ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಡೆಲ್ಲಿ–ಗುಜರಾತ್ ಪಂದ್ಯ ಸಮ

Last Updated 9 ಅಕ್ಟೋಬರ್ 2018, 20:07 IST
ಅಕ್ಷರ ಗಾತ್ರ

ಚೆನ್ನೈ: ದಬಂಗ್ ಡೆಲ್ಲಿ ಮತ್ತು ಗುಜರಾತ್ ಫಾರ್ಚೂನ್‌ಜೈಂಟ್ಸ್‌ ತಂಡಗಳ ನಡುವೆ ಮಂಗಳವಾರ ನಡೆದ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ ಪಂದ್ಯವು 32–32 ಪಾಯಿಂಟ್ಸ್‌ನಿಂದ ‘ಟೈ’ ಆಯಿತು.

ಪಂದ್ಯದ ಆರಂಭದಿಂದಲೂ ಗುಜರಾತ್‌ ಸ್ವಲ್ಪ ಮುನ್ನಡೆಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಸತತವಾಗಿ ಏಳು ಪಾಯಿಂಟ್ಸ್‌ಗಳನ್ನು ಗಳಿಸಿದ ಡೆಲ್ಲಿ ತಂಡ ತಿರುಗೇಟು ನೀಡಿತು. ಕೊನೆಯ ಹೂಟರ್‌ ಸದ್ದು ಪ್ರತಿಧ್ವನಿಸುವ ಹೊತ್ತಿಗೆ ಸಮಬಲ ಸಾಧಿಸಿತು.

ಜವಾಹರಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಈ ಪಂದ್ಯವು ಭರಪೂರ ಮನರಂಜನೆ ನೀಡಿತು. ದಬಂಗ್‌ ತಂಡದ ಚಂದ್ರನ್ ರಂಜೀತ್, ರೈಡಿಂಗ್‌ನಲ್ಲಿ 9 ಪಾಯಿಂಟ್ಸ್‌ಗಳನ್ನು ಗಳಿಸಿದರು. ಒಂದು ಟ್ಯಾಕಲ್‌ ಪಾಯಿಂಟ್‌ ಕಾಣಿಕೆಯನ್ನೂ ನೀಡಿದರು. ನವೀನ್‌ ಕುಮಾರ್‌ (5 ಪಾಯಿಂಟ್ಸ್‌), ರವಿಂದರ್‌ ಪೆಹಲ್‌ (3) ಮತ್ತು ಜೋಗಿಂದರ್‌ ನರ್ವಾಲ್‌ (3) ಅವರೂ ರೈಡಿಂಗ್‌ನಲ್ಲಿ ಮೋಡಿ ಮಾಡಿದರು. ಗುಜರಾತ್‌ ತಂಡದ ಸಚಿನ್‌ (7) ಮತ್ತು ರೋಹಿತ್‌ ಗುಲಿಯಾ (5) ಮಿಂಚಿದರು.

ಟೈಟನ್ಸ್‌ಗೆ ಮಣಿದ ತಲೈವಾಸ್‌: ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್‌ 33–28 ಪಾಯಿಂಟ್ಸ್‌ನಿಂದ ತಮಿಳ್‌ ತಲೈವಾಸ್‌ ತಂಡವನ್ನು ಮಣಿಸಿತು.

ಅಜಯ್‌ ಠಾಕೂರ್‌ ಸಾರಥ್ಯದ ತಲೈವಾಸ್‌, ತವರಿನಲ್ಲಿ ಸೋತ ಸತತ ಎರಡನೇ ಪಂದ್ಯ ಇದಾಗಿದೆ. ರೈಡರ್‌ಗಳಾದ ಅಜಯ್‌ (9 ಪಾಯಿಂಟ್ಸ್‌), ಅಮಿತ್‌ ಹೂಡಾ (6) ಮತ್ತು ಎಂ.ಎಸ್‌.ಅತುಲ್‌ (5) ತವರಿನ ಅಭಿಮಾನಿಗಳನ್ನು ರಂಜಿಸಿದರು. ಆದರೆ ರಕ್ಷಣಾ ವಿಭಾಗದಲ್ಲಿ ಮಾಡಿಕೊಂಡ ಎಡವಟ್ಟುಗಳಿಂದ ಅಜಯ್‌ ಪಡೆ ನಿರಾಸೆ ಕಂಡಿತು.

ಟೈಟನ್ಸ್‌ ಪರ ರಾಹುಲ್‌ ಚೌಧರಿ (9) ಅತಿ ಹೆಚ್ಚು ಪಾಯಿಂಟ್ಸ್‌ ಗಳಿಸಿದರು. ಮೊಹ್ಸೆನ್‌ (7) ಮತ್ತು ನೀಲೇಶ್‌ ಸಾಳುಂಕೆ (5) ಅವರೂ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT