ಸಾರಿಗೆ ನೌಕರರಿಗೆ 1 ಲಕ್ಷ ಮನೆ ನಿರ್ಮಾಣಕ್ಕೆ ಯೋಜನೆ

7
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಣೆ

ಸಾರಿಗೆ ನೌಕರರಿಗೆ 1 ಲಕ್ಷ ಮನೆ ನಿರ್ಮಾಣಕ್ಕೆ ಯೋಜನೆ

Published:
Updated:

ಮದ್ದೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರಿಗಾಗಿ 1 ಲಕ್ಷ ಮನೆ ನಿರ್ಮಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸದ್ಯದಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಿಸಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಪಟ್ಟಣಕ್ಕೆ ಶುಕ್ರವಾರ ಬಂದ ಅವರು, ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಈ ಯೋಜನೆಯಲ್ಲಿ ಮನೆ ಪಡೆಯಲು ಇಚ್ಛಿಸುವ ನೌಕರರಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಯೋಜಿಸಲಾಗಿದೆ. ಇದರಿಂದ ಸ್ವಂತ ಮನೆ ಹೊಂದುವ ನೌಕರರ ಕನಸು ನನಸಾಗಲಿದೆ ಎಂದರು.

ರಾಮನಗರ ಸೇರಿದಂತೆ ಜಿಲ್ಲೆಯ ಎಲ್ಲ ಬಸ್‌ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಯೋಜಿಸಿ ದ್ದೇನೆ. ಅಲ್ಲದೇ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್‌ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸುವ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಹಣ ಬಿಡುಗಡೆಯಾಗುತ್ತಿದ್ದಂತೆ ಉಚಿತವಾಗಿ ಪಾಸ್‌ ವಿತರಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದರು. ರಾಮನಗರದಲ್ಲಿ ಮತ್ತೊಂದು ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆ ತೆರೆಯಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಮೈಷುಗರ್‌ ಪುನಶ್ಚೇತನ : ‘ಜೆಡಿಎಸ್‌ಗೆ ಜಿಲ್ಲೆಯ ಜನತೆ 7 ಸ್ಥಾನಗಳಲ್ಲೂ ಅಭೂತಪೂರ್ವ ಗೆಲುವು ನೀಡಿದ್ದಾರೆ. ಈ ಋಣ ತೀರಿಸಲು ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆ ಆಧುನೀಕರಣವನ್ನು ಒಂದೇ ಬಾರಿಗೆ ಮಾಡಲು ಯೋಜಿಸಲಾಗಿದೆ. ಹಳೇ ಯಂತ್ರೋಪಕರಣಗಳನ್ನು ತೆಗೆದು ಹಾಕಿ ಹೊಸ ಯಂತ್ರ ಅಳವಡಿಸಲಾಗುವುದು. ಅಲ್ಲದೇ 4 ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯದ ಹೊಸ ಕಾರ್ಖಾನೆಯನ್ನು ತೆರೆಯಲು ಯೋಜಿಸಲಾಗಿದೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ’ ಎಂದರು. ಜಿಲ್ಲೆಯ ಎಲ್ಲ ನಾಲೆಗಳ ಆಧುನೀಕರಣಕ್ಕೆ ₹ 560 ಕೋಟಿ, ಸೀಳುನಾಲೆಗಳನ್ನು ಆಧುನೀಕರಣ ಗೊಳಿಸಲು ₹ 1,400 ಮೊತ್ತದ ಯೋಜನೆಯನ್ನು ಸಿದ್ಧಗೊಳಿಸಲಾಗಿದೆ. ಕೆ.ಆರ್‌ಎಸ್‌ ಜಲಾಶಯದಿಂದ ಆಧುನಿಕ ನಾಲೆಯನ್ನು ನಿರ್ಮಿಸಿ, ಶಿಂಷಾ, ಕಣ್ವ, ಮಂಗಳಾ ಹಾಗೂ ಅರ್ಕಾವತಿ ನದಿಗಳಿಗೆ ವಾರ್ಷಿಕವಾಗಿ ಕನಿಷ್ಠ 6 ಟಿಎಂಸಿ ಅಡಿ ನೀರು ತುಂಬಿಸುವ ₹ 2 ಸಾವಿರ ಕೋಟಿ ಮೊತ್ತದ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಸಾಕಾರಗೊಂಡರೆ, ಎರಡೂ ಜಿಲ್ಲೆಗಳ 326 ಕೆರೆ ಹಾಗೂ 250 ಕಟ್ಟೆಗಳಿಗೆ ನೀರು ದೊರಕಲಿದ್ದು, ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ತಾಲ್ಲೂಕಿನ ಜೀವನದಿ ಶಿಂಷಾ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ₹ 126 ಕೋಟಿ ಯೋಜನೆಯನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದು. ಇದ ಲ್ಲದೇ ಸ್ಥಗಿತಗೊಂಡಿರುವ ಶಿಂಷಾ ಏತ ನೀರಾವರಿ ಪುನಶ್ಚೇತನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಒಟ್ಟು 176 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಪಿಯು ತರಗತಿ ತೆರೆಯಲು ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲ ವಸತಿ ಶಾಲೆಗಳಲ್ಲಿ ಪಿಯು ತರಗತಿಗಳು ಆರಂಭಗೊಳ್ಳಲಿವೆ. ಅಲ್ಲದೇ ಕೆಸ್ತೂರಿನಲ್ಲಿ ಒಂದು ಪದವಿ ಕಾಲೇಜು, ಸೋಮನಹಳ್ಳಿಯಲ್ಲಿ ಡಿಪ್ಲೊಮಾ ಕಾಲೇಜು ತೆರೆಯಲು ಉದ್ದೇಶಿಸಲಾಗಿದೆ’ ಎಂದರು.

ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ‘ಜಿಲ್ಲೆಯ ಜನರು ಜೆಡಿಎಸ್ ಪಕ್ಷಕ್ಕೆ ನೀಡಿರುವ ಅಮೋಘ ಗೆಲುವನ್ನು ಪಕ್ಷ ಎಂದಿಗೂ ಮರೆಯುವುದಿಲ್ಲ. ಇಸ್ರೇಲ್‌ ಮಾದರಿಯ ಕೃಷಿ ಅಳವಡಿಕೆಗೆ ಮಂಡ್ಯ ಜಿಲ್ಲೆಯನ್ನೇ ಆಯ್ಕೆ ಮಾಡಲು ಮುಖ್ಯಮಂತ್ರಿ ಯೋಜಿಸಿದ್ದಾರೆ’ ಎಂದರು. ಮೈಸೂರು ವಿಭಾಗೀಯ ಜೆಡಿಎಸ್ ವೀಕ್ಷಕ ಎಸ್.ಪಿ.ಸ್ವಾಮಿ, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಡಾ.ಮಹೇಶಚಂದ್, ಡಿ.ಟಿ.ಸಂತೋಷ್, ಮಾತನಾಡಿದರು. ಜಿ.ಪಂ ಸದಸ್ಯರಾದ ಬೋರಯ್ಯ, ಮರಿಹೆಗಡೆ, ಸುಕನ್ಯಾ ಹನುಮಂತೇಗೌಡ, ರೇಣುಕಾ ರಾಮಕೃಷ್ಣ, ಸುಚಿತ್ರಾ ಮನುಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ಸ್ವಾಮಿಗೌಡ, ರಾಜ್ಯ ಕಾರ್ಯದರ್ಶಿ ಬಿಳಿಯಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ದಾಸೇಗೌಡ, ಯುವ ಘಟಕದ ಅಧ್ಯಕ್ಷ ಸಿ.ಟಿ.ಶಂಕರ್, ಮುಖಂಡರಾದ ಲಕ್ಷ್ಮಿ ಅಶ್ವಿನ್‌ ಗೌಡ, ಕೂಳಗೆರೆ ಶೇಖರ್, ಎನ್.ಆರ್.ಪ್ರಕಾಶ್ ಭಾಗವಹಿಸಿದ್ದರು.

ಸಚಿವ ತಮ್ಮಣ್ಣಗೆ ಸಂಭ್ರಮದ ಸ್ವಾಗತ

ಮದ್ದೂರು: ಅಬ್ಬರದ ಪಟಾಕಿ ಸದ್ದು, ಮೊಳಗಿದ ಜೈಘೋಷ, ದಾರಿಯುದ್ದಕ್ಕೂ ಅಭಿನಂದನೆಗಳ ಮಹಾಪೂರ, ಹೂವಿನ ಹಾರಗಳ ಸುಗ್ಗಿ, ಹೂವಿನ ಮಳೆಗೆರೆದ ಕಾರ್ಯಕರ್ತರು, ಜಾನಪದ ತಂಡಗಳ ಕಲಾ ಮೆರಗು, ಬಿರು ಬಿಸಿಲಿನ ನಡುವೆ ಮಂಕಾಗದ ಕಾರ್ಯಕರ್ತರ ಉತ್ಸಾಹ.

ಇದು ಸಾರಿಗೆ ಸಚಿವರಾಗಿ ಪ್ರಥಮ ಬಾರಿಗೆ ತಾಲ್ಲೂಕಿಗೆ ಶಾಸಕ ಡಿ.ಸಿ.ತಮ್ಮಣ್ಣ ಬಂದಾಗ ಕಂಡು ಬಂದ ಸಂಭ್ರಮೋಲ್ಲಾಸದ ದೃಶ್ಯಗಳು. 11.30ರ ವೇಳೆಗೆ ನಿಡಘಟ್ಟ ಗಡಿಭಾಗಕ್ಕೆ ಬಂದ ಸಚಿವ ತಮ್ಮಣ್ಣ ಅವರನ್ನು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾಸ್ವಾಮಿ, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಮಹೇಶ್‌ಚಂದ್, ಜೆಡಿಎಸ್‌ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ್‌, ಮುಖಂಡರಾದ ಎಸ್‌.ಪಿ.ಸ್ವಾಮಿ, ಮಾದನಾಯಕಹಳ್ಳಿ ರಾಜಣ್ಣ, ಕೆ.ದಾಸೇಗೌಡ ಇತರರು ಹಾರ ಹಾಕಿ ಸ್ವಾಗತಿಸಿದರು. ಬಳಿಕ ಅಲ್ಲಿಂದ ನೂರಾರು ಕಾರ್ಯಕರ್ತರು ಜೆಡಿಎಸ್‌ ಬಾವುಟಗಳನ್ನು ಬೀಸುತ್ತ ಬೈಕ್‌ ರ್‍ಯಾಲಿ ಮೂಲಕ ತಮ್ಮಣ್ಣ ಅವರನ್ನು ಕರೆ ತಂದರು.

ಹೂವಿನ ಮಳೆ: ಬಳಿಕ ತೆರೆದ ವಾಹನವೇರಿದ ಅವರನ್ನು ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಬಳಿ ಬರುತ್ತಿದ್ದಂತೆ ಜೆಡಿಸ್‌ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸಿ.ಟಿ.ಶಂಕರ್, ಸಿಪಾಯಿ ಶ್ರೀನಿವಾಸ್ ಬೆಂಬಲಿಗರು ಜೆಸಿಬಿ ಯಂತ್ರದ ಮೂಲಕ ಹೂವಿನ ಮಳೆಗೆರೆದರು. ಬಳಿಕ ಒಂದು ಭಾರೀ ಗಾತ್ರದ ಹೂವಿನ ಹಾರ ಹಾಕಿ ಸಂಭ್ರಮಿಸಿದರು.

ಸಿಹಿ ವಿತರಣೆ : ಪಟ್ಟಣದಲ್ಲಿ ಹೂವಿನ ವೃತ್ತದ ಬಳಿ ಮುಖಂಡರಾದ ಆಟೋಕೃಷ್ಣ, ಆದಿಲ್, ಮಲ್ಲಿಕ್, ದೇವರಾಜು, ಸುಧೀರ್, ರಜಿತ್, ಪುಟ್ಟಸ್ವಾಮಿಶೆಟ್ಟಿ, ರಘು ಅವರು 10 ಸಾವಿರ ಮೈಸೂರು ಪಾಕ್‌ಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ಶಿಂಷಾ ಸಹಕಾರ ಬ್ಯಾಂಕ್‌ ಬಳಿ ಅಧ್ಯಕ್ಷ ರವಿಚನ್ನಸಂದ್ರ, ಉಪಾಧ್ಯಕ್ಷ ಎಂ.ಡಿ.ಮಹಾಲಿಂಗು ಹಾಗೂ ನಿರ್ದೇಶಕರು ಅಭಿನಂದಿಸಿದರು. ಬಳಿಕ ಅಲ್ಲಿಂದ ದಾರಿಯುದ್ದಕ್ಕೂ ಜನರು ಸಾಲುಗಟ್ಟಿ ನಿಂತು ಸ್ವಾಗತಿಸಿದರು.

ಬಳಿಕ ನಡೆದ ಬಹಿರಂಗ ಸಮಾವೇಶದಲ್ಲಿ ವಕೀಲರ ಸಂಘ, ತಾಲ್ಲೂಕು ಸರ್ಕಾರಿ ನೌಕರರ ಸಂಘ, ಕಂದಾಯ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಹಕಾರ ಸಂಘಗಳ ಸದಸ್ಯರು ತಮ್ಮಣ್ಣ ಅವರನ್ನು ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry