ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

7
'ಕಾರಂಜಿ' ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಸಂಚಾರಿ ವಿಜಯ್ ಅಭಿಪ್ರಾಯ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

Published:
Updated:

ತುಮಕೂರು: ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದೇ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಎಂದು ನಟ ಸಂಚಾರಿ ವಿಜಯ್ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ  ರೋಟರಿ ತುಮಕೂರು ಹಾಗೂ ಇನ್ನರ್ ವೀಲ್ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ 'ಕಾರಂಜಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯು ಪುಸ್ತಕ ಸಂಸ್ಕತಿ ಬೆಳೆಸುವ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಹಾಗೇ ಸಮಾಜದಲ್ಲಿ ಪುಸ್ತಕಗಳ ಬಗ್ಗೆ ಜಾಗೃತಿ ಮೂಡಿಸುವ ಮಹತ್ಕಾರ್ಯವು ಅತ್ಯಂತ ಶ್ಲಾಘನೀಯ ಎಂದರು.

ನಾನು ಅಭಿನಯಿಸಿದ 'ನಾನು ಅವನಲ್ಲ ಅವಳು' ಚಿತ್ರವು ಹೆಚ್ಚು ಪ್ರದರ್ಶನಗೊಳ್ಳಲು ರೋಟರಿ ಸಂಸ್ಥೆಯ ಡಾ.ಎಸ್.ಎಲ್. ಕಾಡದೇವರಮಠ ಅವರೇ ಮುಖ್ಯ ಕಾರಣ. ಅವರು ನಗರದ ಎಸ್ಐಟಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಚಿತ್ರವನ್ನು ಪ್ರದರ್ಶಿಸುವ ಮೂಲಕ ಬಹುತೇಕ ಯುವಜನರಿಗೆ ಮಂಗಳಮುಖಿಯರ ಬಗ್ಗೆ ಅರಿವಿಲ್ಲದವರಿಗೆ ಅವರ ಜೀವನವನ್ನು ಪರಿಚರಿಯಿಸಲಾಯಿತು ಎಂದು ಹೇಳಿದರು.

ಪ್ರಸ್ತುತ 'ಅರಿವು' ಮತ್ತು 'ಪಾದರಸ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಪ್ರೇಕ್ಷಕರು ಪ್ರಶಸ್ತಿ ಪಡೆದಂತಹ ಚಿತ್ರಗಳನ್ನು ನೋಡಲು ಆಸಕ್ತಿ ತೋರದೇ ಇರುವುದು ಕೆಟ್ಟ ಬೆಳವಣಿಗೆ. ಹಾಗೇ ಇಂದು ಕಮರ್ಷಿಯಲ್ ಚಿತ್ರಗಳ ಹಾವಳಿಯಿಂದ ಸೃಜನಾತ್ಮಕ ಚಿತ್ರಗಳನ್ನು ಬಿಡುಗಡೆ ಮಾಡಲು ಚಿತ್ರ ವಿತರಕರು ಮುಂದೆ ಬರುವುದಿಲ್ಲ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವಂತಹ ಸೃಜನಶೀಲ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಿ ಪ್ರೋತ್ಸಾಹಿಸಿ ಎಂದರು.

ಚಲನಚಿತ್ರ ನಟಿ ವೈಷ್ಣವಿ ಚಂದ್ರನ್ ಮಾತನಾಡಿ, ನಮ್ಮ ಆದಾಯ ಹೆಚ್ಚಾದಲ್ಲಿ ಸಮಾಜಕ್ಕೆ ಸಹಾಯ ಮಾಡಬೇಕು ಎನ್ನುವ ಮನೋಭಾವವನ್ನು ರೋಟರಿ ಸಂಸ್ಥೆ ಉದ್ಧೀಪಿಸಿದೆ. ಇಂತಹ ಸಮಾಜ ಸೇವೆ ಕಾರ್ಯಗಳನ್ನು ನಿರಂತರವಾಗಿ ಮುಂದುವರೆಸಬೇಕು ಎಂದರು.

ರೋಟರಿ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರ ಮಠ, ಕಾರ್ಯದರ್ಶಿ ಜಿ.ಎನ್.ಮಹೇಶ್, ಸದಸ್ಯರಾದ ಮೋಹನ್‌ಕುಮಾರ್, ಉಮೇಶ್, ಜನಾರ್ಧನ್‌, ಎಂ.ಜಯರಾಂ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸದಸ್ಯರಾದ ಶಾಂತಿಲಾಲ್ ಪಿ., ಡಾ.ವೈ.ಎಂ.ರೆಡ್ಡಿ, ಇನ್ನರ್‌ವೀಲ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ಜಿ.ಎನ್.ಮಹೇಶ್, ಉದಯ್‌ಕುಮಾರ್, ಡಾ.ಸುನಿಲ್, ಜನಾರ್ಧನ್, ಮಲ್ಲೇಶಯ್ಯ, ವಿಶ್ವನಾಥ್, ಶಿವಣ್ಣ ಮಲ್ಲಸಂದ್ರ, ವೈದ್ಯೆ ಡಾ.ರಶ್ಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry