‘ಶಿವಕುಮಾರ್‌ಗೆ ಸಿ.ಎಂ ಪಟ್ಟಕ್ಕಾಗಿ ದಂಗೆ’

7
ಆತ್ಮಾವಲೋಕನಾ ಸಭೆಯಲ್ಲಿ ಪಕ್ಷದ ಮುಖಂಡರಾದ ಕಮಲಮ್ಮ ಹನುಮಂತೇಗೌಡ ಸಲಹೆ

‘ಶಿವಕುಮಾರ್‌ಗೆ ಸಿ.ಎಂ ಪಟ್ಟಕ್ಕಾಗಿ ದಂಗೆ’

Published:
Updated:

ಮಾಗಡಿ: ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಒಕ್ಕಲಿಗರು ದಂಗೆ ಏಳಬೇಕೆಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾದ ಕಮಲಮ್ಮ ಹನುಮಂತೇಗೌಡ ಸಲಹೆ ನೀಡಿದ್ದಾರೆ.

ಶುಕ್ರವಾರ ನಡೆದ ಆತ್ಮಾವಲೋಕನಾ ಸಭೆಯಲ್ಲಿ ಅವರು ಮಾತನಾಡಿದರು. ‘ಹಿಂದೆ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಬೇಕಾದರ ಒಕ್ಕಲಿಗರು ವಿಧಾನಸೌಧಕ್ಕೆ ನುಗ್ಗಿ ಅಂದಿನ ರಾಮಕೃಷ್ಣ ಹೆಗಡೆ ಅವರ ವಿರುದ್ಧ ದಂಗೆ ಎದ್ದು ಅಧಿಕಾರದಿಂದ ಕೆಳಗೆ ಇಳಿಸಿದಂತೆ, ಈಗಲೂ ದಂಗೆ ಏಳುವ ಅಗತ್ಯವಿದೆ. ಪಕ್ಷ ಸಂಕಟದಲ್ಲಿ ಸಿಲುಕಿದಾಗ ರಕ್ಷಿಸಲು ಡಿ.ಕೆ.ಶಿವಕುಮಾರ್‌ ಸಹೋದರರು ಬೇಕು. ಆದರೆ, ಅಧಿಕಾರ ಕೊಡುವಾಗ ಅವರನ್ನು ಕಡೆಗಣಿಸುವುದು ಯಾವ ನ್ಯಾಯ‌’ ಎಂದು ಪ್ರಶ್ನಿಸಿದರು.

ಎಚ್‌.ಸಿ.ಬಾಲಕೃಷ್ಣ ಅವರ ಅಧಿಕಾರ ಅವಧಿಯಲ್ಲಿ ಹಣ, ಅಧಿಕಾರ ಪಡೆದು ಮೆರೆದವರು ಚುನಾವಣೆ ಸಮಯದಲ್ಲಿ ಅವರ ಬೆಂಬಲಕ್ಕೆ ಬರಲಿಲ್ಲ. ಅವರಿಂದ ತಿಂದು ಉಂಡು ಮೆರೆದವರಿಂದಲೇ ಸೋತರು. ಬಾಲಕೃಷ್ಣ ಸಹ ಅವರ ಪಡೆಯಿಂದ ಹೊರಗೆ ಬರಲೇ ಇಲ್ಲ. ಈಗಲೂ ಕಾಲ ಮಿಂಚಿಲ್ಲ. ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕೆಂದು ಸಲಹೆ ನೀಡಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಬೂತ್‌ ಮಟ್ಟದಲ್ಲಿ ಸಂಘಟಿತರಾಗಿ, ಪಕ್ಷವನ್ನು ಸದೃಢವಾಗಿ ಕಟ್ಟಬೇಕಾಗಿದೆ. ಎಚ್‌.ಸಿ.ಬಾಲಕೃಷ್ಣ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿಸಲು ಪಣ ತೊಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎ.ಮಂಜುಗೆ ಸಹಕಾರ ನೀಡಲಾಗುವುದು. ಆದರೆ, ಕಾಂಗ್ರೆಸ್‌ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನಾವೇ ಮಾಡಿದ್ದು ಎಂಬುದು ಸರಿಯಲ್ಲ. ಸೋತಿದ್ದೇವೆ ಎಂದು ಸೊರಗದೆ ಸಂಘಟಿತರಾಗಿ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕಿದೆ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ‘ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇನೆ .ಕಾರ್ಯಕರ್ತರು ಪ್ರಾಮಾಣಿಕರು. ಜನಸ್ಪಂದಿಸಲಿಲ್ಲ. ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟಿಸಲಾಗುವುದು. ಕಾಂಗ್ರೆಸ್‌ ಗರಿಕೆ ಹುಲ್ಲು ಇದ್ದಂತೆ. ಚಿಗುರಿಸಲು ಶ್ರಮಿಸುತ್ತೇನೆ’

ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ಎಸ್‌.ರವಿ ಕಾಂಗ್ರೆಸ್‌ ಮುಖಂಡರಾದ ರಂಗಹನುಮಯ್ಯ, ಮಹಮದ್‌ ಇನಾಯತ್‌ ಉಲ್ಲಾ, ಮಂಜೇಶ್‌, ಕಲ್ಪನಾ ಶಿವಣ್ಣ, ಬಿ.ವಿ.ಜಯರಾಮು, ಗಂಗಾಧರ ಮಾತನಾಡಿದರು.

‌ಮುಖಂಡರಾದ ಸಿ.ಜಯರಾಮು, ಬಿಸ್ಕೂರಿನ ಲಕ್ಷ್ಮಮ್ಮ ಗಿರಿಯಪ್ಪ, ದೊಡ್ಡಿಲಕ್ಷ್ಮಣ್‌, ಪುರಸಭೆ ಅಧ್ಯಕ್ಷ ಮಂಜುನಾಥ್‌, ಕೃಷ್ಣಮೂರ್ತಿ, ಸಿದ್ದೇಗೌಡ, ಬೀಜಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry