ಜೇಬು ತುಂಬಿಸಿದ ಜಂಬು ನೇರಳೆ

7
ಪಾವಗಡ ಕಡಮಲಕುಂಟೆ ಬಳಿ ರೈತ ಮಲ್ಲಾರೆಡ್ಡಿ ಯಶೋಗಾಥೆ

ಜೇಬು ತುಂಬಿಸಿದ ಜಂಬು ನೇರಳೆ

Published:
Updated:
ಜೇಬು ತುಂಬಿಸಿದ ಜಂಬು ನೇರಳೆ

ಪಾವಗಡ: ದಾಳಿಂಬೆ, ಮಾವಿಗೆ ಬದಲಾಗಿ ತಾಲ್ಲೂಕಿನ ರೈತರೊಬ್ಬರು ಜಂಬು ನೇರಳೆ ಬೆಳೆಸಿ ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಕಡಮಲಕುಂಟೆ ಬಳಿ ರೈತ ಮಲ್ಲಾರೆಡ್ಡಿ ಎಂಬುವರು 5 ವರ್ಷಗಳ ಹಿಂದೆ ನಾಟಿ ಮಾಡಿದ ಜಂಬು ನೇರಳೆ ಮರಗಳು ಮಡಿಲ ತುಂಬ ಹಣ್ಣನ್ನು ಹೊತ್ತು ರೈತನಿಗೆ ಲಾಭ ತಂದುಕೊಡುತ್ತಿವೆ.

ಗೊಬ್ಬರ, ರಾಸಾಯನಿಕ, ಕ್ರಿಮಿನಾಶಕ ಬಳಸದೆ ಕೇವಲ ನೀರು ಹರಿಸಿ ಸಹಜ ಬೇಸಾಯ ಪದ್ಧತಿಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ.

ರೈತ ಮಲ್ಲಾರೆಡ್ಡಿ ತಮ್ಮ ತೋಟದಲ್ಲಿ ಈ ಹಿಂದೆ ದಾಳಿಂಬೆ ಬೆಳೆ ಬೆಳೆದಿದ್ದರು. ಬೆಳೆದ 2 ವರ್ಷಕ್ಕೆ ದಾಳಿಂಬೆ ಅಂಗಮಾರಿ ರೋಗಕ್ಕೆ ತುತ್ತಾಯಿತು. ಲಕ್ಷಾಂತರ ರೂಪಾಯಿ ನಷ್ಟವಾಯಿತು. ದಾಳಿಂಬೆ ನಂತರ ಮಾವಿನ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆ ಬಾರದೆ ಕೈ ಸುಟ್ಟುಕೊಂಡರು.

ತಾಲ್ಲೂಕಿನ ಆರ್ಲಹಳ್ಳಿ ಮೂಲದ ಜಿ.ಕೆ.ವಿ.ಕೆ ಪ್ರಾಧ್ಯಾಪಕ ತಿರುಮಲೇಶ್ ಎಂಬುವರ ಸಲಹೆ ಮೇರೆಗೆ ಜಿಕೆವಿಕೆ

ಯಿಂದ ಸುಮಾರು 250 ಜಂಬು ನೇರಳೆ ಸಸಿಗಳನ್ನು ತರಿಸಿ ನಾಟಿ ಮಾಡಿದರು. ತೋಟಗಾರಿಕೆ ಇಲಾಖೆಯಿಂದ ಸಿಗುವ ಸಹಾಯಧನ ಪಡೆದು ನೇರಳೆ ಸಸಿಗಳಿಗೆ ಹನಿನೀರಾವರಿ ಅಳವಡಿಸಿದರು.

250 ನೇರಳೆ ಸಸಿ ನಾಟಿ ಮಾಡಲು 20 ಸಾವಿರ ಖರ್ಚು ಮಾಡಿದ್ದಾರೆ. 4 ವರ್ಷಕ್ಕೆ ಬೆಳೆ ಬಂದಿದೆ. 5ನೇ ವರ್ಷ ಸುಮಾರು ₹ 6 ಲಕ್ಷ ಬೆಳೆ ಬಂದಿದೆ.

‘ದಾಳಿಂಬೆ ಸೇರಿದಂತೆ ಇತರೆ ತೊಟಗಾರಿಕೆ ಬೆಳೆಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಆದರೆ, ನೇರಳೆ ಮರಗಳಿಗೆ ಫೆಬ್ರುವರಿಯಿಂದ ಜುಲೈವರೆಗೆ 6 ತಿಂಗಳ ಕಾಲ ನೀರು ಹರಿಸಿದರೆ ಸಾಕು. ಇತರೆ ದಿನಗಳಲ್ಲಿ ಬೇರೆ ಬೆಳೆ ಬೆಳೆಯಲು ನೀರನ್ನು ಬಳಸಿಕೊಳ್ಳಬಹುದು. ಏಪ್ರಿಲ್ ತಿಂಗಳಿಂದ ಈವರೆಗೆ ಮಳೆ ಬಿದ್ದ ಕಾರಣ ಈ ವರ್ಷ ಇಳುವರಿ ಹೆಚ್ಚಿದೆ’ ಎನ್ನುತ್ತಾರೆ ರೈತ ಮಲ್ಲಾರೆಡ್ಡಿ.

ಕೆಲ ರೈತರು ಮಹರಾಷ್ಟ್ರ ಸೇರಿದಂತೆ ಬೇರೆಡೆಯಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಜಂಬು ನೇರಳೆ ಗಿಡಗಳನ್ನು ತರಿಸಿ ನಾಟಿ ಮಾಡಿದ್ದಾರೆ. ಆದರೆ, 6 ವರ್ಷ ಕಳೆದರೂ ಬೆಳೆ ಬಂದಿಲ್ಲ. ಬೆಂಗಳೂರಿನ ಜಿ.ಕೆ.ವಿ.ಕೆ.ಯಿಂದ ತಂದ ಗಿಡಗಳಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಅವರು.

ಬೆಂಗಳೂರು, ಅನಂತಪುರ, ಧರ್ಮವರಂ ಸೇರಿದಂತೆ ಹಲವೆಡೆ ಜಂಬು ನೇರಳೆಗೆ ಬೇಡಿಕೆ ಇದೆ. ಆಯುರ್ವೇದ ಔಷಧಗಳಲ್ಲಿ ನೆರಳೆ ಹಣ್ಣು, ಬೀಜ ಬಳಕೆ ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ ನೇರಳೆ ಹಣ್ಣಿಗೆ ಮಾರುಕಟ್ಟೆ ಸೃಷ್ಟಿಯಾಗಿದೆ.

ತಾಲ್ಲೂಕಿನಾದ್ಯಂತ ನಾಯಿ ನೇರಳೆ ಮಾತ್ರ ಬೆಳೆಯಲಾಗುತ್ತಿತ್ತು. ಪಟ್ಟಣ- ತುಮಕೂರು ಮಾರ್ಗದಲ್ಲಿ ನೇರಳೆ ಮರಗಳ ಸಾಲು, ಮರಗಳ ಕೆಳಗೆ ಹಣ್ಣು ಆಯುತ್ತಿದ್ದ ಹುಡುಗರ ದಂಡು ಕಣ್ಣಿಗೆ ಮುದ ನೀಡುತ್ತಿತ್ತು. ನೂರಾರು ಕೂಲಿ ಕಾರ್ಮಿಕರಿಗೆ ರಸ್ತೆ ಬದಿಯ ನೇರಳೆ ಗಿಡಗಳು ಜೀವನಾಧಾರವಾಗಿದ್ದವು. ಮರದಿಂದ ಕಿತ್ತು ತಂದ ಹಣ್ಣು ಮಾರಿ ತಿಂಗಳುಗಳ ಕಾಲ ಜೀವನ ಸಾಗಿಸುತ್ತಿದ್ದರು. ಆದರೆ, ರಸ್ತೆ ವಿಸ್ತರಣೆಯಿಂದಾಗಿ ನೂರಾರು ನೇರಳೆ ಮರಗಳ ಮಾರಣಹೋಮವಾಯಿತು.

ಇದೀಗ ತಾಲ್ಲೂಕಿನ ಹೊಲ ಗದ್ದೆಗಳಲ್ಲಿ ಜಂಬು ನೇರಳೆ ಪ್ರಮುಖ ಆದಾಯದ ಬೆಳೆಯಾಗಿ ಕಾಣಸಿಗುತ್ತಿದೆ. ಮಾವು, ದಾಳಿಂಬೆ ಇತ್ಯಾದಿ ಬೆಳೆಗಳಿಗೆ ಪರ್ಯಾಯವಾಗಿ ಕಾಡಿಗೆ ಸೀಮಿತವಾಗಿದ್ದ ಜಂಬು ನೇರಳೆ ಸುಧಾರಿತ ತಳಿಗಳನ್ನು ಜಮೀನುಗಳಲ್ಲಿ ಬೆಳೆಯಲಾಗುತ್ತಿದೆ.

70 ವರ್ಷ ಫಲ!

‘ಗಿಡ 10ರಿಂದ 15 ಅಡಿ ಎತ್ತರ ಬೆಳೆದ ನಂತರ ಹೆಚ್ಚು ಎತ್ತರಕ್ಕೆ ಹೋಗದಂತೆ ಕತ್ತರಿಸಬೇಕು. ರಾಸಾಯನಿಕ ಬಳಸದಿದ್ದರೆ ಸುಮಾರು 70 ವರ್ಷಗಳ ಕಾಲ ಫಲ ನೀಡುತ್ತವೆ. ರಾಸಾಯನಿಕ ಬಳಸಿದಲ್ಲಿ ಗಿಡದ ಸತ್ವ ಹಾಳಾಗಿ 30 ವರ್ಷಕ್ಕೆ ಮರಗಳು ಫಲ ನೀಡುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ’ ಎನ್ನುತ್ತಾರೆ ರೈತ ಮಲ್ಲಾರೆಡ್ಡಿ.

–ಕೆ.ಆರ್.ಜಯಸಿಂಹ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry