ಜಾಗತಿಕ ಶಕ್ತಿಯಾಗಿ ನಿಂತ ಭಾರತ

7
48 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಸಾಧನೆ ಅಪಾರ; ಸಿ.ಟಿ ರವಿ ಶ್ಲಾಘನೆ

ಜಾಗತಿಕ ಶಕ್ತಿಯಾಗಿ ನಿಂತ ಭಾರತ

Published:
Updated:

ತುಮಕೂರು: ‘48 ತಿಂಗಳ ಆಡಳಿತ ಅವಧಿಯಲ್ಲಿ ಭಾರತವನ್ನು ಜಾಗತಿಕ ಶಕ್ತಿಯಾಗಿ ನಿಲ್ಲಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇದು ದೇಶದ 120 ಕೋಟಿಗೂ ಅಧಿಕ ಜನರಿಗೆ ಸಂದ ಗೌರವ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎನ್‌ಡಿಎ ಸರ್ಕಾರ ಆಡಳಿತ ನಡೆಸುತ್ತಿರುವುದು ಪರಿವರ್ತನೆಯ ಪ್ರಮುಖ ಕಾಲಘಟ್ಟವಾಗಿದೆ. ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ದೇಶವು ಜಾಗತಿಕ ಮಟ್ಟದಲ್ಲಿ ನೇತೃತ್ವ ವಹಿಸುವ ಸಾಮರ್ಥ್ಯ ಗಳಿಸಿದೆ’ ಎಂದರು.

‘ಮೋದಿ ಅವರ ಆಡಳಿತದಲ್ಲಿ ಕೈಗೊಂಡ ಯೋಜನೆಗಳು ಜನಸಾಮಾನ್ಯರಿಗೆ ತಲುಪಿವೆ. ಭ್ರಷ್ಟಾಚಾರ ಪ್ರಕರಣಗಳು ನಡೆದಿಲ್ಲ. ಜನಪರ ಯೋಜನೆಗಳಿಗೆ ಮೀಸಲಿಟ್ಟ ಹಣ ನೇರವಾಗಿ ಫಲಾನುಭವಿಗಳಿಗೆ ನೇರ ನಗದೀಕರಣ (ಡಿಬಿಟಿ) ಆಗುತ್ತಿದೆ’ ಎಂದು ತಿಳಿಸಿದರು.

‘ಈ ನೇರ ನಗದೀಕರಣದಿಂದ ₹ 90 ಸಾವಿರ ಕೋಟಿ ಹಣ ಉಳಿತಾಯ ವಾಗಿದೆ. ಎಲ್ಲೂ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಎನ್‌ಡಿಎ ಸರ್ಕಾರಕ್ಕಿಂತ ಮೊದಲು ದೇಶದಲ್ಲಿ ಬಹಳಷ್ಟು ವರ್ಷ ಆಡಳಿತ ನಡೆಸಿದವರು ಕಾಂಗ್ರೆಸ್‌ನವರೇ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಆ ಪಕ್ಷದವರೇ ಅಧಿಕಾರ ನಡೆಸುತ್ತಿದ್ದರು. ಅಷ್ಟೊಂದು ಹಣವನ್ನು ನುಂಗಿ ಹಾಕುತ್ತಿದ್ದರು’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ₹ 100 ಅನುದಾನ ಕಲ್ಪಿಸಿದರೆ ಫಲಾನುಭವಿಗೆ ಕೇವಲ ₹ 10 ತಲುಪುತ್ತದೆ ಎಂದು ರಾಜೀವ್ ಗಾಂಧಿ ಅವರೇ ಪ್ರಧಾನಿಯಾಗಿದ್ದಾಗ ಹೇಳಿದ್ದರು. ಆದರೆ, ಯಾರು ಆ ಹಣ ಹೊಡೆಯುತ್ತಾರೆ ಎಂಬುದನ್ನು ಹೇಳಿರಲಿಲ್ಲ’ ಎಂದು ತಿಳಿಸಿದರು.

‘ದೇಶದ ವೈರಿ ಆಸ್ತಿ ಮಸೂದೆ (ಎನಿಮಿ ಪ್ರಾಪರ್ಟಿ ಬಿಲ್) ಜಾರಿಗೊಳಿಸಿದೆ. ದಾವೂದ್ ಇಬ್ರಾಹಿಂನಂತಹವರ ಆಸ್ತಿ ದೇಶದ ಆಸ್ತಿಯಾಗಿ ಪರಿವರ್ತನೆಯಾಗಿದೆ. ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಬೇನಾಮಿ ಆಸ್ತಿ ಮಾಡಿ ದೇಶ ಬಿಟ್ಟು ಹೋಗುವವರ ವಿರುದ್ಧ ಕಠೋರ ಕ್ರಮಗಳನ್ನು ಕೈಗೊಂಡಿದೆ. 7,100 ಕಂಪನಿಗಳು ಬ್ಯಾಂಕುಗಳಿಗೆ ಪಾವತಿಸಬೇಕಿದ್ದ ₹ 83 ಸಾವಿರ ಕೋಟಿ ಸಾಲ ವಸೂಲಾಗಿದೆ’ ಎಂದು ಹೇಳಿದರು.

‘ಬೇನಾಮಿ ಆಸ್ತಿ ಮಾಡಿದವರ ಪತ್ತೆ ಮಾಡಿ ಆಸ್ತಿ ವಶಪಡಿಸಿಕೊಳ್ಳಲಾಗುತ್ತಿದೆ. ಇನ್ನು ಭ್ರಷ್ಟಾಚಾರದಲ್ಲಿ ಹಣ ಮಾಡುವುದು, ಹಣ ಮಾಡಿ ದಕ್ಕಿಸಿಕ್ಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದನ್ನು ಮೋದಿ ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ’ ಎಂದು ವಿವರಿಸಿದರು.

‘ವಿದೇಶದಲ್ಲಿರುವ ಕಪ್ಪು ಹಣ ತಂದು ನಾಗರಿಕರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಪ್ರಧಾನಿ ಎಲ್ಲೂ ಹೇಳಿಲ್ಲ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು ₹ 15 ಲಕ್ಷ ಬ್ಯಾಂಕಿಗೆ ಹಾಕುವುದಾಗಿ ಪ್ರಧಾನಿ ಹೇಳಿದ್ದರು ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ, ವಾಸ್ತವಿಕವಾಗಿ ನಾಗರಿಕರಿಗೆ ಪರೋಕ್ಷವಾಗಿ ₹ 15 ಲಕ್ಷಕ್ಕಿಂತ ಹೆಚ್ಚಿನ ಸಹಾಯ ಮೋದಿಯವರು ಕೈಗೊಂಡ ಅಭಿವೃದ್ಧಿ ಯೋಜನೆಗಳಿಂದ ಲಭಿಸಿದೆ’ ಎಂದು ವಿವರಿಸಿದರು.

‘ಜೂನ್ 21ರಂದು ವಿಶ್ವಯೋಗ ದಿನ. ಈ ಯೋಗ ದಿನಾಚರಣೆಗೂ ಮೆರುಗು ಬಂದಿದ್ದೂ ಮೋದಿ ಅವರಿಂದಲೇ. ಯೋಗ ದಿನದಿಂದ ಭಾರತದ ಸಾಂಸ್ಕೃತಿಕ ವೈಭವ ಜಗತ್ತಿಗೆ ತೋರಿಸುವ ಸುದಿನವಾಗಿದೆ. ಈ ಯೋಗ ಒಂದೇ ನಮ್ಮ ದೇಶದ ವಿರಾಟ ಸ್ವರೂಪ ದರ್ಶನ ಮಾಡಿಸುತ್ತದೆ’ ಎಂದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಬಿಜೆ‍ಪಿ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್, ಹಿಂದುಳಿದ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ಗೋಷ್ಠಿಯಲ್ಲಿದ್ದರು.

ವಿಪಕ್ಷ ನಾಯಕರಿಗೆ ಮೋದಿ ಅಪಥ್ಯ

‘ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರು ನನಗೆ ಅವಕಾಶ ಕೊಡಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಂತೆಯೇ ಆಡಳಿತ ಕೊಡುತ್ತೇನೆ ಎಂದು ಅವರ ದೇಶದ ಜನರ ಮುಂದೆ ಮನವಿ ಮಾಡುತ್ತಿದ್ದಾರೆ. ಇದು ಮೋದಿ ಅವರ ಸಾಮರ್ಥ್ಯ. ಆದರೆ ನಮ್ಮ ದೇಶದ ವಿರೋಧ ಪಕ್ಷಗಳ ನಾಯಕರಿಗೆ ಮೋದಿ ಎಂದರೆ ಅಪಥ್ಯ’ ಎಂದು ರವಿ ಹೇಳಿದರು.

₹ 54 ಲಕ್ಷ ಕೋಟಿ ಸಾಲ ಇಟ್ಟಿದ್ದೆ ಕಾಂಗ್ರೆಸ್ ಸಾಧನೆ

‘ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಬೇಕಾದರೆ ಬಿಟ್ಟು ಹೋಗಿದ್ದು ₹ 54 ಲಕ್ಷ ಕೋಟಿ ಸಾಲ. ಆಗಿನ ಕಾಂಗ್ರೆಸ್ ಸರ್ಕಾರವೇನು ಖಜಾನೆ ತುಂಬಿಸಿ ಕೊಟ್ಟು ಹೋಗಿರಲಿಲ್ಲ’ ಎಂದರು. ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಾಲ ತೀರಿಸಿದರು. ಅವರ ಶ್ರಮದ ಫಲವಾಗಿ ಭಾರತ ವಿಶ್ವದ 6ನೇ ಆರ್ಥಿಕ ದೊಡ್ಡ ಶಕ್ತಿಯಾಗಿ ಬೆಳೆದಿದೆ’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry