ಮಾನವೀಯತೆಯ ಮೆರೆದ ಮುಸ್ಲಿಂ ಕುಟುಂಬ

7
ಗುಡ್ಡೆಹಳ್ಳ: ಕಂದಕಕ್ಕೆ ಉರುಳಿ ಬಿದ್ದು ಸಾರಿಗೆ ಬಸ್

ಮಾನವೀಯತೆಯ ಮೆರೆದ ಮುಸ್ಲಿಂ ಕುಟುಂಬ

Published:
Updated:
ಮಾನವೀಯತೆಯ ಮೆರೆದ ಮುಸ್ಲಿಂ ಕುಟುಂಬ

ಗುಡ್ಡೆಹಳ್ಳ (ಎನ್.ಆರ್.ಪುರ): ಬೆಂಗಳೂರಿನಿಂದ ಶೃಂಗೇರಿಗೆ ಹೋಗುತ್ತಿದ್ದ ಸಾರಿಗೆ ಬಸ್ ಗುಡ್ಡೆಹಳ್ಳ ಗ್ರಾಮದ ಸಮೀಪ ಕಂದಕಕ್ಕೆ ಬಿದ್ದು ಅದರೊಳಗೆ ಸಿಲುಕಿ ಚೀರಾಡುತ್ತಿದ್ದ ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು, ಆಸ್ಪತ್ರೆಗೆ ಸಾಗಿಸುವ ಮೂಲಕ ಮುಸ್ಲಿಂ ಕುಟುಂಬ ಮಾನವೀಯತೆಯನ್ನು ಮೆರೆದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ( ಕೆಎ 40ಎಫ್ 1062) ಬಸ್ ಬೆಂಗಳೂರಿನಿಂದ ರಾತ್ರಿ 9.39ಕ್ಕೆ ಹೊರಟು ಶೃಂಗೇರಿಗೆ ಬರುತ್ತಿದ್ದ ಮಾರ್ಗ ಮಧ್ಯೆ ತಾಲ್ಲೂಕಿನ ಗುಡ್ಡೆಹಳ್ಳ ತಿರುವಿನಲ್ಲಿ ಕಂದಕ್ಕೆ ಉರುಳಿಬಿದ್ದಿತು. ಈ ವೇಳೆ ಭಾರಿ ಶಬ್ದ ಉಂಟಾಗಿದ್ದರಿಂದ, ಕಂದಕ ವ್ಯಾಪ್ತಿಯಲ್ಲೇ ವಾಸವಾಗಿರುವ ಇಬ್ರಾಹಿಂ ಮನೆಯವರು ಎಚ್ಚರಗೊಂಡಿದ್ದಾರೆ. ಏನೋ ಅನಾಹುತ ನಡೆದಿರುವ ಸುಳಿವು ಅರಿತ ಅವರು ಮತ್ತು ಇತರ ಸದಸ್ಯರು, ಕತ್ತಲಲ್ಲೇ ಟಾರ್ಚ್ ಬೆಳಕಿನಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಬಸ್‌ನ ಒಳಗೆ ಸಿಲುಕಿಕೊಂಡವರನ್ನು ಪಾರು ಮಾಡಲು ಮುಂದಾದರು.

ಬಸ್ ಚಾಲಕ ಭಾಗದಲ್ಲಿಯೇ ಉರುಳಿ ಬಿದ್ದಿದ್ದುದರಿಂದ ಬಸ್ ನ ಗಾಜುಗಳನ್ನು ಒಡೆದು ಇಬ್ರಾಹಿಂ ಹಾಗೂ ಅವರ ಮಕ್ಕಳಾದ ಅರ್ಸಫ್, ಆಸಿಫ್, ಇರ್ಷಾದ್ ಬಸ್‌ನೊಳಗೆ ಇಳಿದು ಏಣಿಯ ಸಹಾಯದಿಂದ ಗಾಯಾಳುಗಳನ್ನು ಮೇಲಕ್ಕೆತ್ತಿದರು. ಬಸ್ ಮಗುಚಿ ಬಿದ್ದ ಭಾಗದಲ್ಲಿ ಸಿಲುಕಿದ್ದವರನ್ನು ಟ್ರ್ಯಾಕ್ಟರ್‌ನ 40 ಟನ್ ತೂಕವನ್ನು ಎತ್ತುವ ಜಾಕನ್ನು ಬಳಸಿ ಬಸ್ ಅನ್ನು ಸ್ವಲ್ಪ ಎತ್ತರಿಸಿ ನಿಧಾನವಾಗಿ ಹೊರಗೆ ತಂದರು. ಬೆನ್ನು ಮೂಳೆ ಮುರಿತಕ್ಕೆ ಒಳಗಾದ ಮಹಿಳೆಗೆ ಮನೆಯಲ್ಲಿಯೇ ಬಿಸಿನೀರಿನ ಶಾಖ ನೀಡಿ, ಸಂತೈಸಿ ನಂತರ ಆಸ್ಪತ್ರೆಗೆ ದಾಖಲಿಸಿದರು.

ಆಂಬುಲೆನ್ಸ್ ಗೆ ಕರೆ ಮಾಡಲು ಬಿಎಸ್‌ಎನ್‌ಎಲ್ ಸಿಗ್ನಲ್ ಕೈಕೊಟ್ಟಿದ್ದರಿಂದ ಸ್ವಂತ ಇಬ್ರಾಹಿಂ ಅವರ ಮಕ್ಕಳು ಎನ್.ಆರ್.ಪುರಕ್ಕೆ ಬಂದು ಆಂಬುಲೆನ್ಸ್ ಕರೆದು ಕೊಂಡು ಬಂದರು. ನಂತರ ಅಕ್ಕಪಕ್ಕದ ಗ್ರಾಮಸ್ಥರು, ಅಗ್ನಿಶಾಮಕ ದಳದವರು ಗಾಯಾಳುಗಳನ್ನು ಕೊಪ್ಪ, ಎನ್.ಆರ್.ಪುರ ಆಸ್ಪತ್ರೆಗೆ ದಾಖಲಿಸಲು ನೆರವಾದರು.

‘ರಂಜಾನ್ ಹಬ್ಬದ ಪ್ರಯುಕ್ತ ಇಬ್ರಾಹಿಂ ಮಕ್ಕಳೆಲ್ಲರೂ ಮನೆಯಲ್ಲಿದ್ದರು. ಹಾಗಾಗಿ, ಅಪಘಾತವಾದಾಗ ಗಾಯಾಳುಗಳಿಗೆ ನೆರವಾಗಲು ಸಾಧ್ಯವಾಯಿತು. ಅಪಘಾತದಲ್ಲಿ ಗಾಯಗೊಂಡವರ ಸ್ಥಿತಿ ನೋಡಿದರೆ ಹಬ್ಬದ ದಿನವಾದರೂ ಮಸೀದಿಗೆ ಪ್ರಾರ್ಥನೆ ಮಾಡಲು ಹೋಗಲು ಸಹ ಮನಸ್ಸು ಬರುತ್ತಿಲ್ಲ’ ಎಂದು ‘ಪ್ರಜಾವಾಣಿ’ ಜತೆ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.ಅವರ ಮಾತಿನಲ್ಲಿ ಜಾತಿ, ಧರ್ಮವನ್ನು ಮೀರಿದ ಪರರಿಗಾಗಿ ಮರಗುವ ಮಾನವೀಯತೆ ಧರ್ಮದ ಸೆಲೆಯಿತ್ತು.

ಪದೇಪದೇ ಅಪಘಾತ

ಶುಕ್ರವಾರ ಬಸ್ ಕಂದಕಕ್ಕೆ ಬಿದ್ದ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದೆ. ಇದುವರೆಗೂ 15ಕ್ಕೂ ಹೆಚ್ಚು ಅಪಘಾತಗಳು ನಡೆದಿದೆ. ಲಾರಿ, ಕಾರು, ಬೈಕ್ ಕಂದಕಕ್ಕೆ ಬಿದ್ದಿವೆ. ಹಾಗಾಗಿ ಈ ಭಾಗದಲ್ಲಿ ರಸ್ತೆಯನ್ನು ನೇರಗೊಳಿಸಬೇಕು. ತಡೆಗೋಡೆ ನಿರ್ಮಿಸಬೇಕು. ಸೂಚನಾ ಫಲಕ ಹಾಗೂ ರೇಡಿಯಂ ದೀಪ ಅಳವಡಿಸಲು ಕ್ರಮಕೈಗೊಳ್ಳಬೇಕು. ಅಲ್ಲದೆ, ಮೊಬೈಲ್ ಸಿಗ್ನಲ್ ಸಿಗದಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಸಂಬಂಧಪಟ್ಟವರು ಇತ್ತ ಗಮನಹರಿಸಿ ಮೊಬೈಲ್ ಸಿಗ್ನಲ್ ಸಿಗುವ ವ್ಯವಸ್ಥೆ ಮಾಡಿದರೆ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry