ಭಾನುವಾರ, ಸೆಪ್ಟೆಂಬರ್ 26, 2021
21 °C
ಬದಲಾಗುತ್ತಿದೆ ಓದುಗರ ಅಭಿರುಚಿ

ಓದುವ ಕಾಲ ಓಡುತ್ತಿದೆ, ಕೇಳುವ ಕಾಲ ಬರುತ್ತಿದೆ

ಅಲೆಕ್ಸಾಂಡರ್ ಆಲ್ಟರ್ Updated:

ಅಕ್ಷರ ಗಾತ್ರ : | |

ಓದುವ ಕಾಲ ಓಡುತ್ತಿದೆ, ಕೇಳುವ ಕಾಲ ಬರುತ್ತಿದೆ

ಅಮೆರಿಕದ ಜನಪ್ರಿಯ ಲೇಖಕ ಮೈಕೆಲ್ ಲಿವೀಸ್ ಈಚೆಗೆ ತೆಗೆದುಕೊಂಡ ಒಂದು ನಿರ್ಧಾರ ಜಗತ್ತಿನ ಓದುಗ ವಲಯದಲ್ಲಿ ಸಂಚಲನ ಸೃಷ್ಟಿಸಿತು. ವರ್ಷಾನುಗಟ್ಟಲೆ ತೊಡಗಿಸಿಕೊಳ್ಳಬೇಕಾಗುವ ಯಾವುದಾದರೂ ಪ್ರಾಜೆಕ್ಟ್ ಅಂತಿಮಗೊಳಿಸಿಕೊಳ್ಳುವ ಮೊದಲು ಅವರು ಒಂದು ಲೇಖನವನ್ನು ಪತ್ರಿಕೆಗೆ ಕಳಿಸಿ ಅದು ಉಂಟು ಮಾಡುವ ಪರಿಣಾಮ ಪರಿಶೀಲಿಸುವುದು ವಾಡಿಕೆ. ಹೀಗೆ ಸಿದ್ಧಪಡಿಸಿದ ಲೇಖನವನ್ನು ಅವರು ಈ ಬಾರಿ ಪತ್ರಿಕೆಗೆ ಕಳಿಸಲಿಲ್ಲ.

ಆದರೆ ಈ ಬಾರಿ ಅವರು ತಮ್ಮ ವಾಡಿಕೆಯ ಹಾದಿಯನ್ನು ಬಿಟ್ಟು ಬೇರೆ ದಾರಿ ತುಳಿದರು. ತಮ್ಮ ಸ್ಟೋರಿಯನ್ನು ‘ವ್ಯಾನಿಟಿ ಫೇರ್’ ನಿಯತಕಾಲಿಕೆಗೆ ಕಳಿಸುವ ಬದಲು ‘ಆಡಿಬಲ್’ (Audible) ಹೆಸರಿನ ಕೇಳುಪುಸ್ತಕ (AudioBook) ಪ್ರಕಾಶನ ಸಂಸ್ಥೆಗೆ ಮಾರಿದರು. ‘ನಿಮಗೆ ನನ್ನ ಪುಸ್ತಕವನ್ನು ಓದಲು ಆಗದು. ನೀವು ಅದನ್ನು ಕೇಳಬಹುದು ಅಷ್ಟೇ. ನಾನು ‘ಆಡಿಬಲ್‌’ನ ಮೊದಲ ವರದಿಗಾರ’ ಎನ್ನುವುದು ಅವರ ಹೆಮ್ಮೆ.

ವಿಶ್ವದ ಅತ್ಯುತ್ತಮ ನಾನ್ ಫಿಕ್ಷನ್ ಬರಹಗಾರರಲ್ಲಿ ಒಬ್ಬರಾದ ಲಿವೀಸ್ ಪ್ರಸ್ತುತ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ಇದು ಚರ್ಚಾರ್ಹ ವಿಷಯ ಎಂಬ ಮಾತು ಒತ್ತಟ್ಟಿಗಿರಲಿ, ಅವರು ಬರೆದ ಪುಸ್ತಕಗಳ ಒಂದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತವೆ. ‘ಆಡಿಬಲ್’ ಮೂಲಕ ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯ ಎನ್ನುವುದು ಲಿವೀಸ್ ಅವರ ನಿರೀಕ್ಷೆ. ನಾಲ್ಕು ಹೊಸ ಲೇಖನಗಳನ್ನು ಕೇಳುಪುಸ್ತಕ ಮಾದರಿಯಲ್ಲಿ ಪ್ರಕಟಿಸುವ ಕುರಿತು ಅವರು ‘ಆಡಿಬಲ್’ ಜೊತೆಗೆ ಈಚೆಗಷ್ಟೇ ಒಪ್ಪಂದ ಮಾಡಿಕೊಂಡರು.

ಲಿವೀಸ್ ಅವರಂತೆ ಮುದ್ರಣ ಮಾಧ್ಯಮದಿಂದ ಹೊರಬಂದು ಕೇಳುಪುಸ್ತಕ ಪರಿಕಲ್ಪನೆಗೆ ಒಗ್ಗಿಕೊಳ್ಳುತ್ತಿರುವ ಲೇಖಕರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನಪ್ರಿಯ ಇತಿಹಾಸಕಾರ ರಾಬರ್ಟ್ ಕಾರೆ ಮತ್ತು ಕಾದಂಬರಿಕಾರ ಜೆಫ್ರಿ ಡೀವರ್ ಸೇರಿದಂತೆ ಹಲವು ಬರಹಗಾರರೊಡನೆ ನೇರ ಸಂಪರ್ಕ ಸಾಧಿಸಲು ‘ಆಡಿಬಲ್’ ಕಂಪನಿಯು ಯಶಸ್ವಿಯಾಗಿದೆ. ನಿಧಾನವಾಗಿ ವಿಸ್ತಾರಗೊಳ್ಳುತ್ತಿರುವ ಕೇಳುಪುಸ್ತಕ ಮಾರುಕಟ್ಟೆಯು ಲಾಭ ಪಡೆದುಕೊಳ್ಳುವ ಆಶಯವೂ ಇಂಥ ಲೇಖಕರಲ್ಲಿ ಕಂಡು ಬರುತ್ತಿದೆ. ಮುದ್ರಿತ ಪುಸ್ತಕಗಳನ್ನು ಕೇಳುಪುಸ್ತಕಗಳಿಗೆ ಹೋಲಿಸುವುದು ಸರಿಯಲ್ಲ. ಕೇಳುಪುಸ್ತಕವನ್ನು ಸ್ವತಂತ್ರ ಸೃಜನಶೀಲ ಪ್ರಕಾರ ಎಂದೇ ಪರಿಗಣಿಸಬೇಕು. ಆದರೆ, ಕೇಳುಪುಸ್ತಕಗಳ ಜನಪ್ರಿಯತೆಯು ಮಾತ್ರ ಸಾಂಪ್ರದಾಯಿಕ ಮುದ್ರಿತ ಪುಸ್ತಕಗಳನ್ನೇ ನೆಚ್ಚಿಕೊಂಡಿದ್ದ ಪ್ರಕಾಶಕರಿಗೆ ನಡುಕ ಹುಟ್ಟಿಸಿರುವುದು ನಿಜ.

ಪ್ರಕಾಶನ ಉದ್ಯಮದಲ್ಲಿ ಬಹುಕಾಲದಿಂದ ಅಸ್ತಿತ್ವದಲ್ಲಿದ್ದ ಈ ಪ್ರಕಾರವನ್ನು ಬಹುಕಾಲದವರೆಗೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಡಿಜಿಟಲ್ ಕ್ರಾಂತಿಯಿಂದಾಗಿ ಭೌತಿಕ ರೂಪದ ಪುಸ್ತಕಗಳ ಜೊತೆಜೊತೆಗೆ ಇ–ಪುಸ್ತಕಗಳು ಪ್ರವರ್ಧಮಾನಕ್ಕೆ ಬಂದವು. ಆದರೆ ಇದೀಗ ಮುದ್ರಿತ ಪುಸ್ತಕಗಳ ಬೇಡಿಕೆ ಕಡಿಮೆಯಾಗುತ್ತಿದೆ. ಕೇಳುಪುಸ್ತಕಗಳು ಬೇಡಿಕೆ ಕುದುರಿಸಿಕೊಳ್ಳುತ್ತಿವೆ. ಕಳೆದ ಐದು ವರ್ಷಗಳಲ್ಲಿ ಕೇಳುಪುಸ್ತಕ ಪ್ರಕಾಶನದ ವಹಿವಾಟು ತ್ರಿಗುಣಗೊಂಡಿರುವುದನ್ನು ಅಮೆರಿಕದ ಪ್ರಕಾಶಕರ ಒಕ್ಕೂಟದ ಅಂಕಿಸಂಖ್ಯೆಗಳು ತೋರಿಸುತ್ತವೆ.

ಈ ಬೆಳವಣಿಗೆಯು ಆಡಿಯೊ ಹಕ್ಕುಗಳ ಬಗ್ಗೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ಪುಸ್ತಕ ಪ್ರಕಟಣೆ ಉದ್ಯಮದಲ್ಲಿ ಬಹುಕಾಲದಿಂದ ಇರುವ ಪ್ರಕಾಶಕರು ತಮ್ಮ ಸ್ವಂತ ಕೇಳುಪುಸ್ತಕಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಯತ್ನಿಸುತ್ತಿದ್ದಾರೆ. ಇದು ‘ಆಡಿಬಲ್‌’ನ ಮಾರುಕಟ್ಟೆ ವಿಸ್ತರಣೆ ಮಹತ್ವಾಕಾಂಕ್ಷೆಗೆ ತೊಡಕು ಒಡ್ಡಿದೆ. ಪ್ರಕಾಶನ ಉದ್ಯಮದ ಆಶಾಕಿರಣ ಎಂದೇ ವ್ಯಾಖ್ಯಾನಿಸುತ್ತಿರುವ ಕೇಳುಪುಸ್ತಕ ಜಗತ್ತಿನಲ್ಲಿ ಏಕಸ್ವಾಮ್ಯ ಸಾಧಿಸಲು ಹಲವು ಕಂಪನಿಗಳು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗುತ್ತಿವೆ. ಈ ಬೆಳವಣಿಯು ಪ್ರಕಾಶನ ಉದ್ಯಮದ ರೂಪುರೇಷೆಯನ್ನು ಬದಲಿಸಬಲ್ಲದು. ದಶಕದ ಹಿಂದೆ ಇ–ಪುಸ್ತಕಗಳು ಇಂಥ ಬೆಳವಣಿಗೆಗೆ ಕಾರಣವಾಗಿದ್ದವು. ಆದರೆ ಈಗ ಕಾಲ ಬದಲಾಗಿದೆ. ಆಡಿಯೊ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಕಾಶನ ಸಂಸ್ಥೆಗಳು ಲೇಖಕರ ಜೊತೆಗೆ ನೇರ ಒಪ್ಪಂದ ಮಾಡಿಕೊಳ್ಳುತ್ತಿವೆ.


ನ್ಯೂಯಾರ್ಕ್‌ನ ‘ಆಡಿಬಲ್’ ಸ್ಟುಡಿಯೊದಲ್ಲಿ ಅಮೆರಿಕದ ಲೇಖಕಿ ಅದಾ ಕಲ್ಹುನ್ ತನ್ನ ಕೃತಿಯ ರೆಕಾರ್ಡ್ ಮಾಡಿದರು. ಅಮೆರಿಕದ ಹಲವು ಜನಪ್ರಿಯ ಲೇಖಕರು ಕೇಳುಪುಸ್ತಕಕ್ಕೆ ಹೊರಳಿಕೊಳ್ಳುತ್ತಿದ್ದಾರೆ

ತನ್ನ ಆನ್‌ಲೈನ್ ಸ್ಟೋರ್‌ನಲ್ಲಿ 4.25 ಲಕ್ಷಕ್ಕೂ ಹೆಚ್ಚು ಕೇಳುಪುಸ್ತಕಗಳನ್ನು ಹೊಂದಿರುವ ‘ಆಡಿಬಲ್’ ಈ ಕಿಕ್ಕಿರಿದ ಕ್ಷೇತ್ರದಲ್ಲಿ ಸಾಕಷ್ಟು ಅನುಕೂಲಗಳನ್ನು ಹೊಂದಿದೆ. ಇದೀಗ ಅಮೆಜಾನ್ ಸಹ ಕೇಳುಪುಸ್ತಕಗಳನ್ನು ಮುಂಚೂಣಿಗೆ ತರಲು ಯತ್ನಿಸುತ್ತಿದೆ. ‘ಆಡಿಬಲ್‌’ಗೆ ಒಂದು ತಿಂಗಳ ಉಚಿತ ಸದಸ್ಯತ್ವದ ಆಮಿಷವನ್ನೂ ಅಮೆಜಾನ್ ಒಡ್ಡಿದೆ. ಪ್ರಸ್ತುತ ‘ಆಡಿಬಲ್‌’ನ ಒಂದು ತಿಂಗಳ ಸದಸ್ಯತ್ವ ಶುಲ್ಕ ₹1027 (15 ಡಾಲರ್). ಇದರ ಜೊತೆಗೆ ತಿಂಗಳಿಗೆ ಒಂದು ಕೇಳುಪುಸ್ತಕವನ್ನು ಉಚಿತವಾಗಿ ಕೊಡಲಾಗುತ್ತದೆ. ಕೇಳುಪುಸ್ತಕದ ಬೆಲೆಯು ಸಾಮಾನ್ಯವಾಗಿ ₹1000ದಿಂದ ₹2700ರವರೆಗೂ ಇರುತ್ತದೆ. ಈ ಮೊದಲು ಕೇವಲ ಕೇಳುಪುಸ್ತಕ ಮಾರಾಟಕ್ಕೆ ಗಮನ ಕೊಡುತ್ತಿದ್ದ ‘ಆಡಿಬಲ್’ ಇದೀಗ ನೇರವಾಗಿ ಬರಹಗಾರರನ್ನು ಸಂಪರ್ಕಿಸಿ ಕೇಳುಪುಸ್ತಕಗಳನ್ನು ಸ್ವತಂತ್ರವಾಗಿ ರೂಪಿಸಲು ಯತ್ನಿಸುತ್ತಿದೆ. ಈ ಮೂಲಕ ಲಾಭದ ಪ್ರಮಾಣ ವೃದ್ಧಿಸಿಕೊಳ್ಳುವ ಕನಸು ಹೆಣೆದಿದೆ.

‘ಇ–ಪುಸ್ತಕ ಮಾರುಕಟ್ಟೆಗಿಂತಲೂ ಡಿಜಿಟಲ್ ಆಡಿಯೊ ಮಾರುಕಟ್ಟೆಯಲ್ಲಿ ಅಮೆಜಾನ್‌ ಸ್ಪಷ್ಟ ಮೇಲುಗೈ ಸಾಧಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸ್ಪರ್ಧೆ ಒಡ್ಡುವವರು ಯಾರೂ ಕಾಣಿಸುತ್ತಿಲ್ಲ’ ಎನ್ನುತ್ತಾರೆ ಪ್ರಕಾಶನ ಉದ್ಯಮದ ವಿಶ್ಲೇಷಕ ಮೈಕೆಲ್ ಕೆಡರ್. ಕೇಳುಪುಸ್ತಕಗಳಿಗೆ ಗ್ರಾಹಕರ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿಯೇ ‘ಆಡಿಬಲ್’ ಮೂಲ ಕೃತಿಗಳಲ್ಲಿ ಹೆಚ್ಚು ಬಂಡವಾಳ ಹೂಡಲು ಮುಂದಾಗುತ್ತಿದೆ. ಓದುವುದಕ್ಕೆಂದು ಸಿದ್ಧವಾದ ಪುಸ್ತಕಗಳಿಗಿಂತಲೂ ಕೇಳುವುದಕ್ಕೆಂದೇ ಸಿದ್ಧವಾದ ಕೃತಿಗಳನ್ನು ರೂಪಿಸಲು ‘ಆಡಿಬಲ್’ ಈಗ ಶ್ರಮಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 77 ಮೂಲ ಆಡಿಯೊ ಕೃತಿಗಳನ್ನು ಬಿಡುಗಡೆ ಮಾಡಿದೆ. 150ಕ್ಕೂ ಹೆಚ್ಚು ಕೃತಿಗಳು ನಿರ್ಮಾಣದ ವಿವಿಧ ಹಂತದಲ್ಲಿವೆ.

ಮೂಲಕೃತಿಗಳನ್ನು ಸಿದ್ಧಪಡಿಸುವ ತನ್ನ ಪ್ರಯತ್ನದ ಭಾಗವಾಗಿ ‘ಆಡಿಬಲ್’ ಇದೀಗ ಒಂದು ಮತ್ತು ಎರಡು ಪಾತ್ರಗಳಿರುವ ನಾಟಕಗಳನ್ನು ರಚಿಸಲು 15 ಉದಯೋನ್ಮುಖ ನಾಟಕಕಾರರಿಗೆ ಅನುದಾನ ನೀಡಿದೆ. ಕಳೆದ ಮೇ ತಿಂಗಳಲ್ಲಿ ನಟಿ ರೀಸ್ ವಿದರ್‌ಸ್ಪೂನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ‘ಕೇಳು ಪುಸ್ತಕಗಳ ಹೊಸ ಸಾಧ್ಯತೆಗಳನ್ನು ಇದೀಗ ಬೆಳೆಸುತ್ತಿದ್ದೇವೆ. ಹಿಂದೆ ಇದು ಪೂರ್ಣಪ್ರಮಾಣದ ಮಾಧ್ಯಮ ವಿಭಾಗ ಆಗಿರಲಿಲ್ಲ. ಪುಸ್ತಕ ಪ್ರಕಟಣೆಯಲ್ಲಿ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ’ ಎನ್ನುತ್ತಾರೆ ಆಡಿಬಲ್‌ನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡೊನಾಲ್ಡ್ ಕಾಟ್ಜ್.

ಹಲವು ದಶಕಗಳ ಕಾಲ ಕೇಳುಪುಸ್ತಕ ಮಾರುಕಟ್ಟೆಯನ್ನು ಭೌತಿಕ ಮಿತಿಗಳು ಕಾಡುತ್ತಿದ್ದವು. ರೆಕಾರ್ಡ್‌ ಆದ ದನಿಯನ್ನು ಕೇಳಲು ಇಚ್ಛಿಸುವವರು ಕ್ಯಾಸೆಟ್‌, ಸಿ.ಡಿ.ಗಳ ಜೊತೆಗೆ ಪ್ಲೇಯರ್‌ಗಳನ್ನೂ ಹೊತ್ತೊಯ್ಯಬೇಕಾಗುತ್ತಿತ್ತು. ಪುಸ್ತಕದ ಅಂಗಡಿಗಳಲ್ಲಿಯೂ ಇಂಥ ಉತ್ಪನ್ನಗಳಿಗಾಗಿ ಹೆಚ್ಚು ಸ್ಥಳಾವಕಾಶವೂ ಇರುತ್ತಿರಲಿಲ್ಲ. ದನಿಗೆ ಎಂದಿನಿಂದ ಡಿಜಿಟಲ್ ಸ್ಪರ್ಶ ಸಿಕ್ಕಿತೋ, ಅಂದಿನಿಂದ ಎಲ್ಲವೂ ಬದಲಾಯಿತು. ನಮ್ಮ ಕಿಸೆಯಲ್ಲಿರುವ ಮೊಬೈಲ್‌ಗಳು ಈಗ ಕೇಳುಪುಸ್ತಕಗಳನ್ನು ಪ್ಲೇ ಮಾಡಬಲ್ಲವು.

ಓದಲು ಸಮಯವೇ ಇಲ್ಲ ಎಂದುಕೊಳ್ಳುವವರು ಈಗ ಸಂಚರಿಸುವಾಗ, ವ್ಯಾಯಾಮ ಮಾಡುವಾಗ ಅಥವಾ ಮನೆ ಕೆಲಸಗಳನ್ನು ಮಾಡುವಾಗ ಪುಸ್ತಕ ಕೇಳುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. 2016ರಲ್ಲಿ ಒಟ್ಟು 9 ಕೋಟಿ ಕೇಳುಪುಸ್ತಕಗಳು ಮಾರಾಟವಾಗಿವೆ. 2012ರಲ್ಲಿ ಈ ಸಂಖ್ಯೆ ಕೇವಲ 4.2 ಕೋಟಿ ಇತ್ತು. ಕೇಳುಪುಸ್ತಕದ ಜಾಗತಿಕ ವಹಿವಾಟು ಈಗ 2.1 ಶತಕೋಟಿ ಡಾಲರ್‌ ಮುಟ್ಟಿದೆ. ಕೇಳುಪುಸ್ತಕಗಳನ್ನು ಉತ್ಪಾದನೆಯೂ ಇದೀಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಉತ್ತಮ ಗುಣಮಟ್ಟದ ರೆಕಾರ್ಡಿಂಗ್‌ಗಾಗಿ ಪ್ರೊಡಕ್ಷನ್ ಸ್ಟುಡಿಯೊಗಳನ್ನು ಸ್ಥಾಪಿಸಲು ಪ್ರಕಾಶಕರು ಮುಂದಾಗುತ್ತಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಹ್ಯಾಚೆ ಕಂಪನಿಯು ಕೇಳುಪುಸ್ತಕ ನಿರ್ಮಾಣದ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಈ ವರ್ಷ ಒಟ್ಟು 700 ಕೇಳುಪುಸ್ತಕಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಕಂಪನಿಯು 2014ರಲ್ಲಿ 652 ಕೇಳುಪುಸ್ತಕ ಪ್ರಕಟಿಸಿತ್ತು. ಈ ವರ್ಷ 1,200 ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿದೆ. ಪ್ರಸ್ತುತ ಪೆಂಗ್ವಿನ್ 15 ರೆಕಾರ್ಡಿಂಗ್ ಸ್ಟುಡಿಯೊಗಳನ್ನು ಹೊಂದಿದೆ. ಮ್ಯಾಕ್‌ಮಿಲನ್ ಕಂಪನಿಯು 470 ಕೇಳುಪುಸ್ತಕ ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ46ರಷ್ಟು ಹೆಚ್ಚು. ಜೇಮ್ಸ್ ಕಾಮಿಯೊ ಅವರ ‘ದಿ ಹೈಯರ್ ಲಾಯಲ್ಟಿ’ (1.67 ಲಕ್ಷ ಪ್ರತಿ) ಮತ್ತು ಮೈಕೆಲ್ ವೂಲ್ಫ್ ಅವರ ‘ಫೈರ್ ಅಂಡ್ ಫ್ಯುರಿ’ (3.20 ಲಕ್ಷ ಪ್ರತಿ) ಮ್ಯಾಕ್‌ಮಿಲನ್ ಕಂಪನಿಯ ಸೂಪರ್‌ಹಿಟ್‌ ಕೇಳುಪುಸ್ತಕಗಳು ಎನಿಸಿಕೊಂಡಿವೆ.

 


ನ್ಯೂಯಾರ್ಕ್‌ನಲ್ಲಿರುವ ‘ಆಡಿಬಲ್‌’ನ ರೆಕಾರ್ಡಿಂಗ್‌ ಬೂತ್‌ನಲ್ಲಿ ಪುಸ್ತಕವನ್ನು ರೆಕಾರ್ಡ್ ಮಾಡುತ್ತಿರುವ ನಿರೂಪಕಿ ಬೈಲಿ ಕಾರ್

ಮೊದಲ ಹೆಜ್ಜೆ ಇಡುವ ಪ್ರಯತ್ನ

ಪ್ರಕಾಶನ ಸಂಸ್ಥೆಗಳು ಕೇಳುಪುಸ್ತಕದ ಹಕ್ಕುಸ್ವಾಮ್ಯ ವಿಚಾರದಲ್ಲಿ ಹೆಚ್ಚು ಜಾಗರೂಕವಾದ ನಂತರ ‘ಆಡಿಬಲ್’ ನೇರವಾಗಿ ಏಜೆಂಟ್‌ಗಳು ಮತ್ತು ಲೇಖಕರನ್ನು ಸಂಪರ್ಕಿಸುವ ಪರಿಪಾಠ ಬೆಳೆಸಿಕೊಂಡಿತು. ಈಗ ಲೇಖಕರು ಕಳಿಸುವ ಪುಸ್ತಕ ಪ್ರಸ್ತಾವನೆಗಳು ಪ್ರಕಾಶನ ಸಂಸ್ಥೆಗಳನ್ನು ತಲುಪುವ ಮೊದಲೇ ‘ಆಡಿಬಲ್’ ಕೇಳುಪುಸ್ತಕದ ಹಕ್ಕುಸ್ವಾಮ್ಯ ಖರೀದಿಸುತ್ತಿದೆ.

ದೊಡ್ಡ ಪುಸ್ತಕಗಳ ಕೇಳುಪುಸ್ತಕ ಹಕ್ಕು ಖರೀದಿಸಲು ‘ಆಡಿಬಲ್’ ಸಣ್ಣಸಣ್ಣ ಕಂಪನಿಗಳೊಂದಿಗೆ ಸಹಕಾರ ಪಡೆದುಕೊಳ್ಳುತ್ತಿದೆ. ಕಳೆದ ವರ್ಷ ಹಟನ್ ಮಿಫ್ಲಿನ್ ಹರ್‌ಕೋರ್ಟ್‌ ಪ್ರಕಾಶನ ಸಂಸ್ಥೆಯ ಜೊತೆಗೂಡಿದ ‘ಆಡಿಬಲ್’ ಆಡ್ರಿನೆ ಬ್ರಾಡ್ಯೂರ್ ಅವರ ಆತ್ಮಚರಿತ್ರೆಯ ಕೇಳುಪುಸ್ತಕದ ಹಕ್ಕು ಖರೀದಿಸಿತು. 14 ಪ್ರಕಾಶನ ಸಂಸ್ಥೆಗಳು ಪಾಲ್ಗೊಂಡಿದ್ದ ಹಕ್ಕುಸ್ವಾಮ್ಯ ಹರಾಜಿನಲ್ಲಿ ಭಾರಿ ಮೊತ್ತ ತೆತ್ತು ಕೇಳುಪುಸ್ತಕದ ಹಕ್ಕನ್ನು ‘ಆಡಿಬಲ್’ ಖರೀದಿಸಿತು. ಇದೀಗ ‘ಆಡಿಬಲ್’ ಮತ್ತು ಹಟನ್ ಮಿಫ್ಲಿನ್ ಜಂಟಿಯಾಗಿ ಒಲಿಂಪಿಕ್ ಸ್ನೋಬೋರ್ಡರ್ ಶಾನ್ ವೈಟ್ ಅವರ ಆತ್ಮಚರಿತ್ರೆಯ ಹಕ್ಕು ಖರೀದಿಸಿವೆ. ಈ ಪುಸ್ತಕ ಮುದ್ರಣ ರೂಪದಲ್ಲಿ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆ ಒಂದು ತಿಂಗಳು ಮೊದಲು ಕೇಳುಪುಸ್ತಕ ಮಾರುಕಟ್ಟೆಗೆ ಬರಲಿದೆ.

‘ಕೇಳು ಪುಸ್ತಕಗಳು ಮುದ್ರಿತ ಪುಸ್ತಕಗಳ ಮಾರಾಟವನ್ನು ಹೆಚ್ಚಿಸುತ್ತದೆ. ಕಡಿವಾಣ ಹಾಕುವುದಿಲ್ಲ’ ಎಂದು ಎಚ್‌ಎಂಎಚ್ ಟ್ರೇಡ್ ಪಬ್ಲಿಷಿಂಗ್ ಕಂಪನಿಯ ಅಧ್ಯಕ್ಷರಾದ ಎಲೆನ್ ಆರ್ಚರ್ ಅಭಿಪ್ರಾಯಪಡುತ್ತಾರೆ. ‘ಕೇಳುಪುಸ್ತಕದ ಪ್ರಚಾರಕ್ಕಾಗಿ ಅವರು ನಡೆಸುವ ಚಟುವಟಿಕೆಗಳು ಮುದ್ರಿತ ಆವೃತ್ತಿಯ ಜನಪ್ರಿಯತೆಯನ್ನು ಹೆಚ್ಚಿಸುತ್ತವೆ’ ಎನ್ನುತ್ತಾರೆ ಅವರು.

‘ಮುದ್ರಣ ಪುಸ್ತಕಗಳ ಮೂಲಕ ಜನಪ್ರಿಯತೆ ಗಳಿಸಿದ ಲೇಖಕರನ್ನು ಕೇಳುಪುಸ್ತಕಗಳಿಗೆ ಒಪ್ಪಿಸುವುದು ದೊಡ್ಡ ಸವಾಲು. ಕೇಳುಪುಸ್ತಕಗಳ ಜಗತ್ತು ಇನ್ನೂ ವಿಕಸನಗೊಳ್ಳುತ್ತಿದೆ’ ಎನ್ನುತ್ತಾರೆ ‘ಆಡಿಬಲ್‌’ನ ಸೇರಿದ ಡೇವಿಡ್ ಬ್ಲಮ್‌. ಅವರು ಅಮೆಜಾನ್‌ನಿಂದ 2016ರಲ್ಲಿ ‘ಆಡಿಬಲ್‌’ ಸೇರಿದರು. ‘ಜನರ ಮನಸಿನಲ್ಲಿರುವ ಅಡಕ (ಕಂಟೆಂಟ್) ಪರಿಕಲ್ಪನೆಯನ್ನು ಬದಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

ಈಚಿನ ದಿನಗಳಲ್ಲಿ ಲೇಖಕರು ಹೆಚ್ಚಿನ ಸಂಖ್ಯೆಯಲ್ಲಿ ಕೇಳುಪುಸ್ತಕಗಳ ತೆಕ್ಕೆಗೆ ಬರುತ್ತಿದ್ದಾರೆ. ಲಿವೀಸ್ ಅವರನ್ನು ತನ್ನತ್ತ ಸೆಳೆದುಕೊಳ್ಳಲು ‘ಆಡಿಬಲ್’ ಯಶಸ್ವಿಯಾಗಿರುವುದು ದೊಡ್ಡ ಸಂಚಲನವನ್ನೇ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಮುಖ್ಯ ಲೇಖಕರನ್ನು ಸೆಳೆಯಲು ಇದು ಗಾಳವಾಗಬಹುದು.

‘ಮನಿಬಾಲ್‌’, ‘ದಿ ಬಿಗ್ ಶಾರ್ಟ್’ ಮತ್ತು ದಿ ಬ್ಲೈಂಡ್ ಸೈಡ್’ನಂಥ ಬೆಸ್ಟ್ ಸೆಲ್ಲರ್‌ಗಳನ್ನು ಬರೆದ ಲಿವೀಸ್ ತಮ್ಮ ಪುಸ್ತಕಗಳನ್ನು ಎಂದಿನಂತೆ ಡಬ್ಲ್ಯು ಡಬ್ಲ್ಯು ನಾರ್ಟನ್ ಪ್ರಕಾಶನದ ಮೂಲಕ ಪ್ರಕಟಿಸುತ್ತಾರೆ. ಆದರೆ ತಮ್ಮ ನಿರೂಪಣಾತ್ಮಕ ವರದಿಗಳನ್ನು ಇನ್ನು ಮುಂದೆ ’ವ್ಯಾನಿಟಿ ಫೇರ್’ ಬದಲು ಕೇಳುಪುಸ್ತಕ ವಿಧಾನದಲ್ಲಿ ಜಗತ್ತಿಗೆ ಪರಿಚಯಿಸಲಿದ್ದಾರೆ. ‘ಕೇಳುಪುಸ್ತಕಗಳನ್ನು ನನ್ನ ಬರಹಕ್ಕೆ ಮಿತಿ ಎಂದು ನಾನು ಅಂದುಕೊಂಡಿಲ್ಲ. ಈ ವರದಿಗಳ ಮೇಲೆ ‘ಆಡಿಬಲ್’ ಸಂಸ್ಥೆಗೆ ಕೆಲ ತಿಂಗಳು ಹಕ್ಕುಸ್ವಾಮ್ಯ ಇರುತ್ತದೆ. ನಂತರ ಕೇಳುಪುಸ್ತಕದಲ್ಲಿರುವ ವಿಷಯವನ್ನು ವಿಸ್ತರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಾಗಿದೆ’ ಎನ್ನುತ್ತಾರೆ ಲಿವೀಸ್.

ಸಾಹಿತ್ಯದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಅವರಿಗೆ ಅಪಾರ ಒಲವು ಇದೆ. ‘ಕಥೆಯೊಂದನ್ನು ಬರೆಯುವ ಬದಲು ಹೇಳಿದರೆ ಹೇಗಿರುತ್ತೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಈ ಪ್ರಯೋಗದಿಂದ ನಾನು ಇನ್ನೂ ಉತ್ತಮ ಬರಹಗಾರ ಆಗಬಲ್ಲೆ ಎನಿಸುತ್ತದೆ’ ಎನ್ನುತ್ತಾರೆ ಲಿವೀಸ್.

(ದಿ ನ್ಯೂಯಾರ್ಕ್ ಟೈಮ್ಸ್ ಸಿಂಡಿಕೇಟ್)

ಅನುವಾದ: ಡಿ.ಎಂ. ಘನಶ್ಯಾಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು