ಮತ್ತೆ ಬಂತು ‘ಬುಟ್ಟಿ ಕೊಯ್ಲು’ ವಿಧಾನ

7
ಶ್ರೀನಿವಾಸಪುರ: ಮಾವಿನ ಕಾಯಿ ಕಟಾವಿಗೆ ರೈತರ ಕ್ರಮ

ಮತ್ತೆ ಬಂತು ‘ಬುಟ್ಟಿ ಕೊಯ್ಲು’ ವಿಧಾನ

Published:
Updated:
ಮತ್ತೆ ಬಂತು ‘ಬುಟ್ಟಿ ಕೊಯ್ಲು’ ವಿಧಾನ

ಶ್ರೀನಿವಾಸಪುರ: ತಾಲ್ಲೂಕಿನ ಮಾವು ಬೆಳೆಗಾರರು ಮಾವಿನ ಕಾಯಿ ಕೀಳಲು ಸುಧಾರಿತ ವಿಧಾನ ಅನುಸರಿಸುತ್ತಿದ್ದಾರೆ. ಇದರಿಂದ ಪೆಟ್ಟಿಲ್ಲದ ಕಾಯಿ ಮಾರುಕಟ್ಟೆಗೆ ಬರುತ್ತಿದೆ.

ತಾಲ್ಲೂಕಿನಲ್ಲಿ ಮಾವಿನ ಬೆಳೆ ವಿಸ್ತೀರ್ಣ ಹೆಚ್ಚಿದಂತೆ, ಕೃಷಿ ಕಾರ್ಮಿಕರ ಕೊರತೆ ಇದೆ. ಮಾವಿನ ಕಾಯಿ ಉದುರಿಸಿ ಮಾರುಕಟ್ಟೆಗೆ ಕೊಂಡೊಯ್ಯುವ ಅವೈಜ್ಞಾನಿಕ ಪದ್ಧತಿ ಇತ್ತು. ಆಗ ಬಹಳಷ್ಟು ಕಾಯಿ ಪೆಟ್ಟು ಬಿದ್ದು ಕೊಳೆಯುತ್ತಿತ್ತು. ಇದು ಬೆಲೆ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ವ್ಯಾಪಾರಿಗಳು ಪೆಟ್ಟು ಬಿದ್ದ ಕಾರಣಕ್ಕೆ ಕೊಳೆತು ಹಾಳಾಗಬಹುದು ಎಂದು ಕಡಿಮೆ ಬೆಲೆಗೆ ಖರೀದಿಸುತ್ತಿದ್ದರು.

ಫಸಲು ಉತ್ತಮವಾಗಿದ್ದರೂ ಕಾಯಿ ಕೀಳುವ ಪದ್ಧತಿ ಸರಿ ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದರು. ತಡವಾಗಿಯಾದರೂ ಮಾವು ಬೆಳೆಗಾರರು ಎಚ್ಚೆತ್ತಿದ್ದಾರೆ. ಉದ್ದನೆಯ ಬಿದಿರಿನ ಗಳಕ್ಕೆ ಕಟ್ಟಿದ ಪ್ಲಾಸ್ಟಿಕ್‌ ದಾರದ ಬುಟ್ಟಿಯನ್ನು ಬಳಸಿ ಕಾಯಿ ಇಳಿಸುತ್ತಿದ್ದಾರೆ. ಹಿಂದೆ ಮಾವಿನ ಕಾಯಿ ಕೀಳುವುದು ಎಂಬ ಪದ ಬಳಕೆಯಲ್ಲಿರಲಿಲ್ಲ. ಮಾವಿನ ಕಾಯಿ ಇಳಿಸುವುದು ಎಂದು ಹೇಳಲಾಗುತ್ತಿತ್ತು.

ಮರ ಹತ್ತಿದವರು ಕಾಯಿ ಕಿತ್ತು ಕೆಳಗೆ ಹಾಕುತ್ತಿದ್ದರು. ಆ ಕಾಯಿಯನ್ನು ಗೋಣಿ ತಾಟು ಹಿಡಿದ ವ್ಯಕ್ತಿಗಳು ಹಿಡಿದು ನಿಧಾನವಾಗಿ ನೆಲದ ಮೇಲೆ ಇಡುತ್ತಿದ್ದರು. ಇದರಿಂದ ಕಾಯಿಕೆಗೆ ಪೆಟ್ಟಾಗುತ್ತಿರಲಿಲ್ಲ. ಮಾರುಕಟ್ಟೆಗೆ ಕೊಂಡೊಯ್ದ ಕಾಯಿ ಪೂರ್ಣ ಪ್ರಮಾಣದಲ್ಲಿ ಹಣ್ಣಾಗುತ್ತಿತ್ತು. ಉತ್ತಮ ಬೆಲೆಯೂ ಸಿಗುತ್ತಿತ್ತು. ಇಂದು ವೈಜ್ಞಾನಿಕ ಎಂದು ಕರೆಯುವ ಬುಟ್ಟಿ ಮೂಲಕ ಮಾವಿನ ಕಾಯಿ ಕೊಯ್ಲು ಮಾಡುವ ಪದ್ಧತಿ ಬಹಳ ಹಿಂದೆಯೇ ಬಳಕೆಯಲ್ಲಿತ್ತು. ರೈತರ ನಿರ್ಲಕ್ಷ್ಯದ ಪರಿಣಾಮವಾಗಿ ಬಳಕೆ ನಿಂತಿತ್ತು.

ಇತ್ತೀಚಿನ ವರ್ಷಗಳಲ್ಲಿ ಮಾವಿನ ಮರಗಳು ಒಂದೇ ಹಂತದಲ್ಲಿ ಹೂ ಬಿಡುತ್ತಿಲ್ಲ. ಹಾಗಾಗಿ ಫಸಲು ಒಂದೇ ಹಂತಕ್ಕೆ ಬರುವುದಿಲ್ಲ. ಹೂವು ಬಿಟ್ಟಂತೆ, ಬಲಿತ ಕಾಯಿಯನ್ನು ಕೆಲವು ಹಂತಗಳಲ್ಲಿ ಕೀಳಬೇಕಾಗುತ್ತದೆ. ಆದರೆ ಎಲ್ಲವನ್ನೂ ಒಮ್ಮೆಗೆ ಕೀಳುವ ಪರಿಪಾಠ ಆರಂಭವಾಯಿತು. ಇದರಿಂದ ಬೆಲೆ ಕುಸಿತಕ್ಕೆ ಕಾರಣವಾಯಿತು. ಎಚ್ಚೆತ್ತ ಬೆಳೆಗಾರರು ಹಂತ ಹಂತವಾಗಿ ಕಾಯಿ ಕೀಳುವುದನ್ನು ರೂಢಿಸಿಕೊಂಡಿದ್ದಾರೆ.

ಕೆಲವು ಬೆಳೆಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಅಂಗುಲ ಉದ್ದ ತೊಟ್ಟು ಬಿಟ್ಟು ಕತ್ತರಿಸಿ ಇಳಿಸುವ ಸುಧಾರಿತ ಕ್ರಮ ಅನುಸರಿಸುತ್ತಿದ್ದಾರೆ. ಮಾವಿನ ಹಾಲು ಕಾಯಿ ಮೇಲೆ ಬೀಳದಂತೆ ಎಚ್ಚರವಹಿಸುತ್ತಿದ್ದಾರೆ. ಹೀಗೆ ಕಿತ್ತ ಕಾಯಿಯನ್ನು 5 ಕೆಜಿ ಬಾಕ್ಸ್‌ ಮಾಡಿ, ಬೆಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ದು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಇಷ್ಟಾದರೂ ಬೆಳೆಗಾರರಿಗೆ ಉತ್ತಮ ಬೆಲೆ ಮಾತ್ರ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಮಧ್ಯವರ್ತಿಗಳು ಒಳ್ಳೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯಂತೂ ಮಾವಿನ ಕಾಯಿಗೆ ತೀವ್ರ ಬೆಲೆ ಕುಸಿತ ಉಂಟಾಗಿದೆ. ರೈತರು ಕಂಗಾಲಾಗಿದ್ದಾರೆ.

ಗ್ರಾಹಕರ ಜಾಗೃತಿ

ಮಾರುಕಟ್ಟೆಯಲ್ಲಿ ಕಾಯಿ ಖರೀದಿಸಿದ ವ್ಯಾಪಾರಿಗಳು, ಕಾಯಿ ಹಣ್ಣಾಗಿಸಲು ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದರು. ಆದರೆ ಈಗ ಅದು ನಿಂತಿದೆ. ಇದಕ್ಕೆ ಕಾರಣ ಗ್ರಾಹಕರ ಜಾಗೃತಿ. ರಾಸಾಯನಿಕ ಬಳಸಿದ ಮಾವನ್ನು ಗ್ರಾಹಕ ನಿರಾಕರಿಸುವ ಸಂಭವ ಇರುವುದರಿಂದ, ವ್ಯಾಪಾರಿಗಳು ಎಚ್ಚೆತ್ತಿದ್ದಾರೆ. ಆರೋಗ್ಯಯುತ ಮಾವಿನ ಹಣ್ಣು ಮಾರುಕಟ್ಟೆಗೆ ಬರುತ್ತಿದೆ.

–ಆರ್‌.ಚೌಡರೆಡ್ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry