ಸಮಗ್ರ ನೀರಾವರಿ ಅನುಷ್ಠಾನಕ್ಕೆ ಆದ್ಯತೆ

7

ಸಮಗ್ರ ನೀರಾವರಿ ಅನುಷ್ಠಾನಕ್ಕೆ ಆದ್ಯತೆ

Published:
Updated:
ಸಮಗ್ರ ನೀರಾವರಿ ಅನುಷ್ಠಾನಕ್ಕೆ ಆದ್ಯತೆ

ದಿಕ್ಸೂಜಿ ಮೂಲಕ 'ಪ್ರಜಾವಾಣಿ' ಪ್ರಕಟಿಸಿದ ವರದಿ ಗಮನಿಸಿದ್ದೇನೆ. ವರದಿಯಲ್ಲಿ ಪ್ರಕಟವಾದ ಬಹುತೇಕ ಅಂಶಗಳು ಚುನಾವಣೆ ಸಮಯದಲ್ಲಿ ನಾನು ಮತದಾರರಿಗೆ ನೀಡಿದ ಭರವಸೆಗಳಾಗಿವೆ. ಉದಾಹರಣೆಗೆ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಕೈಗಾರಿಕೆ ಸ್ಥಾಪನೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ, ತಾಲ್ಲೂಕಿನ ನಿವಾಸಿಗಳಿಗೆ ನಿವೇಶನ ವಿತರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ದಿಕ್ಸೂಚಿಯಲ್ಲಿ ಪ್ರಸ್ತಾಪವಾಗಿದ್ದವು. ಈ ಎಲ್ಲಾ ಕಾರ್ಯಗಳನ್ನು ಮಾಡುವ ಬಗ್ಗೆ ಗಮನ ಹರಿಸುತ್ತೇನೆ.

ತಾಲ್ಲೂಕಿನಲ್ಲಿ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಳೆದ ವರ್ಷ ಸಂಸದನಾಗಿದ್ದ ಸಂದರ್ಭದಲ್ಲಿ ಶಿರಾಳಕೊಪ್ಪದಿಂದ ಶಿಕಾರಿಪುರಕ್ಕೆ ಪಾದಯಾತ್ರೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ರಾಜ್ಯ ಸರ್ಕಾರ ಸ್ಪಂದಿಸಿರಲಿಲ್ಲ. ನಂತರ ಕೇಂದ್ರ ಸಚಿವರಿಗೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮನವಿ ಮಾಡಿದ್ದೆ. ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ತಾಲ್ಲೂಕಿಗೆ ಕೇಂದ್ರ ನೀರಾವರಿ ಇಲಾಖೆ ಅಧಿಕಾರಿಗಳ ತಂಡವನ್ನು ‌ಕಳುಹಿಸುವ ಮೂಲಕ ವರದಿ ನೀಡಲು ಸೂಚಿಸಿತ್ತು. ಅಧಿಕಾರಿಗಳು ಕೇಂದ್ರಕ್ಕೆ ವರದಿ ನೀಡಿದ್ದು, ಕೇಂದ್ರ ಸರ್ಕಾರ ಯೋಜನೆ ಅನುಷ್ಠಾನ ಮಾಡಲು ಡಿಪಿಆರ್‌ ತಯಾರಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಡಿಪಿಆರ್ ಕಳುಹಿಸದೇ ಮಲತಾಯಿ ಧೋರಣೆ ತೋರಿತ್ತು. ಈ ಬಾರಿ ರಾಜ್ಯ ಸರ್ಕಾರ ಡಿಪಿಆರ್ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಒತ್ತಡ ಹಾಕುತ್ತೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರದಿಂದ ತಾಲ್ಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಮಾಡಿಸುತ್ತೇನೆ.

ತಾಲ್ಲೂಕಿನಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಶಾಹಿ ಗಾರ್ಮೆಂಟ್ಸ್‌ ಕಂಪನಿ ಆರಂಭಿಸಲು ಮಾಲೀಕರ ಜತೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲಿ ತಾಲ್ಲೂಕಿನಲ್ಲಿ ಶಾಹಿ ಗಾರ್ಮೆಂಟ್ಸ್‌ ಘಟಕ ಆರಂಭವಾಗಲಿದೆ. ಸಂಡ ಕೈಗಾರಿಕಾ ಪ್ರದೇಶದಲ್ಲಿ ಸ್ಥಳಾವಕಾಶವಿದ್ದು, ನೂತನ ಕೈಗಾರಿಕೆಗಳನ್ನು ಆರಂಭಿಸುವಂತೆ ಕೈಗಾರಿಕಾ ಘಟಕ ಮಾಲೀಕರಿಗೆ ಮನವಿ ಮಾಡುತ್ತೇನೆ.

ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗಲು ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ನಿರ್ಮಾಣ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಮನವಿ

ಮಾಡುತ್ತೇನೆ.

ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಕೊನೆ ಹಂತ ತಲುಪಿದ್ದು, ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಶಿಕಾರಿಪುರ ಪುರಸಭೆ, ಗ್ರಾಮ ಪಂಚಾಯಿತಿ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ ನಿವೇಶನ ಹಂಚಲು ಆದ್ಯತೆ ನೀಡುತ್ತೇನೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ತಾಲ್ಲೂಕಿನ ಬಳ್ಳಿಗಾವಿ, ತಾಳಗುಂದ, ಬಂದಳಿಕೆ ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸುವ ಕಾರ್ಯ ಕೈಗೊಳ್ಳುತ್ತೇನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry