ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ವಲ ಭವಿಷ್ಯಕ್ಕೆ ಎಂಜಿನಿಯರಿಂಗ್‌

ತಾಂತ್ರಿಕ ಕೌಶಲ ವೃದ್ಧಿಗೆ ಆದ್ಯತೆ, ದೇಶ– ವಿದೇಶಗಳಲ್ಲಿ ಅನನ್ಯ ಅವಕಾಶ
ಅಕ್ಷರ ಗಾತ್ರ

‘ಎಂಜಿನಿಯರಿಂಗ್‌’ ಮುಂಚಿನಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕೋರ್ಸ್‌. ದೇಶ– ವಿದೇಶಗಳಲ್ಲಿ ಅದು ಒದಗಿಸುವ ಉದ್ಯೋಗಾವಕಾಶಗಳೂ ಇದಕ್ಕೆ ಪ್ರಮುಖ ಕಾರಣ. ಈಚೆಗೆ ಎಂಜಿನಿಯರಿಂಗ್ ಕ್ಷೇತ್ರ, ತನ್ನ ಕಾರ್ಯವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿಕೊಂಡಿದ್ದು, ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಅವಕಾಶವನ್ನೂ ಒದಗಿಸುತ್ತಿದೆ.

‘ಎಂಜಿನಿಯರಿಂಗ್‌ ಇಲ್ಲದ ಜಾಗ ಇಲ್ಲ’ ಎನ್ನುವಷ್ಟರ ಮಟ್ಟಿಗೆ ಈ ಕ್ಷೇತ್ರ ನಮ್ಮ ಜೀವನದಲ್ಲಿ ವ್ಯಾಪಿಸಿದೆ. ನಾವು ಬಳಸುವ ಕುಡಿಯುವ ನೀರಿನ ಗ್ಲಾಸ್‌ನಿಂದ ಆಧುನಿಕತೆಯ ಸಂಕೇತವಾಗಿರುವ ಮೊಬೈಲ್, ಲ್ಯಾಪ್‌ಟಾಪ್‌ ಎಲ್ಲವೂ ಎಂಜಿನಿಯರಿಂಗ್‌ ಕೊಡುಗೆ ಎಂದರೆ ತಪ್ಪೇನಿಲ್ಲ. ಎಂಜಿನಿಯರಿಂಗ್‌ನಿಂದಾಗಿಯೇ ನಮ್ಮ ಜೀವನ ಇಷ್ಟೊಂದು ಆರಾಮದಾಯಕವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿಯೇ ಈ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಲಭಿಸಿದೆ.

ಸಾಂಪ್ರದಾಯಿಕತೆಯಿಂದ ಅತ್ಯಾಧುನಿಕತೆವರೆಗೆ

ಎಂಜಿನಿಯರಿಂಗ್ ಕ್ಷೇತ್ರವು ಇಚ್ಛಿತ ಉದ್ದೇಶ ಅಥವಾ ಸಂಶೋಧನೆಗಳ ಸುರಕ್ಷಿತ ನೆರವೇರಿಕೆಗೆ ಸಾಮಗ್ರಿಗಳು, ರಚನೆಗಳು, ಯಂತ್ರಗಳು, ಉಪಕರಣಗಳು, ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ವಿನ್ಯಾಸ ಮತ್ತು ಅನುಷ್ಠಾನಕ್ಕೆ ತಾಂತ್ರಿಕ, ವೈಜ್ಞಾನಿಕ ಮತ್ತು ಗಣಿತದ ಜ್ಞಾನವನ್ನು ಸಂಪಾದಿಸುವ ಮತ್ತು ಅಳವಡಿಸುವ ಶಿಕ್ಷಣ, ಕಲೆ ಮತ್ತು ವೃತ್ತಿಯಾಗಿದೆ' ಎಂಬುದು ಸಾಂಪ್ರದಾಯಿಕ ವ್ಯಾಖ್ಯಾನ.

ರಾಟೆ, ಸನ್ನೆ ಮತ್ತು ಚಕ್ರ... ಮುಂತಾದ ಮೂಲಭೂತ ಸಂಶೋಧನೆಗಳಿಗಿಂತ ಮುನ್ನ ಮಾನವನ ಯೋಚನಾ ಲಹರಿಯಲ್ಲಿದ್ದ ಎಂಜಿನಿಯರಿಂಗ್ ವಿಚಾರಗಳು ನಂತರ ಒಂದೊಂದಾಗಿ ಕಾರ್ಯನುಷ್ಠಾನಕ್ಕೆ ಬಂದವು. ಸಾಂಪ್ರದಾಯಿಕವಾಗಿ ಎಂಜಿನಿಯರಿಂಗ್‌ ಎಂದರೆ ಮೆಕ್ಯಾನಿಕಲ್‌, ಕೆಮಿಕಲ್‌, ಸಿವಿಲ್‌ ಮತ್ತು ಇಲೆಕ್ಟ್ರಿಕಲ್‌ ಕೋರ್ಸ್‌ಗಳು ನೆನಪಾಗುತ್ತವೆ. ಆದರೆ, ಪ್ರಸ್ತುತ ಎಂಜಿನಿಯರಿಂಗ್‌ನ ವಿಶಾಲ ವ್ಯಾಪ್ತಿ ಉಲ್ಲೇಖಿಸುವುದಾದರೆ, ‘ಎ’ನಿಂದ ‘ಝಡ್‌’ವರೆಗೆ ಹಲವು ಹೊಸ ಕೋರ್ಸ್‌ಗಳು ಇದರಲ್ಲಿ ಸೇರ್ಪಡೆಯಾಗಿದೆ. ಏರೋನಾಟಿಕಲ್‌, ಆಟೊಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌, ಆರ್ಕಿಟೆಕ್ಚರ್‌, ಬಯೋಟೆಕ್ನಾಲಜಿ, ಕಂಪ್ಯೂಟರ್‌ ಸೈನ್‌, ಮಾಹಿತಿ ತಂತ್ರಜ್ಞಾನ (ಐಟಿ), ಮೆಕೆಟ್ರಾನಿಕ್ಸ್, ಸೆರಾಮಿಕ್ಸ್‌ ಆಂಡ್‌ ಸಿಮೆಂಟ್‌ ಟೆಕ್ನಾಲಜಿ, ಇಂಡಸ್ಟ್ರಿಯಲ್‌ ಆ್ಯಂಡ್‌ ಪ್ರೊಡಕ್ಷನ್‌, ಇನ್‌ಸ್ಟ್ರುಮೆಂಟೇಷನ್‌ ಟೆಕ್ನಾಲಜಿ, ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌, ಬಯೋ ಮೆಡಿಕಲ್‌, ಮೈನಿಂಗ್‌, ಮ್ಯಾನುಫ್ಯಾಕ್ಚರಿಂಗ್‌ ಸೈನ್ಸ್‌, ಮೆಕ್ಯಾಟ್ರಾನಿಕ್ಸ್‌, ಪೆಟ್ರೋಕೆಮಿಕಲ್‌, ಪೆಟ್ರೋಲಿಯಂ, ಪ್ರಿಸಿಶನ್‌ ಮ್ಯಾನುಫ್ಯಾಕ್ಚರಿಂಗ್‌, ಪಾಲಿಮರ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿ, ಎನ್ವಿರಾನ್‌ಮೆಂಟಲ್‌, ಏರೋ ಸ್ಪೇಸ್‌, ಸಿಲ್ಕ್‌ ಟೆಕ್ನಾಲಜಿ, ಟೆಕ್ಸ್‌ಟೈಲ್‌ ಟೆಕ್ನಾಲಜಿ, ಅಗ್ರಿಕಲ್ಚರ್ ಎಂಜಿನಿಯರಿಂಗ್, ಟ್ರಾಫಿಕ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಫಿಸಿಕ್ಸ್, ಎಂಜಿನಿಯರಿಂಗ್ ಕೆಮೆಸ್ಟ್ರಿ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾದ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಹಲವು ಕೌಶಲ, ಸಾಮರ್ಥ್ಯಗಳ ಮೇಳೈಕೆ

ಎಂಜಿನಿಯರಿಂಗ್‌ ಶಿಕ್ಷಣ ಹಾಗೂ ವೃತ್ತಿ ಯಶಸ್ವಿಯಾಗಲು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಉತ್ತಮ ಮೂಲ ಜ್ಞಾನ ಹೊಂದಿರುವುದು ಅನಿವಾರ್ಯ. ಇದರ ಜೊತೆ ಸೃಜನಶೀಲತೆ, ಅಗತ್ಯ ಕೌಶಲ, ಕಠಿಣ ದುಡಿಮೆ, ಸವಾಲು ಎದುರಿಸುವ ಮನೋಭಾವ, ಸಮಸ್ಯೆ ಪರಿಹರಿಸುವ ಆಸಕ್ತಿ, ತಾರ್ಕಿಕ ಯೋಚನೆ, ಸಮಯೋಚಿತ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಹಾಗೂ ತಂಡದಲ್ಲಿ ಕೆಲಸ ಮಾಡುವ ಪ್ರವೃತ್ತಿ ಇರಬೇಕಾದುದು ಅಪೇಕ್ಷಣೀಯ. ಈ ಗುಣಗಳು ನಿಮ್ಮಲ್ಲಿ ಇವೆ ಎಂದಾದರೆ ‘ಎಂಜಿನಿಯರಿಂಗ್’ ನಿಮಗೆ ಹೇಳಿ ಮಾಡಿಸಿದ ಕೋರ್ಸ್. ನೀವು ಕೋರ್ಸ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇ ಆದರೆ, ದೇಶ– ವಿದೇಶಗಳಲ್ಲಿ ಹಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವಲ್ಲಿ ಸಂಶಯವಿಲ್ಲ.

ಐ.ಐ.ಟಿ, ಐ.ಐ.ಐ.ಟಿ, ಎನ್‌.ಐ.ಟಿ

ಈಚೆಗೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಐ.ಐ.ಟಿ, ಐ.ಐ.ಐ.ಟಿ, ಎನ್‌.ಐ.ಟಿಗಳು ಸುದ್ದಿಯಲ್ಲಿವೆ. ಈ ಮೂರು ಸಂಸ್ಥೆಗಳು ಸರ್ಕಾರದಿಂದಲೇ ಸ್ಥಾಪನೆಗೊಂಡಿದ್ದು, ವಿಶ್ವ ದರ್ಜೆಯ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿವೆ. ವಿಶ್ವಮಟ್ಟದಲ್ಲಿ ಮಾನವ ಸಂಪನ್ಮೂಲ ಹಾಗೂ ತಾಂತ್ರಿಕತೆಯ ವಿನಿಮಯದ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಗುಣಮಟ್ಟದಲ್ಲಿ ವಿಶ್ವ ದರ್ಜೆಯ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಹುಬ್ಬಳ್ಳಿ– ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಐ.ಐ.ಟಿ ಹಾಗೂ ಐ.ಐ.ಐ.ಟಿ ಎರಡೂ ಸಂಸ್ಥೆಗಳು ಇರುವುದು ವಿಶೇಷವಾಗಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐ.ಐ.ಟಿ), ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೇಷನ್ ಟೆಕ್ನಾಲಜಿ (ಐ.ಐ.ಐ.ಟಿ), ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌.ಐ.ಟಿ) ಪ್ರವೇಶಕ್ಕೆ ಜೆಇಇ ಮೇನ್ಸ್‌ ಮತ್ತು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಿರ್ದಿಷ್ಟ ಅರ್ಹತೆ ಪಡೆಯುವುದು ಅನಿವಾರ್ಯ. ಈ ಕುರಿತು ಸ್ಥಳೀಯ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಬೇಕಿದೆ.

ಪ್ರವೇಶ ಪ್ರಕ್ರಿಯೆ

ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶವನ್ನು ಸಿಇಟಿ ಮತ್ತು ಕಾಮೆಡ್‌–ಕೆ ಪರೀಕ್ಷೆಗಳ ರ‍್ಯಾಂಕಿಂಗ್ ಆಧರಿಸಿ ನಡೆಸಲಾಗುತ್ತದೆ. ಕರ್ನಾಟಕ ಸಿಇಟಿ ನಿಯಮಾವಳಿ ಪ್ರಕಾರ, ಪಿಯುಸಿ ಮತ್ತು 12ನೇ ತರಗತಿ ಸರಾಸರಿ ಶೇ 45ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣವಾಗಬೇಕು. ಪರಿಶೀಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, 2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳಿಗೆ ಶೇ 40ರಷ್ಟು ಅಂಕ ನಿಗದಿ ಮಾಡಲಾಗಿದೆ. ಈಗಾಗಲೇ ಸಿಇಟಿ– ಕಾಮೆಡ್‌ಕೆ ಪರೀಕ್ಷೆಗಳು ಮುಗಿದು, ಫಲಿತಾಂಶ ಘೋಷಣೆಯಾಗಿದೆ. ಕೌನ್ಸೆಲಿಂಗ್ ಆಧರಿತ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ಹೊರತುಪಡಿಸಿ, ಡೀಮ್ಡ್‌ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಕೂಡ ತಮ್ಮದೇ ಆದ ಪ್ರವೇಶ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುತ್ತವೆ.

ಭಾರತದಲ್ಲಿ ಎಂಜಿನಿಯರಿಂಗ್

ಭಾರತದ ಪ್ರಥಮ ಎಂಜಿನಿಯರಿಂಗ್ ಕಾಲೇಜನ್ನು ಬ್ರಿಟಿಷರು 1847ರಲ್ಲಿ ಉತ್ತರ ಪ್ರದೇಶದ ರೂರ್ಕಿಯಲ್ಲಿದ್ದ ಥಾಮ್ಸನ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸಿದರು. ಅಲ್ಲಿ ಸಿವಿಲ್ ಎಂಜಿನಿಯರಿಂಗ್ ತರಬೇತಿ ಕೊಡಲಾಗುತ್ತಿತ್ತು. ಸ್ವಾತಂತ್ರ್ಯನಂತರ ಇದೇ ಸಂಸ್ಥೆ ‘ಐ.ಐ.ಟಿ ರೂರ್ಕಿ’ ಆಗಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ.

‘ಭಾರತವು ವಿಶ್ವದಲ್ಲಿ ಎಂಜಿನಿಯರ್‌ಗಳ ಅತ್ಯಂತ ದೊಡ್ಡ ಉತ್ಪಾದಕ ದೇಶವಾಗಿದೆ. ಆದರೆ, ಇಲ್ಲಿನ ಎಂಜಿನಿಯರ್‌ಗಳ ಗುಣಮಟ್ಟ ಕಳಪೆಯಾಗಿದ್ದು, ಸಾಕಷ್ಟು ಉತ್ತಮಗೊಳ್ಳಬೇಕಿದೆ. ಭಾರತದ ಶೇ 8ರಷ್ಟು ಎಂಜಿನಿಯರ್‌ಗಳು ಮಾತ್ರ ಮಾತ್ರ ಉತ್ತಮ ಉದ್ಯೋಗಕ್ಕೆ ತಕ್ಕ ಅರ್ಹತೆ ಮತ್ತು ಕೌಶಲ ಹೊಂದಿದ್ದಾರೆ’ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಹಣೆಪಟ್ಟಿಯನ್ನು ಕಳಚುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಿಂದಲೇ ಅನ್ವಯವಾಗುವಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಎಂಜಿನಿಯರಿಂಗ್ ಪಠ್ಯಕ್ರಮವನ್ನು ಪರಿಷ್ಕರಿಸಿದೆ.

ಈ ವರ್ಷದಿಂದ ಪರಿಷ್ಕೃತ ಪಠ್ಯ

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನದಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಆಯೋಗ (AICTE: All India Council for Technical Education) ಎಂಜಿನಿಯರಿಂಗ್‌ ಶಿಕ್ಷಣ ಪಠ್ಯಕ್ರಮವನ್ನು ಪರಿಷ್ಕರಿಸಿದ್ದು, ಹೊಸ ಪಠ್ಯಕ್ರಮ ಈ ವರ್ಷದಿಂದಲೇ ದೇಶದಾದ್ಯಂತ ಅನ್ವಯವಾಗಲಿದೆ.

ಪ್ರಮುಖ ಬದಲಾವಣೆಗಳು: ಮುಖ್ಯವಾಗಿ ಥಿಯರಿ ವಿಭಾಗದ ಅಂಕಗಳನ್ನು 220ರಿಂದ 160ಕ್ಕೆ ಇಳಿಸಲಾಗಿದೆ. ಇಂಟರ್ನ್‌ಶಿಪ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಸೈದ್ಧಾಂತಿಕ ಕಲಿಕೆಗಿಂತ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಪಠ್ಯದಲ್ಲಿ ವೇದ, ಪುರಾಣ ಮತ್ತು ತರ್ಕ ಶಾಸ್ತ್ರಗಳಲ್ಲಿ ಹುದುಗಿರುವ ತಾಂತ್ರಿಕ ಅಂಶಗಳನ್ನು ಸೇರಿಸಲಾಗಿದೆ. ಸಂವಿಧಾನ ಮತ್ತು ಪರಿಸರ ವಿಜ್ಞಾನ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಪ್ರತಿ ವರ್ಷ ಎಂಜಿನಿಯರಿಂಗ್ ಪಠ್ಯವನ್ನು ಪರಿಷ್ಕರಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.

ವಿಶ್ವದರ್ಜೆಯ ಗುಣಮಟ್ಟಕ್ಕೆ ಆದ್ಯತೆ

ಹುಬ್ಬಳ್ಳಿಯ ಬಿ.ವಿ.ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜು ಇಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವಾಗಿ ಬೆಳೆದಿದ್ದು, ಅಂತರರಾಷ್ಟ್ರೀಯ ಅಗತ್ಯಕ್ಕೆ ಅನುಗುಣವಾಗಿ ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡುತ್ತಿದೆ. ಸುಸಜ್ಜಿತ ಕಲಿಕಾ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ತರ್ಕಬದ್ಧವಾದ ಸೈದ್ಧಾಂತಿ, ಪ್ರಾಯೋಗಿಕ ಅನುಭವಗಳನ್ನು ಒದಗಿಸಿ ಅವರನ್ನು ಅತ್ಯುತ್ತಮ ಎಂಜಿನಿಯರ್‌ಗಳನ್ನಾಗಿ ರೂಪಿಸಲಾಗುತ್ತಿದೆ.

ನಮ್ಮ ಸಂಸ್ಥೆಯ ಆವರಣದಲ್ಲಿರುವ ‘ತಾಂತ್ರಿಕ ನಾವೀನ್ಯತೆ ಮತ್ತು ವಾಣಿಜ್ಯೋದ್ಯಮ ಕೇಂದ್ರ’ (CTIE: Center for Technology Innovation and Entrepreneurship) ನಾವೀನ್ಯತಾ ಉತ‌್ಪನ್ನ ಕೇಂದ್ರದೊಡನೆ (CIPD: Center for Innovation and Product Development) ಸಹಯೋಗ ಹೊಂದಿದ್ದು, ವಿಶ್ವದರ್ಜೆಯ ತಂತ್ರಜ್ಞರನ್ನು ಹುಟ್ಟುಹಾಕುತ್ತಿವೆ
– ಡಾ.ಅಶೋಕ ಎ. ಶೆಟ್ಟರ, ಉಪಕುಲಪತಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ–ಹುಬ್ಬಳ್ಳಿ

ಉತ್ತಮ ನಾಗರಿಕರ ನಿರ್ಮಾಣದ ಉದ್ದೇಶ

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕೆ.ಎಲ್‌.ಇ ತಾಂತ್ರಿಕ ಶಿಕ್ಷಣ ಸಂಸ್ಥೆ (ಎಂಜಿನಿಯರಿಂಗ್ ಕಾಲೇಜು) ಸುಸಜ್ಜಿತ ಹಸಿರು ಕ್ಯಾಂಪಸ್, ಗುಣಮಟ್ಟದ ಅಧ್ಯಯನ, ಶಿಸ್ತು ವಿಕಸನ ಸೇರಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಉತ್ತಮ ಎಂಜಿನಿಯರ್‌ಗಳನ್ನು ಮಾತ್ರವಲ್ಲದೆ, ಉತ್ತಮ ನಾಗರಿಕರನ್ನೂ ರೂಪಿಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ರಾಷ್ಟ್ರೀಯ ಹೆದ್ದಾರಿ (ಬೈಪಾಸ್), ವಿಮಾನ ನಿಲ್ದಾಣ ಹಾಗೂ ಹಲವು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಿಗೆ ಸಮೀಪದಲ್ಲಿ ನಮ್ಮ ಕಾಲೇಜು ಇರುವುದು ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ
– ಡಾ.ಬಿ.ಎಸ್.ಅನಾಮಿ, ಪ್ರಾಂಶುಪಾಲ, ಕೆ.ಎಲ್‌.ಇ ತಾಂತ್ರಿಕ ಮಹಾವಿದ್ಯಾಲಯ–ಹುಬ್ಬಳ್ಳಿ

ಪಾರದರ್ಶಕ ಮೌಲ್ಯಮಾಪನಕ್ಕೆ ಅವಕಾಶ

ಧಾರವಾಡದಲ್ಲಿರುವ ನಮ್ಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ನಮ್ಮ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಾವು ಪಾರದರ್ಶಕತೆಗೆ ಆದ್ಯತೆ ನೀಡಿದ್ದೇವೆ. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನದ ನಂತರ ವಿದ್ಯಾರ್ಥಿಗಳ ಕೈಗೆ ನೀಡಿ ವಸ್ತುನಿಷ್ಠತೆಯನ್ನು ದೃಢಪಡಿಸುತ್ತೇವೆ. ಇಂಡಿಯಾ ಟುಡೆ ನಿಯತಕಾಲಿಕೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಂತೆ ಗುಣಮಟ್ಟದಲ್ಲಿ ನಮ್ಮ ಸಂಸ್ಥೆ ರಾಷ್ಟ್ರಮಟ್ಟದಲ್ಲಿ 17ನೇ ಸ್ಥಾನದಲ್ಲಿದೆ
ಡಾ.ಬಿ.ಎಸ್.ವನಕುದ್ರೆ, ಪ್ರಾಂಶುಪಾಲ, ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ–ಧಾರವಾಡ

ಹುಬ್ಬಳ್ಳಿ– ಧಾರವಾಡದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳು

* ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐ.ಐ.ಟಿ)– ಧಾರವಾಡ. ದೂ: 0836–2212 839

* ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್ಮೇಷನ್ ಟೆಕ್ನಾಲಜಿ (ಐ.ಐ.ಐ.ಟಿ)– ಧಾರವಾಡ (ಹುಬ್ಬಳ್ಳಿ). ದೂ: 0836–2250879

* ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ (ಬಿವಿಬಿ ಎಂಜಿನಿಯರಿಂಗ್ ಕಾಲೇಜು)–ಹುಬ್ಬಳ್ಳಿ. ದೂ: 0836–2378103

* ಕೆ.ಎಲ್‌.ಇ ತಾಂತ್ರಿಕ ಮಹಾವಿದ್ಯಾಲಯ, ಗೋಕುಲ ರಸ್ತೆ–ಹುಬ್ಬಳ್ಳಿ. ದೂ: 0836–2232681

* ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ–ಧಾರವಾಡ. ದೂ: 0836–2464699

* ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್– ಹುಬ್ಬಳ್ಳಿ. ದೂ: 07338697711

* ಎ.ಜಿ.ಎಂ.ಆರ್ ಕಾಲೇಜ್ ಆಫ್ ಎಂಜಿನಿಯರಿಂಗ್ ವರೂರು (ಹುಬ್ಬಳ್ಳಿ). ದೂ: 0836–2312071

ಭಾರತದಲ್ಲಿ ಎಂಜಿನಿಯರಿಂಗ್

ಭಾರತದ ಪ್ರಥಮ ಎಂಜಿನಿಯರಿಂಗ್ ಕಾಲೇಜನ್ನು ಬ್ರಿಟಿಷರು 1847ರಲ್ಲಿ ಉತ್ತರ ಪ್ರದೇಶದ ರೂರ್ಕಿಯಲ್ಲಿದ್ದ ಥಾಮ್ಸನ್ ಕಾಲೇಜಿನ ಆವರಣದಲ್ಲಿ ಸ್ಥಾಪಿಸಿದರು. ಅಲ್ಲಿ ಸಿವಿಲ್ ಎಂಜಿನಿಯರಿಂಗ್ ತರಬೇತಿ ಕೊಡಲಾಗುತ್ತಿತ್ತು. ಸ್ವಾತಂತ್ರ್ಯನಂತರ ಇದೇ ಸಂಸ್ಥೆ ‘ಐ.ಐ.ಟಿ ರೂರ್ಕಿ’ ಆಗಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ.

‘ಭಾರತವು ವಿಶ್ವದಲ್ಲಿ ಎಂಜಿನಿಯರ್‌ಗಳ ಅತ್ಯಂತ ದೊಡ್ಡ ಉತ್ಪಾದಕ ದೇಶವಾಗಿದೆ. ಆದರೆ, ಇಲ್ಲಿನ ಎಂಜಿನಿಯರ್‌ಗಳ ಗುಣಮಟ್ಟ ಕಳಪೆಯಾಗಿದ್ದು, ಸಾಕಷ್ಟು ಉತ್ತಮಗೊಳ್ಳಬೇಕಿದೆ. ಭಾರತದ ಶೇ 8ರಷ್ಟು ಎಂಜಿನಿಯರ್‌ಗಳು ಮಾತ್ರ ಮಾತ್ರ ಉತ್ತಮ ಉದ್ಯೋಗಕ್ಕೆ ತಕ್ಕ ಅರ್ಹತೆ ಮತ್ತು ಕೌಶಲ ಹೊಂದಿದ್ದಾರೆ’ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಹಣೆಪಟ್ಟಿಯನ್ನು ಕಳಚುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದಿಂದಲೇ ಅನ್ವಯವಾಗುವಂತೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಎಂಜಿನಿಯರಿಂಗ್ ಪಠ್ಯಕ್ರಮವನ್ನು ಪರಿಷ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT