ಶುಕ್ರವಾರ, ಜೂನ್ 25, 2021
21 °C

‘ಗುಣಮಟ್ಟದ ಶಿಕ್ಷಣವೇ ನಮ್ಮ ಆದ್ಯತೆ’

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

‘ಗುಣಮಟ್ಟದ ಶಿಕ್ಷಣವೇ ನಮ್ಮ ಆದ್ಯತೆ’

‘ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಮಾತ್ರವಲ್ಲ; ಗುಣಮಟ್ಟದ ಶಿಕ್ಷಣ ಪಡೆಯುವುದು ಸಹ ಮಕ್ಕಳ ಮೂಲಭೂತ ಹಕ್ಕಾಗಬೇಕು. ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ, ಉದ್ಯೋಗಕ್ಕೆ ಬೇಕಾದ ಕೌಶಲ, ಮತ್ತೊಬ್ಬರೊಂದಿಗೆ ಸಂವಹನ ನಡೆಸುವಷ್ಟು ಇಂಗ್ಲಿಷ್ ಕಲಿಸುವುದು ನಮ್ಮ ಮುಂದಿರುವ ಗುರಿ...’

ಹೀಗೆ ಶೈಕ್ಷಣಿಕ ವ್ಯವಸ್ಥೆ ಕುರಿತು ತಮ್ಮದೇ ಆದ ದೃಷ್ಟಿಕೋನವನ್ನು ವಿವರಿಸಿದವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಜೆಡಿಎಸ್‌– ಬಿಎಸ್‌ಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿದ್ದವು. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಮಹೇಶ್‌, ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿದ್ದಾರೆ.

ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಜವಾಬ್ದಾರಿ ಇರುವ ಇಲಾಖೆಯ ಹೊಣೆ ನಿಮ್ಮದು. ನಿಮ್ಮ ಮುಂದಿರುವ ಸವಾಲುಗಳೇನು?

ಹೊರಗೆ ನಿಂತು ನೋಡಿದಾಗ ಕಾಣುತ್ತಿದ್ದ ಇಲಾಖೆಯೇ ಬೇರೆ, ಒಳಗೆ ಬಂದ ಮೇಲೆ ಇಲ್ಲಿರುವ ವಾಸ್ತವವೇ ಬೇರೆ ಎಂಬುದು ಗೊತ್ತಾಗಿದೆ. ಶೇ 25ರಷ್ಟು ಮಾತ್ರ ನನ್ನ ತಿಳಿವಳಿಕೆಗೆ ನಿಲುಕಿದೆ. ಉಳಿದಿದ್ದನ್ನು ನಾನು ಅರ್ಥ ಮಾಡಿಕೊಂಡು ಇಲಾಖೆಗೆ ಕಾಯಕಲ್ಪ ನೀಡಬೇಕಾಗಿದೆ.

ದೇಶದ ಭವಿಷ್ಯವನ್ನು ರೂಪಿಸುವ ಸಮೂಹವೇ ನನ್ನ ಜತೆಗಿದೆ. ದೇವೇಗೌಡರು, ಕುಮಾರಸ್ವಾಮಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಖಾತೆ ಕೊಟ್ಟಿದ್ದಾರೆ; ಅದನ್ನು ಉಳಿಸಿಕೊಳ್ಳುವ ಭರವಸೆ ನನಗಿದೆ. ಮಂತ್ರಿ ಪದವಿ ಎನ್ನುವುದಕ್ಕಿಂತ ‘ದೊಡ್ಡ ಜವಾಬ್ದಾರಿ’ ನನ್ನ ಮೇಲಿದೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ. ಮಕ್ಕಳನ್ನು ಆಕರ್ಷಿಸಲು ಏನು ಕ್ರಮ ಕೈಗೊಳ್ಳುವಿರಿ?

ಅತ್ಯಂತ ಕುಗ್ರಾಮದಲ್ಲಿರುವ ಮಗುವೂ ಸೇರಿದಂತೆ, ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಇದು ನಮ್ಮ ಗುರಿ. ಶಿಕ್ಷಣ ಮೂಲಭೂತ ಹಕ್ಕು ಎಂಬುದರ ಜತೆಗೆ ಗುಣಮಟ್ಟದ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಬೇಕು.

ಮೂಲಭೂತ ಸೌಕರ್ಯ, ವ್ಯವಸ್ಥಿತ ಬೋಧನೆ ವಿಷಯದಲ್ಲಿ ಖಾಸಗಿ ಶಾಲೆಗಳ ಪೈಪೋಟಿಯನ್ನು ಸರ್ಕಾರಿ ಶಾಲೆಗಳು ಎದುರಿಸುತ್ತಿವೆ. ಹೀಗಾಗಿಯೇ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬಾರದ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಹೋಲಿಸಿದರೆ ನಮ್ಮ ಶಿಕ್ಷಕರು ಪ್ರಾಜ್ಞರಾಗಿದ್ದು, ಉತ್ತಮ ತರಬೇತಿಯನ್ನೂ ಪಡೆದಿದ್ದಾರೆ.

ಅತ್ಯುತ್ತಮ ಮೂಲಸೌಕರ್ಯ, ಆಟದ ಮೈದಾನ, ಶುಚಿತ್ವ, ಭದ್ರತೆ ಹೀಗೆ ವಿವಿಧ ಸೌಲಭ್ಯಗಳನ್ನು ನೀಡುವ ಖಾಸಗಿ ಶಾಲೆಗಳು ಮಕ್ಕಳನ್ನು ಆಕರ್ಷಿಸುತ್ತವೆ. ಗುಣಮಟ್ಟದಲ್ಲಿ ನಮ್ಮ ಶಾಲೆಗಳೇ ಉತ್ತಮವಾಗಿವೆ. ಹೀಗಾಗಿ, ಮೂಲಸೌಕರ್ಯ ಕಲ್ಪಿಸಿ, ಶಾಲಾ ಆವರಣವನ್ನು ಆಕರ್ಷಕಗೊಳಿಸಲು ಆದ್ಯತೆ ನೀಡುತ್ತೇವೆ.

ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್‌ ಅನ್ನು ಚೆನ್ನಾಗಿ ಕಲಿಸುತ್ತಾರೆ ಎಂಬ ಭಾವನೆ ಪೋಷಕರಲ್ಲಿದೆ. ನಾವು ಕೂಡ ಮಕ್ಕಳಿಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ. ಇಂಗ್ಲಿಷ್‌ನಲ್ಲಿ ಮಾತನಾಡಲು ಬಂದರೆ ಆಧುನಿಕ ಜಗತ್ತಿನ ಸವಾಲು ಎದುರಿಸಲು ಸಾಧ್ಯ ಎಂಬ ಎಂಬ ಭಾವನೆ ಇದೆ. ನಮ್ಮ ಶಿಕ್ಷಕರನ್ನೇ ಬಳಸಿಕೊಂಡು, ನಲಿ–ಕಲಿ ಬೋಧನಾ ವಿಧಾನದಲ್ಲಿ ಇಂಗ್ಲಿಷ್ ಅಳವಡಿಸುತ್ತೇವೆ.

ಆರ್‌ಟಿಇ ಹೆಸರಿನಲ್ಲಿ ಇಲಾಖೆ ಅಧಿಕಾರಿಗಳು, ನೌಕರರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಟೀಕೆ ಇದೆಯಲ್ಲ?

ಅದು ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲರೂ ಆನ್‌ಲೈನ್‌ನಲ್ಲಿ ಅರ್ಜಿ ಹಾಕುತ್ತಾರೆ. ಲಭ್ಯ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗುವುದರಿಂದ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಹೀಗೆ ಆಯ್ಕೆ ನಡೆಯುವುದರಿಂದ ಅಲಕ್ಷಿತರಿಗೆ ಸೀಟು ಸಿಕ್ಕಿಯೇ ಸಿಗುತ್ತದೆ ಎಂದು ಹೇಳಲಿಕ್ಕಾಗದು. ಆದರೆ, ಅರ್ಜಿ ಹಾಕಿದವರನ್ನು ಬಿಟ್ಟು, ನಿಯಮ ಉಲ್ಲಂಘಿಸಿ, ಸೀಟುಗಳನ್ನು ಮಾರಿಕೊಳ್ಳಲು ಸಾಧ್ಯವಿಲ್ಲ. ಇರುವುದರಲ್ಲಿ ಇದು ಉತ್ತಮ ವ್ಯವಸ್ಥೆ. ಇನ್ನಷ್ಟು ಸುಧಾರಣೆ ತರುವ ಬಗ್ಗೆ ಚರ್ಚೆ ನಡೆಸುತ್ತೇನೆ.

ಜನಪ್ರತಿನಿಧಿಗಳು, ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವುದನ್ನು ಕಡ್ಡಾಯಗೊಳಿಸಲು ವಿಧಾನಪರಿಷತ್ತಿನಲ್ಲಿ ಮಂಡಿಸಿದ ಖಾಸಗಿ ಮಸೂದೆ ಜಾರಿಗೆ ತರುತ್ತೀರಾ?

30–40 ವರ್ಷಗಳ ಹಿಂದೆ ಖಾಸಗಿ ಶಾಲೆಗಳೇ ಇರಲಿಲ್ಲ. ಬಡವರು– ಶ್ರೀಮಂತರು, ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುತ್ತಿದ್ದರು. ಇಂಗ್ಲಿಷ್ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚಳವಾದ ಮೇಲೆ ಸರ್ಕಾರ ಶಾಲೆಗಳತ್ತ ಆಸಕ್ತಿ ಕಡಿಮೆಯಾಗಿದೆ.

ಶಾಸಕರು, ಸಂಸದರು, ಜಿಲ್ಲಾ ಪಂಚಾಯಿತಿ ಸದಸ್ಯರು, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುವುದನ್ನು ಕಡ್ಡಾಯಗೊಳಿಸಿದರೆ ಗುಣಾತ್ಮಕ ಬದಲಾವಣೆ ಸಾಧ್ಯ. ಅದರಿಂದ ಶಾಲೆಗಳ ಗುಣಮಟ್ಟ ಸುಧಾರಣೆಯಾಗಿ, ಸರ್ಕಾರಿ ಶಾಲೆಗಳು ಮಕ್ಕಳನ್ನು ಆಕರ್ಷಿಸಲು ಸಾಧ್ಯ. ಖಾಸಗಿ ಮಸೂದೆಯ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ತರಿಸಿಕೊಂಡು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ.

ಇಲಾಖೆಯ ತಳಹಂತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ದೂರಿದೆ. ಇದರ ನಿವಾರಣೆ ಹೇಗೆ?

ಬಿಇಒ, ಡಿಡಿಪಿಐ ಕಚೇರಿಗಳಲ್ಲಿ ಸ್ವಲ್ಪ ಮಟ್ಟದ ಭ್ರಷ್ಟಾಚಾರ ಇರಬಹುದು. ಶೇ 100ರಷ್ಟು ಹೋಗಿದೆ ಎಂದು ಹೇಳಲಾರೆ. ಎಲ್ಲ ಕೆಲಸಗಳಿಗೂ ಕಾಲಮಿತಿ ನಿಗದಿಪಡಿಸಿ ಬಿಇಒ, ಡಿಡಿಪಿಐಗಳನ್ನು ಹೊಣೆಗಾರರನ್ನಾಗಿ ಮಾಡಿದರೆ ಎಲ್ಲವೂ ಸರಿಹೋಗಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.

ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಪರಿಹಾರ ಎಂದು?

ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿ ಅತ್ಯಂತ ಮಾದರಿ ಹಾಗೂ ಅನುಕರಣೀಯ ವ್ಯವಸ್ಥೆ. ಯಾವುದೇ ರಾಜಕೀಯ ಹಸ್ತಕ್ಷೇಪ, ಪ್ರಭಾವ, ಹಣಕಾಸು ಇಲ್ಲದೇ ಅರ್ಹತೆ ಹಾಗೂ ಸೇವಾ ಹಿರಿತನ ಪರಿಗಣಿಸಿ ವರ್ಗಾವಣೆ ನಡೆಯುತ್ತಿದೆ. ಈಗಿರುವ ಪದ್ಧತಿ ಮುಂದುವರಿಯಲಿದೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ, ಏನಿದು ಹೊಸ ಯೋಜನೆ?

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ರಾಜ್ಯದ ನೂರು ಶಾಲೆಗಳಲ್ಲಿ ಇದು ಆರಂಭವಾಗಲಿದೆ. ನಮ್ಮ ಶಿಕ್ಷಕರು ಈ ತರಗತಿಗಳನ್ನು ನಡೆಸಲು ಹಾಗೂ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಲು ಸಮರ್ಥರಾಗಿದ್ದಾರೆ. ಈ ಪ್ರಯೋಗವನ್ನು ಯಶಸ್ವಿಗೊಳಿಸುವ ಕುರಿತು ಯೋಜನೆ ರೂಪಿಸುತ್ತಿದ್ದೇವೆ.

ಖಾಸಗಿ ಶಾಲೆಗಳಲ್ಲಿನ ಡೊನೇಶನ್ ಹಾವಳಿ, ಪಠ್ಯಪುಸ್ತಕ ಮಾಫಿಯಾ ತಡೆಗೆ ಕ್ರಮ ಏನು?

ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಒಟ್ಟಿಗೆ ಕುಳಿತು ಶುಲ್ಕ ನಿಗದಿಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಯಾವುದೇ ಶಾಲಾ ಮತ್ತು ಕಾಲೇಜುಗಳು ಪಡೆಯುವಂತಿಲ್ಲ. ನಿಗದಿಗಿಂತ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ದೂರು ಸಲ್ಲಿಸಬಹುದು. ಶಾಲೆ ಅಥವಾ ಕಾಲೇಜಿನಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಿ, ಜನರಿಗೆ ತಿಳಿಸುವಂತೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.

ಶಿಕ್ಷಕರ ಹೊರೆ ಇಳಿಸಲು ಹಾಗೂ ಶಾಲೆಗಳ ಗುಣಮಟ್ಟ ಸುಧಾರಣೆಗೆ ಏನು ಕ್ರಮ?

ನುರಿತ ಶಿಕ್ಷಕರು, ಶಿಕ್ಷಣ ತಜ್ಞರು, ಮಕ್ಕಳ ಹಕ್ಕುಗಳ ಹೋರಾಟಗಾರರು ಹಾಗೂ ಶಿಕ್ಷಣ ವ್ಯವಸ್ಥೆ ಸುಧಾರಣೆಯಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು... ಹೀಗೆ ಎಲ್ಲರನ್ನೂ ಸೇರಿಸಿ ಸಮಾಲೋಚನೆ ಮಾಡುತ್ತೇವೆ. ಬಳಿಕ ಯೋಜನೆ ರೂಪಿಸುತ್ತೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.