ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂರಮೆಗೆ ಹಸಿರು ಹೊದಿಕೆ

ವರುಣನ ಕೃಪೆ: ತಾಪದಿಂದ ಬರಡು ಬೆಂಗಾಡಿನಂತಾಗಿದ್ದ ಪರಿಸರಕ್ಕೆ ಜೀವಕಳೆ
Last Updated 16 ಜೂನ್ 2018, 5:50 IST
ಅಕ್ಷರ ಗಾತ್ರ

ಹೊಸಪೇಟೆ: ಕೆಂಡದಂಥ ಬಿಸಿಲಿಗೆ ತಿಂಗಳ ಹಿಂದೆ ನಿರ್ಜೀವಗೊಂಡಿದ್ದ ಗಿಡ, ಮರಗಳು ಈಗ ಹಸಿರಿನಿಂದ ಕಂಗೊಳಿಸುತ್ತಿವೆ. ಭೂರಮೆ ಹಸಿರಿನ ಸಿಂಗಾರದಿಂದ ಕಂಗೊಳಿಸುತ್ತಿದ್ದಾಳೆ. ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ, ಗುಡ್ಡಗಳು ದಾರಿ ಹೋಕರನ್ನು ಕೈಬೀಸಿ ಕರೆಯುತ್ತಿವೆ. ಬೆಟ್ಟದಿಂದ ಬೀಸುವ ತಂಗಾಳಿ ತನ್ನತ್ತ ನೋಡುವಂತೆ ತಾಕೀತು ಮಾಡುತ್ತಿದೆ. ಅದು ಹಸಿರಿಗಿರುವ ಶಕ್ತಿ ಎಂದು ಸಾರಿ ಹೇಳುವಂತಿದೆ.

ಈ ಸಲ ಮೇ ತಿಂಗಳ ಅಂತ್ಯದಿಂದಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ‘ಮುಂಗಾರು ಮಳೆ’ ಕೂಡ ಸಕಾಲಕ್ಕೆ ಬಂದಿರುವುದರಿಂದ ಉಷ್ಣಾಂಶದಲ್ಲಿ ಏಕಾಏಕಿ ಭಾರಿ ಇಳಿಕೆ ಕಂಡು ಬಂದಿದೆ. ಮೇ ಮಧ್ಯದಲ್ಲಿ 40 ಡಿಗ್ರಿ ಸೆ. ಇದ್ದ ತಾಪಮಾನ ಜೂನ್‌ ಎರಡನೇ ವಾರದಿಂದ 30 ಡಿಗ್ರಿ ಸೆ.ಗಿಂತ ಕಡಿಮೆ ಆಗಿದೆ. ಉಷ್ಣಾಂಶದಿಂದ ಬರಡು ಬೆಂಗಾಡಿನಂತಾಗಿದ್ದ ಪರಿಸರಕ್ಕೆ ಜೀವ ಬಂದಂತಾಗಿದೆ. ಬಿಸಿಲಿನ ಹೊಡೆತದಿಂದ ಗಿಡ, ಮರಗಳು ನಿರ್ಜೀವವಾಗಿದ್ದವು. ಈಗ ಹಸಿರಿನಿಂದ ಕಂಗೊಳಿಸುತ್ತಿವೆ.

ಗಣಿಗಾರಿಕೆಯಿಂದ ಕೆಂಪಾಗಿದ್ದ ಬೆಟ್ಟ ಗುಡ್ಡಗಳು ಹಸಿರಿಗೆ ತಿರುಗಿವೆ. ಎರಡು ಸಲ ಬೆಂಕಿ ಹೊತ್ತಿಕೊಂಡು ಉರಿದ ನಗರದ ಜೋಳದರಾಶಿ ಗುಡ್ಡದಲ್ಲಿ ಈಗ ಆ ಕುರುಹುಗಳು ಕಣ್ಮರೆಯಾಗಿವೆ. ಇಡೀ ಗುಡ್ಡ ಹಚ್ಚ ಹಸಿರಾಗಿದೆ. ಗುಂಡಾ ಅರಣ್ಯ, ಸಂಡೂರು ರಸ್ತೆಯಲ್ಲಿರುವ ಸಾಲು ಸಾಲು ಬೆಟ್ಟ, ಗುಡ್ಡಗಳನ್ನು ನೋಡುತ್ತಿದ್ದರೆ ಥೇಟ್‌ ಮಲೆನಾಡಿನ ಅನುಭವ ಆಗದೇ ಇರದು. ಬೆಳಿಗ್ಗೆ ಹಾಗೂ ಸಂಜೆ ಮಂಜಿನಾಟದ್ದೇ ಕಾರುಬಾರು. ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಸೇರಿ ಅನ್ಯಭಾಗಗಳಿಂದ ಪ್ರವಾಸಿಗರು, ವನ್ಯಜೀವಿ ಹಾಗೂ ಹವ್ಯಾಸಿ ಛಾಯಾಗ್ರಾಹಕರು ದಾಂಗುಡಿ ಇಡುತ್ತಿದ್ದಾರೆ.

ಜತೆಗೆ ಹಲವೆಡೆ ಅಲಸಂದೆ, ಕಬ್ಬು, ಹೆಸರು ಸೇರಿದಂತೆ ಇತರೆ ಬೆಳೆ ಬಿತ್ತನೆ ಮಾಡಲಾಗಿದೆ. ಈಗಾಗಲೇ ಮೊಳಕೆ ಬಂದಿದ್ದು, ಬರಡಾಗಿದ್ದ ಹೊಲಗಳು ಹಸಿರಿನಿಂದ ನಳನಳಿಸುತ್ತಿವೆ. ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮೇಲಿಂದ ಮೇಲೆ ಮಳೆ ಬರುತ್ತಿರುವುದರಿಂದ ತುಂಗಾಭದ್ರಾ ನದಿಗೂ ಜೀವಕಳೆ ಬಂದಿದೆ. ಒಂದೆಡೆ ಹಸಿರು, ಇನ್ನೊಂದೆಡೆ ಜಲಮೂಲಗಳು ತುಂಬಿರು
ವುದರಿಂದ ಪಶು, ಪಕ್ಷಿಗಳಿಗೆ ಯಥೇಚ್ಛ ಆಹಾರ ಸಿಗುತ್ತಿದೆ. ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಸಂಕಷ್ಟ ಪಡುತ್ತಿದ್ದ ನೀರುನಾಯಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.

ಬಿಸಿಲಿನ ಹೊಡೆತಕ್ಕೆ ವಿಶ್ವವಿಖ್ಯಾತ ಹಂಪಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು. ಆದರೆ, ಮಳೆರಾಯ ಬಂದ ನಂತರ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ದಟ್ಟ ಕಾರ್ಮೋಡ, ಮಳೆಯಲ್ಲಿ ಹಂಪಿ ನೋಡುವುದೇ ವಿಶಿಷ್ಟ ಅನುಭವ. ಜತೆಗೆ ಮಂದ ಬೆಳಕಿನಲ್ಲಿ ಹಂಪಿಯ ಸ್ಮಾರಕಗಳನ್ನು ಸೆರೆ ಹಿಡಿಯಲು ಹವ್ಯಾಸಿ ಛಾಯಾಗ್ರಾಹಕರು ಇಷ್ಟ ಪಡುತ್ತಾರೆ. ಜತೆಗೆ ಹಂಪಿಯ ಬೀದಿಗಳಲ್ಲಿ ಈಗ ನವಿಲುಗಳ ಹಿಂಡು ಸರ್ವೇ ಸಾಮಾನ್ಯ.

‘ಬೇರೆ ಸಂದರ್ಭದಲ್ಲಿ ಹಾಗೂ ಮಳೆಗಾಲದಲ್ಲಿ ಹಂಪಿಯ ಸ್ಮಾರಕಗಳನ್ನು ನೋಡುವುದು ಬಹಳ ಭಿನ್ನವಾದ ಅನುಭವ. ಚಲಿಸುವ ದಟ್ಟ ಮೋಡಗಳು, ಗುಡುಗು, ಮಿಂಚಿನೊಂದಿಗೆ ಸುರಿಯುವ ಮಳೆ, ಮಂದ ಬೆಳಕಿನಲ್ಲಿ ಹಂಪಿಯ ಪರಿಸರ ನೋಡುವುದೇ ಕಣ್ಣಿಗೆ ಸೊಗಸು.
ಕ್ಯಾಮರೆದಲ್ಲಿ ಆ ದೃಶ್ಯ ಸೆರೆಹಿಡಿಯುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಹೀಗಾಗಿಯೇ ಪ್ರವಾಸಿಗರು, ಹವ್ಯಾಸಿ ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ’ ಎಂದು ಹವ್ಯಾಸಿ ಛಾಯಾಗ್ರಾಹಕ ಮಾರುತಿ ಪೂಜಾರ ತಿಳಿಸಿದರು.

‘ಹಂಪಿಯ ಪರಿಸರದಲ್ಲಿ ಏನಿದೆ ಎಂದು ಯಾರಾದರೂ ಕೇಳಿದರೆ, ಎಲ್ಲ ಇದೆ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಅದು ಸಮೃದ್ಧವಾಗಿದೆ. ಹಂಪಿಯನ್ನು ಸೀಳಿಕೊಂಡು ತುಂಗಭದ್ರಾ ನದಿ ಹರಿಯುತ್ತದೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವುದರಿಂದ ಅನೇಕ ಜಾತಿಯ ಸರೀಸೃಪಗಳು, ಪಕ್ಷಿಗಳನ್ನು ನೋಡುವ ಅವಕಾಶ ಸಿಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT