7
ನಾಗಮಂಗಲ ಕ್ಷೇತ್ರ: ನೀರಾವರಿಗೆ ಆದ್ಯತೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ

ವಲಸೆ ತಡೆಗೆ ಬೃಹತ್‌ ಕೈಗಾರಿಕೆಗಳ ಸ್ಥಾಪನೆ

Published:
Updated:
ವಲಸೆ ತಡೆಗೆ ಬೃಹತ್‌ ಕೈಗಾರಿಕೆಗಳ ಸ್ಥಾಪನೆ

‌ಮಂಡ್ಯ: ವಿಧಾನಸಭಾ ಚುನಾವಣೆ ಯಲ್ಲಿ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಡಿದ್ದ ಜೆಡಿಎಸ್‌ನ ಸುರೇಶ್‌ ಗೌಡ ಅವರು 47,667 ಮತಗಳ ಅಂತರದಿಂದ ವಿಜಯದ ನಗೆ ಬೀರಿದರು. ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ನಾಮಬಲದೊಂದಿಗೆ ಅವರು 1,12,396 ಮತ ಗಳಿಸಿ ಅಭೂತಪೂರ್ವ ಗೆಲುವು ದಾಖಲಿಸಿದರು.

ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಎಚ್‌.ಡಿ.ದೇವೇಗೌಡರ ಇಡೀ ಕುಟುಂಬ ಸಂಚಲನ ಮೂಡಿ ಸಿತ್ತು. ಜೆಡಿಎಸ್‌ ಮುಖಂಡರ ಅಬ್ಬರದ ಚುನಾವಣಾ ಪ್ರಚಾರಕ್ಕೆ ಕ್ಷೇತ್ರ ಸಾಕ್ಷಿಯಾಗಿತ್ತು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ನಾಗಮಂಗಲ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು ವಿಶೇಷ.

10 ವರ್ಷಗಳ ನಂತರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ರುವ ಸುರೇಶ್‌ಗೌಡರು ಅಪಾರ ಉತ್ಸಾಹದೊಂದಿಗೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜೊತೆಗಿನ ಒಡನಾಟದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ವರ್ವ ಕೈಗೊಳ್ಳುವ ಹುಮ್ಮಸ್ಸಿನಲ್ಲಿರುವ ಅವರು ಹಳ್ಳಿಹಳ್ಳಿಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್‌ಗೌಡರು ‘ಪ‍್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ನಾಗಮಂಗಲ ತಾಲ್ಲೂಕನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಹೇಗೆ ನಿಭಾಯಿಸುವಿರಿ?

128 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವ ಬಹುಗ್ರಾಮ ಕುಡಿಯುವ ನೀರು ಯೋಜನಾ ಕಾಮಗಾರಿ ಪ್ರಗತಿಯಲ್ಲಿದೆ. ಕಸಬಾ, ಬಿಂಡಿಗನವಿಲೆ, ಹೊಣಕೆರೆ, ದೇವಲಾಪುರ ಹೋಬಳಿ ವ್ಯಾಪ್ತಿಯ 360 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸುವ ₹ 300 ಕೋಟಿ ವೆಚ್ಚದ ಯೋಜನೆ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಇವೆರಡು ಯೋಜನೆ ಕಾರ್ಯಗತಗೊಂಡರೆ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿ ಯುತ್ತದೆ. ಹೇಮಾವತಿ ಜಲಾಶಯದಿಂದ ನೀರು ಹರಿಸಿ ವೈಜ್ಞಾನಿಕವಾಗಿ ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕೊಳವೆಬಾವಿಗಳು ಮರುಪೂರಣಗೊಂಡು ಕೃಷಿ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ

ಕ್ಷೇತ್ರಕ್ಕೆ ಕೆಆರ್‌ಎಸ್‌ ನೀರು ಮರಳುಗಾಡಿನ ಓಯಸಿಸ್‌ ಆಗಿಯೇ ಉಳಿದಿದೆಯಲ್ಲ?

ಕೆಆರ್‌ಎಸ್‌ ಜಲಾಶಯ ತುಂಬಿದಾಗ ವ್ಯರ್ಥವಾಗಿ ಹರಿಯುವ ನೀರನ್ನು ಬಳಸಿಕೊಳ್ಳಲು ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ನಾಗಮಂಗಲ ಮಾತ್ರವಲ್ಲದೇ ರಾಮನಗರ, ಕುಣಿಗಲ್‌ವರೆಗೂ ನೀರು ಹರಿಸಬಹುದು. ₹ 3 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ರೂಪುರೇಷೆ ತಯಾರಿಸಲಾಗುತ್ತಿದೆ. ನನ್ನ ಅವಧಿಯಲ್ಲಿ ಈ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

ಗುಣಮಟ್ಟದ ಶಿಕ್ಷಣಕ್ಕಾಗಿ ಜನರು ತಮ್ಮ ಮಕ್ಕಳನ್ನು ಹೊರ ಜಿಲ್ಲೆಯ ಶಾಲೆ–ಕಾಲೇಜುಗಳಿಗೆ ಸೇರಿಸುತ್ತಿದ್ದಾರಲ್ಲ?

ನಮ್ಮ ತಾಲ್ಲೂಕು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಇಡೀ ರಾಜ್ಯದಲ್ಲಿ ನಾಗಮಂಗಲ ಶೈಕ್ಷಣಿಕವಾಗಿ 180ನೇ ಸ್ಥಾನದಲ್ಲಿದೆ ಎಂದು ಹೇಳಲು ಅವಮಾನವಾಗುತ್ತದೆ. ಆದರೆ ಮುಂದೆ ಇದೇ ಪರಿಸ್ಥಿತಿ ಮುಂದುವರಿ ಯುವುದಿಲ್ಲ. ಶಿಕ್ಷಣ ತಜ್ಞರ ಸಲಹೆಯ ಮೇರೆಗೆ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇನೆ. ವಿಶ್ವವಿದ್ಯಾಲಯಗಳ ಅಧ್ಯಯನ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ.

ನಾಗಮಂಗಲ ತಾಲ್ಲೂಕಿನ ಯುವಜನರು ಇನ್ನೂ ಎಷ್ಟು ದಿನ ವಲಸೆ ಹೋಗಬೇಕು?

ಈ ವಿಷಯವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ತಾಲ್ಲೂಕಿನ 25 ಸಾವಿರ ಯುವಕರಿಗೆ ಕೆಲಸ ಕೊಡುವ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ದೇಶದಾದ್ಯಂತ ಸಣ್ಣಪುಟ್ಟ ಕೆಲಸ ಮಾಡುತ್ತಿರುವ ಯುವಕರು ಮರಳಿ ತಮ್ಮ ಗ್ರಾಮಗಳಿಗೆ ಬರುವ ಪರಿಸ್ಥಿತಿ ನಿರ್ಮಿಸಲಾಗುವುದು. ಗಾರ್ಮೆಂಟ್‌ ಕಾರ್ಖಾನೆ ಸ್ಥಾಪಿಸುವ ಮೂಲಕ ಮಹಿಳೆಯರಿಗೂ ಉದ್ಯೋಗ ನೀಡಲಾಗುವುದು. ಕೃಷಿ ಸಂಬಂಧಿತ ಕೈಗಾರಿಕೆ ಸ್ಥಾಪನೆಗೂ ಆದ್ಯತೆ ನೀಡಲಾಗುವುದು.

ಹಿಂದಿನ ಶಾಸಕರು ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳನ್ನು ಹೇಗೆ ಮುಂದುವರಿಸುವಿರಿ?

ಜನರಿಗೆ ಉಪಯುಕ್ತವಾಗುವ ಎಲ್ಲ ಅಭಿವೃದ್ಧಿ ಕೆಲಸಗಳು ಮುಂದುವರಿಯುತ್ತವೆ. ಪ್ರಗತಿಯಲ್ಲಿ ರುವ ಎಲ್ಲ ಕಾಮಗಾರಿಗಳ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ.

ಅಕ್ರಮ ಕಲ್ಲು ಗಣಿ ಮಾಲೀಕರ ವಿರುದ್ಧ ಕ್ರಮ

ನಾಗಮಂಗಲ ತಾಲ್ಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಿತಿಮೀರಿದೆ. ಈ ಬಗ್ಗೆ ತಾವು ಕೈಗೊಳ್ಳುವ ಕ್ರಮವೇನು?

ಅಕ್ರಮ ಕಲ್ಲು ಗಣಿ ವಿಷಯದಲ್ಲಿ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಮಾಹಿತಿ ಇದೆ. ಗಣಿ ಮಾಲೀಕರು ರಾಜಧನವನ್ನೂ ಪಾವತಿಸದೆ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇನ್ನು ಮುಂದೆ ಇದೆಲ್ಲ ನಡೆಯುವುದಿಲ್ಲ. ಅಕ್ರಮ ಗಣಿ ಮಾಲೀಕರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲು ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳಿಂದ ಸೂಕ್ತ ದಾಖಲಾತಿ ಪಡೆದು ಮುಂದುವರಿಯುತ್ತೇನೆ.

ಸ್ವಾಭಿಮಾನಿಗಳ ನಿರೀಕ್ಷೆ ನೂರಾರು

ಮಂಡ್ಯ: ನೀರಿನ ಕೊರತೆ, ನಿರುದ್ಯೋಗ ಸಮಸ್ಯೆಗಳ ನಡುವೆ ಬದುಕು ಕಟ್ಟಿಕೊಂಡ ಸ್ವಾಭಿಮಾನಿಗಳ ತಾಲ್ಲೂಕು ನಾಗಮಂಗಲ. ತಾಲ್ಲೂಕಿನ ಜನರು ಮೂಲಸೌಲಭ್ಯಗಳಿಲ್ಲದೇ ಹೊಟ್ಟೆಪಾಡಿಗಾಗಿ ಹುಟ್ಟಿದ ಊರು ಬಿಟ್ಟು ದೇಶದ ವಿವಿಧೆಡೆ ವಲಸೆ ಹೋಗಬೇಕಾಯಿತು.

ಮಳೆಗಾಲದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕಾದ ಸ್ಥಿತಿ ತಾಲ್ಲೂಕಿನಲ್ಲಿದೆ. ಕೆಆರ್‌ಎಸ್‌ ಹಾಗೂ ಹೇಮಾವತಿ ಜಲಾಶಯಗಳ ಅಚ್ಚುಕಟ್ಟು ಪ್ರದೇಶವಾದರೂ ಶೇ 20ರಷ್ಟು ಭೂಮಿಗೆ ನೀರುಣಿಸಲು ಸಾಧ್ಯವಾಗಿಲ್ಲ. ಇದು ಕೊನೇ ಭಾಗದ ಭೂಮಿಯಾಗಿರುವ ಕಾರಣ ಇಲ್ಲಿಯವರೆಗೆ ನೀರು ಹರಿಯುವುದು ಅಪರೂಪ. ಹೀಗಾಗಿ ಯುವಜನರು ಕುಟುಂಬ ನಿರ್ವಹಣೆಗಾಗಿ ಊರು ಬಿಟ್ಟು ವಲಸೆ ಹೊರಡುವುದು ಅನಿವಾರ್ಯ ಎಂಬಂತಾಗಿದೆ.

ಜಿಲ್ಲೆಯ ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ನಾಗಮಂಗಲ ಶೈಕ್ಷಣಿಕವಾಗಿ ಹಿಂದುಳಿದಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲೂ ಸಾಕಷ್ಟು ಹಿಂದೆ ಬಿದ್ದಿದೆ. ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಕೊಡಿಸಲೂ ಪೋಷಕರು ಪರದಾಡುವ ಸ್ಥಿತಿ ಇದೆ. ಸರ್ಕಾರಿ ಶಾಲೆಗಳು ಇದ್ದರೂ ಇಂಗ್ಲಿಷ್‌ ಶಿಕ್ಷಣ ಕೊಡಿಸುವ ಉದ್ದೇಶದಿಂದ ಪೋಷಕರು ತಮ್ಮ ಮಕ್ಕಳನ್ನು ಕುಣಿಗಲ್‌, ಮದ್ದೂರು ತಾಲ್ಲೂಕಿನ ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ.

ಗ್ರಾಮೀಣ ರಸ್ತೆಗಳ ದುಸ್ಥಿತಿಯಿಂದಾಗಿ ಹಳ್ಳಿಗಳ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಸ್ತೆಗಳ ದುಸ್ಥಿತಿಯಿಂದಾಗಿ ಸಾರಿಗೆ ಸಂಸ್ಥೆಯ ಬಸ್‌ ಸೇರಿದಂತೆ ಖಾಸಗಿ ವಾಹನಗಳೂ ಸಂಚಾರ ಮಾಡುತ್ತಿಲ್ಲ. ಪಟ್ಟಣಕ್ಕೆ ಬರುವ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲೆ– ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗದೇ ಪರದಾಡುವ ಸ್ಥಿತಿ ಇದೆ.

ಇಡೀ ಜಿಲ್ಲೆಯಲ್ಲಿ ಸೈಜುಗಲ್ಲುಗಳಿಗೆ ನಾಗಮಂಗಲ ಹೆಸರುವಾಸಿ. ಮನೆ ಕಟ್ಟಲು ಬಳಸುವ ಈ ಕಲ್ಲುಗಳಿಗೆ ಅಪಾರ ಬೇಡಿಕೆ ಇದೆ. ಹೀಗಾಗಿ ಅಕ್ರಮ ಕಲ್ಲು ಗಣಿಗಳೂ ತಾಲ್ಲೂಕಿನಲ್ಲಿ ತಲೆ ಎತ್ತಿವೆ. ಪ್ರಭಾವಿಗಳ, ಜನಪ್ರತಿನಿಧಿಗಳ ಬೆಂಗಾವಲಿನಲ್ಲಿ ಉದ್ಯಮಿಗಳು ಅನಧಿಕೃತ ಕ್ರಷರ್‌ ನಡೆಸುತ್ತಿದ್ದಾರೆ. ಪ್ರಾಕೃತಿಕ ಮತ್ತು ಅರಣ್ಯ ಸಂಪನ್ಮೂಲವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಾರೆ. ಅಲ್ಲದೆ ಈ ಬಗ್ಗೆ ಹಲವು ಬಾರಿ ಹೋರಾಟಗಳೂ ನಡೆದಿವೆ. ಅನಧಿಕೃತ ಕ್ರಷರ್‌ ಜೊತೆಗೆ ಅಕ್ರಮ ಮರಳು ಗಣಿಗಾರಿಕೆಯೂ ಇಲ್ಲಿ ವಿಪರೀತವಾಗಿದೆ. ಅಧಿಕಾರಿಗಳು, ಪೊಲೀಸರು ಇದರಲ್ಲಿ ಶಾಮೀಲಾಗಿದ್ದು ಮರಳನ್ನು ಲೂಟಿ ಹೊಡೆಯುತ್ತಿದ್ದಾರೆ ಎನ್ನುವುದು ಜನರ ಆರೋಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry