7
ಜಿಲ್ಲೆಯ ಎಲ್ಲೆಡೆ ಸಡಗರ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಣೆ

‘ಮಾನವೀಯತೆ ಜಾಗೃತಗೊಳ್ಳುವ ಸುದಿನ’

Published:
Updated:

ಯಾದಗಿರಿ: ಪವಿತ್ರ ರಂಜಾನ ಮಾಸದಲ್ಲಿರೋಜಾ (ಉಪವಾಸ) ಆಚರಣೆಯಿಂದ ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿಯಾಗುತ್ತದೆ. ಸರ್ವ ಧರ್ಮೀಯರ ಜೊತೆ ಶಾಂತಿ, ಸಹಬಾಳ್ವೆ ಹಾಗೂ ಸೌಹಾರ್ದಯುತವಾಗಿ ಜೀವನ ನಡೆಸಿದಾಗ ಮಾತ್ರ ರಂಜಾನ್ ಆಚರಣೆ ಸಾರ್ಥಕವಾಗುತ್ತದೆ ಎಂದು ಮುಸ್ಲಿಂ ಸಮುದಾಯದ ಧರ್ಮಗುರು ಖಾಜಾ ಹಸನ್ ಸಿದ್ದಿಕಿ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನದಲ್ಲಿ ಈದ್–-ಉಲ್‌–ಫಿತರ್ ನಿಮಿತ್ತ ಶನಿವಾರ ನಡೆದ

ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗ್ರಂಥ ಕುರಾನ್ ಪಟಿಸಿ ಅವರು ಮಾತನಾಡಿದರು.

ಮುಸ್ಲಿಂ ಸಮಯದಾಯದವರು ಪ್ರಾರ್ಥನೆ ಸಲ್ಲಿಸುವುದರ ಜತೆಗೆ ಪುಣ್ಯದ ಕಾರ್ಯ, ನೆರವಿನ ಅಭಯ ನೀಡುವ ಧಾರ್ಮಿಕ ಕಾರ್ಯದಲ್ಲಿ ತೊಡಗಿ ಮಾನವೀಯತೆ ಮೆರೆಯಬೇಕು. ಪವಿತ್ರ ಕುರಾನ್ ಗ್ರಂಥದಲ್ಲಿ ರಂಜಾನ್ ಉಪವಾಸದಿಂದ ವ್ಯಕ್ತಿಯ ಮಾನವೀಯತೆ ಜಾಗೃತಗೊಳ್ಳುವ ಸುದಿನವಾಗಿದೆ ಎಂದರು.

ರಂಜಾನ್ ತಿಂಗಳಲ್ಲಿ ಪವಿತ್ರ ಧರ್ಮಗ್ರಂಥ ಕುರಾನ್ ಪಠಣ ಮಾಡುವುದರಿಂದ ಮನಸ್ಸಿನಲ್ಲಿನ ಕಲ್ಮಶಗಳನ್ನು ದೂರವಾಗುತ್ತವೆ. ಅಲ್ಲಾನನ್ನು ಮನದಲ್ಲಿ ನೆನದು ಸಮಾಜದಲ್ಲಿ ಶಾಂತಿ, ನೆಮ್ಮಯಿಂದ ನಾವೆಲ್ಲರು ಒಂದೇ ಎನ್ನುವ ತತ್ವದ ಅಡಿಯಲ್ಲಿ ಜೀವನ ಸಾಗಿಸುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ ಎಂದರು.

ಯಾಕುಬ್ ಬುಕಾರಿ ದರ್ಗಾ ಕಮಿಟಿ ಅಧ್ಯಕ್ಷ ಗೌಸ್ ಮೂಸಾ ಮಾತನಾಡಿ, ಮಾನವಿಯತೆಗೆ ಎಲ್ಲವನ್ನು ಸಮರ್ಪಿಸಿದ ದೈವಶಕ್ತಿಗೆ ಕೃತಜ್ಞತೆ ಅರ್ಪಿಸುವ ಸುವರ್ಣ ಅವಕಾಶವಿದು. ಕ್ಷಮೆ, ಸಹಬಾಳ್ವೆ, ಕೃತಜ್ಞತೆಯ ಸಮರ್ಪಣೆ ಹಾಗೂ ನೈತಿಕ ದಿಗ್ವಿಜಯದ ಸಂಕೇತವಾಗಿದೆ ಎಂದರು.

ಬೆಳಿಗ್ಗೆ 10.30ಕ್ಕೆ ಆರಂಭಗೊಂಡ ಪ್ರಾರ್ಥನೆ 11 ರವರೆಗೆ ನಡೆಯಿತು. ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಹಳೆ ಈದ್ಗಾ ಕಮಿಟಿ ಅಧ್ಯಕ್ಷ ಮನಸೂರ್ ಆಫಖಾನ್, ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷ ಜಿಲಾನಿ ಆಫ್ ಖಾನ್, ಸಮಧಾನಿ ಮುಸಾ, ಅಬೀದ್ ಮೈನೋದ್ದೀನ್, ಖಾಕಿ ಇಮ್ತಿಯಾಜ್‌, ಶೇಖ್ ಜಕಿಯೋದಿನ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.

ನಗರದ ಹಳೆ ಈದ್ಗಾ ಮೈದಾನ, ಹೊಸ ಈದ್ಗಾ, ಮಸೀದಿ ಸದರ್ ದರವಾಜಾ, ಮಸೀದಿ ಚೌಕ್, ಆಸರ್ ಮಜೀದ, ಮಸೀದಿ ಲತಿಫಿಯಾ ಮುಸ್ಲಿಂಪೂರಾ, ಜಾಮಾ ಮಸೀದಿ, ಮದಿನಾ ಮಸೀದಿ ಸೇರಿದಂತೆ 30ಕ್ಕೂ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಂಭ್ರಮದ ಆಚರಣೆ

ಗುರುಮಠಕಲ್: ಇಲ್ಲಿನ ಕಾಕಲವಾರ, ಪುಟಪಾಕ್, ಕೇಶ್ವಾರ, ಚಪೆಟ್ಲಾ, ಇಮ್ಲಾಪೂರ, ಯದ್ಲಾಪೂರ, ಗಾಜರಕೋಟ, ಕೋಟಗೇರಾ, ಕಂದಕೂರ ಪಟ್ಟಣಗಳಲ್ಲಿ ಶನಿವಾರ ಮುಸ್ಲಿಮರು ಈದ್‌ ಉಲ್‌ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮುಸ್ಲಿಂ ಸಮುದಾಯದವರು ಶುಭಾಶಯ ವಿನಿಮಯ ಮಾಡಿ ಕೊಳ್ಳುತ್ತಿದ್ದು ಅಲ್ಲಲ್ಲಿ ಕಂಡು ಬಂದಿತು.

ವಿಶೇಷ ಪ್ರಾರ್ಥನೆ

ಸುರಪುರ:  ನಗರ ಮತ್ತು ರಂಗಂಪೇಟ ತಿಮ್ಮಾಪುರದ ಮುಸ್ಲಿಮರು ಶನಿವಾರ ಈದ್‌ ಉಲ್‌ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಅವಳಿ ಪಟ್ಟಣಗಳ ಜಾಮೀಯಾ, ಮೆಕ್ಕಾ, ಏಕಮಿನಾರ ಸೇರಿದಂತೆ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಲ್ಲಿನ ಹಸನಾಪುರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳು  ಧರ್ಮೋಪದೇಶ ನೀಡಿದರು.

ಸಾಮೂಹಿಕ ಪ್ರಾರ್ಥನೆ

ಶಹಾಪುರ: ಹಿಂದೂ– ಮುಸ್ಲಿಂರ ಭಾವೈಕ್ಯತೆಯ ತಾಣ ಹಾಗೂ ಸಗರನಾಡಿನ ಹೆಬ್ಬಾಗಿಲು ಆಗಿರುವ ಶಹಾಪುರ ನಗರದಲ್ಲಿ ಶನಿವಾರ ಮುಸ್ಲಿಂ ಸಮುದಾಯವದರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸ ಬಟ್ಟೆಗಳನ್ನು ಧರಿಸಿ ಹಬ್ಬದ ವಿಶಿಷ್ಟ ಆಹಾರವನ್ನು ತಯಾರಿಸಿ ಇತರೆ ಸಮುದಾಯಗಳ ಮಿತ್ರರನ್ನು ಕರೆದು ವಿಶೇಷ ಭೋಜನವನ್ನು ಉಣಬಡಿಸುವ ಮೂಲಕ ಭಾವೈಕೆತೆ ಮೆರೆದರು.

ನಾಯ್ಕಲ್: ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಶನಿವಾರ ಮುಸ್ಲಿಂ ಸಮುದಾಯದವರು ಗ್ರಾಮದ ಹೊರವಲಯದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಮೌಲಾನ್ ಹುಸೇನಸಾಬ್, ಮಹ್ಮದ ಅಫೀಜ್ ಸಾಬ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಜಾ ಮೈನೂದ್ದೀನ್ ಜಮಶೇರಿ, ಬಾಷುಮೀಯಾ, ಇಸ್ಮಾಯಿಲ್ ಸಾಬ್, ಫಾರುಕ್ ಹೊಸಳ್ಳಿ, ಚಾಂದಪಾಶ ಸೌದಾಗರ, ಜಲಾಲ್‌ಸಾಬ್, ಖಾಜಾಸಾಬ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry