ಜಿಲ್ಲೆಯ ಸರ್ವ ಶಾಸಕರ ಸಭೆ ಶೀಘ್ರ

7
ಪರಿಸರ ಸಂರಕ್ಷಣೆಗಾಗಿ ಕಾರ್ಗಿಲ್ ಯೋಧರ ಹೆಸರಿನಲ್ಲಿ ನಡುತೋಪು ನಿರ್ಮಾಣ: ಆರ್. ಶಂಕರ್

ಜಿಲ್ಲೆಯ ಸರ್ವ ಶಾಸಕರ ಸಭೆ ಶೀಘ್ರ

Published:
Updated:

ಹಾವೇರಿ: ಜಿಲ್ಲೆಯ ಶಾಸಕರ ಸಭೆ ಕರೆದು, ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಅರಣ್ಯ ಹಾಗೂ ಪರಿಸರ ವಿಜ್ಞಾನ ಸಚಿವ ಆರ್.ಶಂಕರ್ ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಶುದ್ಧೀಕರಣ ಘಟಕದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ತಾಲ್ಲೂಕಿನ ಅಗಡಿಯಲ್ಲಿ ಶುಕ್ರವಾರ ಸಸಿ ನೆಡುವ ಮೂಲಕ ಚಾಲನೆ ನೀಡಿದ ಅವರು ಮಾತನಾಡಿದರು.

ಅಧಿಕಾರಿಗಳ ಸಭೆ ನಡೆಸಿದ್ದು, ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳು ಹಾಗೂ ವಿಳಂಬವಾಗಿರುವ ಯೋಜನೆಗಳ ಮಾಹಿತಿ ಪಡೆದಿದ್ದೇನೆ. ಅಲ್ಲದೇ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದರು.

ಪರಿಸರ ಮಾಲಿನ್ಯ ತಡೆಗೆ ಸಸ್ಯಸಂಪತ್ತು ಹೆಚ್ಚಾಗಬೇಕು. ಕಾರ್ಖಾನೆಗಳ ಮಾಲಿನ್ಯ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ಪ್ರವಾಸಕೈಗೊಂಡು ತಪಾಸಣೆ ನಡೆಸಲಾಗುವುದು. ಪರಿಸರ ನಿಯಮಾವಳಿಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಜಲ ಮಾಲಿನ್ಯ ತಡೆಗಾಗಿ ಕೆರೆಗಳ ಪುನಶ್ಚೇತನ ಹಾಗೂ ಸುತ್ತ ಹಸಿರೀಕರಣ ಮಾಡಲಾಗುವುದು. ಹಾವೇರಿಯ ಹೆಗ್ಗೇರಿ ಕೆರೆ, ರಾಣೆಬೆನ್ನೂರಿನ ದೊಡ್ಡಕೆರೆ, ಹಿರೇಕೆರೂರಿನ ಮದಗದ ಕೆರೆಯ ಪುನಶ್ಚೇತನ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. ಇತರ ಕೆರೆಗಳ ಅಭಿವೃದ್ಧಿ ಕುರಿತು ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತುಂಗಭದ್ರಾ ನದಿಗೆ ಮುದೇನೂರ ಬಳಿ ₹ 80 ಕೋಟಿ ವೆಚ್ಚದಲ್ಲಿ ಬಾಂದಾರು ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಹಾವೇರಿ ತಾಲ್ಲೂಕಿನ ಕಂಚಾರಗಟ್ಟಿ ಅಥವಾ ಹಾವನೂರ ಬಳಿ ಬಾಂದಾರು ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.

ಸಸಿ ನೆಟ್ಟು ಬೆಳೆಸುವುದೇ ಪರಿಸರ ಸಂರಕ್ಷಣೆಯ ಮೊದಲ ಸೂತ್ರ. ಈ ಬಗ್ಗ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ನೆಟ್ಟ ಸಸಿಗಳನ್ನು ಸಂರಕ್ಷಿಸುವುದು ಪ್ರಮುಖವಾಗಿದೆ. ಮಗುವಿನ ರೀತಿಯಲ್ಲಿ ಗಿಡ-ಮರಗಳ ಆರೈಕೆ ಮಾಡಬೇಕಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೋರುತ್ತೇನೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಶಾಸಕ ನೆಹರು ಓಲೇಕಾರ ಇದ್ದರು.

‘ಐದು ಸಾವಿರ ಸಸಿ ನಾಟಿ’

ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅಗಡಿ, ನೆಗಳೂರು, ದೇವಿಹೊಸೂರ, ಎಂ.ಜಿ.ತಿಮ್ಮಾಪುರ, ಬಸಾಪುರ, ಎಂ.ಆಡೂರ, ನರೇಗಲ್, ಕರೆಕ್ಯಾತನಹಳ್ಳಿ, ಬೈರನಪಾದ, ಹುರಳಿಕೊಪ್ಪಿ, ಚಿಕ್ಕಬಾಸೂರ, ಖಂಡೇರಾಯನಹಳ್ಳಿ, ಕುದರಿಹಾಳ, ಅಗಡಿ ಹಾಗೂ ಜಂಗಮನಕೊಪ್ಪದ ನೀರಿನ ಶುದ್ಧೀಕರಣ ಘಟಕಗಳ ಆವರಣಗಳಲ್ಲಿ ಒಟ್ಟು ಐದು ಸಾವಿರ ಸಸಿಗಳನ್ನು ನಾಟಿ ಮಾಡಲಾಗುವುದು. ಈ ಪೈಕಿ ಹಣ್ಣಿನ ಸಸಿಗಳನ್ನು ನೆಡಲು ಆದ್ಯತೆ ನೀಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಾಯಕ ಹುಲ್ಲೂರ ತಿಳಿಸಿದರು.

ಅಗಡಿಯಲ್ಲಿ ಪ್ರತಿ ಸಸಿಗೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ. ಈಗಾಗಲೇ 78 ಯೋಧರ ಹೆಸರು ಸಂಗ್ರಹಿಸಿ ನಾಮಕರಣ ಮಾಡಲಾಗಿದ್ದು, ಇತರ ಯೋಧರ ಹೆಸರುಗಳನ್ನೂ ನಾಮಕರಣ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry