡಿಸಿ ರೈಟ್‌ ಮಾರ್ಕ್‌ ಎಂದು ತೋರಿಸದರು. ಪ್ರಾಶಸ್ತ್ಯ ಸಂಖ್ಯೆ ಹಾಕಬೇಕಾದ ಕಡೆ ಅವರು ಚಿಹ್ನೆ ಹಾಕಿದ್ದರಿಂದ ಅದು ಕುಲಗೆಟ್ಟಿತು’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

‘ಕೆಲವರು ಮತಪತ್ರದಲ್ಲಿ ಯಾರಿಗೂ ಮತಹಾಕಿರಲಿಲ್ಲ. ಕೆಲವರು ಪ್ರಥಮ ಪ್ರಾಶಸ್ತ್ಯ ಮತವನ್ನೇ ಕೊಡದೆ ನಂತರದ ಪ್ರಾಶಸ್ತ್ಯವನ್ನು ಉಲ್ಲೇಖಿಸಿದ್ದರು. ಹಾಗೆ ಮಾಡಬಾರದು ಎಂಬ ಕನಿಷ್ಠ ತಿಳಿವಳಿಕೆ ಕೂಡ ಮತದಾರರಲ್ಲಿ ಇಲ್ಲದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯಿತು. ಪದವೀಧರ ಮತದಾರರಲ್ಲಿ ಮತದಾನ ಪದ್ಧತಿ ಕುರಿತು ತಿಳಿವಳಿಕೆಯ ಕೊರತೆ ಹಲವು ವರ್ಷಗಳಿಂದ ಹಾಗೆಯೇ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಿಂದ ನಾನೂ ಸೇರಿ ಇಬ್ಬರು ಪ್ರಮುಖ ಅಭ್ಯರ್ಥಿಗಳಿದ್ದರು. ಮೂರು ದಶಕಗಳಿಂದ ಜಿಲ್ಲೆಯವರು ಆಯ್ಕೆ ಆಗಿರಲಿಲ್ಲ ಎಂಬ ಕಾರಣಕ್ಕೆ ವಿವಿಧ ಪಕ್ಷಗಳ ಮತದಾರರು ಭೇದ ಮರೆತು ಮತ ನೀಡಿದ್ದರು. ಏಕೆಂದರೆ ಇದುವರೆಗೆ ಈ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಹನ್ನೆರಡು ನೂರಕ್ಕಿಂತ ಹೆಚ್ಚು ಮತ ಪಡೆಯಲು ಆಗಿರಲಿಲ್ಲ. ಆದರೆ ನಾನು ಮೂರನೇ ಸ್ಥಾನ ಪಡೆಯುವಷ್ಟು ಮತ ಪಡೆದೆ’ ಎಂದರು.

ಕೃತಜ್ಞತಾ ಪ್ರವಾಸ:  ‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಅಭಿವೃದ್ಧಿ ವಿಭಾಗದಲ್ಲಿರುವ ಅಧಿಕಾರಿ ಲೋಕನಾಥ್‌ ಅವರ ಧೋರಣೆ ಅಭಿವೃದ್ಧಿ ವಿರೋಧಿಯಾಗಿದೆ. ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿಸಲಾಗುವುದು’ ಎಂದರು. ‘ಆರೂ ಜಿಲ್ಲೆಗಳ ಮತದಾರರಿಗೆ ಕೃತಜ್ಞತೆ ಹೇಳುವ ಸಲುವಾಗಿ ಶೀಘ್ರದಲ್ಲೇ ಪ್ರವಾಸ ಕೈಗೊಳ್ಳುವೆ’ ಎಂದರು.

‘ಚುನಾವಣಾ ಆಯೋಗದ ನಿರ್ಲಕ್ಷ್ಯ’: ವಿಧಾನ ಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದ ಚುನಾವಣಾ ಆಯೋಗವು, ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಒಂದೇ
ಒಂದು ಕಾರ್ಯಕ್ರಮವನ್ನು ರೂಪಿಸಲಿಲ್ಲ’ ಎಂದು ಪ್ರತಾಪ ರೆಡ್ಡಿ ದೂರಿದರು.

‘ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ ನ್ಯಾಯಾಲಯದ ಮೂಲಕವೇ ಚುನಾವಣಾ ಆಯೋಗಕ್ಕೆ ಬಿಸಿ ಮುಟ್ಟಿಸುವ ಆಲೋಚನೆ ಇದೆ. ಇನ್ನೂ ನಿರ್ಧರಿಸಿಲ್ಲ’ ಎಂದರು.

‘ಬಳ್ಳಾರಿ ಹಠಾವೋ ಧೋರಣೆ ಸರಿ ಅಲ್ಲ’: ಚುನಾವಣೆ ಅವಧಿಯಲ್ಲೇ ಕಲಬುರ್ಗಿಯ ಕೆಲವರು ಬಳ್ಳಾರಿಯನ್ನು ಹೈದರಾಬಾದ್‌
ಕರ್ನಾಟಕ ಪ್ರದೇಶ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಪ್ರತಿಪಾದಿಸಿ ‘ಬಳ್ಳಾರಿ ಹಠಾವೋ, ಹೈದರಾಬಾದ್‌ ಕರ್ನಾಟಕ ಬಚಾವೋ’ ಆಂದೋಲನವನ್ನು ವಾಟ್ಸ್‌ಆ್ಯಪ್‌ ಮೂಲಕ ನಡೆಸಿ ತಮ್ಮ ವಿಕೃತಿ ಪ್ರದರ್ಶಿಸಿದ್ದರು.

‘ಅವರಲ್ಲಿ ಕೆಲವರಿಗೆ ಕರೆ ಮಾಡಿ ಆಕ್ಷೇಪಿಸಿದೆ. ಕಲಬುರ್ಗಿಗೆ ಬಂದು ಸುದ್ದಿಗೋಷ್ಠಿ ಮಾಡುವೆ. ನೀವು ಬಂದು ನಿಮ್ಮ ವಾದ ಮಂಡಿಸಿ ಎಂಬ ಆಹ್ವಾನವನ್ನು ಅವರು ನಯವಾಗಿ ತಿರಸ್ಕರಿಸಿದರು’ ಎಂದು ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT