ಬಿಡದಿಯಲ್ಲಿ ನವ ಬೆಂಗಳೂರು ನಿರ್ಮಾಣಕ್ಕೆ ಚಿಂತನೆ

7
ಹೈದರಾಬಾದ್‌ನಲ್ಲಿ ಸಿದ್ಧವಾಗುತ್ತಿದೆ ನೀಲನಕ್ಷೆ: ಮುಖ್ಯಮಂತ್ರಿಗೆ ಶೀಘ್ರ ಪ್ರಸ್ತಾವ ಸಲ್ಲಿಕೆ

ಬಿಡದಿಯಲ್ಲಿ ನವ ಬೆಂಗಳೂರು ನಿರ್ಮಾಣಕ್ಕೆ ಚಿಂತನೆ

Published:
Updated:

ರಾಮನಗರ: ಬೆಂಗಳೂರುನಗರಿಗೆ ಪರ್ಯಾಯವಾಗಿ ‘ನವ ಬೆಂಗಳೂರು’ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಬಿಡದಿ ಭಾಗದಲ್ಲಿ ಈ ಪರ್ಯಾಯ ನಗರಿ ನಿರ್ಮಾಣಕ್ಕೆ ಯೋಜಿಸಿರುವುದು ವಿಶೇಷ.

ಬೆಂಗಳೂರಿನ ಸುತ್ತ ಉಪನಗರಗಳ ನಿರ್ಮಾಣಕ್ಕೆ ಸರ್ಕಾರಗಳು ಈಗಾಗಲೇ ಹಲವು ಯೋಜನೆ ರೂಪಿಸಿವೆ. ಬಿಡದಿಯಲ್ಲಿಯೂ ಉಪನಗರ ನಿರ್ಮಾಣದ ಕನಸಿಗೆ ದಶಕವೇ ಕಳೆದಿದೆ. ಆದರೆ, ಆ ಕನಸು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಇಲ್ಲಿಯೇ ಮಹಾನಗರ ನಿರ್ಮಾಣಕ್ಕೆ ಯೋಜಿಸಲಾಗುತ್ತಿದೆ ಎನ್ನುತ್ತಾರೆ ಮಾಗಡಿ ಕ್ಷೇತ್ರದ ಶಾಸಕರಾದ ಎ.ಮಂಜುನಾಥ್‌.

ಏನಿದು ಯೋಜನೆ: ಸುಮಾರು 20 ಸಾವಿರ ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಯೋಜಿತವಾದ ನಗರ ನಿರ್ಮಾಣ ಮಾಡುವ ಗುರಿ ಇದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಟಾನಕ್ಕೆ ತರಬೇಕು ಎನ್ನುವ ಚರ್ಚೆ ನಡೆದಿದೆ.

ದಶಕದ ಹಿಂದೆ ಡಿಎಲ್‌ಎಫ್‌ ರಿಯಲ್‌ ಎಸ್ಟೇಟ್‌ ಕಂಪನಿಯು ಇಲ್ಲಿ ಉಪ ನಗರ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕಾಗಿ ಬಿಡದಿಯ ಸುಮಾರು 15 ಗ್ರಾಮಗಳ 10 ಸಾವಿರ ಎಕರೆ ಪ್ರದೇಶ ಗುರುತಿಸಲಾಗಿತ್ತು. ಆದರೆ, ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ.ಈಗ ಇದೇ ಜಮೀನಿನ ಜೊತೆಗೆ ಅಕ್ಕಪಕ್ಕದ ಇನ್ನೂ 10ಸಾವಿರ ಎಕರೆ ಪ್ರದೇಶ ಒಳಗೊಂಡು ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ. ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಇದರ ಮಾಸ್ಟರ್‌ ಪ್ಲಾಸ್ ಸಿದ್ಧವಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಶಾಸಕರು.

ಬಿಡದಿ ಹೋಬಳಿ ಜೊತೆಗೆ ರಾಮನಗರ, ಕನಕಪುರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಹಲವು ಹಳ್ಳಿಗಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ. ಒಟ್ಟಾರೆ 35ರಿಂದ 40 ಹಳ್ಳಿಗಳು ಇದರ ವ್ಯಾಪ್ತಿಗೆ ಬರಲಿವೆ.

ಬಿಡದಿಯೇ ಏಕೆ?: ಬೆಂಗಳೂರಿನ ಇತರ ಭಾಗಗಳಿಗೆ ಹೋಲಿಸಿಕೊಂಡರೆ ಮೈಸೂರು ರಸ್ತೆ ಭಾಗ ಹೆಚ್ಚಿನ ಮೂಲ ಸೌಕರ್ಯ ಹೊಂದಿದೆ. ಮೈಸೂರು–ಬೆಂಗಳೂರು ಹೆದ್ದಾರಿ, ಬೆಂಗಳೂರು–ದಿಂಡಿಗಲ್‌ ಹೆದ್ದಾರಿಗಳು ಉತ್ತಮ ಸಂಪರ್ಕ ಹೊಂದಿವೆ. ಈ ಎರಡೂ ರಾಷ್ಟ್ರೀಯ ಹೆದ್ದಾರಿಗಳ ನಡುವಿನ ಪ್ರದೇಶದಲ್ಲಿಯೇ ಹೊಸ ನಗರಿ ನಿರ್ಮಾಣಕ್ಕೆ ಯೋಜಿಸಲಾಗಿದೆ.

‘ಬೆಂಗಳೂರು ಒಂದು ಕಡೆಗೆ ಆಂಧ್ರಪ್ರದೇಶ ಮತ್ತೊಂದು ಕಡೆಗೆ ತಮಿಳುನಾಡು ಗಡಿವರೆಗೂ ಬೆಳೆದು ನಿಂತಿದೆ. ಒಂದು ಭಾಗದಲ್ಲಿ ದೇವನಹಳ್ಳಿ ಮತ್ತೊಂದು ಕಡೆ ಹೊಸೂರಿನವರೆಗೆ ಮಹಾನಗರಿ ವಿಸ್ತರಿಸಿದ್ದು, ಅಲ್ಲಿಂದ ಮುಂದೆ ಏನೇ ಬೆಳವಣಿಗೆ ಆದರೂ ಅದು ಪರ ರಾಜ್ಯಗಳಿಗೆ ಹೆಚ್ಚು ಅನುಕೂಲ. ಆದರೆ, ದಕ್ಷಿಣ ಭಾಗವಾದ ಇಲ್ಲಿ ಮಾತ್ರ ಇನ್ನೊಂದು ಮಹಾನಗರಿ ಬೆಳವಣಿಗೆಗೆ ಅವಕಾಶ ಇದೆ’ ಎನ್ನುತ್ತಾರೆ ಮಾಗಡಿ ಕ್ಷೇತ್ರದ ಶಾಸಕರು.

ಕಾವೇರಿ ನೀರಿನ ಸಂಪರ್ಕವೂ ಇಲ್ಲಿ ಉತ್ತಮವಾಗಿದ್ದು, ಭವಿಷ್ಯದಲ್ಲಿ ನೀರಿಗೆ ಸಮಸ್ಯೆ ಆಗದು. ಜೊತೆಗೆ ಮೇಕೆದಾಟು ಅಣೆಕಟ್ಟೆ ನಿರ್ಮಾಣವಾದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯೇ ಇರದು ಎನ್ನುವುದು ರಿಯಲ್ ಎಸ್ಟೇಟ್‌ ಉದ್ಯಮಿಗಳ ಲೆಕ್ಕಾಚಾರವೂ ಆಗಿದೆ.

‘ಕೆಂಪೇಗೌಡರು ಈಗಿನ ಬೆಂಗಳೂರನ್ನು ಕಟ್ಟಿದವರು. ಅವರ ಮಾದರಿಯಲ್ಲಿಯೇ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಈ ಭಾಗದಲ್ಲಿ ಮತ್ತೊಂದು ನಗರ ನಿರ್ಮಾಣ ಆಗಬೇಕು. ಇದನ್ನು ಎಚ್.ಡಿ.ದೇವೇಗೌಡರು ಉದ್ಘಾಟಿಸಬೇಕು ಎನ್ನುವುದು ನಮ್ಮ ಕನಸು. ಈ ಕುರಿತು ಮಾಸ್ಟರ್‌ ಪ್ಲಾನ್‌ ಸಿದ್ಧವಾದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಗೆ ನಿಯೋಗ ಕೊಂಡೊಯ್ದು ಪ್ರಸ್ತಾವ ಸಲ್ಲಿಸಲಾಗುವುದು’ ಎನ್ನುತ್ತಾರೆ ಶಾಸಕ ಮಂಜುನಾಥ್‌.

ಸ್ಮಾರ್ಟ್‌ ಸಿಟಿ ಕನಸಿಗೆ ವಿಘ್ನ

ಬಿಡದಿಯಲ್ಲಿ ಉಪನಗರ ಅಥವಾ ಸ್ಮಾರ್ಟ್‌ ಸಿಟಿ ನಿರ್ಮಾಣ ಯೋಜನೆಯು ಕಾಗದ ರೂಪದಲ್ಲಿಯೇ ಉಳಿದಿದೆ. ಆರಂಭದಲ್ಲಿ ಈ ಬಗ್ಗೆ ಒಂದಿಷ್ಟು ಚರ್ಚೆ ಆಯಿತಾದರೂ ನಂತರದಲ್ಲಿ ಹೆಚ್ಚು ಸುದ್ದಿಯಾಗಿಲ್ಲ. ಬಿಎಂಐಸಿಪಿ ಹಾಗೂ ಬಿಎಂಆರ್‌ಡಿಎ ಮಟ್ಟದಲ್ಲಿ ಈ ಕುರಿತು ಇನ್ನಷ್ಟೇ ನಿರ್ಣಯ ಹೊರಬೀಳಬೇಕಿದೆ. ಸರ್ಕಾರ ಈ ಬಗ್ಗೆ ಯಾವ ನಿರ್ಧಾರ ತಳೆಯಬಹುದು ಎಂದು ಈ ಭಾಗದ ರೈತರು ಹಾಗೂ ರಿಯಲ್‌ ಎಸ್ಟೇಟ್ ಉದ್ಯಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಬಿಡದಿಯಲ್ಲಿ ನವ ಬೆಂಗಳೂರು ನಗರಿ ನಿರ್ಮಾಣದ ಕನಸು ಈಗಷ್ಟೇ ಚಿಗುರೊಡೆಯುತ್ತಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪ್ರಸ್ತಾವ ಸಲ್ಲಿಸುತ್ತೇವೆ

- ಎ.ಮಂಜುನಾಥ್‌, ಶಾಸಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry