ನಗರದ ಕಸದ ರಾಶಿಗೆ ಕೊನೆಗೂ ಮುಕ್ತಿ

7
ಪ್ರತಿಭಟನೆ ಹಿಂಪಡೆದು ಕೆಲಸಕ್ಕೆ ಹಾಜರಾದ ಪೌರ ಕಾರ್ಮಿಕರು

ನಗರದ ಕಸದ ರಾಶಿಗೆ ಕೊನೆಗೂ ಮುಕ್ತಿ

Published:
Updated:

ಮಂಗಳೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿದ್ದ ಕಸದ ರಾಶಿಗೆ ಶನಿವಾರ ಮುಕ್ತಿ ದೊರೆತಿದೆ. ಶನಿವಾರ ಮಧ್ಯಾಹ್ನದಿಂದ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ನ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದು, ನಗರದ ಹಲವೆಡೆ ತ್ಯಾಜ್ಯ ಸಂಗ್ರಹಿಸಿದರು.

ಗುರುವಾರ ಬೆಳಿಗ್ಗೆಯಿಂದ ಕಸ ಸಂಗ್ರಹಣೆ ಸ್ಥಗಿತಗೊಂಡಿದ್ದರಿಂದ ಮಾರುಕಟ್ಟೆ ಸೇರಿದಂತೆ ನಗರದಾದ್ಯಂತ ರಸ್ತೆ ಬದಿಯಲ್ಲಿ ಕಸದ ರಾಶಿ ಸಂಗ್ರಹವಾಗಿತ್ತು. ಮಳೆಯಿಂದಾಗಿ ದುರ್ವಾಸನೆಯೂ ಹೆಚ್ಚಾಗಿತ್ತು. ಈ ಮಧ್ಯೆ ಪಾಲಿಕೆಯಿಂದ ಗುರುವಾರ ಸಂಜೆಯೇ ₹2.10 ಕೋಟಿ ಮೊತ್ತವನ್ನು ಆ್ಯಂಟನಿ ವೇಸ್ಟ್‌ ಕಂಪನಿಗೆ ಪಾವತಿಸಿದ್ದರೂ, ಕಾರ್ಮಿಕರು ಮಾತ್ರ ಶುಕ್ರವಾರ ಕೆಲಸಕ್ಕೆ ಹಾಜರಾಗಿರಲಿಲ್ಲ.

ಈ ಮಧ್ಯೆ ಶನಿವಾರ ಮತ್ತೆ ಮೇಯರ್‌ ಭಾಸ್ಕರ್‌ ಮೊಯಿಲಿ ಅವರು ಗುತ್ತಿಗೆ ಕಂಪನಿಯ ಪ್ರತಿನಿಧಿಗಳು ಹಾಗೂ ಕಾರ್ಮಿಕರ ಜತೆಗೆ ಮಾತುಕತೆ ನಡೆಸಿದ್ದು, ನಂತರವಷ್ಟೇ ಕಸ ಸಂಗ್ರಹ ಆರಂಭವಾಯಿತು.

ಹಗ್ಗ ಜಗ್ಗಾಟ: ಆ್ಯಂಟನಿ ವೇಸ್ಟ್‌ನ ಕಾರ್ಮಿಕರು ತಮಗೆ ಕನಿಷ್ಠ ವೇತನ ಸಿಗುತ್ತಿಲ್ಲ ಎಂಬ ಬೇಡಿಕೆ ಮುಂದಿಟ್ಟಿದ್ದು, ಈ ವಿಷಯದಲ್ಲಿ ಪಾಲಿಕೆ ಹಾಗೂ ಆ್ಯಂಟನಿ ವೇಸ್ಟ್‌ನ ಪ್ರತಿನಿಧಿಗಳ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ.

ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಕಾರ್ಮಿಕರ ಕನಿಷ್ಠ ವೇತನ ನೀಡಬೇಕಾಗಿದೆ. ಇದು ಪಾಲಿಕೆಯ ಜವಾಬ್ದಾರಿ. ಹಾಗಾಗಿ ಹೆಚ್ಚುವರಿ ಹಣವನ್ನು ಪಾಲಿಕೆಯಿಂದಲೇ ಕಂಪನಿಗೆ ನೀಡಬೇಕು ಎನ್ನುವುದು ಆ್ಯಂಟನಿ ವೇಸ್ಟ್‌ ಕಂಪನಿ ಪ್ರತಿನಿಧಿಗಳ ವಾದ. ಆದರೆ, ಇದನ್ನು ನಿರಾಕರಿಸಿದ ಪಾಲಿಕೆ ಆಯುಕ್ತ ಮುಹಮ್ಮದ್‌ ನಜೀರ್‌, ಘನತ್ಯಾಜ್ಯ ಸಂಗ್ರಹಣೆ ಪ್ರಮಾಣಕ್ಕೆ ಅನುಗುಣವಾಗಿ ಹಣ ಪಾವತಿಸುವುದಾಗಿ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಾಗಾಗಿ ಕನಿಷ್ಠ ವೇತನ ಪಾವತಿ ಸೇರಿದಂತೆ, ಹೆಚ್ಚುವರಿ ವೇತನ ನೀಡಬೇಕಾಗಿರುವುದು ಕಂಪನಿಯ ಜವಾಬ್ದಾರಿ ಎಂದು ಹೇಳಿದ್ದಾರೆ.

ಈ ಮಧ್ಯೆ ಕಳೆದ ತಿಂಗಳ ವೇತನವೂ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಕಾರ್ಮಿಕರ ಖಾತೆಗೆ ಇದೀಗ ವೇತನ ಪಾವತಿಯಾಗಿದೆ. ಈ ಬಾರಿ ಯಾವುದೇ ಕಡಿತ ಮಾಡದೇ ಎಲ್ಲ ವೇತನವನ್ನು ಕಾರ್ಮಿಕರ ಖಾತೆಗೆ ಹಾಕಲಾಗಿದೆ. ಹೀಗಾಗಿ ಕಾರ್ಮಿಕರೂ ಇದೀಗ ಸ್ಪಲ್ಪ ಹುಮ್ಮಸ್ಸಿನಿಂದಲೇ ಕೆಲಸಕ್ಕೆ ಹಾಜರಾಗಿದ್ದಾರೆ.

ಸಿಒಒ ಜತೆ ಕಾರ್ಮಿಕರ ಸಭೆ: ಕಾರ್ಮಿಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಈ ಕುರಿತು ಚರ್ಚಿಸಿದ ಆ್ಯಂಟನಿ ವೇಸ್ಟ್‌ ಮುಖ್ಯ ನಿರ್ವಹಣಾ ಅಧಿಕಾರಿ ತಾಜಿಂದರ್‌ ಸಿಂಗ್‌ ನಗರಕ್ಕೆ ಬರಲಿದ್ದಾರೆ. ಮುಂಬೈನಿಂದ ಬರುವ ಸಿಂಗ್ ಅವರ ಜತೆಗೆ ಕಾರ್ಮಿಕರು ಚರ್ಚೆ ನಡೆಸಲಿದ್ದಾರೆ.

ಒಂದು ವೇಳೆ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಲ್ಲಿ, ಕಸದ ವಿಲೇವಾರಿ ನಿರಾತಂಕವಾಗಿ ಮುಂದುವರಿಯಲಿದೆ. ಕಾರ್ಮಿಕರ ಬೇಡಿಕೆಗಳು ಈಡೇರದೇ ಇದ್ದಲ್ಲಿ, ಮತ್ತೆ ಮುಷ್ಕರಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.

‘ಮೂರು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೇ ಬಾಕಿ ಉಳಿದಿದೆ. ಒಂದೇ ದಿನ ಎಲ್ಲ ತ್ಯಾಜ್ಯವನ್ನು ಸಂಗ್ರಹಿಸುವುದು ಕಷ್ಟಕರ. ಹಾಗಾಗಿ ಶನಿವಾರ ಹಾಗೂ ಭಾನುವಾರ ನಗರದಾದ್ಯಂತ ಎಲ್ಲ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುವುದು’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಷ್ಕರಕ್ಕೆ ಇಳಿಯಬೇಡಿ: ಕಾಮತ್‌

ಮಹಾನಗರ ಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ಸಂಗ್ರಹದ ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಮುಷ್ಕರ ಹೂಡಬಾರದು. ಯಾವುದೇ ಸಮಸ್ಯೆ ಇದ್ದರೂ ಮೊದಲು ತಮ್ಮ ಗಮನಕ್ಕೆ ತರಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನ ಗುತ್ತಿಗೆದಾರರು ಮತ್ತು ಸಿಬ್ಬಂದಿ, ಏಕಾಏಕಿ ಮುಷ್ಕರ ಹೂಡುವುದರಿಂದ ನಗರದ ಜನರಿಗೆ ತೊಂದರೆಯಾಗುತ್ತದೆ. ಗುತ್ತಿಗೆದಾರರ ಮತ್ತು ಪಾಲಿಕೆಯ ನಡುವೆ ಸಂವಹನ ಕೊರತೆಯಿಂದ ಗುತ್ತಿಗೆದಾರರ ಸಿಬ್ಬಂದಿ, ಕೆಲಸ ನಿಲ್ಲಿಸಿದರೆ ಅದು ಜನಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಪಾಲಿಕೆ ಆಯುಕ್ತರು, ಆರೋಗ್ಯಾಧಿಕಾರಿಗಳೊಂದಿಗೆ ಮತ್ತು ಗುತ್ತಿಗೆದಾರರೊಂದಿಗೆ ಚರ್ಚಿಸಿ ಗುತ್ತಿಗೆದಾರರಿಗೆ ಬಾಕಿ ಇರುವ ₹2 ಕೋಟಿ ಪಾವತಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಹೀಗೆ ದಿಢೀರನೆ ಪ್ರತಿಭಟನೆಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಗುತ್ತಿಗೆದಾರರು ಕೆಲಸ ಆರಂಭಿಸಿ ತ್ಯಾಜ್ಯ ಸಂಗ್ರಹಿಸುವಂತೆ ಹೇಳಿ ಬಿಲ್ ಪಾವತಿಸಲಾಗಿದೆ. ಶನಿವಾರ ಕಾರ್ಮಿಕರು ಕೆಲಸ ಆರಂಭಿಸಿದ್ದಾರೆ –  ಡಿ. ವೇದವ್ಯಾಸ್‌ ಕಾಮತ್‌, ಶಾಸಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry