ಶಾಂತಿ, ಸೌಹಾರ್ದದ ಪ್ರತೀಕ

7

ಶಾಂತಿ, ಸೌಹಾರ್ದದ ಪ್ರತೀಕ

Published:
Updated:

ಮೂಡಲಗಿ: ಇಲ್ಲಿಯ ಮುಸ್ಲಿಮರು ಶನಿವಾರ ಈದ್‌ ಉಲ್‌ ಫಿತ್ರ್‌ ಅನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಗಾಂಧಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಪವಿತ್ರ ಕುರಾನ್‌ ಪಠಣದೊಂದಿಗೆ ಸಾಗಿ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡಿತು.

ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದರು. ಧರ್ಮಗುರು ಮಹ್ಮದ ಶಫೀಕ್‌ ಆಜ್ಮೀ ಮಾತನಾಡಿ, ‘ದಾನ, ಧರ್ಮ, ತ್ಯಾಗಗುಣವನ್ನು ಬೆಳೆಸುವ ಈದ್‌ ಉಲ್‌–ಫಿತ್ರ್‌ ಮಾನವೀಯತೆಯನ್ನು ಬಿಂಬಿಸುತ್ತದೆ. ಶಾಂತಿ, ಸೌಹಾರ್ದತೆಯ ಪ್ರತೀಕವಾಗಿದೆ’ ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಶುಭ ಸಂದೇಶ ತಿಳಿಸಿದರು. ಹಫೀಜ್‌ ನಿಜಾಮುದ್ದೀನ್, ಮೌಲಾನಾ ಅಮೀರಸಾಬ್ ಥರಥರಿ, ಅಂಜುಮನ್‌ ಇಸ್ಲಾಂ ಸಂಸ್ಥೆ ಅಧ್ಯಕ್ಷ ಅಜೀಜ್‌ ಡಾಂಗೆ, ಬಿಟಿಟಿ ಕಮಿಟಿ ಅಧ್ಯಕ್ಷ ಷರೀಪ್‌ ಪಟೇಲ, ಆದಮ್‌ ತಾಂಬೂಳಿ, ರೆಹಮಾನ್‌ ಝರೆ, ಭಶೀರ ಪಿರಜಾದೆ, ಲಾಲಸಾಬ ಅತ್ತಾರ, ಮಲ್ಲಿಕ ಹುಣಶ್ಯಾಳ, ಅಮೀರಸಾಬ ಪೀರಜಾದೆ, ಮೈನು ಪಟೇಲ, ಇರ್ಷಾದ್‌ ಇನಾಮ್ದಾರ್, ಹುಸೇನ್‌ಸಾಬ ಅತ್ತಾರ, ಎನ್.ಎಂ. ಥರಥರಿ, ಗಫಾರ ಡಾಂಗೆ, ಪುರಸಭೆ ಸದಸ್ಯ ಅನ್ವರ ನಧಾಪ, ಯುನುಪ ಹವಾಲ್ದಾರ್, ಮುನ್ನಾ ಮುಲ್ಲಾ ಸೇರಿದಂತೆ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.

ಸಾಮೂಹಿಕ ಪ್ರಾರ್ಥನೆ

ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಡಗರದಿಂದ ಮುಸ್ಲಿಂ ಸಮಾಜದವರು ಈದ್ ಉಲ್ ಫಿತ್ರ್ ಆಚರಿಸಿದರು. ಕಿತ್ತೂರಿನ ಆರು ಮತ್ತು ನಿಚ್ಚಣಕಿಯ ಒಂದು ಮಸೀದಿಯಿಂದ ಗುಂಪು, ಗುಂಪಾಗಿ ಪ್ರಾರ್ಥನೆ ಮಾಡುತ್ತ ಇಲ್ಲಿಯ ಉಪ ಅರಣ್ಯ ಇಲಾಖೆ ಕಚೇರಿ ಬಳಿ ಇರುವ ಈದ್ಗಾ ಮೈದಾನಕ್ಕೆ ತೆರಳಿದರು. ಜನಾಬ್ ಮುಫ್ತಿ ಇನಾಮುಲ್ಲಾ ಹಸನ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ನಂತರ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ಕೋರಿದರು. ಜಾಮೀಯಾ ಮಸೀದ್, ಜುಮ್ಮಾ ಮಸೀದ್, ಮಕ್ಕಾ ಮಸೀದ್, ಬಿಲಾಲ್ ಮಸೀದ್, ಖೂಬಾ ಮಸೀದ್, ನೂರಾನಿ ಮಸೀದ್ ಮತ್ತು ನಿಚ್ಚಣಕಿ ಮಸೀದ್ ಕಮೀಟಿ ಸದಸ್ಯರು ಸೇರಿದಂತೆ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಸವದತ್ತಿ: ಒಂದು ತಿಂಗಳು ರಮ್ಜಾನ್‌ ಉಪವಾಸ ವೃತ ಮಾಡಿದ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು ಕೊನೆಯ ದಿನವಾದ ಶನಿವಾರ ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದರು.

ಹಬ್ಬದ ಅಂಗವಾಗಿ ಪಟ್ಟಣದ ಹಗ್ಗದೇವರ ಓಣಿ, ಉಪಾಸಗೇರಿಗಲ್ಲಿ, ಹುಡೇದಗಲ್ಲಿ ಇತರ ಕಡೆಗಳಿಂದ ಮುಸ್ಲಿಂ ಬಾಂಧವರು ಗುಂಪುಗುಂಪಾಗಿ ಅಲ್ಲಾನ ನಾಮ ಸ್ಮರಣೆ ಮಾಡುತ್ತ ಇಲ್ಲಿನ ಎಸ್‌.ಎಲ್‌.ಒ ಕ್ರಾಸ್‌ ಬಳಿ ಇರುವ ಈದ್ಗಾ ಮೈದಾನ ತಲುಪಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಸಮಸ್ತ ಬಾಂಧವರನ್ನು ಉದ್ದೇಶಿಸಿ ಮೌಲಾನಾ ಇಮ್ತಿಯಾಜ ಅತ್ತಾರ ಮಾತನಾಡಿದರು. ಸಾಮೂಹಿಕ ಪ್ರಾರ್ಥನೆಯ ನಂತರ ಸಮಸ್ತ ಮುಸ್ಲಿಂ ಬಾಂಧವರು ಹಾಗೂ ಮಕ್ಕಳು ಒಬ್ಬರನ್ನೊಬ್ಬರು ಆಲಿಂಗಿಸಿ ಹಬ್ಬದ ಶುಭಕೋರಿದರು.

ಶಾಸಕ ಆನಂದ ಮಾಮನಿ, ಪುರಸಭೆ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ಹಿರಿಯರಾದ ಲಕ್ಷ್ಮರಾವ ಕುಲಕರ್ಣಿ, ಶಂಕರಗೌಡ ಪಾಟೀಲ ಶುಭ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry