ರಂಜಾನ್‌ ಆಚರಣೆಗೆ ಸಂಭ್ರಮದ ತೆರೆ

7
ಈದ್‌ ಉಲ್‌ ಫಿತ್ರ್‌: ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಸಾವಿರಾರು ಮುಸ್ಲಿಮರು

ರಂಜಾನ್‌ ಆಚರಣೆಗೆ ಸಂಭ್ರಮದ ತೆರೆ

Published:
Updated:

ದಾವಣಗೆರೆ: ಇಸ್ಲಾಂನ ಪವಿತ್ರ ಹಬ್ಬ ಈದ್‌ ಉಲ್‌ ಫಿತ್ರ್‌ ಅನ್ನು ಜಿಲ್ಲೆಯೆಲ್ಲೆಡೆ ಶನಿವಾರ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.

ರಂಜಾನ್‌ ಅಂಗವಾಗಿ ತಿಂಗಳಿಡೀ ಉಪವಾಸ ಆಚರಿಸಿದ ಮುಸ್ಲಿಮರು ಖಬರ್‌ಸ್ಥಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಆಚರಣೆಗೆ ತೆರೆ ಎಳೆದರು.

ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮರು ಮೊದಲು ಸಿಹಿ ಹಂಚಿ, ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದ್ದರು.

ನಗರದ ಪಿ.ಬಿ. ರಸ್ತೆಯ ಹಳೇ ಈದ್ಗಾ ಮೈದಾನ, ಮಾಗನಹಳ್ಳಿ ರಸ್ತೆಯ ರಜಾವುಲ್ಲಾ ಮುಸ್ತಫಾ ನಗರದಲ್ಲಿರುವ ಹೊಸ ಈದ್ಗಾ ಮೈದಾನ ಹಾಗೂ ಕೈಗಾರಿಕಾ ಪ್ರದೇಶದಲ್ಲಿರುವ ಖಲಂದರಿಯಾ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈದ್‌ ಉಲ್‌ ಫಿತ್ರ್‌ ಅಂಗವಾಗಿ ನಗರದ ಎಲ್ಲಾ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪಿ.ಬಿ. ರಸ್ತೆಯ ಹಳೇ ಈದ್ಗಾ ಮೈದಾನ ತುಂಬಿದ್ದರಿಂದ ಪಿ.ಬಿ. ರಸ್ತೆಯ ಎರಡು ಬದಿಗಳಲ್ಲೂ ಚಾಪೆ, ಚಾದರ ಹಾಸಿ, ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಈದ್ಗಾ ಮೈದಾನ ಸಮೀಪ ಸುಮಾರು ಅರ್ಧ ಕಿ.ಮೀ ಉದ್ದಕ್ಕೂ ಪಿ.ಬಿ. ರಸ್ತೆ ಶ್ವೇತ ವಸ್ತ್ರಧಾರಿಗಳಿಂದ ಕಂಗೊಳಿಸುತ್ತಿತ್ತು. ಪ್ರಾರ್ಥನೆ ನಡೆಯುವ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಪಿ.ಬಿ. ರಸ್ತೆಗೆ ಪರ್ಯಾಯ ರಸ್ತೆಗಳಲ್ಲಿ ವಾಹನಗಳು ಸಾಗಿದವು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಪಿ.ಬಿ. ರಸ್ತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಆರಂಭವಾಗುವುದಕ್ಕೂ ಮುನ್ನ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್‌ ರಂಜಾನ್‌ ಶುಭಾಶಯ ಹೇಳಿದರು.

ವಿಶೇಷ ಭೋಜನದ ಸವಿ

ತಿಂಗಳಿಡೀ ಉಪವಾಸ ಆಚರಿಸಿದ್ದ ಮುಸ್ಲಿಮರು, ಈದ್‌ ಉಲ್‌ ಫಿತ್ರ್‌ ದಿನದಂದು ವಿಶೇಷವಾಗಿ ಊಟ ಸೇವಿಸಿದರು. ಶಾವಿಗೆ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಸಕ್ಕರೆ, ಹಾಲು, ಗಸಗಸೆ, ಪಿಸ್ತಾ ಬಳಸಿ ತಯಾರಿಸುವ ವಿಶೇಷ ಸಿಹಿ ತಿಂಡಿಗಳು ಹಾಗೂ ಬಗೆಬಗೆಯ ಮಾಂಸಾಹಾರಗಳನ್ನು ಮನೆಯಲ್ಲೇ ಸಿದ್ಧಪಡಿಸಲಾಗಿತ್ತು. ವಿಶೇಷ ಭೋಜನವನ್ನು ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರ ಜತೆಗೆ ಸವಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry