ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಏನು?

ಅಭಿನಂದನಾ ಸಮಾರಂಭದಲ್ಲಿ ಸಂಸದ ಪ್ರತಾಪಸಿಂಹ ಪ್ರಶ್ನೆ
Last Updated 16 ಜೂನ್ 2018, 9:34 IST
ಅಕ್ಷರ ಗಾತ್ರ

ಮಡಿಕೇರಿ: ‘ದೇಶದ ಅಭಿವೃದ್ಧಿ ದೃಷ್ಟಿ ಯಿಂದ ಚುನಾವಣೆಯ ಸಂದರ್ಭಗಳಲ್ಲಿ ಜಾತಿಯ ಸಂಕೋಲೆಯಿಂದ ಆಚೆಗೆ ಬರುವುದು ಅಗತ್ಯ’ ಎಂದು ಸಂಸದ ಪ್ರತಾಪಸಿಂಹ ಪ್ರತಿಪಾದಿಸಿದರು.

ಬಿಜೆಪಿ ನಗರ ಮತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ಕ್ರಿಸ್ಟಲ್ ಹಾಲ್‌ನಲ್ಲಿ ಶುಕ್ರವಾರ ನಡೆದ ‘ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಜಾತಿಯೇ ಮುಖ್ಯವಾಗಿದ್ದಲ್ಲಿ ಕೇವಲ ಶೇ 0.2ರಷ್ಟು ಜನಸಂಖ್ಯೆಯಿರುವ ಗಾಣಿಗ ಸಮೂಹದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.

‘48 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್‌, ದೇಶಕ್ಕೆ ಏನು ಕೊಡುಗೆ ನೀಡಿದೆ ಎಂಬುದನ್ನು ಜನರ ಎದುರಿಗೆ ಇಡಲಿ. ಬಿಜೆಪಿಯ 48 ತಿಂಗಳ ಆಡಳಿತ ಕುರಿತು ಕಿರುಹೊತ್ತಿಗೆ ತಯಾರಿಸಲಾಗಿದೆ; ಅದನ್ನು ಶನಿವಾರ ಮೈಸೂರಿನಲ್ಲಿ ಸುತ್ತೂರು ಸ್ವಾಮೀಜಿಯವರಿಗೆ ಹಸ್ತಾಂತರ ಮಾಡುತ್ತೇನೆ. ಕೊಡಗಿನ ಇಬ್ಬರು ಶಾಸಕರೂ ಅದನ್ನು ಜನರಿಗೆ ತಲುಪಿಸಲಿ ಎಂದು ಕೋರಿದರು.

ಸಂವಿಧಾನ ರಚಿಸಿದ ಡಾ.ಬಿ.ಆರ್‌. ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾದ ಸರ್ಕಾರ ರಾಜ್ಯದಲ್ಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ದೂರಿದರು.

‘ಭಾರಿ ಮಳೆಯಿಂದ ಮಾಕುಟ್ಟ ರಸ್ತೆ ಸಂಪೂರ್ಣ ಹದಗೆಟ್ಟ ಸಂದರ್ಭ ಕೇರಳದ ಕಂದಾಯ ಸಚಿವರು ಸ್ಥಳಕ್ಕೆ ಬಂದು ಪರಿಶೀಲಿಸುತ್ತಾರೆ. ಆದರೆ, ರಾಜ್ಯದಲ್ಲಿ ರಚನೆಯಾಗಿರುವ ಸರ್ಕಾರದ ಮಂತ್ರಿಗಳು ಎಲ್ಲಿದ್ದಾರೆ’ ಎಂದು ಬೋಪಯ್ಯ ಪ್ರಶ್ನಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ‘ಚುನಾವಣೆ ಪೂರ್ವದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುತ್ತಿದ್ದರು. ಇದೀಗ ಸರ್ಕಾರ ರಚನೆಯಲ್ಲಿ ಒಂದಾಗಿದ್ದಾರೆ. ಈ ಸರ್ಕಾರ ಹೆಚ್ಚುಕಾಲ ಉಳಿಯುವುದಿಲ್ಲ. ಆರು ತಿಂಗಳಲ್ಲಿ ಮತ್ತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್‌ ಮೊದಲಾದವರು ಹಾಜರಿದ್ದರು.

ರಾಜ್ಯವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ ಕಾಂಗ್ರೆಸ್‌, ಈಗ ಮೈತ್ರಿ ಸರ್ಕಾರದ ಭಾಗವಾಗಿದೆ. ತಿಂಗಳು ಕಳೆದರೂ ನೂತನ ಸರ್ಕಾರ ಟೇಕ್‌ಆಫ್ ಆಗಿಲ್ಲ
- ಕೆ.ಜಿ. ಬೋಪಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT