ಪರ್ಯಾಯ ವೇದಿಕೆ ನಿರ್ಮಿಸಲು ಸಿದ್ಧತೆ

7
ವಜ್ರಮಹೋತ್ಸವ ಕಾರ್ಯಕ್ರಮದ ವೇದಿಕೆ ಜಲಾವೃತ

ಪರ್ಯಾಯ ವೇದಿಕೆ ನಿರ್ಮಿಸಲು ಸಿದ್ಧತೆ

Published:
Updated:

ನಂಜನಗೂಡು: ತಾಲ್ಲೂಕಿನ ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮಿಗಳ ನಿರಂಜನ ಆಶ್ರಮಾಧಿಕಾರದ ವಜ್ರ ಮಹೋತ್ಸವ ಕಾರ್ಯಕ್ರಮಕ್ಕಾಗಿ ಮಠದ ಬಳಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಗೆ ಶನಿವಾರ ಕಪಿಲಾ ನದಿಯ ನೀರು ನುಗ್ಗಿದ್ದರಿಂದ ಪರ್ಯಾಯವಾಗಿ ವೇದಿಕೆ ನಿರ್ಮಿಸಲಾಗುತ್ತಿದೆ.

ಪೀಠಾಧ್ಯಕ್ಷರ ವಜ್ರ ಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಲಿದ್ದು, ನಂಜನಗೂಡು – ಮೈಸೂರು ರಸ್ತೆಯ ಮಠದ ಬಳಿಯ ಕಪಿಲಾ ನದಿ ದಂಡೆಯ ಮೇಲೆ ಕಳೆದ 15 ದಿನಗಳಿಂದ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿತ್ತು. ನದಿಗೆ ನೀರು ಬಿಟ್ಟಿರುವ ಕಾರಣ ವೇದಿಕೆ ನಿರ್ಮಿಸಿರುವ ಸ್ಥಳ ಜಲಾವೃತವಾಗಿದೆ. ಆದ್ದರಿಂದ ಕಾರ್ಯಕ್ರಮದ ವ್ಯವಸ್ಥಾಪಕರು ರಸ್ತೆಯ ಪೂರ್ವ ಭಾಗದ ರತ್ನಮಣಿ ಏಕ್ಸ್‌ಪೋರ್ಟ್ಸ್ ಗ್ರಾನೈಟ್ ಹತ್ತಿರ ಮತ್ತೊಂದು ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.

ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮೀಜಿ ಪೀಠಾಧ್ಯಕ್ಷರಾಗಿ 60 ವರ್ಷದ ನೆನಪಿಗಾಗಿ ವಜ್ರಮಹೋತ್ಸವ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಾನುವಾರ ಬೆಳಿಗ್ಗೆ 10–30 ಗಂಟೆಗೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ದೇವನೂರು ಮಠದ ಮಹಾಂತ ಸ್ವಾಮೀಜಿ, ವಾಟಾಳು ಸೂರ್ಯಸಿಂಹಾಸನ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಸಂಚಾರ ಸ್ಥಗಿತ: ಗುರು ವಂದನಾ ಕಾರ್ಯಕ್ರಮದ ಪ್ರಯುಕ್ತ ನಂಜನ ಗೂಡು–ಮೈಸೂರು ಚತುಷ್ಪಥ ಮುಖ್ಯರಸ್ತೆಯಲ್ಲಿ ನಂಜನಗೂಡಿನಿಂದ ಮೈಸೂರು ಕಡೆಗೆ ಹೋಗಲು ಶನಿವಾರದಿಂದ ಭಾನುವಾರ ರಾತ್ರಿ 8ಗಂಟೆ ವರೆಗೆ ಕತ್ವಾಡಿಪುರ ವೃತ್ತದಿಂದ ಚಿಕ್ಕಯ್ಯನ ಛತ್ರ ಗ್ರಾಮದವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry