ಪ್ರವಾಸಿ ತಾಣವಾಗಿ ತುಂಗೆಯ ಅಭಿವೃದ್ಧಿ

7

ಪ್ರವಾಸಿ ತಾಣವಾಗಿ ತುಂಗೆಯ ಅಭಿವೃದ್ಧಿ

Published:
Updated:
ಪ್ರವಾಸಿ ತಾಣವಾಗಿ ತುಂಗೆಯ ಅಭಿವೃದ್ಧಿ

‘ದಿಕ್ಸೂಚಿ’ ಮೂಲಕ ‘ಪ್ರಜಾವಾಣಿ’ ಪ್ರಕಟಿಸಿದ ವರದಿಯಲ್ಲಿನ ವಿಷಯಗಳು ಗಮನದಲ್ಲಿವೆ. ಚುನಾವಣೆಗೂ ಮೊದಲೇ ನಗರದಲ್ಲಿ ಆಗಬೇಕಾದ ಅಭಿವೃದ್ಧಿ, ಜನರ ನಿರೀಕ್ಷೆಗಳನ್ನು ಗಮನದಲ್ಲಿ ಇಟ್ಟುಕೊಂಡೇ ಬಿಜೆಪಿ ಸ್ಥಳೀಯ ಪ್ರಣಾಳಿಕೆ ಸಿದ್ಧಪಡಿಸಿತ್ತು. ಯಾವ ಕೆಲಸ ಮಾಡಬೇಕಿದೆ ಎಂದು ಗುರುತಿಸಿಕೊಂಡೇ ಜನರಿಗೆ ಭರವಸೆ ನೀಡಿದ್ದೆವು. ಈಗ ಅವುಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

1989ರಲ್ಲಿ ಮೊದಲ ಬಾರಿ ಆಯ್ಕೆಯಾದಾಗಲೇ ಮತದಾರರ ವಿಶ್ವಾಸ ಉಳಿಸಿಕೊಂಡಿದ್ದೆ. ಅಂದಿನಿಂದ ಇಲ್ಲಿಯವರೆಗೂ ಜನರ ನಿರೀಕ್ಷೆಗೆ ಎಂದೂ ಚ್ಯುತಿ ತಂದಿಲ್ಲ. ಅಂತಹ ವಿಶ್ವಾಸದ ಬುನಾದಿ ಗಟ್ಟಿಯಾಗಿರುವ ಕಾರಣಕ್ಕೆ 5 ಬಾರಿ ಆಯ್ಕೆಮಾಡಿದ್ದಾರೆ. ಅದರಲ್ಲೂ ಈ ಬಾರಿ ಒಂದು ಲಕ್ಷಕ್ಕಿಂತ ಹೆಚ್ಚು ಮತಗಳಿಂದ.

ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆ ವ್ಯವಸ್ಥಿತವಾಗಿ ಅನುಷ್ಠಾನಗೊಂಡರೆ ನಗರದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಮೂರು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಿವೆ. ಒಟ್ಟು 5 ವರ್ಷಗಳಲ್ಲಿ ₹ 1 ಸಾವಿರ ಕೋಟಿ ದೊರಕಲಿದೆ. ಈ ಹಣವನ್ನು ನಗರದ ಸರ್ವತೋಮುಖ ಅಭಿವೃದ್ಧಿಗೆ ಸದ್ಬಳಕೆ ಮಾಡಲಾಗುವುದು.

ಕೇಂದ್ರ ಹಾಗೂ ರಾಜ್ಯ ಪ್ರತಿ ವರ್ಷ ತಲಾ ₹ 100 ಕೋಟಿ ನೀಡುತ್ತಿವೆ. ಮೂರು ವರ್ಷ ಅನುದಾನ ಬಂದರೂ, ಕಾಮಗಾರಿ ಆರಂಭಿಸಿಲ್ಲ. ಈ ಕುರಿತು ಸದ್ಯದಲ್ಲೇ ನಗರದ ನಾಗರಿಕರ ಜತೆ ಚರ್ಚಿಸಲಾಗುವುದು. ನಗರದಲ್ಲಿ ಅಪೂರ್ಣಗೊಂಡಿರುವ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಮೂವರು ಗುತ್ತಿಗೆದಾರರು ಬದಲಾಗಿದ್ದಾರೆ. ಈಗ ಇರುವ ಗುತ್ತಿಗೆದಾರರೂ ಪೂರ್ಣಗೊಳಿಸಿಲ್ಲ. ಯುಜಿಡಿ ಕಾಮಗಾರಿ ಪೂರ್ಣಗೊಂಡರೆ ತುಂಗಾ ಸ್ವಚ್ಛತೆಯಲ್ಲಿ ಮೊದಲ ಹೆಜ್ಜೆ ಇಡಬಹುದು. ಈಗಲೂ ಹಲವು ಬಡಾವಣೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳ ಕೊರತೆ ಇದೆ. ನಗರ ಪಾಲಿಕೆಯಲ್ಲಿ ಐದು ವರ್ಷಗಳಿಂದ ಒಂದೇ ಪಕ್ಷದ ಆಡಳಿತ ಇಲ್ಲದ ಕಾರಣ. ಆಡಳಿತ ನಿರ್ವಹಣೆ ಬಿಗಿ ಕಳೆದುಕೊಂಡಿದೆ. ಉತ್ತಮ ಕೆಲಸ ಕಾರ್ಯಗಳು ಆಗಿಲ್ಲ. ಮೂರು ತಿಂಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆ ಬರಲಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ತಂದು ಮುಂದಿನ ಐದು ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿ ತೀರಿಸುತ್ತೇವೆ. ಇಡೀ ರಾಜ್ಯದಲ್ಲೇ ಮಾದರಿ ಪಾಲಿಕೆ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ.

ತುಂಗಾ ನದಿ ತೀರದ ಸಮಗ್ರ ಅಭಿವೃದ್ಧಿ ಬಿಜೆಪಿ ಕನಸು. ಚುನಾವಣಾ ಸಮಯದಲ್ಲಿ ಜಿಲ್ಲೆಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಕುರಿತು ಪ್ರಸ್ತಾಪ ಮಾಡಿದ್ದರು. ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಮೊದಲು ಆದ್ಯತೆ ನೀಡಿರುವುದೇ ನದಿ ತೀರದ ಅಭಿವೃದ್ಧಿಗೆ. ತಡೆಗೋಡೆ, ವಾಯುವಿಹಾರ ಮಾರ್ಗ, ವೀಕ್ಷಣಾ ಗೋಪುರ, ವಿದ್ಯುತ್ ದೀಪಗಳ ಸಾಲು, ನದಿಗೆ ನೇರ ಪ್ರವೇಶ ಮಾರ್ಗ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅದಕ್ಕಾಗಿ ಸಾಕಷ್ಟು ಅನುದಾನ ತೆಗೆದಿರಿಸಲಾಗಿದೆ. ನದಿಯಲ್ಲಿ ದೋಣಿ ವಿಹಾರ, ಸಾಹಸ ಜಲಕ್ರೀಡೆ, ರ‍್ಯಾಪ್ಟಿಂಗ್ ಸೇರಿದಂತೆ ಪ್ರವಾಸೋದ್ಯಮ ತಾಣವಾಗಿ ನದಿ ತೀರ ಅಭಿವೃದ್ಧಿಪಡಿಸುವ ಕುರಿತು ಯೋಜನೆ ರೂಪಿಸಲಾಗುವುದು. ಕೇಂದ್ರದಿಂದ ಪ್ರತ್ಯೇಕ ಅನುದಾನ ತರುವ ಕುರಿತು ಚಿಂತನೆ ನಡೆದಿದೆ.

ಜಿಲ್ಲೆಯ ಕೈಗಾರಿಕೆಗಳ ಅಭಿವೃದ್ಧಿಗೆ ವಿಮಾನ ನಿಲ್ದಾಣದ ಆವಶ್ಯಕತೆ ಇದೆ. ಕಾಮಗಾರಿ ಪೂರ್ಣಗೊಂಡರೆ ಹೊಸ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ.

ಜಿಲ್ಲೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ಒಲವು ತೋರಿದ್ದರು. ಅವರನ್ನು ದುಬೈನಲ್ಲಿ ಭೇಟಿಯಾಗಿದ್ದೆ. ವಿಮಾನ ನಿಲ್ದಾಣ ಮೊದಲು ಪೂರ್ಣಗೊಳಿಸಿ, ನಂತರ ಅಲ್ಲಿಗೆ ನಿಯಮಿತವಾಗಿ ಭೇಟಿ ನೀಡಿ, ಹಣ ಹೂಡಿಕೆ ಮಾಡುವೆ ಎಂದಿದ್ದರು. ನನೆಗುದಿಗೆ ಬಿದ್ದಿರುವ ಕಾಮಗಾರಿ ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ನಗರದ ಎಲ್ಲ ಬಡ, ಮಧ್ಯಮ ವರ್ಗದವರೂ ಸ್ವಂತ ಮನೆ ಹೊಂದಬೇಕು ಎನ್ನುವುದು ನನ್ನ ಅಭಿಲಾಷೆ. ಹಿಂದೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗಾಗಿಯೇ ವಿರುಪಿನಕೊಪ್ಪ ಬಳಿ ಪ್ರತ್ಯೇಕ ಬಡಾವಣೆ ನಿರ್ಮಿಸಿ, ಮನೆ ವಿತರಿಸಲಾಗಿತ್ತು. ಬಡಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ₹ 5 ಲಕ್ಷ ವೆಚ್ಚದಲ್ಲಿ 20X30 ವಿಸ್ತೀರ್ಣದಲ್ಲಿ ಮನೆ ಕಟ್ಟಿಕೊಡಲು ಯೋಜನೆ ರೂಪಿಸಿದೆ. ಕೇಂದ್ರ ₹ 1.70 ಲಕ್ಷ, ರಾಜ್ಯ ಸರ್ಕಾರ ₹ 1.50 ಲಕ್ಷ ನೀಡಲಿದೆ. ಒಟ್ಟು ₹ 3.20 ಲಕ್ಷ ಸಬ್ಸಿಡಿ ಸಿಗಲಿದೆ. ₹ 1 ಲಕ್ಷ ಬಾಂಕ್ ಸಾಲ ನೀಡುತ್ತದೆ. ಈ ಯೋಜನೆ ಅಡಿ ನಗರದಲ್ಲಿ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲು ಗಮನ ಹರಿಸಲಾಗುವುದು. ಕೊಳೆಗೇರಿಗಳ ಜನರಿಗೆ ಹಕ್ಕುಪತ್ರ ವಿತರಿಸಲು ಇರುವ ತಾಂತ್ರಿಕ ಸಮಸ್ಯೆ ನಿವಾರಿಸಲಾಗುವುದು. ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿಕೊಂಡವರಿಗೆ ಭೂ ಹಕ್ಕು ದೊರಕಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry