ಮಂಗಳವಾರ, ಜೂನ್ 22, 2021
28 °C

ಓದುವ ಕಾಲ ಓಡುತ್ತಿದೆ ಕೇಳುವ ಕಾಲ ಬರುತ್ತಿದೆ

ಅಲೆಕ್ಸಾಂಡರ್ ಆಲ್ಟರ್ Updated:

ಅಕ್ಷರ ಗಾತ್ರ : | |

ಓದುವ ಕಾಲ ಓಡುತ್ತಿದೆ ಕೇಳುವ ಕಾಲ ಬರುತ್ತಿದೆ

ಅಮೆರಿಕದ ಜನಪ್ರಿಯ ಲೇಖಕ ಮೈಕೆಲ್ ಲಿವೀಸ್, ವರ್ಷಾನುಗಟ್ಟಲೆ ತೊಡಗಿಸಿಕೊಳ್ಳಬೇಕಾಗುವ ಯಾವುದಾದರೂ ಪ್ರಾಜೆಕ್ಟ್ ಅಂತಿಮಗೊಳಿಸಿಕೊಳ್ಳುವ ಮೊದಲು ಆ ಕುರಿತ ಒಂದು ಲೇಖನವನ್ನು ಪತ್ರಿಕೆಗೆ ಕಳಿಸಿ ಅದು ಉಂಟು ಮಾಡುವ ಪರಿಣಾಮ ಪರಿಶೀಲಿಸುವುದು ವಾಡಿಕೆ.

ಹೀಗೆ ಸಿದ್ಧಪಡಿಸಿದ ಲೇಖನವನ್ನು ಅವರು ಈ ಬಾರಿ ಪತ್ರಿಕೆಗೆ ಕಳಿಸಲಿಲ್ಲ. ‘ಆಡಿಬಲ್’ (Audible) ಹೆಸರಿನ ಕೇಳುಪುಸ್ತಕ (AudioBook) ಪ್ರಕಾಶನ ಸಂಸ್ಥೆಗೆ ಮಾರಿದರು. ‘ನಿಮಗೆ ನನ್ನ ಪುಸ್ತಕವನ್ನು ಓದಲು ಆಗದು. ನೀವು ಅದನ್ನು ಕೇಳಬಹುದು ಅಷ್ಟೇ. ನಾನು ‘ಆಡಿಬಲ್‌’ನ ಮೊದಲ ವರದಿಗಾರ’ ಎನ್ನುವುದು ಅವರ ಹೆಮ್ಮೆ.

ಮುದ್ರಣ ಮಾಧ್ಯಮದಿಂದ ಹೊರಬಂದು ಕೇಳುಪುಸ್ತಕ ಪರಿಕಲ್ಪನೆಗೆ ಒಗ್ಗಿಕೊಳ್ಳುತ್ತಿರುವ ಲೇಖಕರ ಸಂಖ್ಯೆ ದಿನದಿಂದದಿನಕ್ಕೆ ಬೆಳೆಯುತ್ತಿದೆ. ಓದಲು ಸಮಯವೇ ಇಲ್ಲ ಎಂದುಕೊಳ್ಳುವವರು ಈಗ ಸಂಚರಿಸುವಾಗ, ವ್ಯಾಯಾಮ ಮಾಡುವಾಗ ಅಥವಾ ಮನೆ ಕೆಲಸಗಳನ್ನು ಮಾಡುವಾಗ ಪುಸ್ತಕ ಕೇಳುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ.

2016ರಲ್ಲಿ ಒಟ್ಟು 9 ಕೋಟಿ ಕೇಳುಪುಸ್ತಕಗಳು ಮಾರಾಟವಾಗಿವೆ. 2012ರಲ್ಲಿ ಈ ಸಂಖ್ಯೆ ಕೇವಲ 4.2 ಕೋಟಿ ಇತ್ತು. ಕೇಳುಪುಸ್ತಕದ ಜಾಗತಿಕ ವಹಿವಾಟು ಈಗ 2.1 ಶತಕೋಟಿ ಡಾಲರ್‌ ಮುಟ್ಟಿದೆ. ಕೇಳುಪುಸ್ತಕಗಳನ್ನು ಉತ್ಪಾದನೆಯೂ ಇದೀಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಉತ್ತಮ ಗುಣಮಟ್ಟದ ರೆಕಾರ್ಡಿಂಗ್‌ಗಾಗಿ ಪ್ರೊಡಕ್ಷನ್ ಸ್ಟುಡಿಯೊಗಳನ್ನು ಸ್ಥಾಪಿಸಲು ಪ್ರಕಾಶಕರು ಮುಂದಾಗುತ್ತಿದ್ದಾರೆ.

ಹಲವು ದಶಕಗಳ ಕಾಲ ಕೇಳುಪುಸ್ತಕ ಮಾರುಕಟ್ಟೆಯನ್ನು ಭೌತಿಕ ಮಿತಿಗಳು ಕಾಡುತ್ತಿದ್ದವು. ರೆಕಾರ್ಡ್‌ ಆದ ದನಿಯನ್ನು ಕೇಳಲು ಇಚ್ಛಿಸುವವರು ಕ್ಯಾಸೆಟ್‌, ಸಿ.ಡಿ.ಗಳ ಜೊತೆಗೆ ಪ್ಲೇಯರ್‌ಗಳನ್ನೂ ಹೊತ್ತೊಯ್ಯಬೇಕಾಗುತ್ತಿತ್ತು. ಪುಸ್ತಕದ ಅಂಗಡಿಗಳಲ್ಲಿಯೂ ಇಂಥ ಉತ್ಪನ್ನಗಳಿಗಾಗಿ ಹೆಚ್ಚು ಸ್ಥಳಾವಕಾಶವೂ ಇರುತ್ತಿರಲಿಲ್ಲ. ದನಿಗೆ ಎಂದಿನಿಂದ ಡಿಜಿಟಲ್ ಸ್ಪರ್ಶ ಸಿಕ್ಕಿತೋ, ಅಂದಿನಿಂದ ಎಲ್ಲವೂ ಬದಲಾಯಿತು. ನಮ್ಮ ಕಿಸೆಯಲ್ಲಿರುವ ಮೊಬೈಲ್‌ಗಳು ಈಗ ಕೇಳುಪುಸ್ತಕಗಳನ್ನು ಪ್ಲೇ ಮಾಡಬಲ್ಲವು.

ಮುದ್ರಿತ ಪುಸ್ತಕಗಳನ್ನು ಕೇಳುಪುಸ್ತಕಗಳಿಗೆ ಹೋಲಿಸುವುದು ಸರಿಯಲ್ಲ. ಕೇಳುಪುಸ್ತಕವನ್ನು ಸ್ವತಂತ್ರ ಸೃಜನಶೀಲ ಪ್ರಕಾರ ಎಂದೇ ಪರಿಗಣಿಸಬೇಕು. ಆದರೆ, ಕೇಳುಪುಸ್ತಕಗಳ ಜನಪ್ರಿಯತೆಯು ಸಾಂಪ್ರದಾಯಿಕ ಮುದ್ರಿತ ಪುಸ್ತಕಗಳನ್ನೇ ನೆಚ್ಚಿಕೊಂಡಿದ್ದ ಪ್ರಕಾಶಕರಿಗೆ ನಡುಕ ಹುಟ್ಟಿಸಿರುವುದು ನಿಜ.

ತನ್ನ ಆನ್‌ಲೈನ್ ಸ್ಟೋರ್‌ನಲ್ಲಿ 4.25 ಲಕ್ಷಕ್ಕೂ ಹೆಚ್ಚು ಕೇಳುಪುಸ್ತಕಗಳನ್ನು ಹೊಂದಿರುವ ‘ಆಡಿಬಲ್’ ಈ ಕಿಕ್ಕಿರಿದ ಕ್ಷೇತ್ರದಲ್ಲಿ ಸಾಕಷ್ಟು ಅನುಕೂಲಗಳನ್ನು ಹೊಂದಿದೆ. ಇದೀಗ ಅಮೆಜಾನ್ ಸಹ ಕೇಳುಪುಸ್ತಕಗಳನ್ನು ಮುಂಚೂಣಿಗೆ ತರಲು ಯತ್ನಿಸುತ್ತಿದೆ. ‘ಆಡಿಬಲ್‌’ಗೆ ಒಂದು ತಿಂಗಳ ಉಚಿತ ಸದಸ್ಯತ್ವದ ಆಮಿಷವನ್ನೂ ಅಮೆಜಾನ್ ಒಡ್ಡಿದೆ.

ಪ್ರಸ್ತುತ ‘ಆಡಿಬಲ್‌’ನ ಒಂದು ತಿಂಗಳ ಸದಸ್ಯತ್ವ ಶುಲ್ಕ ₹1027 (15 ಡಾಲರ್). ಇದರ ಜೊತೆಗೆ ತಿಂಗಳಿಗೆ ಒಂದು ಕೇಳುಪುಸ್ತಕವನ್ನು ಉಚಿತವಾಗಿ ಕೊಡಲಾಗುತ್ತದೆ. ಕೇಳುಪುಸ್ತಕದ ಬೆಲೆಯು ಸಾಮಾನ್ಯವಾಗಿ ₹1000ದಿಂದ ₹2700ರವರೆಗೂ ಇರುತ್ತದೆ. ಈ ಮೊದಲು ಕೇವಲ ಕೇಳುಪುಸ್ತಕ ಮಾರಾಟಕ್ಕೆ ಗಮನ ಕೊಡುತ್ತಿದ್ದ ‘ಆಡಿಬಲ್’ ಇದೀಗ ನೇರವಾಗಿ ಬರಹಗಾರರನ್ನು ಸಂಪರ್ಕಿಸಿ ಕೇಳುಪುಸ್ತಕಗಳನ್ನು ಸ್ವತಂತ್ರವಾಗಿ ರೂಪಿಸಲು ಯತ್ನಿಸುತ್ತಿದೆ. ಈ ಮೂಲಕ ಲಾಭದ ಪ್ರಮಾಣ ವೃದ್ಧಿಸಿಕೊಳ್ಳುವ ಕನಸು ಹೆಣೆದಿದೆ.

‘ಕೇಳುಪುಸ್ತಕಗಳ ಹೊಸ ಸಾಧ್ಯತೆಗಳನ್ನು ಇದೀಗ ಬೆಳೆಸುತ್ತಿದ್ದೇವೆ. ಹಿಂದೆ ಇದು ಪೂರ್ಣಪ್ರಮಾಣದ ಮಾಧ್ಯಮ ವಿಭಾಗ ಆಗಿರಲಿಲ್ಲ. ಪುಸ್ತಕ ಪ್ರಕಟಣೆಯಲ್ಲಿ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ’ ಎನ್ನುತ್ತಾರೆ ಆಡಿಬಲ್‌ನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡೊನಾಲ್ಡ್ ಕಾಟ್ಜ್.

ಕಳೆದ ಐದು ವರ್ಷಗಳಲ್ಲಿ ಹ್ಯಾಚೆ ಕಂಪನಿಯು ಕೇಳುಪುಸ್ತಕ ನಿರ್ಮಾಣದ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಈ ವರ್ಷ ಒಟ್ಟು 700 ಕೇಳುಪುಸ್ತಕಗಳನ್ನು ಮಾರುಕಟ್ಟೆಗೆ ತರಲು ಉದ್ದೇಶಿಸಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಕಂಪನಿಯು 2014ರಲ್ಲಿ 652 ಕೇಳುಪುಸ್ತಕ ಪ್ರಕಟಿಸಿತ್ತು.

ಈ ವರ್ಷ1,200 ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿದೆ. ಪ್ರಸ್ತುತ ಪೆಂಗ್ವಿನ್ 15 ರೆಕಾರ್ಡಿಂಗ್ ಸ್ಟುಡಿಯೊಗಳನ್ನು ಹೊಂದಿದೆ. ಮ್ಯಾಕ್‌ಮಿಲನ್ ಕಂಪನಿಯು 470 ಕೇಳುಪುಸ್ತಕ ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 46ರಷ್ಟು ಹೆಚ್ಚು. ಜೇಮ್ಸ್ ಕಾಮಿಯೊ ಅವರ ‘ದಿ ಹೈಯರ್ ಲಾಯಲ್ಟಿ’ (1.67 ಲಕ್ಷ ಪ್ರತಿ) ಮತ್ತು ಮೈಕೆಲ್ ವೂಲ್ಫ್ ಅವರ ‘ಫೈರ್ ಅಂಡ್ ಫ್ಯುರಿ’ (3.20 ಲಕ್ಷ ಪ್ರತಿ) ಮ್ಯಾಕ್‌ಮಿಲನ್ ಕಂಪನಿಯ ಸೂಪರ್‌ಹಿಟ್‌ ಕೇಳು ಪುಸ್ತಕಗಳು ಎನಿಸಿಕೊಂಡಿವೆ.

ದೊಡ್ಡ ಪುಸ್ತಕಗಳ ಕೇಳುಪುಸ್ತಕ ಹಕ್ಕು ಖರೀದಿಸಲು ‘ಆಡಿಬಲ್’ ಸಣ್ಣಸಣ್ಣ ಕಂಪನಿಗಳೊಂದಿಗೆ ಸಹಕಾರ ಪಡೆದುಕೊಳ್ಳುತ್ತಿದೆ. ‘ಆಡಿಬಲ್’ ಮತ್ತು ಹಟನ್ ಮಿಫ್ಲಿನ್ ಜಂಟಿಯಾಗಿ ಒಲಿಂಪಿಕ್ ಸ್ನೋಬೋರ್ಡರ್ ಶಾನ್ ವೈಟ್ ಅವರ ಆತ್ಮಚರಿತ್ರೆಯ ಹಕ್ಕು ಖರೀದಿಸಿವೆ. ಈ ಪುಸ್ತಕ ಮುದ್ರಣ ರೂಪದಲ್ಲಿ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಅದಕ್ಕೆ ಒಂದು ತಿಂಗಳು ಮೊದಲು ಕೇಳುಪುಸ್ತಕ ಮಾರುಕಟ್ಟೆಗೆ ಬರಲಿದೆ.

‘ಮನಿಬಾಲ್‌’, ‘ದಿ ಬಿಗ್ ಶಾರ್ಟ್’ ಮತ್ತು ದಿ ಬ್ಲೈಂಡ್ ಸೈಡ್’ನಂಥ ಬೆಸ್ಟ್ ಸೆಲ್ಲರ್‌ಗಳನ್ನು ಬರೆದ ಲಿವೀಸ್ ತಮ್ಮ ಪುಸ್ತಕಗಳನ್ನು ಎಂದಿನಂತೆ ಡಬ್ಲ್ಯು ಡಬ್ಲ್ಯು ನಾರ್ಟನ್ ಪ್ರಕಾಶನದ ಮೂಲಕ ಪ್ರಕಟಿಸುತ್ತಾರೆ. ಆದರೆ ತಮ್ಮ ನಿರೂಪಣಾತ್ಮಕ ವರದಿಗಳನ್ನು ಇನ್ನು ಮುಂದೆ ‘ವ್ಯಾನಿಟಿ ಫೇರ್’ ಬದಲು ಕೇಳುಪುಸ್ತಕ ವಿಧಾನದಲ್ಲಿ ಜಗತ್ತಿಗೆ ಪರಿಚಯಿಸಲಿದ್ದಾರೆ.

‘ಕೇಳುಪುಸ್ತಕಗಳನ್ನು ನನ್ನ ಬರಹಕ್ಕೆ ಮಿತಿ ಎಂದು ನಾನು ಅಂದುಕೊಂಡಿಲ್ಲ. ಈ ವರದಿಗಳ ಮೇಲೆ ‘ಆಡಿಬಲ್’ ಸಂಸ್ಥೆಗೆ ಕೆಲ ತಿಂಗಳು ಹಕ್ಕುಸ್ವಾಮ್ಯ ಇರುತ್ತದೆ. ನಂತರ ಕೇಳುಪುಸ್ತಕದಲ್ಲಿರುವ ವಿಷಯವನ್ನು ವಿಸ್ತರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಾಗಿದೆ’ ಎನ್ನುತ್ತಾರೆ ಲಿವೀಸ್.

ಸಾಹಿತ್ಯದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಕುರಿತು ಅವರಿಗೆ ಅಪಾರ ಒಲವು ಇದೆ. ‘ಕಥೆಯೊಂದನ್ನು ಬರೆಯುವ ಬದಲು ಹೇಳಿದರೆ ಹೇಗಿರುತ್ತೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಈ ಪ್ರಯೋಗದಿಂದ ನಾನು ಇನ್ನೂ ಉತ್ತಮ ಬರಹಗಾರ ಆಗಬಲ್ಲೆ ಎನಿಸುತ್ತದೆ’ ಎನ್ನುತ್ತಾರೆ ಲಿವೀಸ್.

–ದಿ ನ್ಯೂಯಾರ್ಕ್ ಟೈಮ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.