ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವೀರಪ್ಪ ಮೊಯಿಲಿ ಬೇಸರ

7
‘ಐದನ್ನು ನೀವ್ಯಾಕೆ ಒಂದು ಎನ್ನುತ್ತೀರಿ?’

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವೀರಪ್ಪ ಮೊಯಿಲಿ ಬೇಸರ

Published:
Updated:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ವೀರಪ್ಪ ಮೊಯಿಲಿ ಬೇಸರ

ಚಿಕ್ಕಬಳ್ಳಾಪುರ: ‘ಎಚ್.ಡಿ.ಕುಮಾರಸ್ವಾಮಿ ಅವರನ್ನು ನಾವೇ ಆಹ್ವಾನಿಸಿ ಐದು ವರ್ಷಗಳ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆದರೆ ಅವರು ಐದು ವರ್ಷಗಳ ಬದಲು ಒಂದು ವರ್ಷದ ವರೆಗೆ ಇದೇ ಸರ್ಕಾರ ಇರುತ್ತದೆ ಎಂದು ಹೇಳುವುದು ಒಳ್ಳೆಯದಲ್ಲ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

ನಗರದ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ಈದ್ ಉಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕುಮಾರಸ್ವಾಮಿ ಅವರೇ ನಿಮಗೆ ಅನುಮಾನ, ಭಯ ಬೇಡ ನಾವೆಲ್ಲ ಇದ್ದೇವೆ. ಚೆನ್ನಾಗಿ ಆಡಳಿತ ನಡೆಸಿ. ಏನಾದರೂ ಸಮಸ್ಯೆಗಳಿದ್ದರೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ. ಐದನ್ನು ನೀವೇ ಯಾಕೆ ಒಂದು ಎಂದು ಹೇಳುತ್ತಿದ್ದೀರಿ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಅವರು ಇತ್ತೀಚೆಗೆ ಲೆಕ್ಕಪರಿಶೋಧಕರ 15ನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮಾತನಾಡುತ್ತ, ‘ಇನ್ನು ಒಂದು ವರ್ಷದ ವರೆಗೆ ನನ್ನನ್ನು ಯಾರು ಮುಟ್ಟಲು ಆಗುವುದಿಲ್ಲ. ಲೋಕಸಭಾ ಚುನಾವಣೆ ವರೆಗೆ ಇದೇ ಸರ್ಕಾರ ಇರುತ್ತದೆ ಎನ್ನುವ ಭರವಸೆ ಇದೆ’ ಎಂದಿದ್ದರು.

‘ಕಳಂಕ ತೊಡೆದು ಹಾಕಲಿ’

‘ಇತ್ತೀಚೆಗೆ ಅಮೆರಿಕದ ಗುಪ್ತಚರ ಇಲಾಖೆ ಸಿಐಎ ನೀಡಿದ ವರದಿಯಲ್ಲಿ ವಿಎಚ್‌ಪಿ, ಬಜರಂಗ ದಳ ಧಾರ್ಮಿಕ ಭಯೋತ್ಪಾದಕ ಸಂಘಟನೆಗಳು ಎಂದು ಹೇಳಿದೆ. ಹೀಗಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಆರ್‌ಎಸ್‌ಎಸ್‌ ಅಂಗಸಂಸ್ಥೆಗಳು ಹಿಂದೂ ಸಮಾಜಕ್ಕೆ ಬಂದಿರುವ ಈ ಕಳಂಕವನ್ನು ತೊಡೆದು ಹಾಕಬೇಕು’ ಎಂದು ಮೊಯಿಲಿ ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ಇಬ್ಬರ ವಿಚಾರವಾದಿಗಳ ಹತ್ಯೆಯಾದರೂ ಅಲ್ಲಿನ ಪೊಲೀಸರು ಈವರೆಗೆ ಹಂತಕರನ್ನು ಬಂಧಿಸಿಲ್ಲ. ಆದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿಯೇ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಇತ್ತು. ಆದರೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವ ಉದ್ದೇಶದಿಂದ ಮೌನವಾಗಿ ತನಿಖೆ ನಡೆಸಲಾಗಿತ್ತು’ ಎಂದು ಹೇಳಿದರು.

‘ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನದಿಂದಾಗಿ ಎಂ.ಎಂ.ಕಲಬುರ್ಗಿ ಅವರ ಹಂತಕರ ಬಗ್ಗೆ ಕೆಲ ಸುಳಿವು ದೊರೆತಿವೆ. ಆದ್ದರಿಂದ ಕರ್ನಾಟಕ ಪೊಲೀಸರನ್ನು ಮುಕ್ತ ಕಂಠದಿಂದ ಅಭಿನಂದಿಸಬೇಕಾಗಿದೆ’ ಎಂದರು.

‘ಈ ಬಾರಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಭಿನ್ನಮತ ಸ್ವಲ್ಪ ಮಟ್ಟಿಗೆ ತಲೆದೂರಿದೆ. ಬಾಕಿ ಉಳಿದಿರುವ ಆರು ಸಚಿವ ಸ್ಥಾನಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುತ್ತದೆ. ಯಾವ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗುತ್ತಾರೋ ಅಂತವರಿಗೆ ಮುಂದಿನ ದಿನಗಳಲ್ಲಿ ನಿಗಮ, ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲು ಪಕ್ಷ ನಿರ್ಧರಿಸಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇನ್ನಷ್ಟು...

ಒಂದು ವರ್ಷದವರೆಗೆ ನನ್ನನ್ನು ಯಾರು ಟಚ್‌ ಮಾಡಲ್ಲ: ಕುಮಾರಸ್ವಾಮಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry