ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸೇರ್ಪಡೆಗೆ ಹಲವು ಸವಾಲು

ಪುಸ್ತಕ ಸಂವಾದ ಕಾರ್ಯಕ್ರಮದಲ್ಲಿ ಆರ್‌ಬಿಐನ ‌ಮಾಜಿ ಗವರ್ನರ್‌ ಡಾ. ವೈ. ವಿ. ರೆಡ್ಡಿ ಅಭಿಮತ
Last Updated 16 ಜೂನ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಹಣಕಾಸು ಸೇರ್ಪಡೆಗೆ ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿರುವುದರ ಜತೆಗೆ ಅದರ ವ್ಯಾಖ್ಯಾನ ಬದಲಿಸುವ ಅಗತ್ಯವೂ ಇದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿಗವರ್ನರ್‌ ಡಾ. ವೈ. ವಿ. ರೆಡ್ಡಿ ಅವರು ಅಭಿಪ್ರಾಯಪಟ್ಟರು.

ಪ್ರೊ. ಎಂ. ಎಸ್‌. ಶ್ರೀರಾಮ್ ಅವರು ಬರೆದಿರುವ ‘ಟಾಕಿಂಗ್‌ ಫೈನಾನ್ಶಿಯಲ್‌ ಇನ್‌ಕ್ಲುಷನ್‌ ಇನ್‌ ಲಿಬರಲೈಸ್ಡ್‌ ಇಂಡಿಯಾ’ ಪುಸ್ತಕದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಹಣಕಾಸು ಸೇರ್ಪಡೆ ಎಂದರೆ, ಹಣಕಾಸು ಸೇವೆಗಳನ್ನು ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಒದಗಿಸುವುದು, ಹಣಕಾಸು ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು ಎಂದರ್ಥ. ಇದರ ಉದ್ದೇಶ ಸಾಧನೆಗೆ ಬಹುಬಗೆಯ ಹಣಕಾಸು ಸಂಸ್ಥೆಗಳ ಅಗತ್ಯ ಇದೆ. ಈ ಸೌಲಭ್ಯ ವಿಸ್ತರಣೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಆರ್ಥಿಕ ಅಭಿವೃದ್ಧಿ ಮತ್ತು ನಿಯಂತ್ರಣ ದೃಷ್ಟಿಯಿಂದ ಇದು ರಾಷ್ಟ್ರೀಯ ಕಾರ್ಯಕ್ರಮ ಆಗಬೇಕಾಗಿದೆ.

ಸಾಲ ಸೌಲಭ್ಯದ ಮಹತ್ವ: ‘ಹಣಕಾಸಿನ ನೆರವಿನ ಅಗತ್ಯ ಇರುವವರಿಗೆ ಸಾಲ ಸೌಲಭ್ಯ ಒದಗಿಸುವುದು, ಬಡವರು ತಮ್ಮ ದುಡಿಮೆಯಲ್ಲಿನ ಒಂದಿಷ್ಟು ಹಣವನ್ನು ಉಳಿತಾಯ ಮಾಡುವುದೂ ಇದರ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಜನರ ಹಣಕ್ಕೆ ಹೆಚ್ಚಿನ ಸುರಕ್ಷತೆ ಒದಗಿಸಬೇಕಾಗುತ್ತದೆ.

‘ಸಾಲ ನೀಡಿಕೆಯ ಪ್ರಮಾಣ ಹೆಚ್ಚಿದಂತೆ ಬ್ಯಾಂಕ್‌ಗಳ ನಷ್ಟದ ಬಾಬತ್ತೂ ಏರಿಕೆಯಾಗುತ್ತಿದೆ. ಈ ಸಾಲದ ವಿಷಯ ರಾಜಕೀಯಕರಣಗೊಳ್ಳುತ್ತಿದೆ. ಒಂದೆಡೆ  ಸಾಲ ನೀಡಿಕೆಗೆ ಆದ್ಯತೆ ನೀಡುತ್ತಿದ್ದರೆ, ಇನ್ನೊಂದೆಡೆ ಸಾಲ ಮನ್ನಾ ಮಾಡುತ್ತಿರುವುದು ಈ ಕಾರ್ಯಕ್ರಮ ಜಾರಿಗೆ ಹೊಸ ಸವಾಲು ಒಡ್ಡಿದೆ.

‘ಸಾಮಾಜಿಕ ಮತ್ತು ರಾಜಕೀಯ ಸೇರ್ಪಡೆಯೂ ಜತೆಯಾದರೆ ಮಾತ್ರ ಹಣಕಾಸು ಸೇರ್ಪಡೆಗೆ ಮಹತ್ವ ಬರುತ್ತದೆ. ಈ ಮೂರೂ ಬಗೆಯ ಸೇರ್ಪಡೆ ಮಧ್ಯೆ ಪರಸ್ಪರ ಸಂಬಂಧ ಇದೆ. ಹಣಕಾಸು ಸೇರ್ಪಡೆಯ ವ್ಯಾಪಕ ಅರ್ಥಕ್ಕೆ ಇನ್ನೂ ಉತ್ತರ ಕಂಡುಕೊಳ್ಳಬೇಕಾಗಿದೆ. ಇದರ ಮಧ್ಯೆಯೇ ಇದರ ಮಹತ್ವ ಕುಗ್ಗಿಸುವ ಪ್ರಯತ್ನಗಳೂ ನಡೆಯುತ್ತಿವೆ.

ಅಪೂರ್ವ ಪುಸ್ತಕ: ‘ಪ್ರೊ. ಶ್ರೀರಾಮ್‌ ಅವರು ಬರೆದಿರುವ ಈ ಕೃತಿ ಒಳಗೊಂಡಿರುವ ವಿಶಿಷ್ಟ ಮಾಹಿತಿಯ ಕಾರಣಕ್ಕೆ ಅಪೂರ್ವವಾಗಿದೆ. ಈ ವಿಷಯದ ಬಗ್ಗೆ ಆರ್‌ಬಿಐ ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ ಧೋರಣೆ ಬಗ್ಗೆ ಈ ಪುಸ್ತಕವು ವಿಶಿಷ್ಟ ಒಳನೋಟ ನೀಡುತ್ತದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಐವರು ಮಾಜಿ ಗವರ್ನರ್‌ ಮತ್ತು ಹಾಲಿ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರ ಜತೆಗಿನ ಸಂದರ್ಶನ ಆಧರಿಸಿ, ಹಣಕಾಸು ಸೇರ್ಪಡೆಯ ಪ್ರಗತಿ ಪಥದ ಚಿತ್ರಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಜತೆಗೆ ರಾಜಕಾರಣಿಗಳ ಚಿಂತನೆಗಳನ್ನೂ ಒಳಗೊಳ್ಳಬೇಕಾಗಿತ್ತು’ ಎಂದು ರೆಡ್ಡಿ ಅಭಿಪ್ರಾಯಪಟ್ಟರು. ಉಜ್ಜೀವನ್‌ ಸ್ಮಾಲ್ ಫೈನಾನ್ಸ್‌ ಬ್ಯಾಂಕ್‌ನ ಸಿಇಒ ಸಮಿತ್‌ ಘೋಷ್‌ ಮತ್ತು ಪ್ರೊ. ಶ್ರೀರಾಂ ಮಾತನಾಡಿದರು.

**

ಕುಡುಕ ಗಂಡನ ಕೈಸೇರದ ಹಣ

‘ದುಡಿಯುವ ಮಹಿಳೆ ತನ್ನ ಹಣವನ್ನು ಕುಡುಕ ಗಂಡನ ಸಿಗದಂತೆ ನೋಡಿಕೊಳ್ಳುವುದೂ ಹಣಕಾಸು ಸೇರ್ಪಡೆ ಎನಿಸಿಕೊಳ್ಳುತ್ತದೆ ಎಂದು ಲಘು ಧಾಟಿಯಲ್ಲಿ ವ್ಯಾಖ್ಯಾನಿಸಬಹುದು. ಉದ್ದಿಮೆದಾರ ಸುಸ್ತಿದಾರನಾದರೆ ಆತನಿಗೆ ವಂಚಕ ಹಣೆಪಟ್ಟಿ ಹಚ್ಚಲಾಗುತ್ತದೆ. ರೈತ ಸಾಲ ಪಾವತಿಸದಿದ್ದರೆ ಸಬ್ಸಿಡಿ ನೀಡಲಾಗುತ್ತಿದೆ. ಏನೇನು ಮನ್ನಾ ಮಾಡಬೇಕು ಎಂದು ರಾಜಕೀಯ ಪಕ್ಷಗಳಲ್ಲಿ ಪೈಪೋಟಿ ನಡೆದಿದೆ. ರೈತರು ಎದುರಿಸುವ ಸಂಕಷ್ಟಕ್ಕೆ ಪರ್ಯಾಯ ಪರಿಹಾರ ಕಂಡುಕೊಳ್ಳಬೇಕು’ ಎಂದು ರೆಡ್ಡಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT