ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವ’ವನ್ನೇ ಒಡಲೊಳಗಿಟ್ಟ ದುಬಾರಿ ನಗರ! ವಾಹ್‌..! ದುಬೈ

Last Updated 16 ಜೂನ್ 2018, 11:44 IST
ಅಕ್ಷರ ಗಾತ್ರ

ವಿಮಾನ ಭೂಸ್ಪರ್ಶಕ್ಕೆ ಹತ್ತಿರವಾಗುತ್ತಿತ್ತು. ಹೊರಗೆ ಇಣುಕಿದಾಗ ಕಂಡದ್ದು ಹಾಲುಬಿಳಿ ಬಣ್ಣದ ಬೃಹತ್‌ ಹೊದಿಕೆ ಹಾಸಿದ ನೋಟ. ಹ್ಹಾ... ಹೊದಿಕೆಯಲ್ಲವದು ಮರಳು ಹಾಸು. ಆ ಮರಳಲ್ಲೂ ಬದುಕು ಕಟ್ಟಿಕೊಂಡ ದುಬೈ– ವಿಶ್ವಕ್ಕೊಂದು ಅದ್ಭುತ ಸವಾಲು.

ದುಬೈ ಎಂದಾಗ ನಮ್ಮೂರಿನಲ್ಲಿ ಕೇಳಿದ್ದು ಹಲವು ಬಣ್ಣದ ಕತೆಗಳು. ಐಷಾರಾಮಿ ಬದುಕಿನ ಚಿತ್ರಗಳು. ನಾಲ್ಕು ದಿನಗಳ ಪ್ರವಾಸದಲ್ಲಿ ಕನಸಿನಂತೆ ಅವೆಲ್ಲವನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ... ಸಿನಿಮಾವೊಂದರ ಟ್ರೇಲರ್‌ನಂತೆ ಅಷ್ಟೆ.

ದುಬೈ– ಎರಡಕ್ಷರದ ಪುಟ್ಟ ನಗರ. ವಿಶ್ವದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮಾಯಾನಗರಿ– ಅಚ್ಚರಿಯ ಲೋಕ. ಹಣ, ಸಿರಿವಂತಿಕೆ ಎಂಬ ಅರ್ಥವೂ ಇದೆ. ಅರೇಬಿಕ್‌ ನಾಣ್ಣುಡಿಯೊಂದರ ಪ್ರಕಾರ, ದುಬೈ ಜನರೆಂದರೆ ಸಿರಿವಂತರು. ತುಂಬಾ ಹಣವುಳ್ಳವರು. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಏನೇನು ಸೃಷ್ಟಿಸಬಹುದೊ ಅದೆಲ್ಲವೂ ಆ ಮರಳುಗಾಡಿನಲ್ಲಿ ಕಾಣಬಹುದು. ಇಷ್ಟೆಲ್ಲ ಸಿರಿವಂತಿಕೆಯ ಹಿಂದೆ ಪ್ರವಾಸೋದ್ಯಮವಷ್ಟೇ ಇಲ್ಲ. ದುಬೈ ದೊರೆಗಳ ಕಟ್ಟುನಿಟ್ಟಿನ ಆಡಳಿತವೂ ಕಾರಣ. ವಾಹ್‌... ಈ ಅರಬಿಗಳು ಎಂಥ ಕುಶಲಮತಿಗಳು. ಗಗನಚುಂಬಿ ಕಟ್ಟಡಗಳಲ್ಲಿರುವ ವಿಭಿನ್ನವೆನಿಸುವ ಶಾಪಿಂಗ್ ಮಾಲ್‌ಗಳು, ಕಣ್ಮನ ಸೆಳೆಯುವ ರಸ್ತೆಗಳು, ಚಿನ್ನದ ರಾಶಿ. ಓಡಾಡಿದಾಗಲೆಲ್ಲ ಸ್ವಪ್ನನಗರಿಯಲ್ಲೇ ಸುತ್ತಾಡಿದ ಅನುಭವ. ಯಾವುದೇ ಉತ್ಪಾದನೆಗಳಿಲ್ಲದೆ ದುಡ್ಡಿನಿಂದಲೇ ದುಡ್ಡನ್ನು ಸೃಷ್ಟಿಸುವ ಜಾಗತೀಕರಣದ ಜಾದೂಗೆ ಇಲ್ಲಿನ ಆರ್ಥಿಕತೆ ನಿದರ್ಶನ. ಪೆಟ್ರೋಲ್‌ ಮಾರಿ ನೀರು ಖರೀದಿಸುವ ಇಲ್ಲಿನ ಜನ, ಇಂಥ ನಗರವನ್ನು ಅದ್ಹೇಗೆ ಕಟ್ಟಿದರೊ... ಕುತೂಹಲ– ಕೌತುಕ ಹಾಗೇ ಉಳಿದಿದೆ.

ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ, ಅಚ್ಚರಿ ಹುಟ್ಟಿಸುವಂತೆ ನಿರ್ಮಾಣವಾಗಿರುವ ‘ದುಬೈ ಫ್ರೇಮ್‘, ವಿಶ್ವದ ಅತಿ ದೊಡ್ಡ ಹೋಟೆಲ್ ಬುರ್ಜುಲ್ ಅರಬ್, ಸಮುದ್ರವನ್ನೇ ದೂರ ತಳ್ಳಿ ತಲೆ ಎತ್ತಿರುವ ಭವ್ಯ ಕಟ್ಟಡಗಳು, ಅಟ್ಲಾಂಟಿಸ್, ಪಾಮ್ ಜುಮೈರ... ವಿಶ್ವದ 100 ಅತಿ ಎತ್ತರದ ಕಟ್ಟಡಗಳ ಪೈಕಿ 20 ಕಟ್ಟಡಗಳು ಈ ಒಂದೇ ನಗರದಲ್ಲಿವೆ. ಒಂದು ಸಾಧಾರಣ ಮೀನುಗಾರಿಕೆ ಹಳ್ಳಿಯಾಗಿದ್ದ ದುಬೈ, ಐದು ದಶಕಗಳಲ್ಲಿ ಕಂಡ ಅಭಿವೃದ್ಧಿ, ವಿಶ್ವ ನಗರವಾಗಿ ಬೆಳೆದಿರುವ ಪರಿ ಅಚ್ಚರಿಯೇ ಸರಿ.


ದುಬೈ ಸಫಾರಿಯಲ್ಲಿ ಕಂಡ ಸಿಂಹಗಳು

ಮರಳುಭೂಮಿಯನ್ನು ಸ್ವರ್ಗ ಸದೃಶ ಮಾಡುವುದು ಸುಲಭವಲ್ಲ. ಕಾಲಿಟ್ಟ ಕಡೆಯಲ್ಲೆಲ್ಲ ಕಾಂಕ್ರೀಟ್, ಎಲ್ಲಿ ನೋಡಿದರೂ ನಿಬ್ಬೆರಗಾಗಿಸೋ ಗಗನಚುಂಬಿ ಕಟ್ಟಡಗಳ ವಿಚಿತ್ರ ಜಗತ್ತಿನ ಎಲ್ಲ ವಿಶೇಷಗಳೂ ಇದರ ಒಡಲಲ್ಲಿವೆ. ಎಲ್ಲ ದೇಶಗಳ ಜನರನ್ನೂ ತನ್ನೊಳಗಿಟ್ಟುಕೊಂಡು ಸಲಹುತ್ತಿರುವ ನಗರವಿದು. ಎಲ್ಲಾ ಭಾಗಗಳ ಆಹಾರ ಪದಾರ್ಥಗಳು ದೊರೆಯುವುದರಿಂದ ಸಹಜವಾಗಿಯೇ ವಿಶ್ವದ ನಾನಾ ಭಾಗದಿಂದ ಉದ್ಯೋಗಕ್ಕೆಂದು ಹೆಚ್ಚಿನ ಸಂಖ್ಯೆಯಲ್ಲಿ‌ ಜನರು ಬರುತ್ತಾರೆ. ದುಬೈನ ತುಂಬಾ ಭಾರತೀಯರಿದ್ದಾರೆ. ಈ ಸಂಖ್ಯೆ ಒಂದು ಅಂದಾಜಿನಂತೆ ಶೇಕಡಾ 35ರಷ್ಟು. ಹೀಗಾಗಿ, ತುಳು, ತೆಲುಗು, ಕನ್ನಡ, ಹಿಂದಿ ಎಲ್ಲ ಭಾಷೆಗಳು ಇಲ್ಲಿ ನಡೆಯುತ್ತವೆ. ದುಬೈ ದೊರೆಗಳು ಜಾಣರು. ಹೌದು! ಸಮುದ್ರದ ಉಪ್ಪಿನ ನೀರನ್ನು ಶುದ್ಧೀಕರಿಸಿ ಪ್ರತಿ ಮನೆಗೂ ನೀರು ಸರಬರಾಜು ಮಾಡಲಾಗುತ್ತದೆ. ಪೆಟ್ರೋಲ್ ರಫ್ತು ಮಾಡುವ ಮೂಲಕ ತನ್ನ ಆದಾಯಕ್ಕೆ ದಾರಿ ಮಾಡಿಕೊಂಡಿರುವ ದುಬೈ ಒಡಲೊಳಗಿನ ಕಿಚ್ಚು, ಬೆಳಕಾಗಿ ಹೊಮ್ಮಿದ್ದು ಪ್ರವಾಸೋದ್ಯಮದ ಕನಸು ಮೂಡಿದಾಗ. ಆ ಮೂಲಕ, ಜಾಗತೀಕರಣದ ಎಲ್ಲ ಅಂಧಾದುಂದಿ ವ್ಯವಹಾರ, ಐಷಾರಾಮಿತನಗಳನ್ನು ಸೃಷ್ಟಿಸಿಕೊಂಡಿರುವ ದುಬೈ, ಮೋಜಿನ ರಾಜಧಾನಿಯಾಗಿ ರೂಪುಗೊಂಡಿದೆ.

ಈ ಊರಿಗೆ ಅತಿಥಿಗಳ ಮನ ತಣಿಸುವ ಸಾಮರ್ಥ್ಯವಿದೆ. ಭಾರತ ಸೇರಿ ಎಲ್ಲ ವಿದೇಶಿಯರಿಗೂ ಇಲ್ಲಿನ ಆಡಂಬರ ಒಂದು ಕ್ಷಣ ತಲೆ ತಿರುಗುವಂತೆ ಮಾಡದಿರದು. ಹಾಗೆ ನೋಡಿದರೆ, ಬೇಕಾದ್ದನ್ನು, ಕಂಡದ್ದನ್ನು, ಅನಿಸಿದನ್ನು ಅಷ್ಟೇ ಸಲೀಸಾಗಿ ಸೃಷ್ಟಿ ಮಾಡುವ ದುಬೈ ದೊರೆಗಳು, ವನ್ಯಮೃಗಗಳ ಉದ್ಯಾನ ‘ದುಬೈ ಸಫಾರಿ’ ಸೃಷ್ಟಿಸಿರುವುದು ಅಚ್ಚರಿ ಎನಿಸದು. ಆಫ್ರಿಕನ್‌, ಏಷ್ಯನ್‌, ಅರೇಬಿಯನ್‌ ಮತ್ತು ಮುಕ್ತ ಸಫಾರಿ ಗ್ರಾಮ ಎಂಬ ನಾಲ್ಕು ವಿಭಾಗಳಲ್ಲಿ ಆಯಾ ಪ್ರದೇಶದ ಎಲ್ಲ ಪ್ರಭೇದಗಳ ಪ್ರಾಣಿ ಸಂಕುಲಗಳ ಸಂರಕ್ಷಣೆ ದೃಷ್ಟಿಯಿಂದ ಈ ಸಫಾರಿಯಲ್ಲಿ ಆಶ್ರಯ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವ ವ್ಯವಸ್ಥೆ ಮಾಡಲಾಗಿದೆ. 2020ರ ವೇಳೆಗೆ 5,000 ಪ್ರಾಣಿಗಳಿಗೆ ಇಲ್ಲಿ ನೆಲೆ ಕಲ್ಪಿಸುವ ಗುರಿಯನ್ನು ದುಬೈ ಸರ್ಕಾರ ಹೊಂದಿದೆ!

ಇನ್ನು ದುಬೈ ಮಾಲ್‌, ಜಬೀಲ್ ಪಾರ್ಕ್‌ನ ‘ರೈಪ್ ಮಾರ್ಕೆಟ್’, ಗೋಲ್ಡ್‌ ಸ್ಟ್ರೀಟ್‌, ‘ಪಾಮ್ ಬೀಚ್’, ‘ಗ್ರೀನ್ ಪ್ಲಾನೆಟ್’, ‘ಐ.ಎಂ.ಜಿ ವರ್ಲ್ಡ್ ಅಡ್ವೆಂಚರ್ಸ್‌’, ‘ಪಾರ್ಕ್ಸ್ ಅಂಡ್ ರೆಸಾರ್ಟ್ಸ್’ ಹೀಗೆ ಒಂದಾ…ಎರಡಾ? ಇಡೀ ದುಬೈ ನೋಡಲು, ಒಟ್ಟಂದ ಸವಿಯಲು ದಿನಗಳು ಸಾಲುವುದಿಲ್ಲ. ಅದರಲ್ಲೂ ಡಿಸೆಂಬರ್- ಜನವರಿಯಲ್ಲಿ ಪ್ರತಿವರ್ಷ ‘ದುಬೈ ಶಾಪಿಂಗ್ ಫೆಸ್ಟಿವಲ್’ ಆಯೋಜನೆಯಾಗುತ್ತದೆ. ಕುಟುಂಬ ಸಮೇತ ಶಾಪಿಂಗ್ ಜತೆಗೆ ಮನರಂಜನೆ ಮಜಾ ಅನುಭವಿಸಲು ಸೂಕ್ತ ಸಮಯ.

ದುಬೈ ಎಂದಾಕ್ಷಣ ಕೈತುಂಬಾ ದುಡ್ಡಿಗಾಗಿ ದುಡಿಯುವ ದೇಶ ಎಂಬುದು ಎಲ್ಲರ ನಂಬಿಕೆ. ಆದರೆ, ಆರ್ಥಿಕ ಕುಸಿತದ ಬಳಿಕದ ಬದಲಾದ ವಾತಾವರಣದಲ್ಲಿ ವಸ್ತುಸ್ಥಿತಿ ಹಾಗಿಲ್ಲ ಎನ್ನುತ್ತಾರೆ ಟೆಂಪೋ ಟ್ರಾವೆಲರ್‌ ಚಾಲಕ, ಪಾಕಿಸ್ತಾನ ಪೇಶಾವರ ಮೂಲದ ಜರೀನ್‌.

ಅವರು 12 ವರ್ಷಗಳಿಂದ ದುಬೈನಲ್ಲಿ ದುಡಿಯುತ್ತಿದ್ದಾರೆ. ‘ತೈಲ ಉತ್ಪನ್ನಗಳಿಂದ ಕೊಲ್ಲಿ ರಾಷ್ಟ್ರಗಳು ಶ್ರೀಮಂತಿಕೆ ಕಾಣಲಾರಂಭಿಸಿದಾಗ ಇಲ್ಲಿ ಉದ್ಯೋಗಗಳು ಸೃಷ್ಟಿಯಾಗತೊಡಗಿತು. ಐಷಾರಾಮಿ ಬದುಕಿಗೆ ಬದಲಾಗತೊಡಗಿದ ಸ್ಥಳೀಯರು, ಸಣ್ಣಪುಟ್ಟ ಕೆಲಸಗಳಿಗೂ ಏಷ್ಯನ್ ರಾಷ್ಟ್ರಗಳ ಕಾರ್ಮಿಕರನ್ನು ಕರೆಸತೊಡಗಿದರು. ಉದ್ಯೋಗದ ಹೊಸ ಅವಕಾಶಗಳಿಗಾಗಿ ಹೊರದೇಶಗಳತ್ತ ಕಣ್ಣು ಹಾಯಿಸುತ್ತಿದ್ದಾಗ ಕೈಬೀಸಿ ಕರೆದದ್ದು ಇದೇ ದುಬೈ’ ಎಂದರು ಜರೀನ್‌.

‘ಹಣ ಗಳಿಕೆಯ ಕಷ್ಟ ಇಲ್ಲಿ ಕೆಲಸ ಮಾಡುವವರಿಗಷ್ಟೆ ಗೊತ್ತು. ದುಬಾರಿ ಜೀವನ ನಿರ್ವಹಣೆ ಮಾಡುತ್ತ ಅಷ್ಟೋ ಇಷ್ಟೋ ಉಳಿಸಿ ತವರಿಗೆ ಕಳುಹಿಸಲು ಒದ್ದಾಡಬೇಕು ಎನ್ನುತ್ತಾರೆ ದುಬೈ ಸುತ್ತಿಸಿದ ಜರೀನ್‌. ಉಳಿಸಿದ ಗಂಟನ್ನು ವರ್ಷಕ್ಕೊಮ್ಮೆ ತನ್ನೂರಿಗೆ ತೆಗೆದುಕೊಂಡು ಹೋಗುವ ಕಾರಣಕ್ಕಾಗಿ ದುಬೈ ಎಲ್ಲರಿಗೂ ಒಂದು ರೀತಿಯ ಕನಸಿನ ನಗರಿ. ಇಲ್ಲಿನ ಜೀವನಶೈಲಿಗೆ ತಕ್ಕಂತೆ ಹೊಂದಿಕೊಂಡರೆ ಸಮಸ್ಯೆಯೇನೂ ಇಲ್ಲ’ ಎಂದೂ ಹೇಳುತ್ತಾರೆ.

ಅದೇನೇ ಇದ್ದರೂ, ಒಂದಂತೂ ಸತ್ಯ, ಪ್ರವಾಸಿ ತಾಣಗಳ ಮೂಲಕವೇ ಆದಾಯದ ಬೊಕ್ಕಸ ತುಂಬಿಕೊಳ್ಳುತ್ತಿರುವ ಅರಬರ ಈ ದುಬಾರಿ ನಗರದ ಒಡಲೊಳಗೆ ಇಡೀ ‘ವಿಶ್ವ’ವೇ ಇದೆ. ಹೀಗಾಗಿ, ಜೀವನದಲ್ಲಿ ಒಮ್ಮೆ ಕಣ್ತುಂಬಿಕೊಳ್ಳಬೇಕಾದ ದೇಶಗಳಲ್ಲಿ ದುಬೈ ಕೂಡ ಒಂದು ಅನ್ನೋದರಲ್ಲಿ ಎರಡು ಮಾತಿಲ್ಲ!

ಅತಿದೊಡ್ಡ ಕಟ್ಟಡ ನಿರ್ಮಾಣ
ವಿಶ್ವದ ಅತಿ ದೊಡ್ಡ  ಕಟ್ಟಡ  ಬುರ್ಜ್ ಖಲೀಫಾವನ್ನೇ ಮೀರಿಸುವ ಕಟ್ಟಡ ದುಬೈನಲ್ಲಿ ತಲೆಎತ್ತುತ್ತಿದೆ. ಆ ಮೂಲಕ ಇಲ್ಲಿನ ಐಷಾರಾಮಿ ಜೀವನಕ್ಕೆ ಮತ್ತೊಂದು ಕಟ್ಟಡ ಸೇರ್ಪಡೆಯಾಗಲಿದೆ. ಬುರ್ಜ್ ಖಲೀಫಾ 828 ಮೀಟರ್ ಎತ್ತರವಿದೆ, ದುಬೈ ಕ್ರಿಕ್ ಹಾರ್ಬರ್ ಟವರ್ ಹೆಸರಿನ ಈ ಕಟ್ಟಡ 10 ಮೀಟರ್ ಹೆಚ್ಚು ಅಂದರೆ, 928 ಮೀಟರ್ ಎತ್ತರಕ್ಕೆ ನಿರ್ಮಾಣವಾಗಲಿದೆ.

ದುಬೈ ರಾಜ ಶೇಕ್ ಮೊಹಮ್ಮದ್ ಬಿನ್ ರಾಶೀದ್ ಅವರ ಮಹತ್ವದ ಯೋಜನೆಯಾಗಿರುವ ಹೊಸ ಕಟ್ಟಡ, 2020ರ ವೇಳೆಗೆ ಉದ್ಘಾಟನೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳು ಇರಲಿವೆ.

ಇಸ್ಲಾಮಿಕ್‌ ಶೈಲಿಯ ವಾಸ್ತುಶಿಲ್ಪ ಹೊಂದಿರುವ ‘ಬುರ್ಜ್‌ ಖಲೀಫಾ’ ರಾತ್ರಿಯಲ್ಲಂತೂ ಕಣ್ಣು ಕೋರೈಸುವಂತೆ ಬೆಳಗುತ್ತದೆ. ಮೇಲೆ ಹತ್ತುವ ಲಿಫ್ಟ್ ಹೋಗುವ ವೇಗ, ಎತ್ತರ ಗೊತ್ತಾಗುವುದು ತಲೆ ತಿರುಗಿದಾಗಲೇ.

ಕೆಳಗೆ ಬಂದರೆ ‘ದುಬೈ ಮಾಲ್‌’, ಬಣ್ಣ, ಬೆಳಕು, ಧ್ವನಿ, ಪಾಶ್ಚಾತ್ಯ-ಪೌರ್ವಾತ್ಯ ಸಮ್ಮಿಲನದಿಂದ ವಿಶ್ವದಲ್ಲೇ ಅತಿ ಎತ್ತರಕ್ಕೆ, 150 ಮೀಟರ್‌ ಚಿಮ್ಮುವ ಸಂಗೀತ ಕಾರಂಜಿ– ಮನಮೋಹಕ ನೋಟ.

ದುಬಾರಿ ನಗರದ ‘ದುಬೈ ಮಾಲ್’
ಈ ದುಬಾರಿ ನಗರದ ಆಕರ್ಷಣೆಗಳಲ್ಲೊಂದು ಈ ‘ದುಬೈ ಮಾಲ್‌’. 50 ಫುಟ್‌ಬಾಲ್ ಸ್ಟೇಡಿಯಂನಷ್ಟು ವಿಸ್ತಾರವಿರುವ ಈ ಮಾಲ್‌ನ ಸೂರಿನಡಿಯಲ್ಲಿ 1,600ಕ್ಕೂ ಹೆಚ್ಚು ಶಾಪಿಂಗ್ ಮಳಿಗೆಗಳು, 400ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿವೆ. ಒಳಭಾಗ ಪ್ರವೇಶಿಸುತ್ತಿದ್ದಂತೆ ವಿಶಿಷ್ಟ ಲೋಕದಲ್ಲಿರುವ ಅನುಭವ. ಇದರೊಳಗೆ ವಿಶ್ವದಲ್ಲೇ ಅತಿ ದೊಡ್ಡ ಅಕ್ವೇರಿಯಂ ಇದೆ. ಒಳಗೆ 200ರಿಂದ 300 ಕಿಲೋ ತೂಕದ ಶಾರ್ಕ್‌ಗಳೂ ಸೇರಿ 33,000ಕ್ಕೂ ಹೆಚ್ಚು ಪ್ರಬೇದಗಳ ಜಲಚರಗಳಿವೆ. ವೀಕ್ಷಿಸುವುದೇ ಚಂದ.

ಜನನಿಬಿಡ ವಿಮಾನ ನಿಲ್ದಾಣ
‘ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆ ಹೊಂದಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2017ರಲ್ಲಿ 8.82 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪ್ರಸಕ್ತ ವರ್ಷ ಈ ನಿಲ್ದಾಣ (2018) 9.03 ಕೋಟಿ ಪ್ರಯಾಣಿಕರ ನಿರೀಕ್ಷೆ ಹೊಂದಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜನನಿಬಿಡತೆ ವಿಷಯದಲ್ಲಿ 2014ರಲ್ಲಿ ಮೊದಲ ಬಾರಿಗೆ ಲಂಡನ್‌ ಹೀಥ್ರೂ ವಿಮಾನ ನಿಲ್ದಾಣವನ್ನು ಹಿಂದೆ ಹಾಕಿದ್ದ ದುಬೈ ವಿಮಾನ ನಿಲ್ದಾಣ, ಅಲ್ಲಿಂದೀಚೆಗೆ ಮೊದಲ ಸ್ಥಾನ ಉಳಿಸಿಕೊಂಡು ಬಂದಿದೆ. 2016ರಲ್ಲಿ 8.36 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು. ದುಬೈಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಭಾರತೀಯರೇ ಹೆಚ್ಚು.

2017ರಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ. ಈ ಅವಧಿಯಲ್ಲಿ 2.1 ದಶಲಕ್ಷ ಭಾರತೀಯರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ದುಬೈ ಪ್ರವಾಸೋದ್ಯಮ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

ಮರುಳುಗೊಳಿಸುವ ಚಿನ್ನ!
ದುಬೈ ಎಂದಾಕ್ಷಣ ಕಣ್ಣ ಮುಂದೆ ಮಿಂಚಿ ಮಾಯವಾಗೋದು ಚಿನ್ನ. ಹಳೇ ದುಬೈನಲ್ಲಿನ ‘ಗೋಲ್ಡ್ ಸ್ಟ್ರೀಟ್’ ನೋಡಿದಾಗ ಫಕ್ಕನೆ ನೆನಪಾಗುವುದು ಬೆಂಗಳೂರಿನ ‘ಚಿಕ್ಕಪೇಟೆ‘. ಅಲ್ಲಿ ಚಿನ್ನದ ಮಳಿಗೆ; ಇಲ್ಲಿ ವಸ್ತ್ರ ಮಳಿಗೆ ಅಷ್ಟೆ ವ್ಯತ್ಯಾಸ!

ಇಲ್ಲಿ ‘ಹಳದಿ ಲೋಹ’ ಚಿನ್ನ ಖರೀದಿಸುವುದೆಂದರೆ ಒಂದು ರೀತಿಯ ಹಬ್ಬ. ಆದರೂ ಹುಷಾರಾಗಿರಬೇಕು. ಮೋಸ ಮಾಡುವವರು ಇಲ್ಲೂ ಇದ್ದಾರೆ ಎನ್ನುತ್ತಾರೆ ಚಿನ್ನದ ಮಳಿಗೆಯೊಂದರ ನೌಕರ ಕೇರಳ ಮೂಲದ ಮಣಿಕಂಠನ್‌. ಹಾಗೆಂದು, ದುಬೈನಲ್ಲಿ ಚಿನ್ನವೇನೂ ಅಗ್ಗವಲ್ಲ.

ಅದರೆ, ‘ಪ್ಯೂರಿಟಿ’ ವಿಷಯದಲ್ಲಿ ಪ್ರಶ್ನಾತೀತ.
ದುಬೈ ಫರ್ಪ್ಯೂಮ್‌ಗಳು ಭಾರಿ ಫೇಮಸ್. ಇಲ್ಲಿನ ವಾಚ್‌ಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಒಣ ಹಣ್ಣುಗಳು, ಚಾಕೋಲೆಟ್‌ಗಳು ತುಂಬ ಅಗ್ಗ. ಅರಬ್ ಮಹಿಳೆಯರು ಅಲಂಕಾರ ಪ್ರಿಯರು. ಹೀಗಾಗಿ ಮೇಕಪ್‌ ಕಿಟ್‌ಗಳು ಬೀದಿಬದಿ ಲಭ್ಯ. ಮುತ್ತಿನ ಸರಗಳು, ನವನವೀನ ವಿನ್ಯಾಸದ ಆಭರಣಗಳು ಮನಸ್ಸನ್ನು ಆಕರ್ಷಿಸುತ್ತವೆ.

ಸ್ವಚ್ಛತೆ– ಸುರಕ್ಷತೆ; ವಿಶ್ವಕ್ಕೇ ಮಾದರಿ
ಇಲ್ಲಿ ಅಲ್ಲಲ್ಲಿ ಪೊಲೀಸರಿಲ್ಲ. ಭದ್ರತಾ ಸಿಬ್ಬಂದಿ ಸುಳಿವೂ ಇಲ್ಲ. ಹಾಗೆಂದು, ಯಾರ ನಿಯಂತ್ರಣವೂ ಇಲ್ಲವೆಂದಲ್ಲ. ಇಡೀ ನಗರ ಸಿಸಿಟಿವಿ ಕ್ಯಾಮೆರಾ ನಿಯಂತ್ರಣದಲ್ಲಿದೆ.

ರಸ್ತೆಗಳಲ್ಲಿ ಪಿಚಕ್‌ ಎಂದು ಉಗಿಯುವಂತಿಲ್ಲ. ಹ್ಹಾ... ಎಲೆ ಅಡಿಕೆ, ಪಾನ್ ಯಾವುದೂ ಇಲ್ಲಿ ದೊರೆಯುವುದು ಕಷ್ಟ ಬಿಡಿ. ಕಾನೂನು ವಿಷಯದಲ್ಲಂತೂ ದುಬೈ ಸರ್ಕಾರದ ನೀತಿ ಅನುಕರಣೀಯ. ದೇಶ, ಧರ್ಮ, ಜಾತಿ ತಾರತಮ್ಯ ಇಲ್ಲ. ಎಲ್ಲರಿಗೂ ಒಂದೇ. ಎಲ್ಲರ ಬಳಿಯೂ ಕಾರುಗಳಿವೆ. ರಸ್ತೆ ನಿಯಮ ಉಲ್ಲಂಘಿಸಿದರೆ ಭರ್ಜರಿ ದಂಡ. ತಪ್ಪು ಮರುಕಳಿಸಿದರೆ ಚಾಲನಾ ಪರವಾನಗಿಯೇ ರದ್ದು. ರಸ್ತೆ ದಾಟುವಾಗ ಸಿಗ್ನಲ್ ದೀಪಗಳ ಮೇಲಿನ ಗಮನ ತಪ್ಪಿದರೆ ದಂಡ ನಿಶ್ಚಿತ. ಕಳವು, ದರೋಡೆ, ಕೊಲೆ ಪ್ರಕರಣಗಳು ಇಲ್ಲ ಅಥವಾ ಅತೀ ಕಡಿಮೆ ಎನ್ನಬಹುದು. ಇದಕ್ಕೆಲ್ಲ ಕಾರಣ ಇಲ್ಲಿನ ಕಠಿಣ ಕಾನೂನು.
‘ಪೆಟ್ರೋಲ್ ಬಿಟ್ಟರೆ ಉಳಿದೆಲ್ಲವೂ ದುಬಾರಿಯೇ. ಸಾಮಾನ್ಯ ಮನೆಗೆ 3,000 ದಿರ‍್ಹಂ. ಅಂದರೆ, ನಮ್ಮ ₹ 50,000 ತಿಂಗಳ ಬಾಡಿಗೆ. ಒಳ್ಳೆಯ ಉದ್ಯೋಗಕ್ಕೆ 5,000ದಿಂದ 6,000 ದಿರ‍್ಹಂ ಸಂಬಳ ಸಿಕ್ಕೇ ಸಿಗುತ್ತದೆ ಎಂದರು ದುಬೈನಲ್ಲಿ ಯುಎಇ ಎಕ್ಸ್‌ಚೇಂಜ್‌ನ ಸಿಬ್ಬಂದಿ ಕಾಸರಗೋಡಿನ ವಾಸು ಬಾಯಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT