ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನಾಮ ಜಪಿಸುತ್ತ ರೋಜಾ ಆಚರಣೆ

Last Updated 16 ಜೂನ್ 2018, 7:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಮ್ಜಾನ್‌ ಮಾಸದ ಉಪವಾಸ, ಮುಸ್ಲಿಂ ಬಾಂಧವರು ಕಡ್ಡಾಯವಾಗಿ ಆಚರಿಸುವ ನಿಯಮಗಳಲ್ಲೊಂದು. ಆದರೆ, ಇತರ ಧರ್ಮೀಯರು ಈ ತಿಂಗಳಲ್ಲಿ ಉಪವಾಸ ಮಾಡುವುದನ್ನು ಅಲ್ಲಲ್ಲಿ–ಆಗಾಗ ಕಾಣುತ್ತೇವೆ. ಅಂಥವರ ಪೈಕಿ, ಭೀಮಪ್ಪ ಮಾಯಣ್ಣವರ ಕೂಡ ಒಬ್ಬರು.

ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯವರಾದ ಭೀಮಪ್ಪ, ಸದ್ಯ ಹುಬ್ಬಳ್ಳಿ ನಗರ ಪೊಲೀಸ್‌ ವಿಶೇಷ ವಿಭಾಗದಲ್ಲಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ರಮ್ಜಾನ್‌ ಸಂದರ್ಭದಲ್ಲಿ ನಿಷ್ಠೆಯಿಂದ ಉಪವಾಸ ಮಾಡುವ ಅವರು, ಮುಸ್ಲಿಂ ಬಾಂಧವರಿಗಿಂತಲೂ ತುಸು ಹೆಚ್ಚಿನ ಹೊತ್ತು ಅನ್ನ–ನೀರು ತ್ಯಜಿಸಿ, ಭಾವಶುದ್ಧಿ ದಕ್ಕಿಸಿ ಕೊಂಡಿದ್ದಾರೆ.

ತಾಯಿಯೇ ಪ್ರೇರಣೆ: 1980ರಿಂದ ಉಪವಾಸ ಮಾಡುತ್ತಿರುವ ಭೀಮಪ್ಪ ಅವರಿಗೆ, ಸುತ್ತಲಿನ ಪರಿಸರ ಹಾಗೂ ಅವರ ತಾಯಿ ಬಸವ್ವ ಅವರೇ ಪ್ರೇರಣೆಯಂತೆ.

‘ನಮ್ಮ ತಾಯಿ ಆಗೀಗ ಉಪವಾಸ ಆಚರಿಸುತ್ತಿದ್ದರು. ನೆರೆ–ಹೊರೆಯವರೂ ಮಾಡುತ್ತಿದ್ದರು. ಹಾಗೆಯೇ ನನಗೂ ರೂಢಿಯಾಯಿತು. ದೇವರನ್ನು ಭಿನ್ನವಾಗಿ ಕಾಣಬಾರದು. ಎಲ್ಲ ದೇವರೂ ಒಂದೇ. ದೇವರ ಸೇವೆ ಮಾಡಿದರೆ, ಕೆಟ್ಟದಾಗಲ್ಲ ಎಂದು ತಾಯಿ ಹೇಳುತ್ತಿದ್ದರು’ ಎಂದು ಅವರು ಸ್ಮರಿಸುತ್ತಾರೆ.

ಉಪವಾಸ ಆಚರಣೆ ಹೇಗೆ?: ನಸುಕಿನಲ್ಲಿ ಸಮಯಕ್ಕೆ ಸರಿಯಾಗಿ ರೋಜಾ ಹಿಡಿಯುತ್ತಾರೆ. ಬೆಳಗ್ಗಿನ ಹೊತ್ತು ಖರ್ಜೂರ, ರೊಟ್ಟಿ, ಪಲ್ಯ, ಅನ್ನ–ಸಾರು ಹೀಗೆ ಮನೆಯಲ್ಲಿ ಇರುವುದನ್ನು ಸೇವಿಸುತ್ತಾರೆ.

‘ಅಮೃತೇಶ್ವರ, ಹನುಮಂತೇಶ್ವರ, ಅಲ್ಲಾ... ಒಳ್ಳೆಯದು ಮಾಡಪ್ಪಾ... ಎಂದು ದೇವರಿಗೆ ಕೈ ಮುಗಿದು ರೋಜಾ ಹಿಡಿಯುತ್ತೇನೆ. ಅಲ್ಲಿಂದ ಸಂಜೆ ತನಕ ಹನಿ ನೀರೂ ಕುಡಿಯುವುದಿಲ್ಲ. ನಿತ್ಯ ನಾನು ಸ್ನಾನ–ಪೂಜೆ ಮಾಡದೇ ಬಾಯಿಗೆ ಹನಿ ನೀರೂ ಹಾಕಲ್ಲ. ಉಪವಾಸ ಅವಧಿಯಲ್ಲೂ ಅದನ್ನೇ ಪಾಲಿಸುತ್ತೇನೆ. ಸಂಜೆ 7ರಿಂದ 7.15ರ ಒಳಗೆ ಇಫ್ತಾರ್ ಸಮಯ  ಇರುತ್ತದೆ. ಆದರೆ, ನಾನು ಮಾತ್ರ ಮನೆಗೆ ಹೋಗಿಯೇ ಉಪವಾಸ ಬಿಡುತ್ತೇನೆ. ಎಷ್ಟೊತ್ತಾದರೂ ಸರಿ, ಸ್ನಾನ ಮುಗಿಸಿ, ದೇವರಿಗೆ ದೀಪ ಹಚ್ಚಿದ ಬಳಿಕವೇ ನನ್ನ ಉಪವಾಸ ಮುಗಿಯುತ್ತದೆ’ ಎನ್ನುತ್ತಾರೆ ಭೀಮಪ್ಪ.

ಕಳೆದುಕೊಳ್ಳುವುದು ಏನು?: ‘ಉಪವಾಸದಿಂದ ಆರೋಗ್ಯ ಸುಧಾರಿಸುತ್ತದೆ. ಈ ಸಮಯದಲ್ಲಿ ಎಂದೂ ಅನಾರೋಗ್ಯ ಕಾಡಿಲ್ಲ. ನಿಜವಾದ ಭಕ್ತಿ, ಅಚಲ ನಂಬಿಕೆ ಹಾಗೂ ಮನಃಪೂರ್ವಕವಾಗಿ ಉಪವಾಸ ಆಚರಿಸುತ್ತೇನೆ. ಹೀಗಾಗಿ ಹಸಿವು, ನೀರಡಿಕೆ ಕಾಡುವುದಿಲ್ಲ. ಆದರೆ, ಕೆಲ ಅನಿವಾರ್ಯ ಸನ್ನಿವೇಶಗಳಲ್ಲಿ ರೋಜಾ ಬಿಟ್ಟಿದ್ದೇನೆ. ಆಗೆಲ್ಲ ಏನೋ ಕಳೆದುಕೊಂಡ ಭಾವ ಕಾಡುತ್ತದೆ’ ಎನ್ನುತ್ತಾರೆ.

‘ಸಂತೋಷ, ನೆಮ್ಮದಿ ಹಂಚಿಕೊಳ್ಳುವುದೇ ಹಬ್ಬ–ಹರಿದಿನಗಳ ಆಚರಣೆಯ ಉದ್ದೇಶ. ಹೀಗಾಗಿ, ನನ್ನ ಧರ್ಮದೊಂದಿಗೂ ಇದ್ದು, ಇತರ ಧರ್ಮಗಳ ಆಚರಣೆ ರೂಢಿಸಿಕೊಂಡರೆ ಕಳೆದುಕೊಳ್ಳುವುದೇನೂ ಇಲ್ಲ’ ಎನ್ನುತ್ತಾರೆ ಭೀಮಪ್ಪ. ‘ರಮ್ಜಾನ್‌ ಅವಧಿಯಲ್ಲಿ ಮನೆಯ ಕುಟುಂಬ
ದವರೂ ವಿಶೇಷವಾಗಿ ಸಹಕಾರ ನೀಡುತ್ತಾರೆ. ಇಲಾಖೆಯಲ್ಲೂ ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ’ ಎನ್ನುತ್ತಾರೆ ಅವರು.

ಕೈಲಾದಷ್ಟು ಇಫ್ತಾರ್...

ರಜೆ ಇರುವ ದಿನದಂದು ಭೀಮಪ್ಪ ಮಾಯಣ್ಣವರ ಸ್ವಗ್ರಾಮ ಅಣ್ಣಿಗೇರಿಯಲ್ಲಿ ಇಫ್ತಾರ್‌ ಆಯೋಜಿಸುತ್ತಾರೆ. ‘ಇಫ್ತಾರ್‌ಗೆ ಪಲಾವ್‌, ಉಪ್ಪಿಟ್ಟು, ಸಿಹಿ ತಿನಿಸು, ಹಣ್ಣು–ಹಂಪಲು, ಖರ್ಜೂರ ಸೇರಿದಂತೆ ವಿವಿಧ ತಿಂಡಿಯನ್ನು ಮಸೀದಿಗೆ ತೆಗೆದುಕೊಂಡು ಹೋಗುತ್ತೇನೆ. ಮಕ್ಕಳು, ಮುಸ್ಲಿಂ ಬಾಂಧವರೊಂದಿಗೆ ಕುಳಿತು ಉಪವಾಸ ಬಿಟ್ಟು ಮನೆಗೆ ಮರಳುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT