ಬುಧವಾರ, ಜೂನ್ 23, 2021
30 °C

ಅಂಕೆಗೆ ಸಿಗದ ಅಶ್ವಮೇಧದ ಅಶ್ವ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಅಂಕೆಗೆ ಸಿಗದ ಅಶ್ವಮೇಧದ ಅಶ್ವ!

ನಮ್ಮ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಟ್ಟ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದ್ದೇವೆ’ ಎಂದು ಹೇಳಿದ್ದಾರೆ. ಉತ್ತರ ಭಾರತದಲ್ಲಿ ಮಹಾಮೈತ್ರಿಯನ್ನು ಮಾಡಿಕೊಂಡು ಉಪ ಚುನಾವಣೆಯಲ್ಲಿ ಒಂದಿಷ್ಟು ಸ್ಥಾನಗಳನ್ನು ಗಳಿಸಿದ ವಿರೋಧ ಪಕ್ಷಗಳೂ ಇದೇ ಮಾತನ್ನು ಹೇಳಿವೆ.

ಆದರೆ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಶ್ವಮೇಧದ ಕುದುರೆ ಯಾರು ಎನ್ನುವುದನ್ನು ಪತ್ತೆ ಮಾಡಿಕೊಳ್ಳದೇ ಹೋದರೆ ವಿರೋಧ ಪಕ್ಷಗಳಿಗೆ ಉಳಿಗಾಲವಿಲ್ಲ. ಯಾಕೆಂದರೆ ನಿಜವಾದ ಅರ್ಥದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ಅಶ್ವಮೇಧದ ಅಶ್ವಗಳು.

ನರೇಂದ್ರ ಮೋದಿ ಬೆಂಬಲಿಗರಲ್ಲಿ ಯುವಜನರೇ ಹೆಚ್ಚಿದ್ದಾರೆ. ಇದು ಯಾಕೆ ಎನ್ನುವುದನ್ನು ಪತ್ತೆ ಮಾಡಬೇಕು. ಇದು ಗೊತ್ತಾದರೆ ಒಂದಿಷ್ಟು ಪರಿಹಾರವನ್ನೂ ಕಂಡುಕೊಳ್ಳಬಹುದು. ಈ ಯುವಕರಿಗೆ ಸ್ವಾತಂತ್ರ್ಯ ಚಳವಳಿಯ ಮಹತ್ವ ಗೊತ್ತಿಲ್ಲ. ಅಂಬೇಡ್ಕರ್ ಅವರ ಹೋರಾಟದ ಅರಿವು ಇಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲ. ಮೀಸಲಾತಿಯ ಮಹತ್ವ ಗೊತ್ತಿಲ್ಲ.

ಇವರಲ್ಲಿ ಬಹುತೇಕ ಮಂದಿ ಮುಕ್ತ ಆರ್ಥಿಕತೆ ಜಾರಿಗೆ ಬಂದ ನಂತರ ಹುಟ್ಟಿದವರು. ಅದಕ್ಕೇ ಅವರಿಗೆ ಹಣದ ಮಹತ್ವವೂ ಗೊತ್ತಾಗುತ್ತಿಲ್ಲ. ಅವರಿಗೆ ನಮ್ಮ ಶೋಷಿತರ ನೋವುಗಳು ಅರ್ಥವಾಗುವುದಿಲ್ಲ. ಪರಿಶಿಷ್ಟರ ಸಾಮಾಜಿಕ ಸ್ಥಾನಮಾನಗಳ ಅರಿವು ಇಲ್ಲ. ಅದಕ್ಕೇ ಅವರಿಗೆ ಕೇಂದ್ರ ಸಚಿವ ಸಂವಿಧಾನವನ್ನು ಬದಲಾಯಿಸಬೇಕು ಎಂದು ಹೇಳಿದರೆ ಅದು ಅಪ್ಯಾಯಮಾನವಾಗಿ ಕೇಳಿಸುತ್ತದೆ.

ಪ್ರಗತಿಪರರು, ಬುದ್ಧಿಜೀವಿಗಳನ್ನು ಟೀಕೆ ಮಾಡಿದರೆ ಖುಷಿಯಾಗುತ್ತದೆ.

‘ಮುಸ್ಲಿಮರೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕು. ಅವರು ನಮ್ಮ ದೇಶದಲ್ಲಿ ಇರುವುದೇ ಬೇಡ. ಅವರ ಓಟು ನಮಗೆ ಬೇಡ’ ಎಂದು ಹೇಳಿಕೆ ನೀಡಿದರೆ ಇವರು ಸಂತೋಷಪಡುತ್ತಾರೆ. ‘ಮುಸ್ಲಿಮರನ್ನು ಕಂಡರೆ ಯಾಕೆ ನಿಮಗೆ ಕೋಪ? ಅವರೂ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ್ದಾರೆ’ ಎಂದು ಯುವಜನರನ್ನು ಕೇಳಿದರೆ ‘ಹೌದು ಸ್ವಾಮಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಹೋರಾಡಿದ್ದಾರೆ ನಿಜ.

ಆದರೆ ಪಾಕಿಸ್ತಾನ ಬೇಕು ಎಂದು ದೇಶವನ್ನು ಒಡೆದವರು ಯಾರು? ನಾವೇನು ಅವರಿಗೆ ಈ ದೇಶ ಬಿಟ್ಟು ಹೋಗಿ ಎಂದು ಹೇಳಿರಲಿಲ್ಲವಲ್ಲ. ಅವರೇ ತಾನೆ ಬೇರೆ ದೇಶ ಮಾಡಿಕೊಂಡವರು. ಅಂದಮೇಲೆ ಅವರು ಯಾಕೆ ಇಲ್ಲಿ ಇರಬೇಕು. ನಮ್ಮ ದೇಶದ ಹಣವನ್ನು ಅವರ ಕಲ್ಯಾಣಕ್ಕಾಗಿ ನಾವು ಯಾಕೆ ಖರ್ಚು ಮಾಡಬೇಕು’ ಎಂದು ಅವರು ಪ್ರಶ್ನೆ ಮಾಡುತ್ತಾರೆ.

ಇದಕ್ಕಾಗಿಯೇ ನಮ್ಮ ದೇವಸ್ಥಾನದ ಹಣವನ್ನು ಮಸೀದಿ ಕಲ್ಯಾಣಕ್ಕೆ ಬಳಸಲಾಗುತ್ತದೆ ಎಂಬ ವಾಟ್ಸ್ ಆ್ಯಪ್ ಸಂದೇಶಕ್ಕೆ ಭಾರೀ ಲೈಕ್‌ಗಳು ವ್ಯಕ್ತವಾಗುತ್ತದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೊಂದು ದಿನ ಭಾರತ ಮುಸ್ಲಿಂ ದೇಶವಾಗುತ್ತದೆ ಎಂಬ ಸಂದೇಶ ನಡುಕ ಹುಟ್ಟಿಸುತ್ತದೆ. ಇಂತಹ ಭಯ ಹುಟ್ಟಿಸುವ ಸಂದೇಶಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

ಅವರ ಸಿಟ್ಟು ಇಲ್ಲಿಗೇ ನಿಲ್ಲುವುದಿಲ್ಲ. ಮೀಸಲಾತಿ ವ್ಯವಸ್ಥೆಯನ್ನೂ ಅದು ದೂಷಿಸುತ್ತದೆ. ಜಾತಿಯ ಆಧಾರದಲ್ಲಿ ಮೀಸಲಾತಿ ಯಾಕೆ ಬೇಕು? ಯಾರು ಅರ್ಹರಿದ್ದಾರೋ ಅವರಿಗೆ ಸ್ಥಾನಮಾನ ನೀಡಿ. ಮೀಸಲಾತಿ ವ್ಯವಸ್ಥೆಯನ್ನೇ ರದ್ದು ಮಾಡಿ ಎಂದು ಅವರು ಒತ್ತಾಯಿಸುತ್ತಾರೆ. ವಾದವನ್ನು ಅವರು ಅಷ್ಟಕ್ಕೇ ನಿಲ್ಲಿಸುವುದಿಲ್ಲ.

‘ಸಮಾಜವಾದಿಗಳು ಎಂದು ಕರೆಸಿಕೊಂಡವರೆಲ್ಲಾ ಈಗ ಏನಾಗಿದ್ದಾರೆ? ಒಂದು ಕಾಲದಲ್ಲಿ ಹಾದಿ ಬೀದಿಯಲ್ಲಿ ಲಾಟರಿ ಹೊಡೆಯುತ್ತಿದ್ದವರೆಲ್ಲಾ ಈಗ ಮಹಡಿ ಮನೆಗಳನ್ನು ಕಟ್ಟಿಸಿಕೊಂಡು ಮೆರೆದಾಡುತ್ತಿದ್ದಾರೆ. ಬಡತನವನ್ನೇ ಬಂಡವಾಳ ಮಾಡಿಕೊಂಡು ಇವರ ಹೊಟ್ಟೆ ತುಂಬಿಸಿಕೊಂಡಿದ್ದಾರೆ.

ಅಧಿಕಾರಕ್ಕಾಗಿ ಹಪಹಪಿಸಿದ್ದಾರೆ. ಅಧಿಕಾರಸ್ಥರ ಮನೆ ಕಾಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ಕಟ್ಟಿಕೊಂಡು ಈ ದೇಶ ಉದ್ಧಾರ ಸಾಧ್ಯವೇ ಇಲ್ಲ ಎಂದು ಅವರು ತೀರ್ಪು ನೀಡುತ್ತಾರೆ. ಸಾಹಿತಿಗಳೂ ಅಷ್ಟೆ. ಬುದ್ಧಿಜೀವಿಗಳೂ ಅಷ್ಟೆ. ಇವರಿಗೆಲ್ಲಾ ಹಣ ಮತ್ತು ಅಧಿಕಾರವೇ ಮುಖ್ಯ. ಬಾಯಿಯಲ್ಲಿ ಮಾತ್ರ ಸಮಾಜದ ಬಗ್ಗೆ ಮಾತನಾಡುತ್ತಾರೆ. ಒಬ್ಬನೇ ಒಬ್ಬ ಸಾಹಿತಿ ಸಮಾಜಕ್ಕೆ ಒಳ್ಳೆಯದನ್ನು ಮಾಡಿದ್ದನ್ನು ತೋರಿಸಿ ನೋಡೋಣ ಎಂದು ಸವಾಲು ಹಾಕುತ್ತಾರೆ.

‘ಪ್ರತಿಭೆಗೆ ಈ ದೇಶದಲ್ಲಿ ಬೆಲೆಯೇ ಇಲ್ಲ. ಎಲ್ಲ ಪ್ರತಿಭಾವಂತರೂ ದೇಶ ಬಿಟ್ಟು ಹೋಗುವುದು ಅನಿವಾರ್ಯವಾಗಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆಯಲ್ಲಿ ನಮ್ಮ ದೇಶದ ಹಣ ನಮ್ಮಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. ನಮ್ಮ ಪ್ರತಿಭೆಗಳಿಗೂ ಇಲ್ಲಿಯೇ ಅವಕಾಶ ಸಿಗುತ್ತಿದೆ’ ಎಂದೂ ಅವರು ವಾದಿಸುತ್ತಾರೆ.

ಇವೆಲ್ಲಾ ಒಂದೇ ದಿನ ನಡೆದ ಬೆಳವಣಿಗೆ ಅಲ್ಲ. ಐದು ವರ್ಷಗಳಲ್ಲಿ ನಡೆದ ಬೆಳವಣಿಗೆಗಳೂ ಅಲ್ಲ. ‘ಹಿಂದುತ್ವವನ್ನು ಜಾಗೃತಗೊಳಿಸಿದರೆ ಮುಂದೊಂದು ದಿನ ಫಲ ನೀಡುತ್ತದೆ’ ಎಂದು ಎಂದೋ ಬಿತ್ತಿದ ಬೀಜದ ಫಲ ಇದು.

ಈಗ ಇದಕ್ಕೆ ಮುಖಗಳಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಾಣುತ್ತಿದ್ದಾರೆ ಅಷ್ಟೆ. ಪ್ರತಿಗಾಮಿ– ಜೀವ ವಿರೋಧಿ– ಮೂಲಭೂತವಾ ದನಿಗಳು ನಮ್ಮಲ್ಲಿ ಅಲ್ಲಲ್ಲಿ ಕೇಳಿಸಿದ್ದರೂ ಅದು ಧಾರೆಯಾಗಿ ಹರಿಯಲ್ಲ ಎಂದೇ ನಮ್ಮ ಹಲವಾರು ಬುದ್ಧಿಜೀವಿಗಳು ನಂಬಿದ್ದರು. ಆದರೆ ಈಗ ಅದರ ಧಾರೆ ತಡೆಯಲು ಸಾಧ್ಯವಾಗುತ್ತಿಲ್ಲ. ಜಲಪಾತವಾಗಿ ಅದು ಧುಮ್ಮಿಕ್ಕುತ್ತಿದೆ.

ಮಹಾಭಾರತದಲ್ಲಿ ಒಂದು ಸನ್ನಿವೇಶ ಬರುತ್ತದೆ. ಕುರುಕ್ಷೇತ್ರ ಯುದ್ಧಕ್ಕೆ ಎಲ್ಲವೂ ಸಿದ್ಧವಾಗಿವೆ. ಕೌರವ ಮತ್ತು ಪಾಂಡವ ಸೇನೆಗಳು ಯುದ್ಧದ ಶಂಖ ಊದಿವೆ. ಅದನ್ನು ಕೇಳಿಸಿಕೊಂಡ ಪುಟ್ಟ ಪಕ್ಷಿಯೊಂದು ಆಕಾಶಕ್ಕೆ ಹಾರಿ ‘ಅಯ್ಯೋ ಈಗ ಯುದ್ಧ ಶುರುವಾಗುತ್ತದೆ. ರಕ್ತದ ಕೋಡಿ ಹರಿಯುತ್ತದೆ. ಮರದ ಪೊಟರೆಯಲ್ಲಿ ಇರುವ ನನ್ನ ಮೂರು ಮೊಟ್ಟೆಗಳನ್ನು ರಕ್ಷಿಸುವವರು ಯಾರೂ ಇಲ್ಲವೇ?’ ಎಂದು ಅರಚುತ್ತದೆ.

ಅದು ಕೃಷ್ಣನ ಕಿವಿಗೆ ಬೀಳುತ್ತದೆ. ಆಗ ಕೃಷ್ಣ ಭೀಮನಿಗೆ ‘ಆ ಮೂರು ಮೊಟ್ಟೆಗಳನ್ನು ರಕ್ಷಿಸಬೇಕು’ ಎಂದು ಸೂಚಿಸುತ್ತಾನೆ. ಅದಕ್ಕೆ ಭೀಮ ‘ಏನು ಕೃಷ್ಣ, ತಮಾಷೆ ಮಾಡುತ್ತಿದ್ದೀಯಾ? ಇನ್ನು ಕೆಲವೇ ಕ್ಷಣಗಳಲ್ಲಿ ಈ ನೆಲದಲ್ಲಿ ರಕ್ತದ ನದಿ ಹರಿಯಲಿದೆ. ಹಿಂದೆಂದೂ ನಡೆಯದಷ್ಟು ಪ್ರಾಣ ಹಾನಿ ಉಂಟಾಗಲಿದೆ. ಅದರಲ್ಲಿ ಈ ಮೂರು ಮೊಟ್ಟೆಗಳೇನು ಲೆಕ್ಕ’ ಎನ್ನುತ್ತಾನೆ. ಅದಕ್ಕೆ ಕೃಷ್ಣ ‘ನಿಮಗೂ ಕೌರವರಿಗೂ ವೈರ.

ಅದಕ್ಕೇ ಈ ಯುದ್ಧ. ಆದರೆ ಮೂರು ಮೊಟ್ಟೆಗಳಿಗೆ ಬದುಕುವ ಹಕ್ಕು ಇದೆ. ಅದನ್ನು ರಕ್ಷಿಸುವುದು ನಿನ್ನ ಕರ್ತವ್ಯ’ ಎನ್ನುತ್ತಾನೆ. ಅದರಂತೆ ಭೀಮನು ಮೊಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಾನೆ. ಈಗಲೂ ನಮಗೆ ಅಂತಹ ಕೃಷ್ಣ, ಭೀಮ ಬೇಕು. ಎಲ್ಲಿ ಹುಡುಕೋಣ? ಅಶ್ವಮೇಧದ ಕುದುರೆ ಬಿಟ್ಟವರು ಮತ್ತು ಕಟ್ಟಿಹಾಕುವವರ ಅಬ್ಬರದಲ್ಲಿ ಜನ ಸಾಮಾನ್ಯರ ರಕ್ಷಣೆಯ ಹೊಣೆಯನ್ನು ಯಾರಿಗೆ ಒಪ್ಪಿಸೋಣ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.