‘2.5 ಕೋಟಿ ಮೆಕ್ಸಿಕನ್ನರನ್ನು ಕಳಿಸುವೆ’

7
ಜಪಾನ್ ಪ್ರಧಾನಿ ಶಿಂಜೊ ಅಬೆಗೆ ಬೆದರಿಕೆಯೊಡ್ಡಿದ ಡೊನಾಲ್ಡ್‌ ಟ್ರಂಪ್‌

‘2.5 ಕೋಟಿ ಮೆಕ್ಸಿಕನ್ನರನ್ನು ಕಳಿಸುವೆ’

Published:
Updated:
‘2.5 ಕೋಟಿ ಮೆಕ್ಸಿಕನ್ನರನ್ನು ಕಳಿಸುವೆ’

ವಾಷಿಂಗ್ಟನ್‌ (ಎಎಫ್‌ಪಿ): ‘2.5 ಕೋಟಿ ಮೆಕ್ಸಿಕನ್ನರನ್ನು ಜಪಾನ್‌ಗೆ ಕಳಿಸುತ್ತೇನೆ. ವಲಸಿಗರನ್ನು ಇಟ್ಟುಕೊಂಡು ದೇಶ ಆಳುವುದು ಎಷ್ಟು ಕಷ್ಟ ಎಂಬುದು ಆಗ ನಿನಗೆ ತಿಳಿಯುತ್ತದೆ’ ಎಂದು ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸವಾಲು ಹಾಕಿದ್ದಾಗಿ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕೆನಡಾದಲ್ಲಿ ಕಳೆದ ವಾರ ನಡೆದ ಜಿ–7 ಶೃಂಗಸಭೆ ವೇಳೆ, ವ್ಯಾಪಾರ–ವಾಣಿಜ್ಯ ಕುರಿತು ಮಾತನಾಡುವ ಬದಲು, ವಲಸಿಗರ ಸಮಸ್ಯೆ ಮತ್ತು ಭಯೋತ್ಪಾದನೆ ಬಗ್ಗೆ ಮಾತನಾಡಲು ಟ್ರಂಪ್‌ ಮುಂದಾದಾಗ, ಜಪಾನ್‌ ಸೇರಿದಂತೆ ಉಳಿದ ರಾಷ್ಟ್ರಗಳ ಮುಖಂಡರು ಆಕ್ಷೇಪಿಸಿದ್ದರು. ಆಗ ಕೋಪಗೊಂಡ ಟ್ರಂಪ್‌, ಅಬೆಗೆ ಈ ಮಾತು ಹೇಳಿದ್ದಾಗಿ  ‘ದಿ ವಾಲ್‌ ಸ್ಟ್ರೀಟ್‌’ ವರದಿ ಮಾಡಿದೆ.

‘ಯುರೋಪ್‌ನಲ್ಲಿ ವಲಸಿಗರ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ’ ಎಂದ ಟ್ರಂಪ್, ‘ಅಬೆ, ನಾನೇನಾದರೂ ನಿನ್ನ ದೇಶಕ್ಕೆ 2.5 ಕೋಟಿ ಮೆಕ್ಸಿಕನ್ನರನ್ನು ಕಳಿಸಿದರೆ, ನೀನು ತಕ್ಷಣದಲ್ಲೇ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ’ ಎಂದು ಬೆದರಿಸಿದರು ಎಂಬುದಾಗಿ ಯುರೋಪಿಯನ್‌ ಒಕ್ಕೂಟದ ಅಧಿಕಾರಿಗಳೂ ತಿಳಿಸಿದ್ದಾರೆ.

ವಿಶ್ವದ ಪ್ರಮುಖ ಕೈಗಾರಿಕಾ ಪ್ರಧಾನ ರಾಷ್ಟ್ರಗಳಾದ ಏಳು ದೇಶಗಳ ಮುಖಂಡರು, ಟ್ರಂಪ್‌ ಅವರ  ಹೇಳಿಕೆಯಿಂದ ಅಸಮಾಧಾನಗೊಂಡರು ಮತ್ತು ಶೃಂಗಸಭೆಯ ಆತಿಥ್ಯ ವಹಿಸಿದ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ವಿರುದ್ಧ ಟ್ರಂಪ್‌ ನಡೆಸಿದ ನಿರಂತರ ವಾಗ್ದಾಳಿಯಿಂದ ಬೇಸತ್ತರು ಎಂದು ಅದು ಹೇಳಿದೆ.

ಇರಾನ್‌ ಮತ್ತು ಭಯೋತ್ಪಾದನೆಯತ್ತ ಚರ್ಚೆ ಹೊರಳಿದಾಗ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ನ್‍ರತ್ತ ಬೆರಳು ಮಾಡಿದ ಟ್ರಂಪ್, ‘ಈ ಸಮಸ್ಯೆ ಬಗ್ಗೆ ನೀನು ಮೊದಲು ತಿಳಿದುಕೊಳ್ಳಬೇಕು ಇಮ್ಯಾನುಯಲ್‌, ಏಕೆಂದರೆ ಎಲ್ಲ ಭಯೋತ್ಪಾದಕರೂ ಪ್ಯಾರಿಸ್‌ನಲ್ಲಿಯೇ ಇದ್ದಾರೆ’ ಎಂದು ಮೂದಲಿಸಿದರು ಎಂಬುದಾಗಿ ಐರೋಪ್ಯ ನಿಯೋಗದ ಸದಸ್ಯರು ಹೇಳಿದ್ದಾರೆ.

ಆದರೆ, ಮಾಧ್ಯಮಗಳ ವರದಿಯನ್ನು ನಿರಾಕರಿಸಿರುವ ಟ್ರಂಪ್‌, ‘ಮಾಧ್ಯಮಗಳು ಸುಳ್ಳು ವರದಿ ಮಾಡಿವೆ’ ಎಂದು ಟ್ವಿಟರ್‌ನಲ್ಲಿ ಹೇಳಿರುವುದಲ್ಲದೆ, ಜಿ–7 ರಾಷ್ಟ್ರಗಳ ನಾಯಕರೊಂದಿಗೆ ಇರುವ ಹಲವು ಫೋಟೊಗಳನ್ನು ಪೋಸ್ಟ್‌ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry