ಮೋಡಿ ಮಾಡುವರೇ ನೇಮರ್‌?

7
ಇ ಗುಂಪಿನ ಪಂದ್ಯ: ಬ್ರೆಜಿಲ್‌ಗೆ ಪೈಪೋಟಿ ನೀಡುವ ಉತ್ಸಾಹದಲ್ಲಿ ಸ್ವಿಟ್ಜರ್‌ಲೆಂಡ್‌

ಮೋಡಿ ಮಾಡುವರೇ ನೇಮರ್‌?

Published:
Updated:
ಮೋಡಿ ಮಾಡುವರೇ ನೇಮರ್‌?

ಸೋಚಿ (ಎಎಫ್‌ಪಿ): ಫುಟ್‌ಬಾಲ್‌ ಕ್ರೀಡೆಯ ‘ನಾಡು’ ಬ್ರೆಜಿಲ್‌ ತನ್ನ ಮೊದಲ ಪಂದ್ಯದಲ್ಲಿ ಗೆದ್ದು ಈ ಬಾರಿಯ ಟೂರ್ನಿಯಲ್ಲಿ ಶುಭಾರಂಭ ಮಾಡುವ ಕಾತರದಲ್ಲಿದೆ.

ಭಾನುವಾರ ರಾತ್ರಿ ರೊಸ್ತೋವ್‌ ಅರೆನಾದಲ್ಲಿ ನಡೆಯುವ ‘ಇ’ ಗುಂಪಿನ ಪಂದ್ಯದಲ್ಲಿ ಅತೀ ಹೆಚ್ಚು ಬಾರಿ ವಿಶ್ವಕಪ್‌ ಜಯಿಸಿರುವ ಖ್ಯಾತಿಯ ಬ್ರೆಜಿಲ್‌ ತಂಡವು ಸ್ವಿಟ್ಜರ್‌ಲೆಂಡ್‌ ವಿರುದ್ಧ ಸೆಣಸಲಿದೆ. ಉಭಯ ತಂಡಗಳು ಇಲ್ಲಿಯವರೆಗೆ ಮೂರು ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದು ಪಂದ್ಯ ಜಯಿಸಿವೆ. ಇನ್ನೊಂದು ಡ್ರಾನಲ್ಲಿ ಅಂತ್ಯವಾಗಿತ್ತು.

ಸದ್ಯ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಬ್ರೆಜಿಲ್‌ನ ನೇಮರ್‌ ಈ ಪಂದ್ಯದ ಪ್ರಮುಖ ಆಕರ್ಷಣೆ. ಅವರ ಡ್ರಿಬ್ಲಿಂಗ್‌, ಫ್ರಿ ಕಿಕ್‌ ಹಾಗೂ ಹೆಡರ್‌ಗಳ ರೋಚಕತೆಯನ್ನು ಅನುಭವಿಸಲು ಫುಟ್‌ಬಾಲ್ ಅಭಿಮಾನಿಗಳು ಕಾದುಕುಳಿತಿದ್ದಾರೆ.

26 ವರ್ಷದ ನೇಮರ್‌ ಈ ಬಾರಿಯ ಟೂರ್ನಿಯಲ್ಲಿ ಚಿನ್ನದ ಬೂಟು ಜಯಿಸುವ ನೆಚ್ಚಿನ ಆಟಗಾರರ ಪಟ್ಟಿಯಲ್ಲಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಗೋಲು ಗಳಿಸಿದ್ದ ಅವರು ಕಂಚಿನ ಬೂಟು ತಮ್ಮದಾಗಿಸಿಕೊಂಡಿದ್ದರು. ಫೆಬ್ರುವರಿಯಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಅಭ್ಯಾಸ ಪಂದ್ಯಗಳಲ್ಲಿ ಗೋಲು ಗಳಿಸಿ ತಾವು ಸಂಪೂರ್ಣ ಫಿಟ್‌ ಎಂದು ಸಾಬೀತುಪಡಿಸಿದ್ದಾರೆ.

ಕಳೆದ ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬ್ರೆಜಿಲ್‌ ತಂಡವು ಇತ್ತೀಚಿನ ದಿನಗಳಲ್ಲಿ ಕೋಚ್‌ ಟಿಟೆ ಅವರ ತರಬೇತಿಯಲ್ಲಿ ಸಾಕಷ್ಟು ಬದಲಾಗಿದೆ. ಅವರು ಈ ಪಂದ್ಯದಲ್ಲಿ ತಂಡವನ್ನು 4–3–3ರ ಯೋಜನೆಯೊಂದಿಗೆ ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆ.

ಮುಂಚೂಣಿ ವಿಭಾಗದಲ್ಲಿ ನೇಮರ್‌ ಹಾಗೂ ವಿಲಿಯನ್‌, ಮಿಡ್‌ಫೀಲ್ಡ್‌ ವಿಭಾಗದಲ್ಲಿ ಫಿಲಿಪ್‌ ಕುಟಿನ್ಹೊ, ಕೆಸ್‌ಮಿರೊ ಹಾಗೂ ಪೌಲಿನ್ಹೊ ತಂಡದ ಬಲಾಢ್ಯ ಶಕ್ತಿಗಳು.

ಗೆಲುವಿನ ನಿರೀಕ್ಷೆಯಲ್ಲಿ ಸ್ವಿಟ್ಜರ್‌ಲೆಂಡ್‌: ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದ್ದ ಸ್ವಿಟ್ಜರ್‌ಲೆಂಡ್‌ ತಂಡವು ಬಲಿಷ್ಠ ಬ್ರೆಜಿಲ್‌ ತಂಡದ ಸವಾಲು ಮೀರುವ ನಿರೀಕ್ಷೆಯಲ್ಲಿದೆ.

ಸ್ವಿಟ್ಜರ್‌ಲೆಂಡ್‌ ತಂಡವು ಸಂಘ ಟಿತ ಹೋರಾಟ ನಡೆಸುವ ಶಕ್ತಿ ಹೊಂದಿದೆ. ವ್ಲಾದಿಮಿರ್‌ ಪೆಟ್ಕೊವಿಕ್‌ ಅವರ ಗರಡಿಯಲ್ಲಿ ಪಳಗಿರುವ ಈ ತಂಡವು ಇತ್ತೀಚಿನ ವರ್ಷಗಳಲ್ಲಿ ನಡೆದ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದೆ.

ತಂಡದ ರಕ್ಷಣಾ ಹಾಗೂ ಮಿಡ್‌ಫೀಲ್ಡ್‌ ವಿಭಾಗಗಳು ತೀವ್ರ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿವೆ. ಮಿಡ್‌ಫೀಲ್ಡ್‌ ವಿಭಾಗದ ಕ್ಸೆದ್ರಾನ್‌ ಶಕಿರಿ ಅವರು ಪಂದ್ಯದ ಗತಿ ಬದಲಿಸಬಲ್ಲ ಆಟಗಾರ. ಅನುಭವಿ ಆಟಗಾರರೇ ಹೆಚ್ಚಿರುವ ಈ ತಂಡವು ಬ್ರೆಜಿಲ್‌ಗೆ ಆಘಾತ ನೀಡಲು ಹೊಸ ಯೋಜನೆಯೊಂದಿಗೆ ಕಣಕ್ಕಿಳಿ ಯುವ ಸಾಧ್ಯತೆ ಹೆಚ್ಚಿದೆ.

* ಶಸ್ತ್ರಚಿಕಿತ್ಸೆಯ ನಂತರ ಮೂರು ತಿಂಗಳಲ್ಲೇ ಚೇತರಿಸಿಕೊಂಡ ನೇಮರ್‌ ಮತ್ತೆ ತಮ್ಮ ಆಟದ ಲಯಕ್ಕೆ ಮರಳಿದ್ದಾರೆ. ಇದರಿಂದ ತಂಡದ ಬಲ ಹೆಚ್ಚಿದೆ – –ಥಿಯಾಗೊ ಸಿಲ್ವಾ, ಬ್ರೆಜಿಲ್‌ ತಂಡದ ಆಟಗಾರ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry