ಹುಚ್ಚು

7

ಹುಚ್ಚು

Published:
Updated:
ಹುಚ್ಚು

ಕಲ್ಲು ಹಾಸು ಮತ್ತು ತಾತ ಇಬ್ಬರೂ ಕೆಂಪಾಗಿದ್ದರು! ಸತ್ತ ಸೂರ‍್ಯನ ಕೆಂಬಣ್ಣ ಸಮುದ್ರದಲ್ಲಿ ಕರಗಿ ಮತ್ತೊಷ್ಟು ಹಸಿಯಾಗಿ, ಕೆಂಪಾಗಿ ಮೆತ್ತಿಕೊಂಡಿತ್ತು. ಇಂದಿನ ಅಲೆಗಳಲ್ಲಿ ಎಂದಿಗಿಂತ ಗಡಿಬಿಡಿ ಇರಲಿಲ್ಲ. ತರಲೆ ಇರಲಿಲ್ಲ. ತುಸು ಗಂಭೀರತೆ! ಎಲ್ಲಾ ಅಲೆಗಳು ಮಾತಾಡಿ ಒಂದು ತೀರ್ಮಾನಕ್ಕೆ ಬಂದಂತಿದ್ದವು! ಅಲೆಗಳ ಪ್ರತಿ ಉಸಿರಿಗೂ ತಾತನ ಮನಸ್ಸು ಬೆರೆಯುತ್ತಿತ್ತು. ನೆಟ್ಟ ನೋಟ ಕದಲಿಸದೆ ಊರುಗೋಲಿಗೆ ಗದ್ದ ಆನಿಸಿಕೊಂಡ ಮುಖ ಸಾಯುವ ಸೂರ‍್ಯನನ್ನೇ ನೋಡುತ್ತಿತ್ತು.

ಎಲ್ಲವೂ ಸರಿಯಿದ್ದರೆ ಇಷ್ಟೊತ್ತಿಗಾಗಲೆ ತನ್ನ ಪಾದಗಳನ್ನು ಅಳಿಸಿ ಹೋಗುತ್ತಿದ್ದ ಅಲೆಗಳೊಂದಿಗೆ ಜಗಳಕ್ಕೆ ಇಳಿಯುತ್ತಿತ್ತು ಭಂಟಿ! ರೂಮಿನಲ್ಲಿ ಬಂಧಿಸಿ ಎರಡು ದಿನಗಳಾಗಿವೆ. ಮನೆಯಿಂದ ಹೊರಡುವಾಗ ಅದರ ತಲೆದಡವಿಯೆ ಬಂದಿದ್ದರು ತಾತ. ಎಷ್ಟೊ ವರ್ಷಗಳ ಅವರ ಜೋಡಿ ನಿನ್ನೆಯಷ್ಟೇ ಒಂಟಿಯಾಗಿತ್ತು. ಭಂಟಿ ರೂಮಿನಲ್ಲಿ, ತಾತ ದಡದಲ್ಲಿ! ಆಸ್ಟ್ರೇಲಿಯದಿಂದ ಬಂದು ಹೋಗಿ ಮಾಡುತ್ತಿದ್ದ ಮಗ. ಇತ್ತೀಚಿಗೆ ಆತ ಬಂದು ಹೋಗಿ ಹತ್ತು ವರ್ಷಗಳೇ ಆದವು. ಅಂದಿನಿಂದ ಭಂಟಿಯೆ ತಾತನಿಗೆ ಜೋಡಿ, ಗೆಳೆಯ, ಮಗ. ಹೆರಿಗೆ ಮನೆಯಲ್ಲಿ ಈತ ಕಿಟಾರನೆ ಚೀರುವಾಗಲೇ ಮೆಲ್ಲನೆ ತಾಯಿಯ ಉಸಿರು ನಿಂತುಹೋಗಿತ್ತು. ಸಂಜೆಯ ತಂಪಿನಲ್ಲೂ ತಾತನ ನೆನಪುಗಳು ಬಿಸಿಯಾಗಿದ್ದವು!

ಎಂದೂ ಕೂಡ ಕತ್ತಲು ಮತ್ತಷ್ಟು ಕಪ್ಪಾಗತೊಡಗಿದ್ದರೆ ಭಂಟಿ ಊರುಗೋಲು ಕಚ್ಚಿ ಮನೆಗೆ ಎಳೆಯುತ್ತಿತ್ತು. ತಾತ ಮರೆತು ಹೋದವರಂತೆ ಯಾಕೆ ಇನ್ನೂ ಭಂಟಿ ಬರಲಿಲ್ಲ ಊರುಗೋಲಿನ ಬಳಿ ಅಂತ ಸುತ್ತ ನೋಡಿಕೊಂಡರು. ದುಃಖವಾದಂತಾಯ್ತು. ನೆನಪುಗಳ ಬಿಸಿ, ಭಂಟಿ ಇಲ್ಲದ ವಿರಹದ ಈ ಕ್ಷಣಕ್ಕೆ ಕಾದ ಎರಡು ಹನಿಗಳು ತಾತನ ಕಣ್ಣಿಂದ ಜಾರಿದವು. ದೂರದಿಂದ ನೋಡುತ್ತಿದ್ದ ಅಲೆಗಳಿಗೆ ಆ ಕತ್ತಲಲ್ಲೂ ಹನಿಗಳು ಕಾಣಿಸಿದವು!

ನಾಯಿಗೆ ಹುಚ್ಚಂತೆ! ನಾಲ್ಕೈದು ಮಂದಿಗೆ ಕಚ್ಚಿದೆಯಂತೆ! ಎಲ್ಲೂ ಆಚೆ ಬಿಡಬಾರದಂತೆ! ನಾನೂ ಕೂಡ ಜೊತೆಯಲ್ಲಿ ಹಿಡಿದುಕೊಂಡು ತಿರುಗಾಡಬಾರದಂತೆ! ನನಗೂ ಕಚ್ಚಬಹುದಂತೆ! ಅದನ್ನು ಇವತ್ತೇ ಕೊಲ್ಲಬೇಕಂತೆ. ಅವರಿಗೆ ಕೊಟ್ಟರೆ ಅವರೇ ಕೊಂದು ಹಾಕುತ್ತಾರಂತೆ! ಹುಚ್ಚು, ಯಾರಿಗೆ ಹುಚ್ಚು? ನಾಯಿಗಾ? ನಮಗಾ? ಜಗತ್ತಿಗಾ? ಅದಕ್ಕೆ ಹುಚ್ಚಿದೆ ಕಚ್ಚುತ್ತೆ! ಆದರೆ ನನ್ನ ಮಗನಾದಿಯಾಗಿ ಇವರೆಲ್ಲ ಏನು? ತಾತನ ಮನಸ್ಸು ವ್ಯಗ್ರವಾದಂತೆ ಸ್ವಗತಿಸುತ್ತಿತ್ತು. ಅಳು, ಬೇಸರ, ಒಂಟಿತನ, ಭಂಟಿಯ ಬಿಟ್ಟಿರಲಾಗದ ಸ್ಥಿತಿ. ಮಗನು ಹೋದ ಮೇಲೆ ಭಂಟಿಯೇ ಮಗನಾದ ರೀತಿ ಎಲ್ಲವನ್ನೂ ಯೋಚಿಸುತ್ತಲೇ ಮನೆ ಸೇರಿದರು. ಅವರ ಅಂದಿನ ಆ ಹೆಜ್ಜೆಗಳಲ್ಲಿ ಒಂದು ನಿರ್ಧಾರದ ಧೃಡತೆ ಕಾಣಿಸುತ್ತಿತ್ತು!

ಮರುದಿನ ಮತ್ತದೇ ತೀರ. ಬೇರೆಯದೆ ಸಂಜೆ! ತಾತ ತನ್ನ ಜೊತೆಯಲ್ಲಿ ಭಂಟಿಯನ್ನು ಕರೆದುಕೊಂಡು, ಕೋಲನ್ನು ಊರಿಕೊಂಡು ದಡದ ಬಳಿ ಬಂದರು. ಒಮ್ಮೆ ಭಂಟಿಯ ಕಡೆ ನೋಡಿದರು. ಭಂಟಿ ಬಾಲ ಅಲ್ಲಾಡಿಸುತ್ತಾ, ಓಡಿ ಬರುತ್ತಿರುವ ಅಲೆಗಳನ್ನು ನೋಡಿ, ಒಮ್ಮೆ ನಾಲಿಗೆಯ ತೆಗೆದು ಮೂಗಿನ ಮೇಲೆ ಆಡಿಸಿತು. ಭಂಟಿಗೆ ಮತ್ತೆ ಅಲೆಗಳೊಂದಿಗೆ ಆಡುವ ಖುಷಿಯಿತ್ತು. ತಾತ ಸಮುದ್ರದ ಅಲೆಗಳೊಂದಿಗೆ ನಡೆಯತೊಡಗಿದರು. ಭಂಟಿ ಪಕ್ಕದಲ್ಲೇ ಹೆಜ್ಜೆ ಹಾಕುತ್ತಿತ್ತು. ಹುಣ್ಣಿಮೆಗೆ ಅಲೆಗಳು ಬೆದರಿದಂತೆ ಅಪ್ಪಳಿಸುತ್ತಿದ್ದವು. ಹುಣ್ಣಿಮೆಗೂ ಯಾಕೊ ಕರಿ ಬಡಿದಂತಾಯ್ತು. ರಾತ್ರಿ ತನ್ನ ಕತ್ತಲನ್ನು ಹಕ್ಕಂತೆ ಚಲಾಯಿಸತೊಡಗಿತು. ಸಮುದ್ರ, ಅಲೆ, ತಾತ, ಭಂಟಿ ಯಾವಾಗ ಒಂದಾಗಿ ಹೋದರೊ ಗೊತ್ತೆ ಆಗಲಿಲ್ಲ. ಸದ್ಯ ಜಗತ್ತಿನ ಹುಚ್ಚಿನಿಂದ ಅವರು ಬಚಾವಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry