ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಉಲ್‌ ಫಿತ್ರ್‌ : ಮಾರುಕಟ್ಟೆ ರಂಗು

ಮೆಹಂದಿ, ಸುಗಂಧ ದ್ರವ್ಯ, ಸುರ್ಮಾ, ಅತ್ತರ್‌, ಚಿಸ್ಕಾ ವ್ಯಾಪಾರ ಜೋರು
Last Updated 16 ಜೂನ್ 2018, 8:30 IST
ಅಕ್ಷರ ಗಾತ್ರ

ಹಾವೇರಿ: ರಮ್ಜಾನ್ ಮಾಸದ ಒಂದು ತಿಂಗಳ ರೋಜಾ ಮುಗಿಸಿ, ಚಂದ್ರದರ್ಶನದ ಬಳಿಕ ಶನಿವಾರ ಆಚರಿಸಲಿರುವ ‘ಈದ್‌ ಉಲ್‌ ಫಿತ್ರ್‌’  ಅಂಗವಾಗಿ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯಿತು.

‘ಬರೀ ಐವತ್ತ್‌... ಐವತ್ತ್’, ‘ನೂರಕ್ಕೆರಡು ನೂರಕ್ಕೆರಡು’ ಎಂದು ವ್ಯಾಪಾರಿಗಳೂ ಗ್ರಾಹಕರನ್ನು ಕೂಗಿ ಕರೆಯುವ ದೃಶ್ಯಗಳು ನಗರದ ಎಂ.ಜಿ.ರಸ್ತೆ ಹಾಗೂ ಮಾರುಕಟ್ಟೆಯಲ್ಲಿ ಕಂಡುಬಂತು. ಹಬ್ಬದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮಾತ್ರವಲ್ಲ, ರಸ್ತೆ ಬದಿಯಲ್ಲೂ ವ್ಯಾಪಾರ ಜೋರಾಗಿತ್ತು.

‘ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಹಿಂದಿನ ದಿನವೇ ಖರೀದಿಸುತ್ತಾರೆ. ಹೀಗಾಗಿ, ಪ್ರತಿ ವರ್ಷವೂ ಹಬ್ಬದ ವ್ಯಾಪಾರ ಜೋರಾಗಿರುತ್ತದೆ’ ಎಂದು ಹಾನಗಲ್‌ ತಾಲ್ಲೂಕಿನ ನೆರೇಗಲ್‌ ಗ್ರಾಮದ ವ್ಯಾಪಾರಿ ಇಸ್ಮಾಯಿಲ್‌ ದೊಡ್ಡಮನಿ ತಿಳಿಸಿದರು.

₹10 ರಿಂದ ₹50ರ ವರೆಗಿನ ವಿವಿಧ ವಿನ್ಯಾಸದ ಕರವಸ್ತ್ರಗಳು, ₹ 20ರಿಂದ ₹ 300ರ ವರೆಗೆ ವಿವಿಧ ಮಾದರಿಯ ಟೋಪಿಗಳು, ಹೊಸ ಹೊಸ ವಿನ್ಯಾಸದ ಬಟ್ಟೆಗಳು, ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿವೆ. ಅಲ್ಲದೇ, ಮೆಹಂದಿ, ಸುಗಂಧ ದ್ರವ್ಯ, ಸುರ್ಮಾ, ಅತ್ತರ್‌, ಚಿಸ್ಕಾ ಮತ್ತಿತರ ವ್ಯಾಪಾರವೂ ಜೋರಾಗಿದೆ ಎಂದು ವ್ಯಾಪಾರಿ ಇರ್ಫಾನ್‌ ಅಂಗಡಿ ತಿಳಿದರು.

ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಹಲವರು ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಬಂದಿದ್ದರು.

ಪ್ರತಿ ಗುರುವಾರ ಹಾವೇರಿಯ ಸಂತೆ ನಡೆಯುತ್ತದೆ. ಆದರೆ, ಹಬ್ಬದ ಕಾರಣ ಶುಕ್ರವಾರವೂ ಸಂತೆಯ ಮಾದರಿಯಲ್ಲೇ ವ್ಯಾಪಾರವು ಜೋರಾಗಿತ್ತು.

ಕುಟುಂಬದ ಸದಸ್ಯರೆಲ್ಲ ಒಟ್ಟುಗೂಡಿ ಬಟ್ಟೆ ಹಾಗೂ ವಿವಿಧ ಖರೀದಿಯಲ್ಲಿ ತೊಡಗಿದ್ದರು.

ಚಪ್ಪಲಿ, ಮೆಹಂದಿ, ಬಳೆ, ಆಭರಣಗಳನ್ನು ಖರೀದಿಸುವಲ್ಲಿ ಹಲವರು ಮಗ್ನರಾಗಿದ್ದರು. ಹಬ್ಬದ ವಿಶೇಷ ಖಾದ್ಯ ಸುರ್‌ಕುಂಬಾ ತಯಾರಿಕೆಗೆ ಬೇಕಾದ ಗೋಡಂಬಿ, ಬಾದಾಮಿ, ಶ್ಯಾವಿಗೆ, ಪಿಸ್ತಾ, ಖರ್ಜೂರ, ಉತ್ತತ್ತಿ ಹಾಗೂ ಮಸಾಲಾ ಪದಾರ್ಥಳಾದ ಗಸೆಗಸೆ, ಲವಂಗ, ಏಲಕ್ಕಿ, ಚಕ್ಕಿ ವ್ಯಾಪಾರವೂ ಜೋರಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಹಬ್ಬದ ಕಾರಣ ಕೆಲವು ವಸ್ತುಗಳು ಹಾಗೂ ಹಣ್ಣುಗಳ ಬೆಲೆಯೂ ಏರಿಕೆಯಾಗಿವೆ, ಇನ್ನು ಕೆಲವು ವಸ್ತುಗಳು ಬೆಲೆಯಲ್ಲಿ ಸ್ಥಿರತೆ ಕಾಯ್ದಿಕೊಂಡಿವೆ ಎಂದು ಹಣ್ಣಿನ ವ್ಯಾಪಾರಿ ಇನಾಯತ್‌ ಮುಲ್ಲಾ ತಿಳಿಸಿದರು.

ವಾರದ ಹಿಂದೆ ಕೆ.ಜಿ. ಸೇಬು ಹಣ್ಣನ್ನು ಸುಮಾರು  ₹ 120 ರಿಂದ ₹ 170ರ ವರೆಗೆ ಮಾರಾಟ ಮಾಡುತ್ತಿದ್ದೆವು. ಈಗ ಪ್ರತಿ ಬಾಕ್ಸ್‌ಗೆ  ₹ 300 ತನಕ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ಬಾಳೆ ಹಣ್ಣು ಡಜನ್‌ಗೆ  ₹ 25ರಿಂದ ₹ 40ಕ್ಕೆ ಹೆಚ್ಚಾಗಿದೆ. ಇತರ ಹಣ್ಣುಗಳಿಗೂ ಬೇಡಿಕೆ ಹೆಚ್ಚಿವೆ ಎಂದು ಅವರು ತಿಳಿಸಿದರು.

ಒಣಹಣ್ಣುಗಳು, ಬಣ್ಣದ ಬಳೆಗಳು, ಚಪ್ಪಲಿ, ಬಟ್ಟೆ, ಬ್ಯಾಗ್‌, ಪರ್ಸ್‌ಗಳು ಮಾರುಕಟ್ಟೆಗೆ ಬಂದಿವೆ. ಯಾವುದನ್ನು ಖರೀದಿ ಸಬೇಕು ಎಂಬ ಗೊಂದಲ ಕಾಡುತ್ತಿದೆ 
- ಫಾತಿಮಾ ಬೇಗಂ, ಗ್ರಾಹಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT