ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಾನ್ ನೆನೆದು, ದೌರ್ಬಲ್ಯಗಳ ಅಳಿದು...

ಎಲ್ಲೆಡೆ ಕಳೆಗಟ್ಟಿದ ‘ಈದ್‌ಉಲ್‌ ಫಿತ್ರ್‌’ ಸಂಭ್ರಮ, ಮನೆಗಳಲ್ಲಿ ಹಬ್ಬದ ಸಡಗರ, ಮಸೀದಿಗಳಲ್ಲಿ ಪ್ರಾರ್ಥನೆಯ ನಿನಾದ
Last Updated 16 ಜೂನ್ 2018, 6:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಹು ಹಿಂದಿನಿಂದಲೂ ಕೋಮು ಸೌಹಾರ್ದದ ನೆಲೆವೀಡಾಗಿರುವ ಜಿಲ್ಲೆಯಲ್ಲಿ ಮತ್ತೊಂದು ರಂಜಾನ್ ಮಾಸಕ್ಕೆ ತೆರೆ ಬಿದ್ದಿದೆ. ನಗರದಲ್ಲಿ ಅಲಂಕೃತಗೊಂಡಿರುವ ಮಸೀದಿಗಳ ಮಿನಾರುಗಳಿಂದ ಹೊರಡುವ ನಮಾಜ್‌ನ ನಿನಾದ, ಮುಸ್ಲಿಮರ ಮನೆ ಮನಗಳ ಕುರಾನ್‌ ಪಠಣಗಳಿಂದ ‘ಈದ್‌ಉಲ್‌ ಫಿತ್ರ್‌’ ಕಳೆಗಟ್ಟಿದೆ.

ರಂಜಾನ್ ಬಂದಿದ್ದೇ ನಗರದ ಬಜಾರ್ ರಸ್ತೆ, ಕಾರ್ಖಾನೆ ಪೇಟೆ ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹಣ್ಣುಗಳು, ವಿವಿಧ ಖಾದ್ಯಗಳು, ವಿವಿಧ ಸುಂಗಂಧ ದ್ರವ್ಯಗಳು, ಹೊಸ ಬಟ್ಟೆ, ಬೂಟು ಖರೀದಿ ಬಲು ಜೋರಿನಿಂದ ನಡೆದಿದೆ. ಮಹಿಳೆಯರು ವಿಶೇಷವಾಗಿ ಕೈಗಳ ಮೇಲೆ ಮೆಹಂದಿ ಹಾಕಿಕೊಂಡು ಸಂಭ್ರಮಿಸುತ್ತಿದ್ದಾರೆ.

ರಂಜಾನ್‌ ಮಾಸದ ರೋಜಾ ಆಚರಣೆ (ಉಪವಾಸ) ಶುಕ್ರವಾರ ಕೊನೆಗೊಂಡಿದ್ದು, ಜಮಾಅತೆ ಅಹ್ಲೆ ಇಸ್ಲಾಂ ನೇತೃತ್ವದಲ್ಲಿ ‘ಈದ್‌ಉಲ್‌ ಫಿತ್ರ್‌’ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ನಗರದಲ್ಲಿರುವ 16 ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಬೆಳಗಿನ ಜಾವ 3.30ಕ್ಕೆ ಎದ್ದು ಸೂರ್ಯೋದಯಕ್ಕೂ ಕಾಲು ಘಂಟೆಗೂ ಮೊದಲು ಮಸೀದಿಗಳಿಂದ ಕೇಳಿಬರುವ ‘ಬಾಂಗ್‌’ಗೂ (ಪ್ರಾರ್ಥನೆಯ ಕರೆ) ಮುನ್ನ ‘ಸುಹೂರ್’ (ಉಪಾಹಾರ) ಪೂರೈಸಿಕೊಂಡು ಸೂರ್ಯಾಸ್ತದವರೆಗೆ ಊಟ, ನೀರು ಮುಟ್ಟದೆ, ಉಗುಳು ಕೂಡ ನುಂಗದೆ ಸೂರ್ಯಾಸ್ತದ ಸಮಯಕ್ಕೆ ಉಪವಾಸ ಕೊನೆಗೊಳಿಸಿ ಊಟ ಸೇವಿಸುವ (ಇಫ್ತಾರ್) ಮೂಲಕ ಧಾರ್ಮಿಕ ಶ್ರದ್ಧೆ ಮೆರೆಯುವ ಪುಣ್ಯ ಮಾಸವಿದು.

ದಿನದಲ್ಲಿ ಹದಿನಾಲ್ಕುವರೆ ಗಂಟೆಗಳ ಉಪವಾಸ ವ್ರತದ ಜತೆಗೆ ನಿತ್ಯ ಐದು ಬಾರಿ ಕಡ್ಡಾಯವಾಗಿ ಪ್ರಾರ್ಥನೆ (ನಮಾಜ್) ಮಾಡುವ ಮೂಲಕ ಅಲ್ಲಾಹುವನ್ನು ನೆನೆದು ಮನುಷ್ಯ ದೌರ್ಬಲ್ಯಗಳನ್ನು ಮೆಟ್ಟಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಕಠಿಣ ವ್ರತಾಚರಣೆ ಇದೀಗ ಸಂಪನ್ನಗೊಂಡಿದೆ.

ಮಸೀದಿಗಳ ಮಿನಾರ್‌ಗಳಿಂದ ಹೊರಡುವ ಪ್ರಾರ್ಥನೆಯ ಕರೆಗೆ ದೊಡ್ಡವರು ಓಗೊಟ್ಟು ಹೋದರೆ ಅತ್ತ ಹೆಜ್ಜೆ ಹಾಕಿದರೆ, ಇತ್ತ ಮನೆಗಳಲ್ಲಿ ಮಹಿಳೆಯರು, ಮಕ್ಕಳು ಶುಚಿಯಾಗಿ, ಕುರಾನ್ ಪಠಣಕ್ಕೆ ಅಣಿಯಾಗುತ್ತಿದ್ದರು. ಕುರಾನ್ ಬಲ್ಲವರ ಮಾರ್ಗದರ್ಶನದಲ್ಲಿ ಕುಟುಂಬದವರೆಲ್ಲರೂ ಪವಿತ್ರ ಧರ್ಮಗ್ರಂಥ ಪಠಣ ಮಾಡುವ ಚಿತ್ರಣಗಳು ರಂಜಾನ್ ಮಾಸದ ಶ್ರದ್ಧೆಯನ್ನು ಪ್ರತಿಬಿಂಬಿಸುತ್ತಿದ್ದವು.

ನಗರದಲ್ಲಿ ವಾಣಿ ಚಿತ್ರಮಂದಿರ ಸಮೀಪದ ಹುಸೇನಿಯಾ ಮಸೀದಿಯಲ್ಲಿ ಕಳೆದೊಂದು ತಿಂಗಳಿಂದ ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ನಗರಸಭೆ ಸಮೀಪದ ದೊಡ್ಡ ಮಸೀದಿಯಲ್ಲಿ 10 ದಿನಗಳ ಜಾಗರಣೆ ನಡೆಯಿತು. ರಂಜಾನ್ ಕೊನೆ ವಾರದಲ್ಲಿ, ಕುರಾನ್ ಮನುಕುಲಕ್ಕೆ ಪ್ರಕಟಗೊಂಡ ರಾತ್ರಿಯಾಗಿ ‘ಷಾಬ್-ಇ-ಖಾದರ್’ ಅನ್ನು ಆಚರಿಸಲಾಯಿತು.

ತಿಂಗಳ ಪೂರ್ತಿ ಪ್ರತಿ ಮಸೀದಿಯ ಬಳಿ ಸಂಜೆಯಾದರೆ ಸಾಕು ಸಮೋಸ ಸೇರಿದಂತೆ ಬಗೆ ಬಗೆ ಖಾದ್ಯಗಳ ಘಮಲು ಮನೆ ಮಾಡಿತ್ತು. ದಿನವಿಡೀ ಉಪವಾಸ ವ್ರತನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಪ್ರತಿ ಮಸೀದಿ ಬಳಿ ಹಣ್ಣು, ಸಮೋಸ, ಕಚೋರಿ, ಬಟಾಟೆ ವಡಾ, ಪಾವ್‌ಬಾಜಿ, ಬೋಂಡ, ಮೆಣಸಿನಕಾಯಿ ಬಜ್ಜಿ ಸೇರಿದಂತೆ ಹಲವು ಖಾದ್ಯ
ಗಳ ವಹಿವಾಟು ಜೋರಾಗಿ ನಡೆದಿತ್ತು.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸದ ಮೂಲಕ ದೇಹ ದಂಡಿಸಿದವರು ಇಫ್ತಾರ್ ಕೂಟಗಳಲ್ಲಿ ಭಕ್ಷ್ಯ-ಭೋಜ್ಯಗಳ ಸವಿ
ಯುವ ಸಂಭ್ರಮ ಎಲ್ಲಾ ಕಡೆ ಆವರಿಸಿಕೊಂಡಿತ್ತು.

‘ಪ್ರಾರ್ಥನೆ ಹಾಗೂ ಉಪವಾಸದಿಂದ ಜೀವನದ ಪಾಪಗಳೆಲ್ಲ ಕಳೆದುಹೋಗುತ್ತವೆ. 1 ತಿಂಗಳ ವ್ರತದಿಂದ 70 ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಈ ತಿಂಗಳಲ್ಲಿ ಒಂದು ವಿಶೇಷ ರಾತ್ರಿ ಬರುತ್ತದೆ. ಆ ಒಂದು ರಾತ್ರಿಯ ಪ್ರಾರ್ಥನೆ ಬರೋಬ್ಬರಿ 1,000 ತಿಂಗಳ ಪ್ರಾರ್ಥನೆಗೆ ಸಮ’ ಎನ್ನುತ್ತಾರೆ ಪ್ರಶಾಂತ್ ನಗರದ ಮದೀನಾ ಮಸೀದಿ ಇಮಾಮ್ ಮೊಹಮ್ಮದ್ ಮನ್ಸೂರ್.

ಸಿರಿವಂತರ ಹಲೀಮ, ಬಡವರ ಸಾರು

ರಂಜಾನ್ ಮಾಸದಲ್ಲಿ ಮುಸ್ಲಿಮರು ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಆಹಾರ ಸೇವಿಸುತ್ತಾರೆ. ಶ್ರೀಮಂತರ ಮನೆಗಳ ಊಟದ ಟೇಬಲ್‌ಗಳಲ್ಲಿ ಸಿಹಿ ತಿಂಡಿಗಳಾದ ಹೈದರಾಬಾದ್‌ ಹಲೀಮ್‌, ಖದ್ದು ಕೀರ್‌, ಜಿಲೇಬಿ, ಹಾರೀಸ್‌, ಖಾರದ ತಿನಿಸುಗಳಾದ ಚಿಕನ್‌ ಮತ್ತು ಮಟನ್‌ ಬಿರಿಯಾನಿ, ಚಿಕನ್‌ಕೀಮಾ, ಚಿಕನ್‌ ಸಮೋಸಾ, ಲೆಗ್‌ಪೀಸ್‌, ಚಿಕನ್‌ ಫ್ರೈ, ತಂದೂರಿ ಮತ್ತು ರುಮಾಲಿ ರೋಟಿ ಇರುತ್ತವೆ.

ಬಡವರ ಮನೆಗಳಲ್ಲಿ ಅವರವರ ಶಕ್ತ್ಯಾನುಸಾರ ಚಿಕನ್, ಮಟನ್, ಬೇಳೆ ಸಾರಿನ ಊಟ ಮಾಡುತ್ತಾರೆ. ಬಡವ, ಶ್ರೀಮಂತ ಎಂಬ ಭೇದವಿಲ್ಲದ ಹಣ್ಣು ಎಲ್ಲರ ಊಟದ ಮೆನುಗಳಲ್ಲಿ ಸ್ಥಾನ ಪಡೆದಿರುತ್ತವೆ.

ರಂಜಾನ್ ಎಂದರೆ...

ಪ್ರೀತಿ ಸಹೋದರತ್ವದ ಪ್ರತೀಕವಾದ ರಂಜಾನ್‌ ಹಬ್ಬವನ್ನು ಕುತುಬ್‌–ಎ–ರಂಜಾನ್‌, ಈದ್‌ಉಲ್‌ ಫಿತ್ರ್‌ ಎಂತಲೂ ಕರೆಯಲಾಗುತ್ತದೆ. ರಂಜಾನ್‌ಗೆ ಭಾವೈಕ್ಯದ ಪ್ರಭಾವಳಿಯೂ ಉಂಟು. ಎಲ್ಲರೂ ಒಂದಾಗಿ ಬಾಳಿ ಎನ್ನುವ ಸಮಬಾಳು ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬ. ವೈಷಮ್ಯ, ವೈರತ್ವ ತೊಡೆದು ಹಾಕಿ ಸ್ನೇಹ ಮತ್ತು ಪ್ರೀತಿಯಿಂದ ಒಂದಾಗುವುದು ರಂಜಾನ್ ತಿಂಗಳ ಆಚರಣೆ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುದು ಆ ಆಚರಣೆಯ ಮುಖ್ಯ ನಿಯಮ.

ಶೇಕಡಾ 2.5ರಷ್ಟು ಜಕಾತ್‌

ಕಲ್ಮಾ (ಮನಸ್ಸಿನಲ್ಲಿ ದೇವರ ಸ್ಮರಣೆ), ನಮಾಜ್‌ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್‌ (ದಾನ) ಹಾಗೂ ಹಜ್‌ (ಮೆಕ್ಕಾ ಯಾತ್ರೆ) ಇವು ಇಸ್ಲಾಂ ಧರ್ಮದ ಪಂಚ ತತ್ವಗಳು. ಪ್ರತಿಯೊಬ್ಬರು ನಿತ್ಯ ಕಲ್ಮಾ ಆಚರಿಸಬೇಕು. ನಿತ್ಯವೂ ಐದು ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸಬೇಕು. ರಂಜಾನ್‌ ಮಾಸದಲ್ಲಿ ಉಪವಾಸ ಆಚರಿಸಬೇಕು. ಚರಾಸ್ತಿ, ಸ್ಥಿರಾಸ್ತಿ ಒಟ್ಟು ಮೌಲ್ಯದ ಶೇಕಡಾ 2.5ರಷ್ಟು ಭಾಗವನ್ನು ಬಡವರಿಗೆ ದಾನ ಮಾಡಬೇಕು, ಪವಿತ್ರ ಮೆಕ್ಕಾಗೆ ಯಾತ್ರೆ ಹೋಗಬೇಕು ಎಂಬುದೇ ಈ ತತ್ವಗಳ ಸಾರಾಂಶ.

ಮಕ್ಕಳಿಗೆ ಕುರಾನ್‌ ಪಾಠ

ರಂಜಾನ್ ಮುಸ್ಲಿಮರ ವಿಶೇಷ ಹಬ್ಬ. ಈ ತಿಂಗಳಲ್ಲಿ ಮಕ್ಕಳು, ವೃದ್ಧರನ್ನು ಹೊರತುಪಡಿಸಿದಂತೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಉಪವಾಸ ವ್ರತ ಆಚರಿಸುತ್ತಾರೆ. ನಿತ್ಯ ಐದು ಬಾರಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕುರಾನ್ ಪಠಿಸುತ್ತೇವೆ. ಮನೆಗಳಲ್ಲಿ ಮಕ್ಕಳಿಗೆ ಕುರಾನ್ ಪ್ರವಚನ ಹೇಳಿಕೊಡಲಾಗುತ್ತದೆ
- ನವಾಬ್‌ ಜಾನ್‌, ಚಿಕ್ಕಬಳ್ಳಾಪುರ ನಿವಾಸಿ

ಬಡವರಿಗೆ ಸೇವೆ ಸಮರ್ಪಣೆ

ರಂಜಾನ್‌ ಉಪವಾಸದ ದಿನಗಳಲ್ಲಿ ಕುರಾನ್‌ ಪಠಣ ಮಾಡುವುದರಿಂದ ನಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ. ಈ ದಿನಗಳಲ್ಲಿ ನಮಗೆ ಬಡತನವಿರುವುದಿಲ್ಲ. ಎಷ್ಟೇ ಕಷ್ಟದಲ್ಲಿದ್ದರೂ ಅಲ್ಲಾಹು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ರಂಜಾನ್‌ನಲ್ಲಿ ಬಡವರಿಗೆ ನಮ್ಮ ಸೇವೆಯನ್ನು ಸಮರ್ಪಿಸುತ್ತೇವೆ
- ಸಲೀಂ, ಚಿಕ್ಕಬಳ್ಳಾಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT