ಕೇಜ್ರಿವಾಲ್‌ ಹೋರಾಟಕ್ಕೆ ಆನೆಬಲ!

7
ದೆಹಲಿಯಲ್ಲಿ ಪರೋಕ್ಷ ರಾಷ್ಟ್ರಪತಿ ಆಡಳಿತ: ಆರೋಪ

ಕೇಜ್ರಿವಾಲ್‌ ಹೋರಾಟಕ್ಕೆ ಆನೆಬಲ!

Published:
Updated:
ಕೇಜ್ರಿವಾಲ್‌ ಹೋರಾಟಕ್ಕೆ ಆನೆಬಲ!

ನವದೆಹಲಿ: ದೆಹಲಿಯಲ್ಲಿ ಪರೋಕ್ಷವಾಗಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಶನಿವಾರ ಆರೋಪ ಮಾಡಿದ್ದಾರೆ.

ಸಂಪುಟದ ಮೂವರು ಸಹೋದ್ಯೋಗಿಗಳ ಜತೆ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ಅವರು ಆರಂಭಿಸಿದ ಧರಣಿ ಶನಿವಾರ ಆರನೇ ದಿನಕ್ಕೆ ಕಾಲಿಟ್ಟಿದೆ.

ಈ ನಡುವೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ 4 ಮುಖ್ಯಮಂತ್ರಿಗಳು ಕೇಜ್ರಿವಾಲ್‌ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರಿಂದ  ಹೋರಾಟಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ.

ಆಂಧ್ರಭವನದಲ್ಲಿ ಸಭೆ ಸೇರಿದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕರ್ನಾಟಕದ ಕುಮಾರಸ್ವಾಮಿ, ಕೇರಳದ ಪಿಣರಾಯಿ ವಿಜಯನ್‌, ಆಂಧ್ರ ಪ್ರದೇಶದ ಎನ್‌. ಚಂದ್ರಬಾಬು ನಾಯ್ಡು ಅವರು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಭೇಟಿಗೆ ಸಮಯ ಕೋರಿದರು. ಆದರೆ, ಅವರು ಭೇಟಿಗೆ ಅವಕಾಶ ನೀಡಲಿಲ್ಲ.

‘ಬೈಜಾಲ್‌ ನಿವಾಸದಲ್ಲಿ ಇಲ್ಲದ ಕಾರಣ ಭೇಟಿ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಕೆಲಸ ಮಾಡಲು ಬಿಡಬೇಕು ಎನ್ನುವುದಷ್ಟೇ ನಮ್ಮ ಬೇಡಿಕೆಯಾಗಿದೆ’ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ದೆಹಲಿಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ ಎಂದು ಅಭಿಪ್ರಾಯಪಟ್ಟ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆವನ್ನು ವ್ಯವಸ್ಥಿತವಾಗಿ ಮುಗಿಸಲು ಹೊರಟಿದೆ ಎಂದು  ಆರೋಪಿಸಿದ್ದಾರೆ.

ಕೇಜ್ರಿವಾಲ್‌ ನಿವಾಸಕ್ಕೆ ತೆರಳಿದ ನಾಲ್ವರು ಮುಖ್ಯಮಂತ್ರಿಗಳು ಕೇಜ್ರಿವಾಲ್‌ ಅವರ ಪತ್ನಿ ಮತ್ತು ಆಮ್‌ ಆದ್ಮಿ ಪಕ್ಷದ ನಾಯಕರಿಗೆ ನೈತಿಕ ಸ್ಥೈರ್ಯ ತುಂಬಿದ್ದಾರೆ.

ಕದಲದ ಕೇಜ್ರಿವಾಲ್‌: ಸೋಮವಾರ ಸಂಜೆಯಿಂದಲೇ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿ ನಿರೀಕ್ಷಣಾ ಕೊಠಡಿಯಲ್ಲಿ ಬಿಡಾರ ಹೂಡಿರುವ ನಾಲ್ವರು ಇದುವರೆಗೂ ಅಲ್ಲಿಂದ ಕದಲಿಲ್ಲ. ಅಲ್ಲಿಂದಲೇ ಟ್ವೀಟ್‌ ಮೂಲಕ  ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೂ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಇದುವರೆಗೂ ಧರಣಿ ನಿರತರನ್ನು ಭೇಟಿಯಾಗಿಲ್ಲ. ಇದು ಆಮ್‌ ಆದ್ಮಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಕೆರಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry