4

ಟೆಂಡರ್ ಪಡೆದರೂ ರಸ್ತೆ ದುರಸ್ತಿ ನಡೆಯಲಿಲ್ಲ 

Published:
Updated:
ಟೆಂಡರ್ ಪಡೆದರೂ ರಸ್ತೆ ದುರಸ್ತಿ ನಡೆಯಲಿಲ್ಲ 

ಬದಿಯಡ್ಕ : ‘ಕಾರಡ್ಕ ಗ್ರಾಮ ಪಂಚಾಯಿತು ಕುಂಟಾರು ಮಸೀದಿ-ಅಂಬಲಿಪಳ್ಳ-ಕಟ್ಟತಬೈಲ್‌ ರಸ್ತೆಯ ಸ್ಥಿತಿ ಶೋಚನೀಯವಾಗಿದ್ದು, ಟೆಂಡರ್ ನಡೆದರೂ ದುರಸ್ತಿ ಕಾಮಗಾರಿ ನಡೆಯಲಿಲ್ಲ’ ಎಂಬ ಆರೋಪ ಕೇಳಿಬಂದಿದೆ.

ಕಾರಡ್ಕ ಗ್ರಾಮ ಪಂಚಾಯಿತಿಯ 7ನೇ ವಾರ್ಡ್‌ಗೆ ಸೇರಿದ ಈ ರಸ್ತೆಯು ಒಂದೂವರೆ ಕಿಲೋ ಮೀಟರ್ ಉದ್ದವಿದೆ. ಅನೇಕ ವರ್ಷಗಳ ಹಿಂದೆ 300 ಮೀಟರ್ ರಸ್ತೆಗೆ ಡಾಂಬರೀಕರಣ ನಡೆಸಲಾಗಿತ್ತು. ಇದು ಹಾಳಾಗುತ್ತಿದ್ದಂತೆ ಸಂಪೂರ್ಣ ಒಂದೂವರೆ ಕಿಲೋ ಮೀಟರ್ ರಸ್ತೆಯನ್ನು ಡಾಮರೀಕರಿಸಲು ಗ್ರಾಮ ಪಂಚಾಯಿತಿ ನಿಧಿಯನ್ನು ಕಾದಿರಿಸಲಾಗಿತ್ತು.

ಆದರೆ ಇದರ ಟೆಂಡರ್ ಕಾರ್ಯಗಳು ನಡೆದರೂ ಕಾಮಗಾರಿ ಆರಂಭಿಸಲು ಗುತ್ತಿಗೆದಾರ ಮುಂದಾಗಲಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಹಿತಿ ನೀಡಿದೆ. ರಸ್ತೆ ದುರಸ್ತಿಗೆ ಕಾದಿರಿಸಿದ ಅನುದಾನ ಕಡಿಮೆ ಎಂಬ ಕಾರಣಕ್ಕೆ ಗುತ್ತಿಗೆದಾರ ಹಿಂಜರಿಯುತ್ತಿರುವುದಾಗಿ ಹೇಳಲಾಗಿದೆ. ಇದೀಗ ಮಳೆಗಾಲ ಆರಂಭಗೊಂಡಿದ್ದು, ಇಲ್ಲಿನ ಜನರು ಈ ಹದಗೆಟ್ಟ ರಸ್ತೆಗೆ ಮತ್ತೆ ಶರಣಾಗಬೇಕಾಗಿದೆ. ನೀರು ರಸ್ತೆಯಲ್ಲೇ ಹರಿಯುವ ಕಾರಣ ಇದರ ಮೂಲಕ ಸಂಚಾರ ಮತ್ತಷ್ಟು ಸಮಸ್ಯೆಯಾಗುತ್ತಿದೆ. ಈ ರಸ್ತೆಯು ಪರಿಶಿಷ್ಟ ಜಾತಿ ಕಾಲನಿಯನ್ನು ಸಂಪರ್ಕಿಸುತ್ತದೆ. ಈ ಪ್ರದೇಶದ ಸುಮಾರು 75ರಷ್ಟು ಮನೆಗಳಿಗೆ ಈ ರಸ್ತೆಯೇ ಏಕೈಕ ಸಂಚಾರ ವ್ಯವಸ್ಥೆ.

ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು, ರೋಗಿಗಳು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ತುರ್ತು ಅಗತ್ಯಗಳಿಗೆ ವಾಹನಗಳ ಮೂಲಕ ಸಾಗುವುದು ಅಸಾಧ್ಯವಾಗುತ್ತಿದೆ. ಈ ರಸ್ತೆಯ ಮೂಲಕ ಹೋಗಲು ವಾಹನ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ದಿನ ನಿತ್ಯ ನೂರಾರು ಮಂದಿ ಸಂಚರಿಸುವ ಈ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದರೂ ದುರಸ್ತಿ ನಡೆದಿಲ್ಲ.

‘ಇದೇ ಅವಸ್ಥೆ ಮುಂದುವರಿದರೆ ಈ ರಸ್ತೆ ಸಂಪರ್ಕ ಶಾಶ್ವತವಾಗಿ ಈ ಪ್ರದೇಶದ ಜನರ ಪಾಲಿಗೆ ಇಲ್ಲದಂತಾಗಬಹುದು ಎಂಬ ಆತಂಕಪಡಲಾಗಿದೆ. ಹೀಗಾಗಿ ಈಗಾಗಲೇ ಕಾಮಗಾರಿಯ ಗುತ್ತಿಗೆ ಪಡೆದವರು ಕಾಮಗಾರಿ ನಡೆಸಬೇಕು, ಇದಕ್ಕೆ ಪಂಚಾಯಿತಿಯು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry