ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಜಿಲ್ಲಾ ಕೇಂದ್ರಗಳಲ್ಲಿ ರೈತರ ಪ್ರತಿಭಟನೆ

ಸಾಲಮನ್ನಾ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿಗೆ ರೈತ ಸಂಘದ ಆಕ್ರೋಶ
Last Updated 17 ಜೂನ್ 2018, 7:19 IST
ಅಕ್ಷರ ಗಾತ್ರ

ದಾವಣಗೆರೆ: ಸಂಪೂರ್ಣ ಸಾಲಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂನ್‌ 18ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.

‘ಮೇ 30ರಂದು ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ 15 ದಿನಗಳ ಒಳಗೆ ರೈತರ ಸಾಲಮನ್ನಾ ಮಾಡಿ ಋಣಮುಕ್ತ ಪತ್ರವನ್ನು ಮನೆಬಾಗಿಲಿಗೆ ಕಳುಹಿಸುವುದಾಗಿ ಹೇಳಿದ್ದರು. ಆದರೆ, ಈ ಗಡುವು ಮುಗಿದರೂ ಈ ಬಗ್ಗೆ ಇನ್ನೂ ಸ್ಪಷ್ಟವಾದ ತೀರ್ಮಾನ ಕೈಗೊಳ್ಳದಿರುವುದರಿಂದ ರೈತರಲ್ಲಿ ಆತಂಕ ಮೂಡಿದೆ. ಶೂನ್ಯ ಬಡ್ಡಿದರದ ಲಾಭ ಪಡೆಯಲು ಜೂನ್‌ 16ರೊಳಗೆ ಸಾಲದ ಕಂತನ್ನು ಪಾವತಿಸಬೇಕಾಗಿದೆ. ಹೊಸದಾಗಿ ಕೃಷಿ ಚಟುವಟಿಕೆಯನ್ನೂ ಆರಂಭಿಸಲು ರೈತರು ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ತಾವು ಅಧಿಕಾರಕ್ಕೆ ಬಂದರೆ ರೈತರ ₹ 53 ಸಾವಿರ ಕೋಟಿ ಸಾಲವನ್ನು 24 ಗಂಟೆಯೊಳಗೆ ಮನ್ನಾ ಮಾಡುವುದಾಗಿ ಚುನಾವಣೆ ವೇಳೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ದಿನದೂಡುತ್ತಿದ್ದಾರೆ. ಬಜೆಟ್‌ನಲ್ಲಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ವಿಳಂಬ ನೀತಿಯನ್ನು ಖಂಡಿಸಿ ಎಲ್ಲಾ ಜಿಲ್ಲಾ ಘಟಕಗಳು 18ರಂದು ಆಯಾ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಿವೆ’ ಎಂದರು.

‘ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್‌ ಬೇಷರತ್‌ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಸಾಲಮನ್ನಾಕ್ಕೆ ಯಾವುದೇ ತೊಡಕು ಇಲ್ಲ. ಸಾಲ ಮನ್ನಾ ಮಾಡಲು ಸಹಕಾರ ನೀಡುವಂತೆ ಕಾಂಗ್ರೆಸ್‌ ಪಕ್ಷಕ್ಕೂ ನಾವು ಮನವಿ ಮಾಡುತ್ತೇವೆ’ ಎಂದು ಹೇಳಿದರು.

‘ನೈಸರ್ಗಿಕ ವಿಕೋಪದಿಂದ ಅನುಭವಿಸಿದ ನಷ್ಟದಿಂದ, ಬೆಳೆಗೆ ಲಾಭದಾಯಕ ಬೆಲೆ ಮುಕ್ತಮಾರುಕಟ್ಟೆಯಲ್ಲಿ ಸಿಗದಿರುವುದರಿಂದ ರೈತರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಸಾಲಮನ್ನಾ ಮಾಡಬೇಕಾಗಿದೆ ಎಂಬುದನ್ನು ಸರ್ಕಾರ ಸಮಾಜಕ್ಕೆ ತಿಳಿಸಿಕೊಡಬೇಕು’ ಎಂದು ಚಾಮರಸ ಮಾಲಿಪಾಟೀಲ ಸಲಹೆ ನೀಡಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ‘ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸಾಲಮನ್ನಾ ಮಾಡುತ್ತಿದ್ದೇವೆ ಎಂಬ ಅನುಕಂಪದ ಮಾತು ಬೇಡ. ನಾವು ಅಂಥ ದೈನೇಸಿ ಸ್ಥಿತಿಗೆ ತಲುಪಿಲ್ಲ. ರೈತರು ತೊಂದರೆಗೆ ಸಿಲುಕಲು ಸರ್ಕಾರದ ನೀತಿಯೇ ಕಾರಣ. ಉತ್ತಮ ಬೀಜವನ್ನು ಕೊಡಲು ಸಾಧ್ಯವಾಗಿಲ್ಲ; ಲಾಭದಾಯಕ ಮಾರುಕಟ್ಟೆ ನೀಡಿಲ್ಲ. ಆಡಳಿತಗಾರರು ಮೋಸ ಮಾಡಿದ್ದರಿಂದಲೇ ರೈತರು ಈ ಸ್ಥಿತಿಗೆ ಬಂದಿದ್ದಾರೆ ಎಂಬ ವಾಸ್ತವ ಅಂಶವನ್ನು ಜನರಿಗೆ ತಿಳಿಸಿದ ಬಳಿಕ ಸಾಲಮನ್ನಾ ಮಾಡಬೇಕು’ ಎಂದು ಕೋರಿದರು.

‘ರೈತರಿಂದ ಎಂದೂ ಸರ್ಕಾರದ ಖಜಾನೆಗೆ ಪೆಟ್ಟು ಬಿದ್ದಿಲ್ಲ. ಕಾರ್ಪೊರೇಟ್‌ ಕಂಪನಿಗಳು, ಸಾಲ ಪಡೆದು ವಂಚಿಸಿದ ಉದ್ಯಮಿಗಳಿಂದ ಖಜಾನೆಗೆ ನಷ್ಟವಾಗಿದೆ’ ಎಂದ ಅವರು, ‘ಸಾಲಮನ್ನಾ ಮಾಡುವಾಗ ಸಣ್ಣ, ಮಧ್ಯಮ, ದೊಡ್ಡ ರೈತರು ಎಂದು ಒಡೆದು ಆಳುವ ನೀತಿ ಅನುಸರಿಸಬೇಡಿ. ಎಲ್ಲಾ ರೈತರೂ ಒಂದೇ. ಎಲ್ಲರಿಗೂ ಒಂದೇ ರೀತಿಯ ಸಂಕಷ್ಟಗಳಿವೆ’ ಎಂದು ಪ್ರತಿಪಾದಿಸಿದರು.

ಸಂಘದ ಉಪಾಧ್ಯಕ್ಷರಾದ ವಾಸನದ ಓಂಕಾರಪ್ಪ, ಇಟಗಿ ಬಸವರಾಜ, ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌, ಮುಖಂಡರಾದ ಚಕ್ಕನಹಳ್ಳಿ ರೇವಣಸಿದ್ದಪ್ಪ, ಅಶೋಕ, ಬಲ್ಲೂರು ನಾಗರಾಜ ಅವರೂ ಇದ್ದರು.

‘ಆಂಧ್ರ ಮಾದರಿ ಅನುಸರಿಸಲಿ’

ಇಸ್ರೇಲ್‌ ಮಾದರಿಯ ಕೃಷಿ ಪದ್ಧತಿಯನ್ನು ಜಾರಿಗೆ ತರುವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ, ನೆರೆಯ ಆಂಧ್ರಪ್ರದೇಶದಲ್ಲಿ ಸುಭಾಷ್‌ ಪಾಳೇಕರ್‌ ಅವರ ಸಹಜ ಕೃಷಿ ಪದ್ಧತಿಯನ್ನು ಅನುಷ್ಠಾನಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಅಲ್ಲಿನ ಸಾವಯವ ಕೃಷಿ ಪದ್ಧತಿಯಿಂದ ಗುಣಮಟ್ಟದ ಆಹಾರ ಪದಾರ್ಥಗಳ ಉತ್ಪಾದನೆಯಾಗುವುದರಿಂದ ಹಲವು ವಿದೇಶಿ ಕಂಪನಿಗಳು ಆರ್ಥಿಕ ನೆರವನ್ನು ನೀಡಲು ಮುಂದೆ ಬಂದಿದೆ. ‘ಆಂಧ್ರದ ಮಾದರಿ’ ಕೃಷಿಯ ಬಗ್ಗೆ ಕುಮಾರಸ್ವಾಮಿ ಮೊದಲು ಗಮನಹರಿಸಲಿ ಎಂದು ಬಡಗಲಪುರ ನಾಗೇಂದ್ರ ಸಲಹೆ ನೀಡಿದರು.

ಸಾಲಮನ್ನಾ ಮಾಡಿದರೆ ಅದರ ಶ್ರೇಯಸ್ಸು ಕುಮಾರಸ್ವಾಮಿಗೆ ಮಾತ್ರ ಸಿಗುವುದಿಲ್ಲ; ಜೆಡಿಎಸ್‌– ಕಾಂಗ್ರೆಸ್‌ ಎರಡೂ ಪಕ್ಷಗಳಿಗೆ ದೊರೆಯಲಿದೆ
ಚಾಮರಸ ಮಾಲಿಪಾಟೀಲ, ಗೌರವಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT