ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಈದ್- ಉಲ್ -ಫಿತ್ರ್ ಆಚರಣೆ

ರಂಜಾನ್‌ ಮಾಸಕ್ಕೆ ಸಡಗರದ ತೆರೆ : ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
Last Updated 17 ಜೂನ್ 2018, 10:21 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾದ್ಯಂತ ಸಂಭ್ರಮದಿಂದ ಈದ್-ಉಲ್-ಫಿತ್ರ್ ಅನ್ನು ಶನಿವಾರ ಆಚರಿಸಿದರು. ಬೆಳಿಗ್ಗೆ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಗರದ ಹಳೆಯ ಜಿಲ್ಲಾ ಆಸ್ಪತ್ರೆ ಹತ್ತಿರ ಇರುವ ಈದ್ಗಾ, ಹುಲಿಕೆರೆ ಬಳಿ ಇರುವ ಮೈದಾನ ಹಾಗೂ ರೈಲ್ವೆ ನಿಲ್ದಾಣದ ಸಮೀಪದ ಈದ್ಗಾ ಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಬೆಳಿಗ್ಗೆಯಿಂದ ನಗರದ ವಿವಿಧ ಬಡಾವಣೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ತಂಡವಾಗಿ ದ್ವಿಚಕ್ರ ವಾಹನ, ಟಂಟಂ, ಕಾರುಗಳಲ್ಲಿ ಬಂದು ಈದ್ಗಾದಲ್ಲಿ ಜಮಾವಣೆಗೊಂಡರು. ನಿಗದಿತ ಸ್ಥಳಗಳಲ್ಲಿ ನೆಲಹಾಸುಗಳನ್ನು ಹಾಸಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಸೂಫಿಯಾ ಮಸೀದಿಯ ಮೌಲ್ವಿ ಮುಖ್ತಿ ನಜೀರ್ ಅಹ್ಮದ್ ಖಾದ್ರಿ ಅವರು ಧರ್ಮಸಂದೇಶ ನೀಡಿದರು. 'ಪವಿತ್ರ ರಂಜಾನ್‌ ಮಾಸದಲ್ಲಿ ಉಪವಾಸ ವ್ರತಕೈಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದೀರಿ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟು ಧರ್ಮವನ್ನು ಅನುಸರಿಸಿದರೆ ನಮಗೆ ದೇವರ ದಯೆ ಇರುತ್ತದೆ' ಎಂದು ಹೇಳಿದರು.

'ಈದ್-ಉಲ್-ಫಿತ್ರ್ ಜಗತ್ತಿನ ಜನರಿಗೆ ಎಲ್ಲ ಒಳಿತನ್ನು ಮಾಡಲಿ. ದೇವರ ನಾಮಸ್ಮರಣೆಯಿಂದ ನಮ್ಮ ಜೀವನ ಪಾವನವಾಗಲಿದೆ. ಇಸ್ಲಾಂ ಶಾಂತಿ, ಸೌಹಾರ್ದದ ಸಂದೇಶವನ್ನು ಬಿತ್ತರಿಸಿದೆ. ಅದರಂತೆ ಪರಸ್ಪರ ಸಹೋದರರಂತೆ ಬಾಳಿ ಬದುಕ ಬೇಕು' ಎಂದು ಹೇಳಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಸಮಾಜದ ಮುಖಂಡರಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲೂ ಖಾದರ್ ಖಾದ್ರಿ, ಬಾಷುಸಾಬ್ ಖತೀಬ್, ಅಸ್ಗರ್ ಅಲಿ ನವಾಬ್, ಮೆಹಬೂಬ್ ಮಚ್ಚಿ, ಅಕ್ಬರ್ ಪಾಶಾ ಪಲ್ಟನ್ ಇದ್ದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡ ದ್ಯಾಮಣ್ಣ ಚಿಲವಾಡಗಿ ಪಾಲ್ಗೊಂಡು ಸಮಾಜದ ಜನತೆಗೆ ಶುಭಾಶಯ ಕೋರಿದರು.

ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಪಾಲಕರ ಜೊತೆ ಮಕ್ಕಳು ಹೊಸಬಟ್ಟೆಯನ್ನು ತೊಟ್ಟುಕೊಂಡು ಸಂಭ್ರಮದಿಂದ ಪಾಲ್ಗೊಂಡಿದ್ದರು. ನಂತರ ಮನೆಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಭರ್ಜರಿ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ಬಂಧು, ಬಳಗ ಹಾಗೂ ಆಪ್ತ ಮಿತ್ರರನ್ನು ಮನೆಗೆ ಕರೆದು ಊಟ ಮಾಡಿಸಿದರು.

ದಾನ: ಧರ್ಮದಲ್ಲಿ ದಾನ, ಧರ್ಮಕ್ಕೆ ಹೆಚ್ಚಿನ ಮಹತ್ವ ಇದ್ದು, ಜಕಾತ್ ಹೆಸರಿನಲ್ಲಿ ಈ ದಿನ ವಿಶೇಷವಾಗಿ ಬಡವರಿಗೆ, ದೀನ, ದಲಿತರಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಹಣ ನೀಡುವುದು ವಿಶೇಷವಾಗಿದೆ. ಈದ್ಗಾ ಹೊರಗಡೆಯಲ್ಲಿ ಕುಳಿತಿದ್ದ ಭಿಕ್ಷಕರಿಗೆ ದಾನ ನೀಡಲಾಯಿತು.

ಹುಲಿಕೆರೆಯ ಬಳಿಯಿರುವ ಐತಿಹಾಸಿಕ ಕೋಟೆ ಪಕ್ಕದಲ್ಲಿ ಈದ್ಗಾ ಮುಖ್ಯ ಪ್ರಾರ್ಥನಾ ಕಟ್ಟಡವನ್ನು ಈಚೆಗೆ ದುರಸ್ತಿ ಮಾಡಿದ್ದು, ಸುಣ್ಣ, ಬಣ್ಣಗಳಿಂದ ಅಲಂಕರಿಸಲಾಗಿತ್ತು. ಹಳೆಯ ಜಿಲ್ಲಾ ಆಸ್ಪತ್ರೆ ಪಕ್ಕದ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದರು.

ಸುರಕುಂಬಾ ವಿಶೇಷ

ಪವಿತ್ರ ಮಾಸ ರಂಜಾನ್‌ ಉಪವಾಸದ ಪ್ರಯುಕ್ತ ಒಂದು ತಿಂಗಳು ಕಾಲ ರೋಜಾ ಉಪವಾಸ ಮಾಡಿದ ನಂತರ ಈದ್-ಉಲ್-ಫಿತ್ರ್ ಹಬ್ಬವನ್ನು ಸುರಕುಂಬಾ (ಶೀರ್‌ಕುರ್ಮಾ) ಜೊತೆಗೆ ಆಚರಿಸುವುದು ವಿಶೇಷ.

ಗೋಧಿಯ ಹಿಟ್ಟಿನ ಶ್ಯಾವಿಗೆಯನ್ನು ತುಪ್ಪದಲ್ಲಿ ಹಿರಿದು, ಹಾಲು, ಗೋಡಂಬಿ, ಒಣದ್ರಾಕ್ಷಿ, ಬಾದಾಮಿ ಸಮ್ಮಿಶ್ರಣದೊಂದಿಗೆ ಬೇಯಿಸಿ ಮಾಡುವ ಸಿಹಿ ಖಾದ್ಯವೇ ಶುರಕುಂಬಾ. ಹಬ್ಬಕ್ಕಾಗಿ ಎಲ್ಲ ಮನೆಗಳಲ್ಲಿ ಈ ವಿಶೇಷ ಪದಾರ್ಥವನ್ನು ತಯಾರಿಸುವ ಸಂಪ್ರದಾಯ ಇದೆ. ಅಕ್ಕಪಕ್ಕದ ಮನೆ ಹಾಗೂ ಇತರ ಸಮುದಾಯದ ಸ್ನೇಹಿತರಿಗೆ ಕುಡಿಯಲು ನೀಡುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT