ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿಮಠಕ್ಕೆ ವೃಕ್ಷಲಕ್ಷ ತಂಡ ಭೇಟಿ

ಉದ್ದೇಶಿತ ಅಣೆಕಟ್ಟು ಸ್ಥಳ; ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹ
Last Updated 17 ಜೂನ್ 2018, 8:53 IST
ಅಕ್ಷರ ಗಾತ್ರ

ಶಿರಸಿ: ಜೋಗ ಜಲಪಾತ ಬಳಿಯ ಜೋಗಿಮಠ ಪ್ರದೇಶಕ್ಕೆ ವೃಕ್ಷಲಕ್ಷ ಆಂದೋಲನದ ತಂಡವು ಇತ್ತೀಚೆಗೆ ಭೇಟಿ ನೀಡಿ, ಖಾಸಗಿ ಕಂಪನಿಯು ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟಿನಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು.‌ ಈ ಪ್ರದೇಶದ ರೈತರು, ಹೋರಾಟ ಸಮಿತಿಯವರ ಅಹ್ವಾನದ ಮೇಲೆ ತಂಡ ಭೇಟಿ ನೀಡಿತ್ತು.

‘ಅಲ್ಲಿನ ಜನರಿಗೆ ಸರಿಯಾದ ಮಾಹಿತಿ ನೀಡಲಾಗಿಲ್ಲ. ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸುವಾಗ ಸ್ಥಳೀಯ ಗ್ರಾಮ ಪಂಚಾಯ್ತಿ, ಸಂಬಂಧಿತ ಹಳ್ಳಿಗಳ ಜನರ ಜತೆ ಮಾತುಕತೆ ನಡೆಸಿಲ್ಲ. ಶರಾವತಿ ಲಿಂಗನಮಕ್ಕಿ ಯೋಜನೆಗಳಿಂದ ನಿರಾಶ್ರಿತರಾದ ರೈತರು ಇಲ್ಲಿದ್ದಾರೆ. ಪಕ್ಕದಲ್ಲಿ ಶರಾವತಿ ಅಭಯಾರಣ್ಯವಿದೆ. ನದಿಯ ಎರಡೂ ದಂಡೆಗಳಲ್ಲಿ ಅರಣ್ಯ ಭೂಮಿ ಇದೆ. ಅರಣ್ಯ-ಪರಿಸರ ಪರವಾನಿಗೆ ಇಲ್ಲದೇ ಯೋಜನೆ ಜಾರಿ ಮಾಡಿದರೆ ಅದು ಅಕ್ರಮ ಯೋಜನೆ ಆಗುತ್ತದೆ. ನದಿಯ ಎರಡೂ ದಂಡೆಗೆ ಗೋಡೆ ಕಟ್ಟುವ ಪ್ರಸ್ತಾವನ ಮೂರ್ಖತನದ್ದು’ ಎಂದು ತಂಡ ಅಭಿಪ್ರಾಯಪಟ್ಟಿದೆ.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ, ವಿಜ್ಞಾನಿಗಳಾದ ಡಾ. ವಿ.ಟಿ.ರಾಮಚಂದ್ರ, ಡಾ.ಸುಭಾಸ್‌ಚಂದ್ರನ್, ಡಾ.ಕೇಶವ ಕೊರ್ಸೆ ತಂಡದಲ್ಲಿದ್ದರು. ಇಡುವಾಣಿ, ಕಾನುತೋಟ, ಜೋಗಿಮಠ ಮೊದಲಾದ ಹಳ್ಳಿಗಳ ಹೋರಾಟ ಸಮಿತಿಯ ಕಾರ್ಯಕರ್ತರು ಹೋರಾಟದ ಮಾಹಿತಿ ನೀಡಿದರು.

ಜೋಗ ಅಭಿವೃದ್ಧಿ ಪ್ರಾಧಿಕಾರವು ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ಜೋಗ ಜಲಪಾತ ನೈಸರ್ಗಿಕ ಪರಿಸ್ಥಿತಿಗೆ ಅಡ್ಡಿಪಡಿಸುವ ಕಾರ್ಯಕ್ಕೆ ಮುಂದಾಗಬಾರದು. ಜಲಪಾತದ ಮೇಲ್ಭಾಗದಲ್ಲಿ ಅಣೆಕಟ್ಟು, ಗೋಡೆ ನಿರ್ಮಾಣ, ಪೈಪ್ ಲೈನ್ ನಿರ್ಮಾಣ, ವಿದ್ಯುತ್ ತಂತಿ ಮಾರ್ಗ ಇತ್ಯಾದಿ ಕಾಮಗಾರಿ, ಅರಣ್ಯ ನಾಶ, ತೀವ್ರ ಮಾನವ ಹಸ್ತಕ್ಷೇಪಕ್ಕೆ ಸರ್ಕಾರ ಮುಂದಾಗಬಾರದು. ಬದಲಾಗಿ ಜೋಗ ಜಲಪಾತಕ್ಕೆ ನದಿಗೆ ಇನ್ನೂ ಹೆಚ್ಚು ನೀರು ಹರಿದು ಬರಲು ಶರಾವತಿ ಕಣಿವೆ ರಕ್ಷಣೆಗೆ, ಜಲಾಯನ ಅಭಿವೃದ್ಧಿಗೆ ಸರ್ಕಾರ, ಜೋಗ ಪ್ರಾಧಿಕಾರ ಮುಂದಾಗಬೇಕು ಎಂದು ಪರಿಸರ ತಜ್ಞರು ಅಭಿಪ್ರಾಯ ನೀಡಿದ್ದಾರೆ ಎಂದು ಅನಂತ ಅಶೀಸರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT