ಸಕ್ರಿಯರಾದ ಮಾಜಿ ಶಾಸಕ ಬಾಗವಾನ

7
ವಿಜಯಪುರ ನಗರ ವಿಧಾನಸಭಾ ಕ್ಷೇತ್ರ; ಮುಸ್ಲಿಂ ಮುಖಂಡರಲ್ಲೇ ಬಿರುಸುಗೊಂಡ ಬಣ ರಾಜಕಾರಣ

ಸಕ್ರಿಯರಾದ ಮಾಜಿ ಶಾಸಕ ಬಾಗವಾನ

Published:
Updated:
ಸಕ್ರಿಯರಾದ ಮಾಜಿ ಶಾಸಕ ಬಾಗವಾನ

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ‘ಕೈ’ ತಪ್ಪಿದ ಬೆನ್ನಿಗೆ; ಕಾಂಗ್ರೆಸ್‌ನಿಂದ ದೂರವಾಗಿ ರಾಜಕಾರಣದಿಂದ ನಿಷ್ಕ್ರಿಯರಾಗಿದ್ದ ಮಾಜಿ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನ ಬರೋಬ್ಬರಿ ಎರಡು ತಿಂಗಳ ಬಳಿಕ ಮತ್ತೆ ಸಕ್ರಿಯರಾಗಿದ್ದಾರೆ.

ಟಿಕೆಟ್‌ ಕೈ ತಪ್ಪಿದ್ದಕ್ಕೆ ತನ್ನ ಆಪ್ತ ವಲಯದಲ್ಲೂ ಅಪಸ್ವರ ಎತ್ತದ ಬಾಗವಾನ ಯಾವೊಂದು ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದರು. ಸೋನಿಯಾ ಗಾಂಧಿ ವಿಜಯಪುರಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬಂದ ಸಮಾವೇಶದಲ್ಲಷ್ಟೇ ಕೆಲ ಬೆಂಬಲಿಗರ ಜತೆ ಪಾಲ್ಗೊಂಡಿದ್ದರು. ನಂತರವೂ, ಮೊದಲು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ತಮ್ಮ ಸಹೋದರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಾವೀದ ಬಾಗವಾನ ಅವರನ್ನು ಮಾತ್ರ ಅಬ್ದುಲ್‌ ಹಮೀದ್‌ ಮುಶ್ರೀಫ್‌ ನಾಮಪತ್ರ ಸಲ್ಲಿಸುವ ಸಂದರ್ಭ ಕಳುಹಿಸಿಕೊಟ್ಟಿದ್ದರು. ಇದರ ಬೆನ್ನಿಗೆ ಬಾಗವಾನ ಬಣ ಚುನಾವಣಾ ರಾಜಕಾರಣ ಕಣದಿಂದ ಸಂಪೂರ್ಣ ದೂರವಾಗಿತ್ತು. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಿಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಮೆರವಣಿಗೆಯಲ್ಲಿ ಮಿಂಚಿಂಗ್‌: ಬಬಲೇಶ್ವರ ಶಾಸಕ, ಜಿಲ್ಲೆಯ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲಗೆ ಸಚಿವ ಸ್ಥಾನ ‘ಕೈ’ತಪ್ಪಿ, ಬಸವನಬಾಗೇವಾಡಿ ಶಾಸಕ ಶಿವಾನಂದ ಎಸ್‌.ಪಾಟೀಲ ಎಚ್‌.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ, ಮಾಜಿ ಶಾಸಕ ಮಕ್ಬೂಲ್‌ ಎಸ್‌.ಬಾಗವಾನ ಮತ್ತೆ ಸಕ್ರಿಯರಾಗಿದ್ದಾರೆ.

ಎಂ.ಬಿ.ಪಾಟೀಲಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬೆಂಬಲಿಗರು, ಅಭಿಮಾನಿಗಳು ಸರಣಿ ಪ್ರತಿಭಟನೆಗಿಳಿದರೆ; ಬಾಗವಾನ ಬಣ ಶಿವಾನಂದ ಪಾಟೀಲ ಪರ ವಿಜಯೋತ್ಸವ ಆಚರಿಸುವ ಮೂಲಕ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮುಖಂಡರೊಳಗೆ ಬಣ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ.

ಚುನಾವಣೆಯಲ್ಲಿ ಸೋತ ಬಳಿಕವೂ ಅಬ್ದುಲ್‌ ಹಮೀದ್‌ ಮುಶ್ರೀಫ್‌ ಎಂ.ಬಿ.ಪಾಟೀಲ ಬೆಂಬಲಿಗರಾಗಿ, ಅಲ್ಪಸಂಖ್ಯಾತ ಮುಖಂಡರಾಗಿ ಹೊರ ಹೊಮ್ಮಲು ಎಲ್ಲ ರಾಜಕೀಯ ವೇದಿಕೆ ಬಳಸಿಕೊಳ್ಳುತ್ತಿದ್ದರು. ಯಾರೊಬ್ಬರೂ ಇದಕ್ಕೆ ಪೈಪೋಟಿಗಿಳಿದಿರಲಿಲ್ಲ.

ಶಿವಾನಂದ ಎಸ್‌.ಪಾಟೀಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೆ ಬಣ ರಾಜಕಾರಣ ಬಿರುಸುಗೊಂಡಿದೆ. ಬಾಗವಾನ ಶಿವಾನಂದ ಪಾಟೀಲ ಜತೆ ಭಾವಚಿತ್ರವಿರುವ ಫ್ಲೆಕ್ಸ್‌ ಅಳವಡಿಸಿ ಈದ್‌ಗೆ ಶುಭ ಕೋರಿದರೆ; ಹಮೀದ್‌ ಮುಶ್ರೀಫ್‌ ಎಂ.ಬಿ.ಪಾಟೀಲ ಭಾವಚಿತ್ರದ ಜತೆ ಸಮುದಾಯದ ಜನತೆಗೆ ಶುಭ ಕೋರುವ ಜಾಹೀರಾತು ಫಲಕಗಳನ್ನು ನಗರದ ಎಲ್ಲೆಡೆ ಹಾಕಿದ್ದಾರೆ.

ಸಚಿವರಾದ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಬುಧವಾರ ಬಂದ ಶಿವಾನಂದ ಪಾಟೀಲ ಅವ ರನ್ನು ಸ್ವಾಗತಿಸಲು, ಮಕ್ಬೂಲ್‌ ಸ್ವತಃ ಮೆರವಣಿಗೆಯ ಮುಂಚೂಣಿ ವಹಿಸಿದ್ದರು. ಬೆಂಬಲಿಗರ ಜತೆ ಗುಲಾಲ್‌ ಎರಚಿಕೊಂಡು ಸಂಭ್ರಮಿಸಿದ್ದರು. ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಾವೀದ ಬಾಗವಾನ ಸಾತ್‌ ನೀಡಿದರು. ಮೆರವಣಿಗೆಯುದ್ದಕ್ಕೂ ಬಾಗವಾನ ಬಣ ವಿಜೃಂಭಿಸಿದ್ದು ವಿಶೇಷವಾಗಿತ್ತು.

‘ಡಾ.ಮಕ್ಬೂಲ್‌ ಎಸ್.ಬಾಗವಾನ ಅವರನ್ನು ರಾಜಕೀಯಕ್ಕೆ ಪರಿಚಯಿಸಿದ್ದೇ ಎಂ.ಬಿ.ಪಾಟೀಲ. ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದ್ದು ಅವರೇ. ಈ ಬಾರಿ ಟಿಕೆಟ್‌ ತಪ್ಪಿಸಿದ್ದರಿಂದ ಆಕ್ರೋಶಗೊಂಡ ಬಾಗವಾನ ಪಾಟೀಲ ಪಾಳೆಯದಿಂದ ದೂರ ಸರಿದು ಜಿಲ್ಲಾ ಕಾಂಗ್ರೆಸ್‌ನ ಎದುರಾಳಿ ಬಣದೊಟ್ಟಿಗೆ ‘ಕೈ’ ಮಿಲಾಯಿಸಿದ್ದಾರೆ. ರಾಜಕೀಯ ಗುರುವಿಗೆ ತಿರುಮಂತ್ರ ಹೂಡಿದ್ದಾರೆ.

ಇನ್ನೂ ಈ ಹಿಂದಿನ ಐದು ವರ್ಷ ಎಂ.ಬಿ.ಪಾಟೀಲ ಪಟಾಲಂನ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡು ಕೆಪಿಸಿಸಿಯಲ್ಲಿ ಉನ್ನತ ಹುದ್ದೆ ಪಡೆದಿದ್ದ ಕೆಲ ಮುಖಂಡರೂ ಈಗಾಗಲೇ ತಮ್ಮ ನಿಷ್ಠೆಯನ್ನು ಎಂ.ಬಿ.ಪಾಟೀಲರಿಂದ ಶಿವಾನಂದ ಪಾಟೀಲರ ಕಡೆ ಬದಲಿಸಿಕೊಂಡಿದ್ದಾರೆ. ನೂತನ ಸಚಿವರ ವಿಶ್ವಾಸ ಗಳಿಸಿಕೊಂಡು, ಅಧಿಕಾರಸ್ಥರ ಸಮೀಪವಿದ್ದು, ತಮ್ಮ ಆಟಾಟೋಪ ನಡೆಸಲು ಮುಂದಾಗಿದ್ದಾರೆ’ ಎಂದು ಜಿಲ್ಲಾ

ಕಾಂಗ್ರೆಸ್‌ನ ಮುಖಂಡರೊಬ್ಬರು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry