ಮುಸ್ಲಿಂ ಯುವಕರಿಂದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ

7

ಮುಸ್ಲಿಂ ಯುವಕರಿಂದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ

Published:
Updated:
ಮುಸ್ಲಿಂ ಯುವಕರಿಂದ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ

ಪುತ್ತೂರು: ತಾಲ್ಲೂಕಿನ ಕಬಕ ಗ್ರಾಮದ ವಿದ್ಯಾಪುರ ಕಾಲೋನಿಯಲ್ಲಿ ಶನಿವಾರ ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರಿರು ಮುಂದೆ ಬರದಿದ್ದಾಗ ಮುಸ್ಲಿಂ ಯುವಕರು ಹಣ ಸಂಗ್ರಹಿಸಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ದಿ.ನಾರಾಯಣ ಸಿಂಗ್ ಎಂಬವರ ಪುತ್ರಿ ಭವಾನಿ (52) ಮೃತಪಟ್ಟವರು. ಭವಾನಿ ಹಲವಾರು ವರ್ಷಗಳಿಂದ ಚಿಕ್ಕಪ್ಪನ ಪುತ್ರ ಕೃಷ್ಣ ಸಿಂಗ್ ಎಂಬವರೊಂದಿಗೆ ವಿದ್ಯಾಪುರದಲ್ಲಿರುವ ಮನೆಯಲ್ಲಿ ವಾಸ್ತವ್ಯವಿದ್ದರು. ಬೆಳಿಗ್ಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಸಂಬಂಧಿಕರಿಗೆ ವಿಷಯ ತಿಳಿಸಿದ್ದರೂ ಯಾರೂ ಬಂದಿರಲಿಲ್ಲ. ಮೃತದೇಹ ಮನೆಯಲ್ಲಿಯೇ ಉಳಿದಿತ್ತು.

‘ಸ್ಥಳೀಯ ಮುಸ್ಲಿಂ ಯುವಕರು ಮೃತಮಹಿಳೆಯ ಸಂಬಂಧಿ ಕೃಷ್ಣ ಸಿಂಗ್ ಅವರಲ್ಲಿ ವಿಚಾರಿಸಿದಾಗ ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲು ನನ್ನಲ್ಲಿ ಹಣವಿಲ್ಲ’ ಎಂದು ತಿಳಿಸಿದ್ದರು. ಆಗ ಯುವಕರೆಲ್ಲಾ ಒಟ್ಟಾಗಿ ಹಣ ಸಂಗ್ರಹಿಸಿದ್ದರು. ಹಿಂದೂ ಮತ್ತು ಮುಸ್ಲಿಂ ಮಹಿಳೆಯರು ಬೀಡಿ ಕಟ್ಟಿ ಗಳಿಸಿದ ಹಣವನ್ನು ತಂದು ಯುವಕರಿಗೆ ನೀಡಿದ್ದರು.

ಈ ಮಾಹಿತಿ ಅರಿತ ಗ್ರಾಮ ಬೀಟ್ ಪೊಲೀಸ್ ಸಿಬ್ಬಂದಿಯೂ ಆದ  ನಗರ ಠಾಣೆಯ ಮಂಜುನಾಥ ಅವರು ಮೃತರ ಮನೆಗೆ ಬಂದು ತನ್ನಿಂದಾದ ಆರ್ಥಿಕ ಸಹಾಯ ನೀಡಿ ಯುವಕರ ಕಾರ್ಯಕ್ಕೆ ಕೈಜೋಡಿಸಿದ್ದರು. ಮುಸ್ಲಿಂ ಯುವಕರೇ ಮೃತರ ಸಹೋದರನ ಜೊತೆ ಸೇರಿಕೊಂಡು ಅಂತ್ಯ ಸಂಸ್ಕಾರದ ಪೂರ್ವ ವಿಧಿವಿಧಾನಗಳನ್ನು ಪೂರೈಸಿ ಬಳಿಕ ಪುತ್ತೂರಿನ ಮಡಿವಾಳ ಕಟ್ಟೆಯಲ್ಲಿನ ಸ್ಮಶಾನಕ್ಕೆ ಮೃತದೇಹವನ್ನು ತಂದು ಅಂತ್ಯ ಸಂಸ್ಕಾರ ನೆರವೇರಿಸಿದರು.

 

ಬರಹ ಇಷ್ಟವಾಯಿತೆ?

 • 32

  Happy
 • 0

  Amused
 • 2

  Sad
 • 1

  Frustrated
 • 0

  Angry