ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಳಿಮರ

Last Updated 16 ಜೂನ್ 2018, 11:27 IST
ಅಕ್ಷರ ಗಾತ್ರ

ಹುಲ್ಲೆಮರಿಯಂತೆ ಮಿಡುಕೋ ಚಿಗುರೆಸಳ ತುಳುಕಿಸುತ್ತ

ಬೆಟ್ಟದ ಬುಡದ ಬಟ್ಟ ಬಯಲಲ್ಲಿ ನೆಟ್ಟಗೆ ನಿಂತಿತ್ತು ಪುರಾತನ ಮರ,

ಮೈ ಮುದಿಯಾದರೂ ಜೀವ ಮುದಿಯಾಗಗೊಡದ

ಗಿಳಿಪೊಟರೆಗಳು ಆ ಮರದ ನಿಟ್ಟುನಿಟ್ಟಲ್ಲಿ,

ನೆಲದೆದೆಗೇ ಬೇರೂರಿ ತೂಗುತ್ತಿತ್ತು ಮರ

ಗಿಳಿರೆಕ್ಕೆಯ ಲಯಕ್ಕೆ ಮಿಡಿಯುತ್ತ

ಥೇಟು ಅದರಂತೆ ಹಸಿರು ತಾನೂ ಆಗಲು ಬಯಸುತ್ತ.

ಒತ್ತಿ ಮರದ ಮೈಯಿಗೆ ಜೀವ ಹನಿಯೋ ಕೆಂಪು ಕೊಕ್ಕು

ಹೇಳುತ್ತಿದ್ದವು ಗಿಳಿಗಳು ದಿನಕ್ಕೊಂದು ಕಣಿ:

ಆ ಊರು, ಈ ಮರ, ಅತ್ತಣದ ಆಳ್ತನ, ಇತ್ತಣದ ಬಾಳ್ತನದ ಕಥೆಯ.

ಆಗ, ಕೆಂಪಾನೆ ಕೆಂಪು ಕೊಕ್ಕ ಚೆಲುವಿಗೆ

ಮರದ ಗೊರಟು ಕಾಂಡದೊಳಗೆಲ್ಲ ಹೊಸ ರಕ್ತಕಣಗಳು ಹುಟ್ಟಿ

ಅದರ ತಲೆತೊನೆಯೋ ಚಿಗುರ ಕಣ್ಣಲ್ಲಿ ಕೆಂಪು ಎಲೆಯ ಮಿನುಗು.

ಮಳೆಯ ಹನಿಗಳ ಪಕ್ಕೆ ಗರಿಯಿಂದ ಕೊಡವುವ ಕಾಗೆ,

ನೆರಳಿನಲಿ ನೆಲೆ ಕಂಡ ಮೇಕೆ,

ಕತ್ತಲಿಗೆ ಡಿಕ್ಕಿ ಹೊಡೆಯುತ್ತ ಬರುವ ಬಾವಲಿಗಳಿಗೆಲ್ಲ

ಸದ್ಯದ ತಂಗುದಾಣ ಈ ಮರದ ಗೆಲ್ಲು, ಎಲೆ,

ಶಾಶ್ವತದ ಆಸರೆ ಇದೆ ಇಲ್ಲೇ ಎಂಬ ಇಂಬು ಮರಕ್ಕೆ.

ನೇಯುತ್ತಿದೆ ಮರದೆದೆಯಲ್ಲಿ ಮರಿಹುಳ

ಒಂದೇ ಒಂದೊಂದೇ ಎಳೆಯನ್ನು ತನ್ನ ಮೈಯ ಸುತ್ತ,

ಮರಿಹುಳವ ತಬ್ಬುತ್ತ ಬಿಗಿಯಾಗಿ

ಕಾಲದ ಮುಳ್ಳೂ ಸುತ್ತುತ್ತಿದೆ ತನ್ನದೇ ಸುತ್ತ.

ಹೊಡೆದ ಅಡ್ಡ ಮಳೆಗೆ ಒಂದು ದಿನ

ಕೆರೆ ಕಟ್ಟೆ ಹಳ್ಳ ಕೊಳ್ಳಗಳೆಲ್ಲ ತುಂಬಿ

ತುಳುಕಾಡೋ ನೀರ ವಯ್ಯಾರ ಇಳಕಲಲ್ಲಿ ನುಗ್ಗಿ

ಗಳಿಗೆ ಕಳೆಯೋ ಒಳಗೆ

ಬೆಟ್ಟದ ಬುಡದ ಬಟ್ಟ ಬಯಲಲ್ಲಿ ನೀರೋ ನೀರು.

ಬಂದಷ್ಟೇ ಬಿರುಸಲ್ಲಿ ಮಳೆ ಹೋಗಿ

ಸುತ್ತೆತ್ತಲೂ ಈಗ ಮಳೆ ನಿಂತ ಮೇಲಿನ ಮೌನ,

ಪುರಾತನ ಮರ ತೇಲುತ್ತಿದೆ ನೀರ ಮೇಲೆ

ತನ್ನದೇ ಬಿಂಬವ ನೋಡುತ್ತ ಬೆರಗುಗೊಂಡು.

ದಿನ ಕಳೆದು ದಿನವಾಗಿ ಸುರಿವ ಮಳೆ ಮತ್ತೆ ಸುರಿಯುತ್ತಲೇ ಹೋಗಿ

ನಿಂತ ನೀರು ನಿಂತೇ ಇದ್ದು, ಎಲ್ಲಿ ವಲಸೆ ಹೋದವೋ ಗಿಳಿಗಳೆಲ್ಲ,

ಸದಾ ಗಿಳಿಯ ಧ್ಯಾನದೊಳಿರಲು ಮರವು

ಅದರ ಕಾಂಡದ ಮೇಲೆಲ್ಲ ಹಾವಸೆ ಹಬ್ಬಿ

ಬರಿಗಣ್ಣಿಗೆ ತೋರತೊಡಗಿತು ಪುರಾತನ ಮರವು ಗಿಳಿಯೇ ಆಗಿ

ಮರದೆದೆಯಲ್ಲಿ ನಡೆಯುತ್ತಲೇ ಇದೆ ಮರಿಹುಳಗಳ ಗೌಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT