ಮಡಿಗಚ್ಚೆಯ ಮ್ಯಾರಥಾನ್!

7

ಮಡಿಗಚ್ಚೆಯ ಮ್ಯಾರಥಾನ್!

Published:
Updated:
ಮಡಿಗಚ್ಚೆಯ ಮ್ಯಾರಥಾನ್!

ನಾನು ಕಾಲೇಜು ಅಧ್ಯಾಪಕ. ಕಾರ್ಯ ನಿಮಿತ್ತ ಹಲವಾರು ಕಾಲೇಜುಗಳಿಗೆ ಹೋಗಬೇಕಾಗುತ್ತದೆ. ಅದೇ ರೀತಿ ನಮ್ಮ ಕಾಲೇಜಿಗೂ ನಾನಾ ಭಾಗಗಳಿಂದ ಸಾಧಕರು, ಸಾಹಿತಿಗಳು, ಗಣ್ಯರು ಬಂದು ಉಪನ್ಯಾಸ ನೀಡುತ್ತಿರುತ್ತಾರೆ. ನಮ್ಮ ಆಡಳಿತ ಮಂಡಳಿಯ ಸುಪರ್ದಿಯಲ್ಲಿರುವ ದೇವಾಲಯವು ಪ್ರಸಿದ್ಧವಾಗಿರುವುದರಿಂದ ಅತಿಥಿಗಳು ಬರುವುದು ನಮ್ಮ ಕರೆಗೆ ಓಗೊಟ್ಟೋ ಅಥವಾ ಪುಣ್ಯಕ್ಷೇತ್ರದ ಸೆಳೆತಕ್ಕೋ ಎಂಬುದು ಆ ದೇವರಿಗೇ ಗೊತ್ತು. ಕಾಲೇಜಿಗೆ ಬಂದವರನ್ನು ಪುಣ್ಯಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿಸುವ ಸೇವಾಭಾಗ್ಯ ಲಭಿಸಿ ನಮ್ಮ ಪುಣ್ಯದ ಚೀಲವೂ ಆಗಾಗ ಅನಾಯಾಸ ಭರ್ತಿಯಾಗುತ್ತಿರುತ್ತದೆ.

ಇತ್ತೀಚೆಗೆ ಅಂತಹ ಸೇವಾಭಾಗ್ಯವನ್ನು ಸುಬ್ಬಣ್ಣನ ಜೊತೆಗೆ ನಿರ್ವಹಿಸುವ ಸುಯೋಗ ಕೂಡಿಬಂದಿತ್ತು. ಸುಬ್ಬಾಭಟ್ಟ ಅಲಿಯಾಸ್ ಸುಬ್ಬಣ್ಣ ನನ್ನ ಕೊಲೀಗು. ಆಜಾನುಬಾಹು. ಒರಟ ವದನನಾದರೂ ಸಾಧು ಪ್ರಾಣಿ. ಸಂವಾದಗೋಷ್ಠಿಗೆ ಆಹ್ವಾನಿತರಾದ ಸಾಹಿತಿಗಳನ್ನು ಅವರ ಹೆಂಡತಿ, ಮಗನೊಂದಿಗೆ ಬಸ್‌ಸ್ಟ್ಯಾಂಡಿನಿಂದ ಎಸ್ಕೋರ್ಟ್ ಮಾಡಿ, ಗೆಸ್ಟ್‌ಹೌಸಿಗೆ ಕರೆತಂದೆವು. ಸಂಜೆಯ ವೇಳೆ ಅವರ ಅದ್ಭುತ ಭಾಷಣವನ್ನೂ ಕೇಳಿಸಿಕೊಂಡಿದ್ದಾಯಿತು. ನಂತರ ಅವರ ಬಾಕೀ ಸಮಯವನ್ನು ಹೇಗೆಲ್ಲಾ ವಿನಿಯೋಗಿಸಬಹುದು ಎಂದು ಸಲಹೆಗಳನ್ನು ಸೂಚಿಸಲು, ಆಲಿಸಲು ನಾನು ಮತ್ತು ಸುಬ್ಬಣ್ಣ ಗೆಸ್ಟ್‌ಹೌಸಿಗೆ ತೆರಳಿದೆವು.

ಬಾಗಿಲನ್ನು ಬಡಿದು ಸಾಹಿತಿಗಳ ನಿರೀಕ್ಷೆಯಲ್ಲಿದ್ದವರನ್ನು ಸ್ವಾಗತಿಸಿದ್ದು ಮೈ-ಕಪ್ಪಿನಲ್ಲಿದ್ದ ಸಹಧರ್ಮಿಣಿ. ಹಿಹ್ಹಿಹ್ಹೀ ಎಂದು ಹಲ್ಕಿರಿಯುತ್ತಾ ‘ಸಾಹಿತಿಗಳು ನಿದ್ದೆ ಮಾಡ್ತಿದಾರಾ? ತುಂಬಾ ಸುಸ್ತಾಗಿರ್ಬೇಕು ಪಾಪ, ಮಾತಾಡಿಸ್ಕೊಂಡು ಹೋಗಣಾ ಅಂತಾ ಬಂದ್ವಿ’ ಎಂದೆ. ಟಿ.ವಿಯ ಬ್ರೇಕಿಂಗ್ ನ್ಯೂಸ್‌ಗಳ ಮಧ್ಯೆ ತನ್ನ ಭಾಷಣವು ಹೈಲೈಟಾಗುತ್ತಾ ಇಲ್ಲವಾ ಎಂದು ನ್ಯೂಸಲ್ಲೇ ಹೂತು ಹೋಗಿದ್ದ ಸಾಹಿತಿಗಳು ‘ಓಹ್, ಸಾರ್..ನೀವಾ? ಬನ್ನಿ ಬನ್ನಿ’ ಎಂದು ಸ್ವಾಗತಿಸಿದರು. ನಿಮ್ ಭಾಷಣಾ ಮುಗೀತಲ್ವೇ? ಯಾವಾಗ ಜಾಗಾ ಖಾಲೀ ಮಾಡ್ತೀರಾ? ಎಂದು ಕೇಳಲಾಗದೇ, ಅದೇ ಧಾಟಿಯಲ್ಲೇ ‘ಸಾರ್, ನಿಮ್ ಮುಂದಿನ ಪ್ರೋಗ್ರಾಮು ಏನು? ಎತ್ತ? ಎಂದು ತಿಳ್ಕೊಳ್ಳೋಣಾ ಅಂತಾ ಬಂದ್ವಿ. ನಿಮ್ದೇನಾರೂ ಪ್ಲಾನ್‌ಗಳಿದ್ದಾವಾ ಹೇಗೆ?’ ಎಂದು ಭಿನ್ನವಿಸಿದೆ.

ಉಪಸ್ಥಾನದ ಭಂಗಿಯನ್ನು ಸ್ವಲ್ಪ ಬದಲಿಸುತ್ತಾ ‘ಸಾರ್, ನನಗೆ ಉಬ್ಬಸಾ... ಜಾಸ್ತಿ ಸುತ್ತಾಡೋಕೆ ಆಗಲ್ಲಾ. ನನ್ ಹೆಂಡ್ತೀ ಮತ್ತೆ ಮಗಾ ಎಲ್ಲಿಗೋ ಹೋಗ್ಬೇಕು ಅಂತಿದಾರೆ. ಅದ್ಯಾವುದೋ ಹಾವಿನ ಫೇಮಸ್ ದೇವಸ್ಥಾನ ಇದೆಯಲ್ವಾ? ಅಲ್ಲೀಗೊಮ್ಮೆ ಕರ್ಕೊಂಡ್ ಹೋಗ್ಬಿಡ್ತೀರಾ? ನಾನು ಮೂರು ದಿನ ವಿರಾಮದಲ್ಲೇ ಬಂದಿದೀನಿ. ನಂಗೆ ರೆಸ್ಟೂ ಆಗುತ್ತೆ, ನನ್ನ ಪರಿವಾರಕ್ಕೆ ದೇವರ ದರ್ಶನದ ಪುಣ್ಯಾನೂ ಬರತ್ತೆ’ ಎಂದರು. ಏನಾದರೂ ಉಸುರುವ ಮುನ್ನವೇ ಸುಬ್ಬಣ್ಣ ‘ಓಹೋಹೋ..ಸರ್ಪದ ದೇವಸ್ಥಾನವಾ? ಆಯ್ತು ಬಿಡಿ, ನಾಳೆ ಬೆಳಿಗ್ಗೇನೆ ಕರ್ಕೊಂಡು ಹೋಗ್ತೀವಿ’ ಎಂದ. ಇಬ್ಬರು ಗಂಡಸರ ಜೊತೆ ಹೆಂಡತಿ ಹಾಗೂ ಮಗನನ್ನು ಕಳುಹಿಸಲು ಅಳುಕಿದ ಸಾಹಿತಿಗಳು ‘ನೋಡೀ, ನಿಮ್ಜೊತೆ ಯಾರಾದ್ರು ಹೆಂಗಸ್ರೂ ಇದ್ರೆ ನನ್ನ ಹೆಂಡತೀಗೆ ಕಂಪನಿಯಾಗುತ್ತೆ...’ ಎಂದು ಹೇಳಲೋ ಬೇಡವೋ ಎಂದುಸುರಿದರು. ಸುಬ್ಬಣ್ಣ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದವನಂತೆ ‘ಅಯ್ಯೋ, ಅದಕ್ಕೇನಂತೆ? ನನ್ನ ಹೆಂಡ್ತಿ ಮತ್ತೆ ಮಗಳನ್ನೂ ಕರ್ಕೊಂಬರ್ತೀನಿ. ಆಗಬೌದೇ?’ ಎಂದ. ಸಾಹಿತಿಗಳ ವದನ ಮೊರದಗಲವಾಯಿತು.

ಆತನ ಚರ್ಯೆ ನನಗರ್ಥವಾಗಲಿಲ್ಲ. ಗೆಸ್ಟ್‌ಹೌಸಿಂದ ವಾಪಸಾಗುವಾಗ ದಾರಿಯಲ್ಲಿ ‘ಸುಬ್ಬಣ್ಣಾ, ಏನೋ ನಿನ್ನ ವರಸೆ? ಆದಷ್ಟು ಬೇಗ ಇವರಿಂದ ಕಳಚಿಕೊಳ್ಳೋಣಾ ಅಂತಿದ್ರೆ ನೀನು ಬಿಟ್ಟ ಕೆಲ್ಸಾ ಬಿಟ್ಟು ಊರೂರು ಸುತ್ತೋ ಪ್ಲಾನ್ ಮಾಡ್ತಿದಿಯಲ್ಲಾ?’ ಎಂದೆ. ಸಣ್ಣಗೆ ನಗೆಯಾಡುತ್ತಾ ‘ಏನಿಲ್ಲಾ ಮಾರಾಯಾ, ಆ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಮಾಡಿಸ್ತೀನಿ ಅಂತ ಎಷ್ಟೋ ವರ್ಷದಿಂದ ಹರಕೆ ಹೊತ್ಕೊಂಡು ಕಾಯ್ತಾ ಇದ್ದೆ. ಈಗ ಮುರ್ಹೂರ್ತ ಕೂಡಿ ಬಂದಿರೋ ಹಾಗಿದೆ. ಅದಕ್ಕೇ ಸಿಕ್ಕ ಚಾನ್ಸು ಬಿಡ್‌ಬಾರ್ದೂ ಅಂತ ಒಪ್ಗೊಂಡು ಬಿಟ್ಟೆ. ಸ್ವಕಾರ್ಯ, ಸ್ವಾಮಿ ಕಾರ್ಯ’ ಎಂದಾಗ ನಾನು ತೆಪ್ಪಗಾದೆ.

ಮಾರನೇ ದಿವಸ ಬೆಳ್ಳಂಬೆಳಿಗ್ಗೆ ಗೆಸ್ಟ್‌ಹೌಸಿಂದ ಸಾಹಿತಿಗಳ ಹೆಂಡತಿ, ಮಗನನ್ನು ಕರೆದುಕೊಂಡು ಸುಬ್ಬಣ್ಣನ ಪರಿವಾರದ ಜೊತೆ ನಾನೊಬ್ಬ ಅಬ್ಬೆಪಾರಿಯಂತೆ ಟೊಯೋಟಾದ ಹಿಂದಿನ ಅಡ್ಡಸೀಟಿನಲ್ಲಿ ಕುಕ್ಕರಿಸಿ ದೇವರ ದರ್ಶನಕ್ಕೆ ಹೊರಟೆ. ಮೊದಲೇ ಪ್ಲಾನ್ ಮಾಡಿದವನಂತೆ ಸುಬ್ಬಣ್ಣ ಸಾಹಿತಿಯ ಸಹಧರ್ಮಿಣಿಯನ್ನುದ್ದೇಶಿಸಿ ‘ಅಮ್ಮಾ, ನೀವು ದೇವರನ್ನ ಬೇಕಾದಷ್ಟು ಹೊತ್ತು ಕಣ್ತುಂಬಿಕೊಳ್ಳಿ, ಮಧ್ಯಾಹ್ನದ ಊಟಾನೂ ದೇವಸ್ಥಾನದಲ್ಲೇ ಆಗುತ್ತೆ. ಅಷ್ಟರೊಳಗೆ ನಾನೂ ಸಣ್ಣದೊಂದು ಪೂಜೆ ಮುಗಿಸ್ಗೊಂಡು ಬಂದುಬಿಡ್ತೀನಿ. ಆಗಬೌದೇ?’ ಎಂದು ಬಾಣಬಿಟ್ಟ. ದೇವರೊಡನೆ ಯಾವುದೇ ಅಡೆತಡೆಗಳಿಲ್ಲದೇ ಸಂವಾದ ನಡೆಸುವ ಈ ಸುವರ್ಣಾವಕಾಶಕ್ಕೆ ‘ಆಗಬಹುದು’ ಎಂದು ಅವರಿಂದ ಮಾರುತ್ತರ ಬಂತು.

ಸಾಹಿತಿಗಳ ಪರಿವಾರ ಉದ್ದನೆಯ ಕ್ಯೂನಲ್ಲಿ ಸೇರಿಕೊಂಡರೆ, ಸುಬ್ಬಣ್ಣ ಆಶ್ಲೇಷ ಬಲಿಗೆ ಪಾವತಿ ಮಾಡಿಸಿ ಮಡಿಯುಟ್ಟುಕೊಂಡು ಸಂಕಲ್ಪಕ್ಕೆ ಸಪತ್ನೀಕನಾಗಿ ಕುಳಿತುಕೊಂಡ. ನಾನು ಸಾಹಿತಿಗಳ ಪರಿವಾರದೊಟ್ಟಿಗೆ ಕ್ಯೂನಲ್ಲಿ ನಿಲ್ಲುವುದೋ, ಸುಬ್ಬಣ್ಣನ ಬಲಿಯನ್ನು ನೋಡುವುದೋ ಎಂದು ಗೊಂದಲಗೊಂಡೆ. ಕಡೆಗೆ ಸಾಹಿತಿಗಳ ಪರಿವಾರವನ್ನೇ ಹಿಂಬಾಲಿಸುವುದು ಸೂಕ್ತ ಎಂದುಕೊಳ್ಳುತ್ತಿರುವಾಗಲೇ ಸಿನಿಮೀಯ ಘಟನೆಯೊಂದು ಜರುಗಿತು. 

ಗಂಡಸರು ದೇವರ ದರ್ಶನದ ಹೊತ್ತಲ್ಲಿ ಅಂಗಿ ಹಾಗೂ ಬನಿಯನ್ನು ಧರಿಸಿರಬಾರದು ಎಂಬ ನಿಯಮವಿತ್ತು ಈ ದೇವಳದಲ್ಲಿ. ಹದಿನೆಂಟರ ಹರೆಯದ ಮರಿಸಾಹಿತಿ ಸಾರ್ವಜನಿಕವಾಗಿ ಇಲ್ಲಿವರೆಗೂ ಅರೆಬೆತ್ತಲೆಯಾಗಿರಲಿಲ್ಲವೇನೋ ಗೊತ್ತಿಲ್ಲ. ಹಿಂದೆ ಮುಂದೆ ನಿಂತವರು ಮೇಲಂಗಿ ಕಳಚತೊಡಗಿದಂತೆ ಈತನ ಮೈ ಅದುರತೊಡಗಿತು.

ಸಾಲು ಮುಂದೆ ಮುಂದೆ ಹೋದಂತೆ ಈತನ ಮೈ ಅದುರುವಿಕೆ ಜಾಸ್ತಿಯಾಗಿ ಏಕಾಏಕಿ ‘...ಅಯ್ಯಯ್ಯೋ...’ ಎಂದು ಚೀರಾಡುತ್ತಾ ಕ್ಯೂ ಬಿಟ್ಟು ಹೊರಗೆ ಓಟಕಿತ್ತ. ಏನಾಯಿತೆಂದು ಯಾರಿಗೂ ಅರ್ಥವಾಗಲಿಲ್ಲ. ಆತನ ಮೈ ಅದುರುವಿಕೆಯನ್ನು ಗಮನಿಸಿ ಕೆಲವು ಭಕ್ತಾದಿಗಳು ದೇವರು ಮೈಮೇಲೆ ಬಂದಿರಬಹುದೇನೋ ಎಂದುಕೊಂಡ ಸಮಯದಲ್ಲೇ ಮರಿಸಾಹಿತಿ ಫೇರಿ ಕಿತ್ತಿದ್ದ. ನಾನು ‘ಏ ಸುಬ್ಬಾ, ಇಂವಾ ಓಡಿ ಹೋಗ್ತಿದ್ದಾನೋ ಮಾರಾಯಾ’ ಎಂದು ಜೋರಾಗಿ ಕಿರುಚಿ ಆತನನ್ನು ಹಿಂಬಾಲಿಸಲು ಧಾವಿಸಿದ್ದೆ. ನನ್ನ ದನಿ ಕೇಳುತ್ತಲೇ ಬೆಚ್ಚಿಬಿದ್ದ ಸುಬ್ಬಣ್ಣ ಸಂಕಲ್ಪವನ್ನೂ ಮರೆತು ಮಡಿಕಚ್ಚೆಯಲ್ಲೇ ನನ್ನ ಹಿಂದೆ ಓಡತೊಡಗಿದ. ವಿಷಯ ಗೊತ್ತಿಲ್ಲದ ಜನ ಮಡಿಯಲ್ಲಿ ಓಡುತ್ತಿರುವ ಸುಬ್ಬಣ್ಣನನ್ನು ಬೆರಗಾಗಿ ನೋಡುತ್ತಿದ್ದರು. ಸುಬ್ಬಣ್ಣನ ಹೆಂಡತಿ ಹಾಗೂ ಚಿಕ್ಕ ಮಗಳು ಅಪ್ಪನ ಮಡಿಗಚ್ಚೆಯ ಮ್ಯಾರಥಾನ್ ಓಟವನ್ನು ದಿಗ್‌ಮೂಢರಾಗಿ ನೋಡುತ್ತಾ ಹಿಂಬಾಲಿಸುವುದೋ, ಅಲ್ಲಿಯೇ ಇರುವುದೋ ಎಂಬ ದ್ವಂದ್ವದಲ್ಲಿದ್ದರು.

ನಮ್ಮಿಬ್ಬರ ಮನದಲ್ಲೂ ಏನೇನೋ ಆಲೋಚನೆಗಳು ಸುಳಿದು ಹೋದವು. ಅತಿಥಿಗಳನ್ನು ಜೋಪಾನವಾಗಿ ಕರೆದುಕೊಂಡು ಹೋಗಿ ವಾಪಸಾಗುವ ತನಕ ಅವರ ದೇಖರೇಖಿಯಲ್ಲಿ ಏನೂ ಹೆಚ್ಚುಕಮ್ಮಿಯಾಗುವಂತಿರಲಿಲ್ಲ. ದಕ್ಷಿಣ ಕನ್ನಡದಲ್ಲಿ ನದಿ-ತೊರೆ, ಕಾಡು-ಮೇಡು ಸಾಕಷ್ಟಿವೆ. ಸಾಹಿತಿಗಳೋ ಮೆಟ್ರೋ ವಾಸಿ. ಇಂಥ ಪ್ರದೇಶದಲ್ಲಿ ಮರಿಸಾಹಿತಿ ಎಲ್ಲಾದರೂ ಕಳೆದು ಹೋಗಿಬಿಟ್ಟರೇನು ಗತಿ? ಗೊತ್ತುಗುರಿಯಿಲ್ಲದ ಪ್ರದೇಶ ಬೇರೆ. ಸುಮ್ಮನೆ ಇರಲಾರದೇ ಮೈಮೇಲೆ ಇರುವೆ ಬಿಟ್ಟುಕೊಂಡಂತಾಯಿತಲ್ಲ ಎಂದು ಮಂಡೆ ಬಿಸಿಯಾಗುತ್ತಿತ್ತು. ಮರಿ ಸಾಹಿತಿಯೋ ತರುಣ. ನಾವು ಆತನ ಎರಡರಷ್ಟು ಪ್ರಾಯದವರು. ಹೊರಲಾರದ ಹೊಟ್ಟೆಯೊಡನೆ ಏದುಸಿರು ಬಿಡುತ್ತಾ ಸುಮಾರು ಒಂದು ಕಿಲೋ ಮೀಟರ್ ಓಡಿರಬಹುದು. ಅಲ್ಲಿಯವರೆಗೆ ಗೋಚರಿಸುತ್ತಿದ್ದ ಆಸಾಮಿಯ ಬೆನ್ನು ಛಕ್ಕನೆ ನಾಪತ್ತೆಯಾಗಿತ್ತು. ಹದಿನೈದು ನಿಮಿಷ ಹತ್ತಿರದಲ್ಲೆಲ್ಲಾ ಹುಡುಕಾಡಿ ಸೋತು, ಕೊನೆಗೆ ಪಾರ್ಕಿಂಗ್ ಲಾಟಿನತ್ತ ತೆರಳಿದರೆ ಮರಿ ಸಾಹಿತಿ ಟೊಯೋಟಾದೊಳಗೆ ಮುದುರಿ ಕುಳಿತಿದ್ದ. ಅದುರುವಿಕೆ ಇನ್ನೂ ನಿಂತಿರಲಿಲ್ಲ. ಅವನನ್ನು ನೋಡಿ ಸಮಾಧಾನಗೊಂಡು ಓಡಿ ಓಡಿ ಬಸಿಯುತ್ತಿದ್ದ ಬೆವರನ್ನು ಒರೆಸುತ್ತಾ ಸುಧಾರಿಸಿಕೊಳ್ಳತೊಡಗಿದೆವು.

ಉಸಿರಾಟ ಕೊಂಚ ತಹಬಂದಿಗೆ ಬಂದಮೇಲೆ ಪಿತ್ತ ನೆತ್ತಿಗೇರಿ ‘ಏನಪ್ಪಾ, ಏನಾಯ್ತು ಅಂತ ಹೀಗೆ ಓಡಿ ಬಂದೆ? ನಾನು ಪೂಜೆ ಮಾಡೋದು ಬಿಟ್ಟು ಮಡಿ ಬಟ್ಟೇಲಿ ಊರೂರು ಸುತ್ತುತ್ತಾ ನಿನ್ನ ಹಿಂದೆ ಓಡಬೇಕಾ?’ ಎಂದು ಸುಬ್ಬಣ್ಣ ಆವಾಜ್ ಹಾಕಿದ್ದೇ ತಡ ಹುಡುಗ ಥಂಡಾ ಆಗಿಬಿಟ್ಟಾ. ‘ಸಾರೀ ಸಾರ್, ನಂಗೆ ಬಟ್ಟೇ ಬಿಚ್ಚಕ್ಕೆ ನಾಚಿಕೆ. ಅದಕ್ಕೇ ಓಡಿ ಬಂದ್ಬಿಟ್ಟೆ. ದೇವರ ದರ್ಶನ ಆಗದೇ ಹೋದ್ರೂ ಪರ್ವಾಗಿಲ್ಲ. ಅಮ್ಮಾ ಬೇಕಾದ್ರೆ ದರ್ಶನ ಮಾಡಿಕೊಳ್ಳ್‌ಲಿ, ನಾನಿಲ್ಲೇ ಕೂತಿರ್ತೀನಿ. ನೀವು ಹೋಗಿ ಬನ್ನಿ’ ಎಂದ. ನಖಶಿಖಾಂತ ಉರಿಯುತ್ತಿದ್ದ ಸುಬ್ಬಣ್ಣ ಏನೇನೋ ಬಯ್ಯಲು ಅನುವಾದರೂ ನಮ್ಮ ನೀತಿಸಂಹಿತೆ ಮತ್ತು ಆತನ ಮಡಿಗಚ್ಚೆ ಅದಕ್ಕೆ ತಡೆಯೊಡ್ಡಿತು. ಮನದಲ್ಲೇ ಏನಾದ್ರೂ ಮಾಡ್ಕೊಂಡು ಸಾಯಿ ಎಂದು ಶಪಿಸುತ್ತಾ ದೇವಸ್ಥಾನಕ್ಕೆ ಮರಳಿದೆವು. ಮರಿಸಾಹಿತಿಯ ಅಮ್ಮ ಇದ್ಯಾವುದಕ್ಕೂ ಕ್ಯಾರೇ ಅನ್ನದೇ ದೇವರೆದುರು ಅಕ್ಷರಶಃ ಧ್ಯಾನಸ್ಥಳಾಗಿದ್ದಳು. ದೇವರು ಹೇಗಿದ್ದರೂ ನನ್ನ ಮಗನನ್ನು ಕಾಯುತ್ತಾನೆ, ನನಗೇಕೆ ಅವನ ಚಿಂತೆ ಎಂಬಂತಿತ್ತು ಆಕೆಯ ವದನ.

ನದಿ ನೀರಲ್ಲಿ ಮತ್ತೊಮ್ಮೆ ಮಿಂದು, ಪುರೋಹಿತರ ಬಳಿಯಿದ್ದ ಬೇರೆ ಮಡಿಯುಟ್ಟು ಅಂತೂ ಇಂತೂ ಸುಬ್ಬಣ್ಣನ ಆಶ್ಲೇಷ ಬಲಿಯ ಹರಕೆ ನೆರವೇರಿತ್ತು. ಪ್ರಸಾದ ಭೋಜನದ ತರುವಾಯ ಎಲ್ಲರೂ ವಾಹನದ ಬಳಿ ತೆರಳಿದರೆ, ಮರಿಸಾಹಿತಿಯು ಹತ್ತಿರದ ಹೋಟೇಲಿನಲ್ಲಿ ಊಟ ಜಡಿದು ಅರೆನಿದ್ರೆಯಲ್ಲಿದ್ದ. ಅಂತೂ ಇಂತೂ ಸಾಹಿತಿಗಳ ಪರಿವಾರವನ್ನು ಸೇಫಾಗಿ ಗೆಸ್ಟ್‌ಹೌಸಿಗೆ ಕರೆತಂದು ಸಾಹಿತಿಗಳಿಗೆ ಈ ವಿವರಗಳನ್ನೆಲ್ಲಾ ಅರುಹಿದಾಗ ಅವರು ನಿಟ್ಟುಸಿರುಬಿಟ್ಟರು.

‘ಸಾರ್, ಸ್ಸಾರೀ, ನಿಮ್ಗೆ ಹೇಳೋಕೂ ಸಂಕೋಚಾ ಆಗತ್ತೆ. ಅವರಿಬ್ರೂ ಸ್ವಲ್ಪಾ ಕ್ರ್ಯಾಕ್. ಅವರು ಯಾವಾಗ್ಲೂ ಹಿಂಗೇನೇ ಆಡೋದು. ಅವರಷ್ಟಕ್ಕೆ ಬಿಟ್ರೆ ಹ್ಯಾಗೋ ಮ್ಯಾನೇಜ್ ಮಾಡ್ಕೋತಾರೆ ಅಂತಿದ್ದೆ. ಆದ್ರೆ, ಅವ್ರಿಂದ ನಿಮಗೆ ಅಷ್ಟೆಲ್ಲಾ ತೊಂದ್ರೆಯಾಗಬೌದು ಅನ್ನೋ ಕಲ್ಪನೇನೇ ನನಗಿರ್ಲಿಲ್ಲ. ಕ್ಷಮಿಸ್‌ಬೇಕು’ ಎಂದರು. ನಮಗೆ ಅಸಾಧ್ಯ ಕೋಪ ಬಂದರೂ ಹತ್ತಿಕ್ಕಿ ‘ಪರ್ವಾಗಿಲ್ಲಾ ಬಿಡೀ..’ ಎಂದು ಬಾರದ ನಗು ತಂದುಕೊಂಡು ಅವರಿಂದ ಬೀಳ್ಕೊಂಡೆವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry