4
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಖಡಕ್ ಎಚ್ಚರಿಕೆ

ಕರ್ತವ್ಯಲೋಪ ತೋರಿದರೆ ಕ್ರಮ

Published:
Updated:

ಬಾಗೇಪಲ್ಲಿ: ‘ಪ್ರತಿ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸುವ ಜತೆಗೆ 15 ದಿನಕ್ಕೊಮ್ಮೆ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯದಕ್ಷತೆ ಪರಿಶೀಲಿಸುತ್ತೇನೆ. ಕರ್ತವ್ಯಲೋಪ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆದ ಅವರು, ‘ಒಂದು ತಿಂಗಳ ಒಳಗೆ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು’ ಸೂಚನೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಹನು ಮಂತೇಗೌಡ, ಎಂಜಿನಿಯರ್ ಚಕ್ರಪಾಣಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ‘ಪಟ್ಟಣದ ಒಳಚರಂಡಿ ಸಮಸ್ಯೆ ಆದ್ಯತೆ ಮೆರೆಗೆ ಬಗೆಹರಿಸಬೇಕು. ದುರಸ್ತಿಗೆ ಬಂದಿರುವ ಮೋಟರ್‌ಗಳನ್ನು ರಿಪೇರಿ ಮಾಡಿ ನಗರದ ಎಲ್ಲ ವಾರ್ಡ್‌ಗಳಿಗೆ ನಿಯಮಿತವಾಗಿ ಕುಡಿ ಯುವ ನೀರು ಪೂರೈಸಬೇಕು’ ಎಂದು ತಿಳಿಸಿದರು.

‘ಪಟ್ಟಣದ ರಸ್ತೆಗಳ ಗುಣಮಟ್ಟದ ಕಾಪಾಡಬೇಕು. ಸರಿಯಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಜರುಗಿಸಬೇಕು. ಶೀಘ್ರವೇ ಪುರಸಭೆ ಸಭೆ ಕರೆದು ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ನಿವೇಶನ ಮತ್ತು ಮನೆ ರಹಿತರಿಗೆ ನಿವೇಶನ, ಮನೆ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜ್ ರೆಡ್ಡಿ ಅವರಿಗೆ ಹೇಳಿದರು.

ಕಲ್ಲು ಕ್ವಾರಿಗಳ ಲಾರಿಗಳ ಸಂಚಾರದಿಂದ ಗ್ರಾಮಗಳು ಹಾಗೂ ಪಟ್ಟಣದ ರಸ್ತೆಗಳು ಹಾಳಾಗುತ್ತಿದೆ. ತಹಶೀಲ್ದಾರ್, ಲೋಕೋಪಯೋಗಿ, ಪೊಲೀಸ್ ಮತ್ತು ಆರ್‌ಟಿಒ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು, ಮರಳು ಸಾಗಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ನಿವೇಶನ ರಹಿತರಿಗೆ ನಿವೇಶನ, ಮನೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡ ಶಾಸಕರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ವಿ.ರೆಡ್ಡಪ್ಪ ವಿರುದ್ಧ ಬೇಸರ ವ್ಯಕ್ತಪಡಿಸಿದರು. ‘ಐದು ವರ್ಷಗಳು ಬರೀ ಸಭೆಗಳಲ್ಲೇ ಕಳೆದರೆ ಹೇಗೆ? ಬಡವರು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ನಿಮಗೆ ಏನು ಅನ್ನಿಸುವು ದಿಲ್ಲವೆ’ ಎಂದು ಖಾರವಾಗಿ ಪ್ರಶ್ನಿಸಿದರು.

ತಹಶೀಲ್ದಾರ್ ಮಹಮದ್ ಅಸ್ಲಂ, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶೇಷಾದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಅನಿವಾರ್ಯ

- ಎಸ್‌.ಎನ್‌. ಸುಬ್ಬಾರೆಡ್ಡಿ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry