ಸಚಿವ ಸ್ಥಾನ ಬೇಡ: ಜಾರಕಿಹೊಳಿ

7

ಸಚಿವ ಸ್ಥಾನ ಬೇಡ: ಜಾರಕಿಹೊಳಿ

Published:
Updated:
ಸಚಿವ ಸ್ಥಾನ ಬೇಡ: ಜಾರಕಿಹೊಳಿ

ಬೆಂಗಳೂರು: ‘ನನಗೆ ಸಚಿವ ಸ್ಥಾನ ಬೇಡ. ನನ್ನನ್ನು ನಂಬಿ ಬಂದಿದ್ದ ಶಾಸಕರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇನೆ’ ಎಂದು ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬೆಳಗಾವಿಗೆ ಎರಡನೆ ದರ್ಜೆ ಸಚಿವ ಸ್ಥಾನ ಬೇಡ. ಸಚಿವನಾಗುವ ಸ್ಪರ್ಧೆಯಲ್ಲಿ ನಾನಿಲ್ಲ. ಕಾಂಗ್ರೆಸ್‌ನಲ್ಲಿ ಬಂಡಾಯ ಇಲ್ಲ. ಶಾಸಕರಿಗೆ ನ್ಯಾಯ ಕೊಡಿಸಲು ಹೋರಾಟ ಮಾತ್ರ ಇದೆ’ ಎಂದೂ ಅವರು ಪ್ರತಿಪಾದಿಸಿದರು.

‘ಕೆಪಿಸಿಸಿ ಜವಾಬ್ದಾರಿಯಾಗಲಿ, ಎಐಸಿಸಿ ಕಾರ್ಯದರ್ಶಿ ಜವಾಬ್ದಾರಿಯಾಗಲಿ ನನಗೆ ಬೇಡ ಎಂದು ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ’ ಎಂದರು.

ಅತೃಪ್ತರ ಬಣದ ನೇತೃತ್ವ: ಸಚಿವ ಸ್ಥಾನ ಸಿಗದೇ ಇದ್ದ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಸತೀಶ ಜಾರಕಿಹೊಳಿ, ಮತ್ತೊಬ್ಬ ಶಾಸಕ ಎಂ.ಬಿ. ಪಾಟೀಲರ ಜತೆ ಸಮಾಲೋಚನೆ ನಡೆಸಿದ್ದರು.

‘ಜಾರಕಿಹೊಳಿ ಸೇರಿ ತಮ್ಮ ಜತೆ 20 ಶಾಸಕರಿದ್ದಾರೆ. ಎಲ್ಲರೂ ಜತೆ ಸೇರಿ ಸಮಾಲೋಚನೆ ನಡೆಸಿ ಮುಂದಿನ ಹೋರಾಟ ರೂಪಿಸುತ್ತೇವೆ’ ಎಂದು ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ, ಪಾಟೀಲರನ್ನು ನವದೆಹಲಿಗೆ ಕರೆಯಿಸಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಿನ್ನಮತ ಚಟುವಟಿಕೆಯನ್ನು ನಿಲ್ಲಿಸಲು ಸೂಚಿಸಿದ್ದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry