ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ಸಿಟಿ ರೈಲಿನ ವೇಳೆ ಆ.1ರಿಂದ ಬದಲು

ಬೆಳಿಗ್ಗೆ 6 ಗಂಟೆಗೆ ಹೊರಡಲಿರುವ ಗುಲಬರ್ಗಾ– ಹೈದರಾಬಾದ್‌ ರೈಲು
Last Updated 17 ಜೂನ್ 2018, 8:01 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ– ಹೈದರಾ ಬಾದ್– ಗುಲಬರ್ಗಾ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌ (ಗಾಡಿ ಸಂಖ್ಯೆ 11307/08) ರೈಲಿನ ವೇಳಾಪಟ್ಟಿ ಆಗಸ್ಟ್ 1ರಿಂದ ಬದಲಾಗಲಿದೆ.

ಕಲಬುರ್ಗಿ ರೈಲು ನಿಲ್ದಾಣದಿಂದ ಬೆಳಿಗ್ಗೆ 10.15 ಗಂಟೆಯ ಬದಲು ಬೆಳಿಗ್ಗೆ 6ಗಂಟೆಗೆ ಈ ರೈಲು ಹೊರಡಲಿದೆ. ರೈಲು ನಿಲುಗಡೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಈ ಕುರಿತು ಕೇಂದ್ರ ರೈಲ್ವೆ ಸಚಿವಾಲಯವು ಏಪ್ರಿಲ್ 5ರಂದು ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ಈ ರೈಲು ಕಲಬುರ್ಗಿ ರೈಲು ನಿಲ್ದಾಣದಿಂದ ಬೆಳಿಗ್ಗೆ 10.15 ಗಂಟೆಗೆ ಹೊರಟು, ಮಧ್ಯಾಹ್ನ 2.50 ಗಂಟೆಗೆ ಹೈದರಾಬಾದ್ ತಲುಪುತ್ತದೆ. ಅಲ್ಲಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 9.10 ಗಂಟೆಗೆ ಕಲಬುರ್ಗಿ ರೈಲು ನಿಲ್ದಾಣ ತಲುಪುತ್ತದೆ.

ಆಗಸ್ಟ್ 1ರಿಂದ ಬೆಳಿಗ್ಗೆ 6 ಗಂಟೆಗೆ ಹೊರಟು, ಬೆಳಿಗ್ಗೆ 10.35 ಗಂಟೆಗೆ ಹೈದರಾಬಾದ್ ತಲುಪಲಿದೆ. ಅಲ್ಲಿಂದ ಸಂಜೆ 4.25 ಗಂಟೆಗೆ
ಹೊರಟು ರಾತ್ರಿ 9.10 ಗಂಟೆಗೆ ಕಲಬುರ್ಗಿ ತಲುಪಲಿದೆ.

‘ಹುಬ್ಬಳ್ಳಿ–ಸಿಕಂದರಾಬಾದ್ (ಗಾಡಿ ಸಂಖ್ಯೆ 17319/20) ಹಾಗೂ ಹುಸೇನ್ ಸಾಗರ್ ಎಕ್ಸ್‌ಪ್ರೆಸ್ (ಗಾಡಿ ಸಂಖ್ಯೆ 12701/02) ರೈಲುಗಳು ಕಲಬುರ್ಗಿ ರೈಲು ನಿಲ್ದಾಣದಿಂದ ಕ್ರಮವಾಗಿ ಬೆಳಿಗ್ಗೆ 7.10 ಗಂಟೆ ಮತ್ತು 7.20 ಗಂಟೆಗೆ ಹೊರಟು, ಬೆಳಿಗ್ಗೆ 11.45 ಸಿಕಂದರಾಬಾದ್ ಮತ್ತು ಮಧ್ಯಾಹ್ನ 12 ಗಂಟೆಗೆ ಹೈದರಾಬಾದ್ ತಲುಪುತ್ತವೆ. ಹೈದರಾಬಾದ್‌ಗೆ ತೆರಳಲು ಬೆಳಗಿನ ಸಮಯದಲ್ಲಿ ರೈಲುಗಳು ಇರಲಿಲ್ಲ. ಹೀಗಾಗಿ, ಸಮಯ ಬದಲಾವಣೆ ಮಾಡಲು ಮುಂದಾಗಿ ರುವುದು ಪ್ರಯಾಣಿಕರ ದೃಷ್ಟಿಯಿಂದ ಒಳ್ಳೆಯದು’ ಎಂದು ಹೈದರಾಬಾದ್ ಕರ್ನಾಟಕ ರೈಲ್ವೆ ಗ್ರಾಹಕರ ವೇದಿಕೆ ಅಧ್ಯಕ್ಷ ಸುನಿಲ್ ಕುಲಕರ್ಣಿ ‘ಪ್ರಜಾವಾಣಿ’
ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಸಮಯ ಬದಲಾವಣೆಯಿಂದ ಕಚೇರಿ ಕೆಲಸಕ್ಕೆ ಮತ್ತು ವ್ಯಾಪಾರ–ವಹಿವಾಟಿಗೆ ತೆರಳುವವರಿಗೆ ಅನುಕೂಲವಾಗುತ್ತದೆ. ಶಹಾಬಾದ, ವಾಡಿ, ತಾಂಡೂರ, ಲಿಂಗಂಪಲ್ಲಿ ರೈಲು ನಿಲ್ದಾಣದಲ್ಲಿ ಮಾತ್ರ ಸದ್ಯ ಈ ರೈಲಿಗೆ ನಿಲುಗಡೆ ಇದೆ. ಸ್ಥಳೀಯರಿಗೆ ಅನುಕೂಲತೆ ದೃಷ್ಟಿಯಿಂದ ಚಿತ್ತಾಪುರ, ಮಳಖೇಡ ಮತ್ತು ಸೇಡಂ ರೈಲು ನಿಲ್ದಾಣ ಗಳಲ್ಲೂ ನಿಲುಗಡೆ ಕಲ್ಪಿಸಿದರೆ ಒಳ್ಳೆಯದಾಗುತ್ತದೆ’ ಎಂದು ಅವರು ಹೇಳಿದರು.

‘ಕಲಬುರ್ಗಿಯಿಂದ ಹೈದರಾಬಾದ್‌ಗೆ ತೆರಳಲು ಬೆಳಿಗ್ಗೆ 7ರಿಂದ 7.30ರ ಅವಧಿಯಲ್ಲಿ ಎರಡು ರೈಲುಗಳಿವೆ. ಹೀಗಾಗಿ, ಇಂಟರ್‌ ಸಿಟಿ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸದೆ, ಈ ಮುಂಚಿನಂತೆ ಬೆಳಿಗ್ಗೆ 10.15 ಗಂಟೆಗೆ ಓಡಿಸುವುದು ಒಳ್ಳೆಯದು. ಇದರಿಂದ ಮನೆ ಕೆಲಸ ಗಳನ್ನು ಮುಗಿಸಿಕೊಂಡು, ಉಪಾಹಾರ ಸೇವಿಸಿ ಗಡಿಬಿಡಿ ಇಲ್ಲದೆ ಹೋಗಬಹುದಾಗಿದೆ’ ಎಂದು ನಿವೃತ್ತ ಸರ್ಕಾರಿ ನೌಕರ ಚಂದ್ರಶೇಖರ ಪಡಶೆಟ್ಟಿ ಹೇಳುತ್ತಾರೆ.

‘ಕಲಬುರ್ಗಿಯಿಂದ ಹೈದರಾ ಬಾದ್‌ಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ. ವ್ಯಾಪಾರಿಗಳು, ಪ್ರವಾಸಿಗರು ಹೆಚ್ಚಾಗಿ ಪ್ರಯಾಣಿ ಸುತ್ತಾರೆ. ಹೀಗಾಗಿ ಸಮಯ ಬದಲಾವಣೆ ಮಾಡುತ್ತಿ ರುವುದು ಒಳ್ಳೆಯದು. ಇದರಿಂದ ಹೈದರಾ ಬಾದ್‌ನಲ್ಲಿ
ಹೆಚ್ಚಿನ ಸಮಯ ಕಳೆಯಬಹುದು, ಅಲ್ಲದೆ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಮತ್ತೆ ಅದೇ ರೈಲಿನಲ್ಲಿ ವಾಪಸು ಬರಬಹುದಾಗಿದೆ’ ಎಂದು ವ್ಯಾಪಾರಿ ಸಜ್ಜದ್ ಅಲಿ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT