ಭೀಮಾ ತೀರದ ಕೊಲೆ ಪ್ರಕರಣ: ಪಿಎಸ್‌ಐ ಬಂಧನ

7
ರೌಡಿಶೀಟರ್‌ ಗಂಗಾಧರ ಚಡಚಣ ಕೊಲೆ ಪ್ರಕರಣ; ಸಿಪಿಐ ಅಸೋಡೆ ನಾಪತ್ತೆ

ಭೀಮಾ ತೀರದ ಕೊಲೆ ಪ್ರಕರಣ: ಪಿಎಸ್‌ಐ ಬಂಧನ

Published:
Updated:
ಭೀಮಾ ತೀರದ ಕೊಲೆ ಪ್ರಕರಣ: ಪಿಎಸ್‌ಐ ಬಂಧನ

ವಿಜಯಪುರ: ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾಗಿದ್ದ ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣನ ಸಹೋದರ, ರೌಡಿಶೀಟರ್‌ ಗಂಗಾಧರ ಚಡಚಣನ ನಿಗೂಢ ನಾಪತ್ತೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಮೂವರು ಕಾನ್‌ಸ್ಟೆಬಲ್‌ಗಳನ್ನು ಶನಿವಾರ ಬಂಧಿಸಲಾಗಿದೆ.

‘ಈ ಹಿಂದೆ ಚಡಚಣ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಗೋಪಾಲ ಹಳ್ಳೂರ (ಈಗ ಬೆಳಗಾವಿ ಡಿಸಿಆರ್‌ಬಿಯಲ್ಲಿದ್ದಾರೆ), ಕಾನ್‌ಸ್ಟೆಬಲ್‌ಗಳಾದ ಸಿದ್ಧಾರೂಢ ರೂಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್‌ ಸುದ್ದಿಗಾರರಿಗೆ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣದ ಆಗಿನ ಸಿಪಿಐ ಎಂ.ಬಿ.ಅಸೋಡೆ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ತಂಡ ತೀರ್ಮಾನಿಸಿದೆ. ಸದ್ಯ ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸೋಡೆ, ಒಂದು ವಾರದಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಎನ್‌ಕೌಂಟರ್‌ ಕಲಹ: ಚಡಚಣದಿಂದ ನಾಲ್ಕು ಕಿಲೊ ಮೀಟರ್‌ ದೂರದ ಕೊಂಕಣಗಾಂವ್‌ನ ಹೊರವಲಯದಲ್ಲಿ ಧರ್ಮರಾಜ ಚಡಚಣನನ್ನು ಗೋಪಾಲ ಹಳ್ಳೂರ ಇತ್ತೀಚೆಗೆ ಎನ್‌ಕೌಂಟರ್‌ ಮಾಡಿದ್ದರು. ಈ ಕಾರ್ಯಾಚರಣೆ ಬಗ್ಗೆಯೂ ಅನುಮಾನಗಳಿದ್ದು, ಸಿಐಡಿ ತನಿಖೆ ನಡೆಸಲಿದೆ ಎಂದು ನಿಕ್ಕಂ ತಿಳಿಸಿದರು.

ಧರ್ಮರಾಜನ ಎನ್‌ಕೌಂಟರ್‌ ನಡೆದ ಸ್ಥಳದಲ್ಲಿಯೇ ಇದ್ದ ಗಂಗಾಧರ ಚಡಚಣನನ್ನು ಹಳ್ಳೂರ ತಂಡವು ತಮ್ಮ ಜತೆಯಲ್ಲಿಯೇ ಕರೆದೊಯ್ದು ಎದುರಾಳಿ ಪಾಳಯದ ಮಹಾದೇವಭೈರಗೊಂಡನ ಸಹಚರರಿಗೆ ಒಪ್ಪಿಸಿತ್ತು. ಇದಕ್ಕೆ ಆಗಿನ ಸಿಪಿಐ ಅಸೋಡೆ ಸಹಕಾರ ಇತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ವಿಷಯವನ್ನು ಹಿರಿಯ ಪೊಲೀಸ್‌ ಅಧಿಕಾರಿ ಖಚಿತಪಡಿಸಿದ್ದಾರೆ.

‘ಗಂಗಾಧರ ಕೊಲೆಗೆ ಸಂಬಂಧಿಸಿದಂತೆ ಹಣಮಂತ ಪೂಜಾರಿ, ಸಿದ್ಧಗೊಂಡಪ್ಪ ತಿಕ್ಕುಂಡಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅವರು ಕೊಟ್ಟ ಸುಳಿವಿನ ಮೇಲೆ ಪೊಲೀಸರ ಕೈವಾಡ ಇರುವುದು ಪತ್ತೆಯಾಗಿದೆ. ಪ್ರಮುಖ ಆರೋಪಿ, ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡ ಕೂಡ ನಾಪತ್ತೆಯಾಗಿದ್ದಾನೆ. ಈತನ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ’ ಎಂದು ನಿಕ್ಕಂ ತಿಳಿಸಿದರು.

ಸಿಐಡಿ ಡಿವೈಎಸ್‌ಪಿ ಜನಾರ್ದನ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry