ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ರಕ್ಷಕರಿಗೇ ಇಲ್ಲಿ ರಕ್ಷಣೆ ಇಲ್ಲ!

ಹದಗೆಟ್ಟ ಪರಿಸರದಲ್ಲಿ ಆರೋಗ್ಯ ಇಲಾಖೆಯ ವಸತಿಗೃಹ
Last Updated 17 ಜೂನ್ 2018, 8:19 IST
ಅಕ್ಷರ ಗಾತ್ರ

ಪುತ್ತೂರು: ಇಲ್ಲಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ವಾಸ್ತವ್ಯಕ್ಕಾಗಿ ಸಮೀಪ ಇರುವ ಶತ ಮಾನದ ಹಿಂದಿನ  ವಸತಿಗೃಹಗಳ ಕಟ್ಟಡಗಳು ಅಪಾಯದಲ್ಲಿದ್ದು, ಆರೋಗ್ಯ ರಕ್ಷಣೆಯ ಹೊಣೆ ಹೊತ್ತಿರುವ 7 ಮಂದಿ ಆರೋಗ್ಯ ಸಿಬ್ಬಂದಿಯ ಕುಟುಂಬ
ಗಳ ಸದಸ್ಯರು 'ಆರೋಗ್ಯ' ರಕ್ಷಣೆಗಾಗಿ ಗೋಗರೆಯುವ ಸ್ಥಿತಿ ಎದುರಾಗಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 3 ಶುಶ್ರೂಷಕಿಯರು, 1 ಲ್ಯಾಬ್ ಟೆಕ್ನಿಷಿಯನ್, 2 ಕ್ಷ ಕಿರಣ ತಂತ್ರಜ್ಞರು ಹಾಗೂ ಒಬ್ಬರು ವಾಹನ ಚಾಲಕರ ಕುಟುಂಬದವರು ಇಲ್ಲಿ ನೆಲೆಸಿದ್ದಾರೆ. 11 ಮಂದಿ ಮಕ್ಕಳು ಇದ್ದಾರೆ. ನೆಮ್ಮದಿಯ ಬದುಕು ಇಲ್ಲಿ ಇಲ್ಲವಾಗಿದೆ.

ಅಪಾಯಕಾರಿ ಮರಗಳು: ವಸತಿಗಳ ಗೃಹ ಶತಮಾನದಷ್ಟು ಹಳೆಯ ಕಟ್ಟಡಗಳಲ್ಲಿ ಇವೆ. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 7 ಮಂದಿ ಆರೋಗ್ಯ ಸಿಬ್ಬಂದಿ ಕುಟುಂಬಗಳು ಪ್ರಸ್ತುತ ಈ ಸರ್ಕಾರಿ ವಸತಿಗೃಹಗಳಲ್ಲಿ ವಾಸ್ತವ್ಯ ಹೊಂದಿದ್ದು, ದುಃಸ್ಥಿತಿಯಲ್ಲಿದ್ದ ಕಟ್ಟಡಗಳನ್ನು ಸ್ವಂತ ಖರ್ಚಿನಿಂದ ದುರಸ್ತಿ ಮಾಡಿಸಿದ್ದಾರೆ.  ಸುತ್ತ ಬೆಳೆದು ನಿಂತಿರುವ ಬೃಹತ್ ಗಾತ್ರದ ಮರಗಳಿಂದ ನಿವಾಸಿಗಳು ಹೆದರುತ್ತಾ ಕಾಲಕಳೆಯುತ್ತಿದ್ದಾರೆ.

ವಸತಿಗೃಹಗಳ ಪಕ್ಕದಲ್ಲಿ ಹಲಸು, ದೇವದಾರು, ಮೇಫ್ಲವರ್, ಧೂಪ ಸೇರಿದಂತೆ ವಿವಿಧ ಮರಗಳು ಇವೆ. ಮರಗಳು ಉರುಳಿ ಬಿದ್ದರೆ ಕಟ್ಟಡಗಳಿಗೆ ಹಾನಿಯಾಗುವ ಜೊತೆಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳು ಅಧಿಕ ವಾಗಿದೆ. ವಸತಿಗೃಹದ ಕೆಳಭಾಗದಲ್ಲಿ ಮರ, ಪೊದೆಗಳಿಂದ ಕೂಡಿ ದಟ್ಟವಾ ಗಿರುವ ಕುರುಚಲು ಕಾಡು ಬೆಳೆದಿದ್ದು, ಸೊಳ್ಳೆಗಳ ಕಾಟ ವಿಪರೀ ತವಾಗಿದೆ.

ಹಾವುಗಳ ಕಾಟ: ಪೊದೆ ಕಾಡಿನಿಂದಾಗಿ ಹಾವುಗಳ ಕಾಟ ಹೆಚ್ಚಾಗಿದೆ. ವಿಷಕಾರಿ ಹಾವುಗಳು ಇಲ್ಲಿದ್ದು, ಕುಟುಂಬಗಳು ಭಯದಲ್ಲಿ ಬದುಕುವಂತಾಗಿದೆ. ತ್ಯಾಜ್ಯ ರಾಶಿಯೇ ತುಂಬಿಕೊಂಡಿದ್ದು, ಸ್ವಚ್ಛ ಭಾರತದ ಕನಸನ್ನು ಆರೋಗ್ಯ ಇಲಾಖೆ ಕಟ್ಟಡ ಸಂಕೀರ್ಣದ ಆವರಣ ಅಣಕಿಸುವಂತಿದೆ.

ಗಪ್ಪಿಮೀನು ಕೇಂದ್ರ ನಿಷ್ಕ್ರಿಯ: ಸೊಳ್ಳೆ ಹಾವಳಿ ನಿಯಂತ್ರಿಸಲು ಗಪ್ಪೆ ಮೀನು ಸಾಕಣೆ ಕೇಂದ್ರವೊಂದನ್ನು ಆರೋಗ್ಯ ಇಲಾಖೆ ಆರಂಭಿಸಿತ್ತು. ಆದರೆ ಅದು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಇದೀಗ ಈ ಮೀಸು ಸಾಕಣೆ ತೊಟ್ಟಿ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.

ಈ ವಸತಿಗೃಹದ ಆಸುಪಾಸು ವಿದ್ಯುತ್ ಬೀದಿ ದೀಪದ ವ್ಯವಸ್ಥೆಯೂ ಇಲ್ಲ. ನಗರಸಭೆಯ ವ್ಯಾಪ್ತಿಯಲ್ಲಿ ಸದಸ್ಯರು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಬೀದಿ ದೀಪ ಅಳವಡಿಸುವಂತೆ  ಹಲವು ಬಾರಿ ವಿನಂತಿಸಿಕೊಂಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪವಿದೆ.

ಈ ಪ್ರದೇಶದಲ್ಲಿನ ಕಾಡನ್ನು ಸ್ವಚ್ಛಗೊಳಿಸಿ ಸೊಳ್ಳೆ ನಿವಾರಿಸಬೇಕು, ಅಪಾಯಕಾರಿ ಬೃಹತ್ ಮರಗಳ ಕೊಂಬೆ ತೆರವುಗೊಳಿಸಬೇಕು,  ಗಪ್ಪಿ ಮೀನು ಕೇಂದ್ರವನ್ನು ಮತ್ತೆ ಸಕ್ರಿಯಗೊಳಿಸಬೇಕು ಎಂದು  ಮನವಿ ಮಾಡಿದ್ದಾರೆ.

‘ನಿವಾಸಿಗಳಿಗೆ ಅಪಾಯ ಖಚಿತ’

ವಸತಿಗೃಹಗಳ ಮೇಲಕ್ಕೆ ಬಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸದಿದ್ದರೆ ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಅಪಾಯ ಖಚಿತ. ಸೊಳ್ಳೆ ಉತ್ಪಾದನಾ ಕೇಂದ್ರ ಶುಚಿಗೊಳಿಸಬೇಕು. ಸಿಬ್ಬಂದಿ, ಪರಿಸರದ ಮಂದಿ, ಸರ್ಕಾರಿ ಆಸ್ಪತ್ರೆಯ ರೋಗಿಗಳು ಸೊಳ್ಳೆ ಕಾಟದಿಂದ ಮುಕ್ತರಾಗಬೇಕಾದರೆ ಇಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಾಲ್ಲೂಕು ದಲಿತ್ ಸೇವಾ ಸಮಿತಿ ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಅಭಿಪ್ರಾಯ ವ್ಯಕ್ತಪಡಿಸಿದರು.

ಶಶಿಧರ್ ರೈ ಕುತ್ಯಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT