ಚರಂಡಿಗೆ ಮಣ್ಣು; ಗದ್ದೆಯಲ್ಲಿ ನೀರು

7
ಮಳೆ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಕೊರತೆ; ರೈತರಿಗೆ ತೊಂದರೆ

ಚರಂಡಿಗೆ ಮಣ್ಣು; ಗದ್ದೆಯಲ್ಲಿ ನೀರು

Published:
Updated:

ಕಾರವಾರ: ಉಪ್ಪು ನೀರು ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆಯಿಲ್ಲದ ಕಾರಣ ತಾಲ್ಲೂಕಿನ ಕಿನ್ನರ ಗ್ರಾಮದ ಮಸೀದಿ ಸಮೀಪ ರೈತರು ಕೃಷಿ ಮಾಡಲಾಗದೇ  ತೊಂದರೆಗೆ ಒಳಗಾಗಿದ್ದಾರೆ.

ಇಲ್ಲಿ ಮೊದಲಿದ್ದ ಚರಂಡಿಯನ್ನು ರಸ್ತೆ ನಿರ್ಮಾಣದ ಸಂದರ್ಭ ಮುಚ್ಚಲಾಯಿತು. ನಂತರ ಅದನ್ನು ತೆರವು ಮಾಡದ ಕಾರಣ ಗದ್ದೆಗಳಲ್ಲಿ ನೀರು ನಿಂತಿದೆ. ಹೀಗಾಗಿ ಭತ್ತ ಬೆಳೆಯಲಾಗುತ್ತಿಲ್ಲ ಎನ್ನುವುದು ರೈತರ ಅಳಲು.

‘ಈ ಭಾಗದಲ್ಲಿ ಸುಮಾರು 75 ಎಕರೆ ಗದ್ದೆಯಿದೆ. ಬೇಸಿಗೆಯಲ್ಲಿ ನದಿಯಿಂದ ಉಪ್ಪು ನೀರು ಹರಿದು ಬರುತ್ತದೆ. ಮಳೆಗಾಲದಲ್ಲಿ ಅದು ಹರಿದುಹೋಗಲು ಚರಂಡಿ ವ್ಯವಸ್ಥೆ ಸರಿಯಿಲ್ಲ. ಹೀಗಾಗಿ ಆಸಕ್ತಿಯಿದ್ದರೂ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದಿಂದ ಈ ಸಮಸ್ಯೆಯಿದೆ’ ಎನ್ನುತ್ತಾರೆ ರೈತರಾದ ಪ್ರಿಯ ಬಿ.ಕೊಠಾರಕರ್, ಹರೀಶ್ಚಂದ್ರ ನಾಗೇಕರ್, ಸತೀಶ್ ಕೊಠಾರಕರ್.

ಗದ್ದೆಯ ಸಮೀಪದಲ್ಲೇ ಚಾಮಕುಳಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದೆ. ಆದರೆ, ಅದರ ಕೆಳಗೆ ಮಣ್ಣು ತುಂಬಿರುವ ಕಾರಣ ಮಳೆನೀರು ಸರಾಗವಾಗಿ ಹರಿಯುತ್ತಿಲ್ಲ. ಸಮುದ್ರದಲ್ಲಿ ಉಬ್ಬರ, ಇಳಿತದ ದಿನಗಳಲ್ಲಿ ಗದ್ದೆಯಲ್ಲಿ ಉಪ್ಪು ನೀರು ತುಂಬುತ್ತದೆ. ಹೀಗಿರುವಾಗ ಕೃಷಿ ಮಾಡಲು ಹೇಗೆ ಸಾಧ್ಯ ಎನ್ನುವುದು ಅವರ ಪ್ರಶ್ನೆ.

ಕಳೆದ ವರ್ಷ ಬೆಳೆ ನಷ್ಟ: ಕಳೆದ ವರ್ಷ ಬೆಳೆ ಕಟಾವಿಗೆ ಬರುವ ಹಂತದಲ್ಲಿದ್ದಾಗ ಭಾರಿ ಮಳೆ ಸುರಿದಿತ್ತು. ಕೆಲವೇ ದಿನಗಳಲ್ಲಿ ಕೈಸೇರಬೇಕಿದ್ದ ಬೆಳೆ ಮಳೆಯ ನೀರಿನಲ್ಲಿ ಸಂಪೂರ್ಣ ತೋಯುವುದನ್ನು ನೋಡುವುದು ಬಿಟ್ಟರೆ ರೈತರಿಗೆ ಬೇರೆ ದಾರಿಯೇ ಇರಲಿಲ್ಲ. ಗದ್ದೆಯಲ್ಲಿ ಒಂದೆರಡು ಅಡಿಗಳಷ್ಟು ನಿಂತ ನೀರು ಕೂಡಲೇ ಹರಿಯದಂತೆ ಚರಂಡಿಯಲ್ಲಿದ್ದ ಮಣ್ಣು, ಹೂಳು ತಡೆಯಿತು. ಈ ವರ್ಷವೂ ಅದೇ ರೀತಿಯ ಸನ್ನಿವೇಶ ಎದುರಾಗದಿರಲಿ. ಗ್ರಾಮ ಪಂಚಾಯ್ತಿಯಿಂದ ಮಣ್ಣನ್ನು ತೆಗೆಸುವ ಕೆಲಸವಾಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry